ಪಂಜಾಬ್ ರೀತಿ ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕ: ಸಿಎಂ ಬೊಮ್ಮಾಯಿ
ಇಲ್ಲಿ ಬೆಳೆಯುವ ಸೋನಾಮಸೂರಿ ಬ್ರಾಂಡ್‌ನಂತೆ ಬೇರೆ, ಬೇರೆ ಬ್ರಾಂಡ್‌ಗಳನ್ನು ಉತ್ಪಾದನೆ ಮಾಡುವ ಅವಕಾಶ ಇದೆ. ಇದಕ್ಕಾಗಿ 100 ಬೃಹತ್ ವಿವಿಧ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು. ಪಂಜಾಬ್ ಮಾದರಿಯಲ್ಲಿ ಅಭಿವೃದ್ಧಿ ಮಾಡಿ, ಬ್ರಾಂಡ್ ಮೂಲಕ ರೈತರು ಮಾರಾಟ ಮಾಡಿ, ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಗಂಗಾವತಿ(ಮಾ.15): ತುಂಗಭದ್ರಾ ನದಿಯುದ್ದಕ್ಕೂ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದ ನೀರಾವರಿಯಾಗುತ್ತದೆ. ಈ ನೀರು ಬಳಸಿಕೊಂಡು ಇಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತದೆ. ಅದರ ಮೌಲ್ಯವರ್ಧನೆ ಮಾಡಲು ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕ (ಫುಡ್ ಪ್ರೊಸೆಸ್ಸಿಂಗ್ ಯೂನಿಟ್)ಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಗಂಗಾವತಿಯ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ತುಂಗಭದ್ರಾ ನದಿಯುದ್ದಕ್ಕೂ ಭದ್ರಾ, ತುಂಗಭದ್ರಾ ಜಲಾಶಯ ಸೇರಿದಂತೆ ಅನೇಕ ಏತ ನೀರಾವರಿ ಯೋಜನೆಗಳಿದ್ದು, ಲಕ್ಷಾಂತರ ಎಕರೆ ಪ್ರದೇಶದಲ್ಲಿ ನೀರಾವರಿ ಬೆಳೆ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಸೋನಾಮಸೂರಿ ಬ್ರಾಂಡ್‌ನಂತೆ ಬೇರೆ, ಬೇರೆ ಬ್ರಾಂಡ್‌ಗಳನ್ನು ಉತ್ಪಾದನೆ ಮಾಡುವ ಅವಕಾಶ ಇದೆ. ಇದಕ್ಕಾಗಿ 100 ಬೃಹತ್ ವಿವಿಧ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು. ಪಂಜಾಬ್ ಮಾದರಿಯಲ್ಲಿ ಅಭಿವೃದ್ಧಿ ಮಾಡಿ, ಬ್ರಾಂಡ್ ಮೂಲಕ ರೈತರು ಮಾರಾಟ ಮಾಡಿ, ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು ಎಂದರು.
ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಒಂದು ರುಪಾಯಿಯಲ್ಲಿ 90 ಪೈಸೆ ಸೋರಿಕೆಯಾಗುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಂಕ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮೆ ಮಾಡುತ್ತಿರುವುದರಿಂದ ಒಂದು ಪೈಸೆಯೂ ಸೋರಿಕೆಯಾಗುತ್ತಿಲ್ಲ. ರೈತರ ಕಿಸಾನ್ ಸಮ್ಮಾನ ಯೋಜನೆಯ ಎರಡನೇ ಕಂತಿನ ಹಣ ಇನ್ನೆರಡು ದಿನಗಳಲ್ಲಿ ಜಮೆಯಾಗುತ್ತದೆ. ವಾರದಲ್ಲಿ ಕುರಿಗಾರರ ಸಂಘಕ್ಕೆ ಘೋಷಣೆ ಮಾಡಿದ ಯೋಜನೆಯ ಹಣ ಜಮೆಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ಭೂಮಿಪೂಜೆ:
ಇದಕ್ಕೂ ಮೊದಲು, ಅಂಜನಾದ್ರಿಯ ಅಭಿವೃದ್ಧಿಗೆ ಅವರು ಭೂಮಿಪೂಜೆ ನೆರವೇರಿಸಿದರು. ಸರ್ಕಾರ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಘೋಷಣೆ ಮಾಡಿದ್ದು, ಇದರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ .125 ಕೋಟಿ ಮೀಸಲಿರಿಸಿದೆ. ಈ ಅನುದಾನದಲ್ಲಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಆಂಜನಾದ್ರಿಯ ಬೆಟ್ಟದ ಕೆಳಗೆ ಆಂಜನೇಯನ ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಅಂಜನಾದ್ರಿ ಬೆಟ್ಟಕ್ಕೆ ಹೊಂದಿಕೊಂಡಿರುವ ಸರ್ಕಾರಿ ಒಡೆತನದ ಭೂಮಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಅದರ ಮೊದಲ ಭಾಗವಾಗಿ ಸುಮಾರು .25 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ, ಬೃಹತ್ ಹೈಟೆಕ್ ಸಾರ್ವಜನಿಕ ಶೌಚಾಲಯ, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣೆ ಪಥವನ್ನು ನಿರ್ಮಿಸುವ ಕಾರ್ಯ ಈಗ ಪ್ರಾರಂಭವಾಗಲಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆದಿರುವುದರಿಂದ ಅದು ಮುಗಿದ ಬಳಿಕವೇ ರೋಪ್‌ವೇ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದರು.
ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕರುಣಿಸಿದ್ದು ಕಾಂಗ್ರೆಸ್: ಸಿ.ಟಿ.ರವಿ
ಅಯೋಧ್ಯೆ ಮತ್ತು ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯನ್ನು ಅಭಿವೃದ್ಧಿ ಮಾಡುವ ಸೌಭಾಗ್ಯ ನಮ್ಮ ಬಿಜೆಪಿ ಸರ್ಕಾರಕ್ಕೆ ದೊರೆತಿರುವುದು ಸೌಭಾಗ್ಯ. ಅಂಜನಾದ್ರಿ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಸಹ ಆಗಿರುವುದರಿಂದ ಇನ್ನೇನು ಕಾಮಗಾರಿ ಪ್ರಾರಂಭವಾಗುತ್ತದೆ. ಕಾಮಗಾರಿಯಾಗುವ ಮುನ್ನವೇ ನಾವು ಬಿಲ್ ಮಾಡುವುದಿಲ್ಲ. ಕಾಮಗಾರಿ ಪೂರ್ಣಗೊಂಡ ಬಳಿಕವೇ ಬಿಲ್ ಮಾಡುತ್ತೇವೆ. ಕಾಮಗಾರಿಯಾಗುವ ಮೊದಲೇ ಬಿಲ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಎಂದರು.
ಸಚಿವರಾದ ಮುನಿರತ್ನ, ಹಾಲಪ್ಪ ಆಚಾರ್, ಆನಂದಸಿಂಗ್, ಶಾಸಕರಾದ ಪರಣ್ಣ ಮುನುವಳ್ಳಿ, ಅಮರೇಗೌಡ ಭಯ್ಯಾಪುರ, ಬಸವರಾಜ ದಢೇಸೂಗೂರು ಈ ವೇಳೆ ಉಪಸ್ಥಿತರಿದ್ದರು.