ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಏ.18): ಕೊರೋನಾ ಸೋಂಕು ಏಕಾಏಕಿ ಉಲ್ಬಣವಾದ ಬೆನ್ನಲ್ಲೇ ಉದ್ಯಾನ ನಗರಿಯಲ್ಲಿ ಡೆಂಘಿ, ವೈರಾಣು ಜ್ವರದ ಪ್ರಕರಣಗಳು ತೀವ್ರಗೊಂಡಿವೆ. ಇದು ಸಾರ್ವಜನಿಕರು ಹೈರಾಣಾಗುವಂತೆ ಮಾಡಿದೆ. ಇದರ ನಡುವೆ ಕೊರೋನಾ ಹಾಗೂ ವೈರಾಣು ಜ್ವರದ ಲಕ್ಷಣಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ ಕಾರಣ ವೈದ್ಯರೇ ಗೊಂದಲಕ್ಕೆ ಸಿಲುಕುವಂತಾಗಿದೆ.

ವಾತಾವರಣದಲ್ಲಿ ಏರುಪೇರು, ಕಲುಷಿತ ಗಾಳಿ, ನೀರು ಹಾಗೂ ಆಹಾರ ಸೇವನೆಯೇ ಈ ಜ್ವರಕ್ಕೆ ಪ್ರಮುಖ ಕಾರಣಗಳು. ಕಳೆದ ಒಂದು ವಾರದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಜ್ವರ ಗಂಭೀರ ಸ್ವರೂಪ ಪಡೆದು ಕೊಳ್ಳುತ್ತಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜಯನಗರದ ಜನರಲ್‌ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕೆ.ಸಿ.ಜನರಲ್‌ ಆಸ್ಪತ್ರೆ, ವಾಣಿವಿಲಾಸ್‌ ಆಸ್ಪತ್ರೆಯಲ್ಲಿ ನಿತ್ಯ ಸರಾಸರಿ 50 ಮಂದಿ ಜ್ವರ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಜ್ವರದಿಂದಾಗಿ ಒಂದು ವಾರದಲ್ಲಿ ವಿವಿಧ ಕ್ಲಿನಿಕ್‌ಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.10ರಷ್ಟು ಹೆಚ್ಚಳವಾಗಿದೆ. ಸಾಮಾನ್ಯವಾಗಿ ಮಳೆ ಆರಂಭವಾಗುವಾಗ ಇದು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಂಭೀರ ರೋಗ ಲಕ್ಷಣಗಳಿಲ್ಲದಿದ್ರೆ ಆಸ್ಪತ್ರೆ ದಾಖಲಾತಿ ಬೇಡ: ಡಾ. ಸುಧಾಕರ್‌

ಸಾಮಾನ್ಯ ಜ್ವರ, ವೈರಾಣು ಜ್ವರ ಹಾಗೂ ಕೊರೋನಾ ಸೋಂಕಿನ ನಡುವೆ ಹೆಚ್ಚು ವ್ಯತ್ಯಾಸಗಳಿಲ್ಲ. ಸಾಮಾನ್ಯ ಜ್ವರ ಬಂದರೆ ನೆಗಡಿ, ಶೀತ, ಮೂಗು ಕಟ್ಟಿಕೊಳ್ಳುತ್ತದೆ. ಗಂಟಲಿನಲ್ಲಿ ಸಮಸ್ಯೆ ಹಾಗೂ ಜ್ವರ ಇರುತ್ತದೆ. ಆದರೆ ಕೊರೋನಾ ವೈರಸ್‌ ಸೋಂಕಿತರಲ್ಲಿ ಮೂಗು ಕಟ್ಟಿಕೊಳ್ಳುವ ಸಮಸ್ಯೆ ತೀರಾ ವಿರಳ. ಈ ವೈರಸ್‌ ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಒಣ ಕೆಮ್ಮು ಬಾಧಿಸುತ್ತದೆ. ಜ್ವರ, ಸುಸ್ತು, ಶೀತ, ಒಣ ಕೆಮ್ಮು ಉಂಟಾಗುತ್ತದೆ.
ಕೆಲವು ರೋಗಿಗಳಲ್ಲಿ ಮೈಕೈ ನೋವು ಮತ್ತು ಬಾಧೆ, ಶೀತ, ಉಸಿರಾಟದ ತೊಂದರೆ, ಸೋರುವ ಮೂಗು, ಗಂಟಲು ಬೇನೆ ಅಥವಾ ಭೇದಿ ಕಾಣಿಸುತ್ತಿದೆ ಎಂದು ಬೆಂಗಳೂರು ನಗರ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅನ್ಸರ್‌ ಅಹಮದ್‌ ಹೇಳುತ್ತಾರೆ.

ಮಕ್ಕಳು, ವೃದ್ಧರಲ್ಲೇ ಹೆಚ್ಚು

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಸಾಮಾನ್ಯವಾಗಿ ಜ್ವರ ಮಕ್ಕಳಿಗೆ ಮೊದಲು ಬರುತ್ತದೆ. ಬಳಿಕ ಮನೆ ಮಂದಿಗೆಲ್ಲ ಹರಡುತ್ತದೆ. ನೆಗಡಿ, ಕೆಮ್ಮು, ಮೈ ಕೈ ನೋವಿನಿಂದ ಪ್ರಾರಂಭವಾಗಿ ಐದಾರು ದಿನ ಬಾಧಿಸುತ್ತದೆ. ತಣ್ಣನೆ ವಾತಾವರಣದಿಂದ ಮನುಷ್ಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಸುಲಭವಾಗಿ ಸೋಂಕು ಹರಡುತ್ತದೆ. ಜ್ವರ ಗಂಭೀರ ಸ್ವರೂಪ ಪಡೆದಾಗ ನ್ಯುಮೋನಿಯಾ ಆಗುವ ಸಾಧ್ಯತೆಗಳಿವೆ. ಆಗ ಆಸ್ಪತ್ರೆಗಳಲ್ಲಿಯೇ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ಕೆ.ಎಸ್‌. ಸಂಜಯ್‌ ಹೇಳುತ್ತಾರೆ.

ಆರೋಗ್ಯ ಬಗ್ಗೆ ಕಾಳಜಿ ಇರಲಿ

ವೈರಾಣು ಜ್ವರ ಹೆಚ್ಚಾಗುತ್ತಿರುವುದರಿಂದ ಆದಷ್ಟುಬಿಸಿ ನೀರಿನ ಸೇವನೆ ಮಾಡಬೇಕು. ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು. ನೀರಿನ ಶುದ್ಧತೆಯ ಬಗ್ಗೆ ಗಮನಹರಿಸಬೇಕು. ಕಾಯಿಸಿ ಆರಿಸಿದ ನೀರನ್ನೇ ಕುಡಿಯುವುದು ಉತ್ತಮ. ಊಟ-ತಿಂಡಿಗೆ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತೆರೆದಿಟ್ಟತಿನಿಸು, ಕತ್ತರಿಸಿಟ್ಟಿರುವ ಹಣ್ಣುಗಳ ಸೇವನೆ ಬೇಡ, ರಸ್ತೆ ಬದಿಯಲ್ಲಿ ದೊರೆಯುವ ಆಹಾರ ಸೇವನೆಗೆ ಮೊದಲು ಸ್ವಚ್ಛತೆ ಪರಿಶೀಲಿಸಿಕೊಳ್ಳಿ ಎಂದು ಡಾ. ಅನ್ಸರ್‌ ಅಹಮದ್‌ ಸಲಹೆ ನೀಡುತ್ತಾರೆ.