ಇಂದಿನ ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಂಡಿರುವಾಗ, ಇಳಕಲ್ಲಿನ 11 ವರ್ಷದ ಪ್ರಣವ್ ಅಮರೇಶ ಹಿರೇಮಠ ಇಂಗ್ಲಿಷ್ನಲ್ಲಿ 3 ಪುಸ್ತಕಗಳನ್ನು ಬರೆದು ಸಾಧನೆ ಮಾಡಿದ್ದಾನೆ. ಏಷ್ಯಾದಲ್ಲೇ 8ನೇ ರ್ಯಾಂಕ್ ಪಡೆದಿರುವ ಈತ, ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದಾನೆ.
ಶಿವರಾಜ ವಿಶ್ವನಾಥ್
ಇತ್ತೀಚಿನ ಮಕ್ಕಳು ವಿಡಿಯೋ ಗೇಮ್ಸ್, ರೀಲ್ಸ್, ಸೋಷಿಯಲ್ ಮೀಡಿಯಾ ಇನ್ನಿತರ ಮೊಬೈಲ್, ಲ್ಯಾಪ್ಟಾಪ್ಗಳಂತಹ ಸಾಧನಗಳಲ್ಲಿ ತೊಡಗಿಸಿಕೊಂಡಿರುವಾಗ 11 ವರ್ಷದ ಬಾಲಕನೊಬ್ಬ ಇಂಗ್ಲಿಷ್ನಲ್ಲಿ 3 ಪುಸ್ತಕಗಳನ್ನು ರಚಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
11ನೇ ವಯಸ್ಸಿಗೆ ಮೂರು ಪುಸ್ತಕಗಳ ಲೇಖಕ!
ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ನಿವಾಸಿಯಾದ ಪ್ರಣವ್ ಅಮರೇಶ ಹಿರೇಮಠ(Pranav Amaresh Hiremath) ಸದ್ಯ ವಿಜಯಪುರದಲ್ಲಿ ದೆಹಲಿ ಪಬ್ಲಿಕ್ ಸ್ಕೂಲ್(Delhi Public school vijayapur) ವಿದ್ಯಾರ್ಥಿಯಾಗಿದ್ದು ತನ್ನ 11ನೇ ವಯಸ್ಸಿನಲ್ಲಿ ಓದಿನ ಜತೆಗೆ ಬರವಣಿಗೆಯನ್ನು ರೂಢಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಮಕ್ಕಳ ವೇದಿಕೆಯಾದ ‘ಬ್ರಿ ಬುಕ್ಸ್’ ಪ್ರಕಾಶನದ ‘ಪರ್ಫಾರ್ಮಡ್ ನ್ಯಾಷನಲ್ ಯಂಗ್ ಆಥರ್ಸ್ ಫೇರ್’ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಪ್ರಯತ್ನದಲ್ಲೇ ‘ವೆನ್ ಮೂಮೆಂಟ್ ಸ್ಪೀಕ್’ ಎಂಬ ವಿಷಯ ಕುರಿತು ಸುಮಾರು 147 ಪುಟಗಳ ಪುಸ್ತಕ ಬರೆದಿದ್ದಾನೆ. ಈ ಮೂಲಕ ಜ್ಯೂರಿ ಚಾಯಿಸ್ ಪ್ರಶಸ್ತಿಯಲ್ಲಿ ಏಷ್ಯಾದಲ್ಲೇ 8ನೇ ರ್ಯಾಂಕ್ ಗಳಿಸಿದ್ದಾನೆ. ಪ್ರಣವ್ ಈ ಪ್ರಶಸ್ತಿ ಪಡೆದ ಅತಿ ಕಿರಿಯ ವಯಸ್ಸಿನ ಸಾಧಕನಾಗಿದ್ದಾನೆ. ಜೊತೆಗೆ ಬೆಸ್ಟ್ ಸೆಲ್ಲರ್ ಪ್ರಶಸ್ತಿಯೂ ಲಭಿಸಿದೆ.
ಬಾಲಕ ಪ್ರಣವ್ ಅಮರೇಶ ಹಿರೇಮಠ ಬರೆದ ಮೂರು ಕೃತಿಗಳು
ಅನಂತರ 2ನೇ ಪುಸ್ತಕ ‘ಇನ್ಕ್ರೆಡಿಬಲ್ ಇಂಡಿಯಾ’ ಎಲ್ಲೂ ಇಲ್ಲದ್ದು ಭಾರತ ದೇಶದಲ್ಲಿದೆ ಎಂಬ ವಿಷಯ ಕುರಿತು ಸುಮಾರು 55 ಪುಟಗಳಲ್ಲಿ ಪುಸ್ತಕ ರಚಿಸಿ ಸಕಲ ಸೌಲಭ್ಯವೂ ನಮ್ಮ ದೇಶದಲ್ಲೇ ಇದ್ದರೂ ಬೇರೆ ದೇಶಕ್ಕೆ ಸುತ್ತಾಡುವುದೇಕೆ ಎಂಬ ಕುರಿತ ಪುಸ್ತಕಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು 3ನೇ ಪುಸ್ತಕ ‘ದಿ ರಿಯಾಲಿಟಿ ಆಫ್ ಮಾಡರ್ನ್ ಅರ್ಥ್’ ಎಂಬ ಪುಸ್ತಕದಲ್ಲಿ ಇಂದಿನ ಪರಿಸರ ಮಾಲಿನ್ಯ ಹಾಗೂ ಮನುಷ್ಯನ ಆರೋಗ್ಯಕ್ಕೆ ಅಗತ್ಯವಾದ ಆಹಾರದಲ್ಲೂ ಸರಿಯಾದ ಪೌಷ್ಟಿಕತೆ ಇಲ್ಲದಿರಿರುವುದು ಅತ್ಯಂತ ನೋವಿನ ಸಂಗತಿ, ಇಂದಿನ ಯುವಕರ ಜೀವನ 50ರ ಗಡಿ ವಯಸ್ಸು ದಾಟದಿರುವ ಕುರಿತು ಹಾಗೂ ಅದನ್ನು ಸರಿಪಡಿಸುವ ಕುರಿತ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂಬ ಸಮಗ್ರ ವಿಷಯ ಕುರಿತು ರಚಿಸಿದ ಪುಸ್ತಕವೂ ‘ಬೆಸ್ಟ್ ಸೆಲ್ಲರ್’ ಆಗಿ ಮೆಚ್ಚುಗೆ ಪಡೆದಿದೆ. ಪ್ರತಿಷ್ಠಿತ ಖಾಸಗಿ ವಾಹಿನಿಯಾದ ಡಿಸ್ಕವರಿಯಲ್ಲಿ ಸಹ ಪ್ರಣವ್ ಸಾಧನೆ ಕುರಿತು ಪ್ರಸಾರವಾಗಿದ್ದು ಗಮನಾರ್ಹ.
ಸಾಂಸ್ಕೃತಿಕ ವಿಭಾಗದಲ್ಲೂ ಆಸಕ್ತಿ:
ಓದು ಬರಹದ ಜೊತೆಗೆ ಸಾಂಸ್ಕೃತಿಕ ವಿಭಾಗದಲ್ಲಿ (ಗಿಟಾರ್) ಕ್ರೀಡೆಯಲ್ಲಿ (ಚೆಸ್) ಸಹ ಈ ಬಾಲಕ ಒಳ್ಳೆಯ ಸಾಧನೆ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನೆ. ಭವಿಷ್ಯತ್ತಿನಲ್ಲಿ ಐ.ಎ.ಎಸ್. ಪಾಸಾಗಿ ಜಿಲ್ಲಾಧಿಕಾರಿಯಾಗಬೇಕೆಂಬ ಹೆಬ್ಬಯಕೆ ಹೊಂದಿದ್ದು, ಜೊತೆಗೆ ಜಗತ್ತಿನ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಬೇಕೆಂಬುದು ಈತನ ಮಹತ್ವಾಕಾಂಕ್ಷೆಯಾಗಿದೆ.
ನನ್ನ ಪತ್ನಿ ರಾಜೇಶ್ವರಿ ಅವರ ತಂಗಿಯ ಪುತ್ರನಾದ ಪ್ರಣವ್ ಈತ ಜನಿಸಿದ್ದು ಇಳಕಲ್ಲ ನಗರದಲ್ಲಿ ಬೆಳೆದದ್ದೂ ನಮ್ಮ ಮಡಿಲಲ್ಲಿ, ಸದ್ಯ ಈತನ ಓದು ಮಾತ್ರ ವಿಜಯಪುರದಲ್ಲಿ, ಈತನ ಸರ್ವಾಂಗೀಣ ಬೆಳವಣಿಗೆ ನಮ್ಮೊಂದಿಗೆ ಇದೆ. ಈತನ ಪ್ರತಿಯೊಂದು ಸಾಧನೆಯ ಹೆಜ್ಜೆ ಹೆಜ್ಜೆಯ ಭವಿಷ್ಯಕ್ಕೂ ನಮ್ಮೆಲ್ಲರ ಸಹಾಯ, ಸಹಕಾರವಿದೆ.
ಬಸವರಾಜ ತೆಗ್ಗಿನಮಠ, ನಿವೃತ್ತ ಕ್ರೀಡಾ ನಿರ್ದೇಶಕರು, ಇಳಕಲ್ಲ






