ಬೆಂಗಳೂರು(ಏ.18): ಕೊರೋನಾ ಹಾವಳಿ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ 11 ಸಾವಿರಕ್ಕೂ ಹೆಚ್ಚಿನ ಸೋಂಕು ಪ್ರಕರಣ ದಾಖಲಾಗಿದ್ದು, ಇದು ಕೊರೋನಾ ಸೋಂಕಿನ ಸಾರ್ವಕಾಲಿಕ ದಾಖಲೆಯಾಗಿದೆ.

ನಗರದಲ್ಲಿ ಶನಿವಾರ 11,404 ಸೋಂಕಿನ ಪ್ರಕರಣಗಳು ವರದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ 10,497 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದೇ ಸಾರ್ವಕಾಲಿಕ ದಾಖಲೆಯಾಗಿತ್ತು. ಇದೀಗ ಸೋಂಕಿತ ಹೊಸ ಪ್ರಕರಣಗಳು ಜನರಲ್ಲಿ ಹೆಚ್ಚಿನ ನಡುಕ ಹುಟ್ಟಿಸಿದೆ. ಮೊದಲ ಅಲೆಯಲ್ಲಿ ನಗರದಲ್ಲಿ ಆರು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಎಂಟು ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರಿಂದ ನಗರದ ಜನರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೋನಾ, ಡೆಂಘಿ, ಜ್ವರ: ವೈದ್ಯರಿಗೇ ಗೊಂದಲ..!

ಶನಿವಾರ ದೃಢ ಪಟ್ಟ11,404 ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 87,724ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 5,33,842 ಮುಟ್ಟಿದ್ದು, ಈ ಪೈಕಿ 4,41,054 ಮಂದಿ ಗುಣಮುಖರಾಗಿದ್ದಾರೆ. ಶನಿವಾರ 3,252 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ತೀವ್ರ ನಿಗಾ ಘಟಕದಲ್ಲಿ 124 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 43 ಮಂದಿ ಮೃತ ಪಡುವುದರೊಂದಿಗೆ ಒಟ್ಟು ಮರಣ ಹೊಂದಿದವರ ಸಂಖ್ಯೆ 5063ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಪುರುಷರಲ್ಲೇ ಸೋಂಕು ಹೆಚ್ಚು

ಶನಿವಾರ 6,675 ಮಂದಿ ಪುರುಷರು, 4729 ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. 20- 49 ವರ್ಷದೊಳಗಿನ 4527 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಶನಿವಾರ ಮೃತಪಟ್ಟ 43 ಮಂದಿ ಪೈಕಿ 25 ಪುರುಷರು, 18 ಮಹಿಳೆಯರಾಗಿದ್ದಾರೆ.