ರಾಜ್ಯದಲ್ಲಿ 1114 ಗ್ರಾಮಗಳಿಗೆ ದೂರ ಸಂಪರ್ಕ ಜಾಲವಿಲ್ಲ
ರಾಜ್ಯದಲ್ಲಿ ದೂರಸಂಪರ್ಕ ಜಾಲವಿಲ್ಲದ 1114 ಗ್ರಾಮಗಳಿರುವುದು ಕಂಡುಬಂದಿದ್ದು, ಈ ಗ್ರಾಮಗಳಿಗೆ ಭಾರತ ಸರ್ಕಾರ 4 ಜಿ ಸ್ಯಾಚುರೇಷನ್ ಪ್ರಾಜೆಕ್ಟ್ನಡಿ ದೂರಸಂಪರ್ಕ ಒದಗಿಸಲು ಕ್ರಮ ವಹಿಸಿದೆ.
ಮಂಡ್ಯ : ರಾಜ್ಯದಲ್ಲಿ ದೂರಸಂಪರ್ಕ ಜಾಲವಿಲ್ಲದ 1114 ಗ್ರಾಮಗಳಿರುವುದು ಕಂಡುಬಂದಿದ್ದು, ಈ ಗ್ರಾಮಗಳಿಗೆ ಭಾರತ ಸರ್ಕಾರ 4 ಜಿ ಸ್ಯಾಚುರೇಷನ್ ಪ್ರಾಜೆಕ್ಟ್ನಡಿ ದೂರಸಂಪರ್ಕ ಒದಗಿಸಲು ಕ್ರಮ ವಹಿಸಿದೆ.
ಬಿಎಸ್‌ಎನ್‌ಎಲ್ ಮತ್ತು ಮೆ.ಆರ್‌ಜೆಐಎಲ್ ಮುಖಾಂತರ ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ದೂರಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಗ್ರೌಂಡ್ ಬೇಸ್ಡ್ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತಿ ಸ್ಥಳದಲ್ಲಿ 2000 ಚದರಡಿಯಷ್ಟುಸರ್ಕಾರಿ ಭೂಮಿಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 (3)(4)ರನ್ವಯ ಪೂರ್ಣ ಮಾರುಕಟ್ಟೆಮೌಲ್ಯವನ್ನು ವಿಧಿಸಿ ಬಿಎಸ್‌ಎನ್‌ಎಲ್ ಸಂಸ್ಥೆಗೆ ಮಂಜೂರು ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡುವಂತೆ ತಿಳಿಸಲಾಗಿದೆ. ರಾಜ್ಯಸರ್ಕಾರವು ಈಗಾಗಲೇ ಟವರ್‌ಗಳ ನಿರ್ಮಾಣಕ್ಕೆ ಅಗತ್ಯವಿರುವ ಜಾಗಗಳನ್ನು ಒದಗಿಸಿಕೊಡುವ ಸಂಬಂಧ ಜಂಟಿ ಪರಿಶೀಲನೆ ನಡೆಸಿ ಸ್ಥಳಗಳ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.
ದೂರಸಂಪರ್ಕವು ದೇಶದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮೂಲ ಸಾಧನವಾಗಿ ಹೊರಹೊಮ್ಮಿರುವುದರಿಂದ ಈ ಯೋಜನೆ ಅನುಷ್ಠಾನಕ್ಕೆ ರಾಜ್ಯಸರ್ಕಾರ ಅಗತ್ಯ ಸಹಾಯ, ಸಹಕಾರ ಮತ್ತು ನೆರವು ನೀಡಬೇಕಿದ್ದು, ಭಾರತ ಸರ್ಕಾರ ದೂರಸಂಪರ್ಕ ಜಾಲವನ್ನು ಸಾರ್ವಜನಿಕ ಮೂಲಸೌಲಭ್ಯವಾಗಿ ಪರಿಗಣಿಸಿರುವುದರಿಂದ ದೂರಸಂಪರ್ಕ ಜಾಲವಿಲ್ಲದ ಗ್ರಾಮಗಳಿಗೆ ಗ್ರಾಮಕ್ಕೆ ಹತ್ತಿರವಿರುವ ಕಡೆಗಳಲ್ಲಿ ಗ್ರೌಂಡ್ ಬೇಸ್ಡ್ ಸ್ಥಾವರಗಳನ್ನು ಸ್ಥಾಪಿಸಿ ಸಂಪರ್ಕ ಕಲ್ಪಿಸಲು ಕ್ರಮ ವಹಿಸಿದೆ.
ಎಲ್ಲರನ್ನೂ ಒಳಗೊಳ್ಳುವ ಮತ್ತು ಸಂಪರ್ಕ ಕಲ್ಪಿಸುವ ಡಿಜಿಟಲ್ ವ್ಯವಸ್ಥೆ ಇದಾಗಿದ್ದು, ಈ ಯೋಜನೆಯು ದೂರದ ಮತ್ತು ಕಷ್ಟಕರ ಪ್ರದೇಶಗಳಲ್ಲಿನ ಹಳ್ಳಿಗಳಿಗೆ 4-ಜಿ ಮೊಬೈಲ್ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ, ಕೇವಲ 2ಜಿ, 3ಜಿ ಸಂಪರ್ಕವನ್ನು ಹೊಂದಿರುವ ಹಳ್ಳಿಗಳನ್ನು 4-ಜಿಗೆ ವ್ಯಾಪ್ತಿಗೆ ತರುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಈಗಾಗಲೇ ಆತ್ಮನಿರ್ಭರ್ 4-ಜಿ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ಮೊಬೈಲ್ ಬ್ರಾಡ್‌ಬ್ಯಾಂಡ್ ಮೂಲಕ ವಿವಿಧ ಇ-ಆಡಳಿತ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಟೆಲಿ-ಮೆಡಿಸಿನ್, ಟೆಲಿ-ಶಿಕ್ಷಣ ಸೇರಿದಂತೆ ಇ-ತಂತ್ರಜ್ಞಾನದ ಇತರೆ ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ. 4-ಜಿ ಸೇವೆಯಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಿನ ಉದ್ಯೋಗ ಸೃಷ್ಟಿಸುವುದಕ್ಕೆ ನೆರವಾಗಲಿದೆ.
ಜಿಲ್ಲೆಯ 22 ಗ್ರಾಮಗಳಿಗೆ ದೂರಸಂಪರ್ಕದಿಂದ ದೂರ..!
ಮಂಡ್ಯ ಜಿಲ್ಲೆಯ 22 ಗ್ರಾಮಗಳು ದೂರಸಂಪರ್ಕದಿಂದ ದೂರ ಉಳಿದಿವೆ. ಮದ್ದೂರು ತಾಲೂಕಿನ ಅಂಕೇಗೌಡನದೊಡ್ಡಿ, ಅರೆತಿಪ್ಪೂರು, ಬುಳ್ಳನದೊಡ್ಡಿ, ಮಳವಳ್ಳಿ ತಾಲೂಕಿನ ಬಸವನಹಳ್ಳಿ, ಕುರುಬನಪುರ, ಮಜ್ಜಿಗೆಮಲ್ಲನಹಳ್ಳಿ, ಮುತ್ತತ್ತಿ, ತಾಳಾಡಿ, ಮಂಡ್ಯ ತಾಲೂಕಿನ ದ್ಯಾಪಸಂದ್ರ, ತೂಬಿನಕೆರೆ, ನಾಗಮಂಗಲ ತಾಲೂಕಿನ ದಾಸರಹಳ್ಳಿ, ಹರಳಕೆರೆ, ಕಲ್ಲಿನಾಥಪುರ, ಮಲ್ಲಸಂದ್ರ, ಮಂಗರವಳ್ಳಿ, ವಡೇರಹಳ್ಳಿ, ಪಾಂಡವಪುರ ತಾಲೂಕಿನ ಬಸವನಗುಡಿಕೊಪ್ಪಲು, ಕೆಂಪೇಗೌಡನಕೊಪ್ಪಲು, ರಾಗಿಮುದ್ದನಹಳ್ಳಿ, ಸಣಬದಕೊಪ್ಪಲು, ಶಿಂಡಭೋಗನಹಳ್ಳಿ, ಸಿಂಗ್ರಿಗೌಡನಕೊಪ್ಪಲು ಗ್ರಾಮಗಳು ದೂರಸಂಪರ್ಕ ಜಾಲವನ್ನು ಹೊಂದಿಲ್ಲ.
ಗ್ರಾಮೀಣ ಭಾಗದಲ್ಲಿ ದೂರಸಂಪರ್ಕ ವ್ಯವಸ್ಥೆ
ಶಿವಮೊಗ್ಗ (ನ.06): ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ ವ್ಯಾಪ್ತಿಯ ನೆಟ್‍ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್‌ಗಳನ್ನು ಮಂಜೂರು ಮಾಡಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು. ಇಂದು ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತಾದ ಮಾಹಿತಿಯನ್ನು ನೀಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ದೂರ ಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ದಿ ಮತ್ತು ಸುಧಾರಣಾ ದೃಷ್ಟಿಯಿಂದ ಕೇಂದ್ರದ ದೂರ ಸಂಪರ್ಕ ಸಚಿವರಾದ ಅಶಿನಿ ವೈಷ್ಣವ್‍ರವರಿಗೆ ಮನವಿ ಸಲ್ಲಿಸಲಾಗಿತ್ತು.
ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತರಾದ 96 ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿತ್ತು. ಕೇಂದ್ರ ಸಚಿವರು ಈ ಮನವಿಗೆ ಕೂಡಲೇ ಸ್ಪಂದಿಸಿ ಹಲವಾರು ಕ್ರಮಗಳನ್ನು ಕೈಗೊಂಡು ಅಕ್ಟೋಬರ್ 27ರಂದು ಪತ್ರ ಮುಖೇನ ವಿವರಗಳನ್ನು ತಿಳಿಸಿದ್ದಾರೆ. ಆತ್ಮನಿರ್ಭರ ಭಾರತದ 4 ಜಿ ಟೆಕ್ನಾಲಜಿ ಯೋಜನೆಯಡಿ ದೇಶದಾದ್ಯಂತ ನೆಟ್‍ವರ್ಕ್ ಇಲ್ಲದ ಕುಗ್ರಾಮಗಳಿಗೆ ಅತ್ಯಾಧುನಿಕ ದೂರಸಂಪರ್ಕ ನೀಡಲು ರೂ.26,136 ಕೋಟಿ ವೆಚ್ಚದ 4ಜಿ ಮೊಬೈಲ್ ಸರ್ವಿಸ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ದೇಶದ ಸುಮಾರು 24,680 ಕುಗ್ರಾಮಗಳಿಗೆ 4ಜಿ ಮೊಬೈಲ್ ಸರ್ವಿಸ್ ನೀಡಲಾಗುವುದು.