ಬೇಲಿ ಹಾಕಿ, ಭದ್ರತಾ ಸಿಬ್ಬಂದಿ ಯೋಜಿಸಲು ಚಿಂತನೆ| ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಉಳಿಸುವುದೇ ದೊಡ್ಡ ಸವಾಲು| ಸರ್ಕಾರಿ ಜಮೀನು ಪ್ರಭಾವಿಗಳ ಪಾಲಾಗುತ್ತಿರುವುದು ನಿಜ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ| ಸರ್ಕಾರಿ ಸ್ವತ್ತನ್ನು ರಕ್ಷಿಸಿಕೊಳ್ಳಲು ಸರ್ವ ಪ್ರಯತ್ನ: ಅಶೋಕ್‌| 

ಬೆಂಗಳೂರು(ಮಾ.10): ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಒತ್ತುವರಿ ತೆರವು ಬಳಿಕ ಸರ್ಕಾರಿ ಜಮೀನನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿಗಳಿಗೆ 100 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸಭೆಯಲ್ಲಿ ಮಂಗಳವಾರ ಗಮನ ಸೆಳೆಯುವ ಸೂಚನೆ ವೇಳೆ ಬಿಜೆಪಿ ಸದಸ್ಯ ಗೂಳಿಹಟ್ಟಿ ಶೇಖರ್‌ ಅವರು ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿ ಹುಲಿಮಂಗಲದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಹುಮಹಡಿ ಕಟ್ಟಡ ತೆರವುಗೊಳಿಸಬೇಕು ಮತ್ತು ಅಕ್ರಮ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಉಳಿಸುವುದೇ ದೊಡ್ಡ ಸವಾಲು. ಪ್ರತಿಪಕ್ಷದಲ್ಲಿ ಕುಳಿತಾಗ ಒತ್ತಾಯಿಸುವುದು ಸುಲಭ. ಆದರೆ, ಆಡಳಿತ ನಡೆಸುವಾಗ ಕೈ ಕಟ್ಟಿಹಾಕಿದಂತಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ: ಸಚಿವ ಅಶೋಕ್‌

ಸರ್ಕಾರಿ ಜಮೀನು ಪ್ರಭಾವಿಗಳ ಪಾಲಾಗುತ್ತಿರುವುದು ನಿಜ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ. ಸ್ವಾಧೀನ ಪಡಿಸಿಕೊಂಡು ಜಾಗವನ್ನು ರಕ್ಷಿಸಿಕೊಳ್ಳಲು ಕಾಂಪೌಂಡ್‌ ಹಾಕಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ 100 ಕೋಟಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರಿ ಸ್ವತ್ತನ್ನು ರಕ್ಷಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಲಾಗುವುದು. ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.