ಚಿಕ್ಕಬಳ್ಳಾಪುರ [ಆ.24]:  ಜಿಲ್ಲಾದ್ಯಂತ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಪ್ರತಿ ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ, ಹಾಗಾಗಿ ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಯೋಜನೆ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಕರೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸುವ ಚಿಲುಮೆ ಯೋಜನೆ ಅನುಷ್ಠಾನ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಸುತ್ತಮುತ್ತ ಇರುವ ಎಲ್ಲ ಕೆರೆಗಳು ಇತ್ತೀಚಿಗೆ ಬತ್ತಿ ಹೋಗಿವೆ. ಇದಕ್ಕೆ ಕಾರಣ ಜನರು ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸದಿರುವುದೆ ಎಂದು ಹೇಳಿದರು.

ಮಳೆಕೊಯ್ಲು ಕಡ್ಡಾಯವಾಗಲಿ

ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ಕಾರಣದಿಂದ ಅಂತರ್ಜಲ ಮಟ್ಟಕುಸಿದು ಹೋಗಿದೆ. ಹಾಗಾಗಿಯೇ ಪುರಾತನ ಕಲ್ಯಾಣಿಗಳು, ಕೆರೆಗಳು, ಬಾವಿಗಳು, ಹಳ್ಳಗಳು ಹಾಗೂ ನದಿಗಳು ಬತ್ತಿ ಹೋಗಿವೆ. ಹಾಗಾಗಿ ಜಿಲ್ಲಾದ್ಯಂತ ನೀರಿನ ಸಮಸ್ಯೆ ತಲೆದೋರಿದೆ. ಈ ಸಮಸ್ಯೆಯಿಂದ ಪಾರಾಗಲು ಮಳೆ ನೀರು ಕೊಯ್ಲು ಯೋಜನೆ ಅಳವಡಿಕೆ ಪ್ರಮುಖವಾಗಿದೆ. ಪ್ರತಿ ಮನೆ, ಬೀದಿ, ವಾರ್ಡ್‌ಗಳಲ್ಲಿ ಶೇ.50 ರಷ್ಟುಮಳೆ ನೀರು ಕೊಯ್ಲು ಅಳವಡಿಕೆಯಾಗಬೇಕು ಎಂದು ಹೇಳಿದರು.

ಅಂತರ್ಜಲ ವೃದ್ಧಿಗೆ ಕಲ್ಯಾಣಿ ಸ್ವಚ್ಛತೆ

ಜಿಲ್ಲೆಯಲ್ಲಿದ್ದ ಪುರಾತನ ಕಲ್ಯಾಣಿಗಳು ಕಸ, ಬಾಟಲ್‌ಗಳಿಂದ ತುಂಬಿಕೊಂಡಿದ್ದು, ಈವರೆಗೂ 92 ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಲಿದೆ. ಜೊತೆಗೆ ಗೌರಿಬಿದನೂರು ತಾಲೂಕಿನ ಪಿನಾಕಿನಿ ನದಿ, ಚಿಂತಾಮಣಿಯ ರಾಮಕುಂಟೆ, ಶಿಡ್ಲಗಟ್ಟದ ಗೌಡನ ಕೆರೆ, ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಗಳು ಬೃಹತ್‌ ದೊಡ್ಡ ಕೆರೆಗಳಾಗಿದ್ದರೂ ಹೂಳು ತುಂಬಿಕೊಂಡಿರುವುದು ಅಂತರ್ಜಲ ವೃದ್ಧಿಗೆ ಮಾರಕವಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲೆಯಲ್ಲಿ ಮಳೆಯಾದರೂ ಮಳೆನೀರು ಸಂಗ್ರಹ ಮಾಡಲು ಸರಿಯಾದ ವೈಜಾನಿಕ ಯೋಜನೆ ಅಳವಡಿಕೆ ಮಾಡಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆಂತಕಕಾರಿ ಮಟ್ಟಕ್ಕೆ ತಲುಪುತ್ತದೆ ಈಗಾಗಲೇ ಕೈಗೊಳ್ಳಬೇಕಿದ್ದ ಮುಂಜಾಗ್ರತಾ ಕ್ರಮಗಳನ್ನು ಈಗಲಾದರೂ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಜಾಗೃತಿ ಮೂಡಿಸುವ ಕೆಲಸವಾಗಲಿ

ನಗರ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ಸ್ವಯಂಸೇವಕರು ನಗರಸಭೆ, ಪುರಸಭೆ ಮತ್ತು ಪಪಂ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ನೀಡಿ ಮಳೆ ನೀರು ಕೊಯ್ಲು ಯೋಜನೆ ಕುರಿತು ಮಾಹಿತಿ ನೀಡಿ, ಯೋಜನೆ ಉಪಯೋಗಗಳನ್ನು ಮನವರಿಕೆ ಮಾಡಬೇಕು. ಸೆ.15 ರೊಳಗೆ ಚಿಲುಮೆ ಯೋಜನೆ ಅಳವಡಿಸಿಕೊಳ್ಳುವ ಮನೆಯ ಮಾಲೀಕರಿಗೆ ಜಿಲ್ಲಾಡಳಿತದಿಂದ 5 ಸಾವಿರ ಪೋ›ತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿಸಿದರು.

24 ವರ್ಷದಿಂದ ಮಳೆ ನೀರು ಬಳಕೆ

ಮಳೆ ಕೊಯ್ಲು ಅಳವಡಿಕೆ ಬಗ್ಗೆ ವಿಶೇಷ ತರಬೇತಿ ನೀಡಿ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಹಿರಿಯ ವಿಜ್ಞಾನಿ ಎ.ಆರ್‌. ಶಿವಕುಮಾರ್‌ ಮಾತನಾಡಿ, ಸುಮಾರು 24 ವರ್ಷಗಳಿಂದ ಮಳೆ ನೀರು ಶುದ್ಧೀಕರಿಸಿ ತಮ್ಮ ಇಡೀ ಕುಟುಂಬ ಮಳೆ ನೀರನ್ನೇ ಉಪಯೋಗಿಸುತ್ತಿದ್ದು, ಮನೆಯ ನಿರ್ಮಾಣ ಹಂತದಲ್ಲಿ ಮಳೆ ಕೊಯ್ಲು ಯೋಜನೆ ಸುಲಭವಾಗಿ ಅಳವಡಿಸಿಕೊಳ್ಳಬಹುದು ಎಂದರು.

ಮಳೆಕೊಯ್ಲು ಅಳವಡಿಕೆಗೆ ಕನಿಷ್ಠ 10 ದಿಂದ 15 ಸಾವಿರ ವೆಚ್ಚ ತಗಲುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ 1.25 ಲಕ್ಷ ಜನರು ಮಳೆ ಕೊಯ್ಲು ಅಳವಡಿಸಿಕೊಂಡಿದ್ದಾರೆ. 100 ಚದರ ಅಡಿಗೆ ಮಳೆ ನೀರು ಕೊಯ್ಲು ಅಳವಡಿಸಿದರೆ ವಾರ್ಷಿಕವಾಗಿ 715 ಲೀಟರ್‌ ನೀರು ಸಂಗ್ರಹವಾಗಲಿದೆ ಎಂದು ಮಾಹಿತಿ ನೀಡಿದರು.

ಬರ ನಿವಾರಣೆಗೆ ಮಳೆ ಕೊಯ್ಲು

ಜಿಲ್ಲೆಯಲ್ಲಿ ಆಗುವ ಮಳೆ ನೀರು ಶುದ್ಧೀಕರಿಸುವ ವೈಜಾನಿಕವಾಗಿ ಮಳೆ ಕೊಯ್ಲು ಯೋಜನೆಯನ್ನು ಪ್ರತಿ ಮನೆ ನಿರ್ಮಾಣ ಹಂತದಲ್ಲಿ ಅಳವಡಿಕೆ ಮಾಡಿಕೊಂಡು ಜಿಲ್ಲೆ ಎದುರಿಸುತ್ತಿರುವ ಬರ ಪರಿಸ್ಥಿತಿಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಕಾರ್ಯಗಾರದಲ್ಲಿ ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರೇಣುಕಾ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.