Asianet Suvarna News Asianet Suvarna News

ಬೆಂಗಳೂರಿನ 29 ಕೆರೆ ಅಭಿವೃದ್ಧಿಗೆ 114 ಕೋಟಿ..!

114 ಕೋಟಿಯಲ್ಲಿ 29 ಕೆರೆಗೆ ಅಭಿವೃದ್ಧಿ ಭಾಗ್ಯ, ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರವಾದ ಕೆರೆಗಳಿವು, ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಅನುದಾನ. 

114 Crore for the Development of 29 Lakes in Bengaluru grg
Author
First Published Dec 31, 2022, 7:00 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಡಿ.31):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹಸ್ತಾಂತರಗೊಂಡ ಕೆರೆಗಳ ಅಭಿವೃದ್ಧಿಗೆ ಸುಮಾರು 113.8 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಬಿಬಿಎಂಪಿಯ ಅಧೀನದಲ್ಲಿ 201 ಕೆರೆಗಳಿವೆ. ಈ ಪೈಕಿ 85 ಕೆರೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು, 35 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. 62 ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ. 19 ಕೆರೆಗಳು ನಿಷ್ಕ್ರೀಯ ಕೆರೆಗಳಾಗಿವೆ.

ಈ ಪೈಕಿ ಬಿಡಿಎಯಿಂದ 2019ರ ನವೆಂಬರ್‌ನಲ್ಲಿ ಬಿಬಿಎಂಪಿ ಕೆರೆ ವಿಭಾಗಕ್ಕೆ ಹಸ್ತಾಂತರಗೊಂಡ 29 ಕೆರೆಗಳನ್ನು ರಾಜ್ಯ ಸರ್ಕಾರದ ಅಮೃತ್‌ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಬಿಬಿಎಂಪಿಯ ಕೆರೆ ವಿಭಾಗದಿಂದ ರೂಪಿಸಿದ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೆರೆಗಳ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಿ ಕಾಮಗಾರಿ ಆರಂಭಿಸಲಾಗಿದೆ. ಪೂರ್ವ ವಲಯದ ವ್ಯಾಪ್ತಿಗೆ ಬರುವ ಕಾಚರಕನಹಳ್ಳಿಯ ಕೆರೆ ಹೊರತು ಪಡಿಸಿ ಉಳಿದ 28 ಕೆರೆಗಳು ಬಿಬಿಎಂಪಿಯ ಹೊರ ವಲಯದ ಕೆರೆಗಳಾಗಿವೆ. ಪ್ರಮುಖವಾಗಿ ಕೆರೆಗೆ ತಂತಿಬೇಲಿ ಅಳವಡಿಸುವುದು, ವಾಕಿಂಗ್‌ ಪಾತ್‌ ನಿರ್ಮಾಣ, ಕೆರೆ ಹೂಳು ತೆಗೆಯುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು .113.80 ಕೋಟಿ ರು.ವೆಚ್ಚ ಮಾಡಲಾಗುತ್ತಿದೆ.

ಬೆಂಗ್ಳೂರಲ್ಲಿ ಜರ್ಮನ್‌ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ..!

ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸುವುದಕ್ಕೂ ಮುನ್ನ ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಅನುಮೋದನೆ ಪಡೆದು ಕಾಮಗಾರಿ ಶುರು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರವಾಹಕ್ಕೆ ಕಾರಣವಾದ ಕೆರೆಗಳ ಅಭಿವೃದ್ಧಿ ಒತ್ತು

ದೊಡ್ಡಾನೆಕುಂದಿ ಕೆರೆ, ದೊಡ್ಡಬಿದರಕಲ್ಲು ಕೆರೆ ಸೇರಿದಂತೆ ವಿವಿಧ ಕೆರೆಗಳು ಮಳೆಗಾಲದಲ್ಲಿ ದಂಡೆ ಒಡೆದು ಪ್ರವಾಹಕ್ಕೆ ಕಾರಣವಾಗಿದ್ದವು. ಈ ರೀತಿ ಪ್ರವಾಹಕ್ಕೆ ಕಾರಣವಾಗುವ ಕೆರೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಬಿಬಿಎಂಪಿ ಇದೀಗ ಯೋಜನೆ ರೂಪಿಸಿದೆ.

ಅಭಿವೃದ್ಧಿ ಪಡಿಸದ ಬಿಡಿಎ

ಬಿಬಿಎಂಪಿಯ ಕೆಲವು ಕೆರೆಗಳನ್ನು ಅಭಿವೃದ್ಧಿ ಮತ್ತು ನಿರ್ವಹಣೆಗೆ 2014-15ನೇ ಸಾಲಿನಲ್ಲಿ ಬಿಡಿಎಗೆ ನೀಡಲಾಗಿತ್ತು. ಕೆರೆಗಳ ನಿರ್ವಹಣೆ ಜವಾಬ್ದಾರಿ ಪಡೆದ ಬಿಡಿಎ ಸಮರ್ಪಕವಾಗಿ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡದ ಕಾರಣಕ್ಕೆ ಪುನಃ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿತ್ತು. ಬಿಬಿಎಂಪಿ ಇದೀಗ ಬಿಡಿಎಯಿಂದ ವಾಪಾಸ್‌ ಪಡೆದ ಕೆರೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಿವೃದ್ಧಿ ಪಡಿಸುತ್ತಿರುವ 29 ಕೆರೆಗಳು

ಜುನ್ನಸಂದ್ರ ಕೆರೆ, ದೊಡ್ಡಾನೆಕುಂದಿ ಕೆರೆ, ದೊಡ್ಡಬಿದರಕಲ್ಲು ಕೆರೆ, ಅಬ್ಬಿಗೆರೆ ಕೆರೆ, ಶಿವಪುರ ಕೆರೆ, ನೆಲಗದರನಹಳ್ಳಿ ಕೆರೆ, ವಡ್ಡರಹಳ್ಳಿ ಕೆರೆ, ಚಿಕ್ಕಬೆಟ್ಟಹಳ್ಳಿ ಕೆರೆ, ಬೆರಟೇನ ಅಗ್ರಹಾರ ಕೆರೆ, ಕೋಣನಕುಂಟೆ ಕೆರೆ, ವರ್ತೂರು ಕೆರೆ, ಮಾವಿನಕೆರೆ, ಸಿಂಗಾಪುರ ಕೆರೆ, ವೆಂಕಟೇಶಪುರ ಕೆರೆ, ಅಗ್ರಹಾರ ಕೆರೆ, ಕಾಚರಕನಹಳ್ಳಿ ಕೆರೆ, ಲಿಂಗಬೀರನಹಳ್ಳಿ ಕೆರೆ, ದುಬಾಸಿಪಾಳ್ಯ ಕೆರೆ ಸೇರಿದಂತೆ 29 ಕೆರೆಗಳ ಅಭಿವೃದ್ಧಿ ಮಾಡಲಾಡುತ್ತಿದೆ.

ಬೆಂಗಳೂರು: ಅಂತೂ ಕಾರಂತ ಲೇಔಟ್‌ ಕೆಲಸ ಆರಂಭಕ್ಕೆ ದಿನಗಣನೆ..!

ರಾಜ್ಯ ಸರ್ಕಾರವು ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ನೀಡಲಾದ ಅನುದಾನಕ್ಕೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ. ಕೆಲವು ಕೆರೆಗಳಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಅಂತ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ವಿನಾಯಕ್‌ ಕುಮಾರ್‌ ಹರಿದಾಸ್‌ ತಿಳಿಸಿದ್ದಾರೆ. 

ಕೆರೆಯ ಅಭಿವೃದ್ಧಿ ವಿವರ

ವಲಯ ಕೆರೆ ಸಂಖ್ಯೆ ವೆಚ್ಚ(ಕೋಟಿ .)
ಮಹದೇವಪುರ 8 23.50
ದಾಸರಹಳ್ಳಿ 6 25.50
ಬೊಮ್ಮನಹಳ್ಳಿ 4 19.50
ಆರ್‌ಆರ್‌ನಗರ 4 10.80
ಯಲಹಂಕ 6 17.00
ಪೂರ್ವ 1 2.50
ಒಟ್ಟು 29 113.80

Follow Us:
Download App:
  • android
  • ios