*  ಬಿಡಿಎಯಲ್ಲಿ ಭ್ರಷ್ಟಾಚಾರ ತಾಂಡವದ ಬಗ್ಗೆ ದೂರು*  75 ಪೊಲೀಸರ ಎಸಿಬಿ ತಂಡ ಏಕಕಾಲಕ್ಕೆ ದಾಳಿ*  ದಾಳಿ ವೇಳೆ ಕೋಟ್ಯಂತರ ಮೌಲ್ಯದ ಅಕ್ರಮ ಬೆಳಕಿಗೆ 

ಬೆಂಗಳೂರು(ನ.20): ಅಕ್ರಮ ವ್ಯವಹಾರದ ಶಂಕೆ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಕೇಂದ್ರ ಕಚೇರಿ ಮೇಲೆ ಶುಕ್ರವಾರ ದಿಢೀರ್‌ ದಾಳಿ(Raid) ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ACB), ಸುಮಾರು .100 ಕೋಟಿಗೂ ಅಧಿಕ ಮೊತ್ತದ ಭೂ ಹಗರಣಕ್ಕೆ(Land Scam) ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.

ಬಿಡಿಎ ಉಪ ಕಾರ್ಯದರ್ಶಿಗಳಾದ ಡಾ.ಎನ್‌.ಎನ್‌.ಮಧು, ನವೀನ್‌ ಜೋಸೆಫ್‌, ಗೀತಾ ಉಡೇದಾ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಸೌಜನ್ಯ ಸೇರಿದಂತೆ ಇತರೆ ಅಧಿಕಾರಿಗಳ ಕಚೇರಿಗಳಿಗೆ ಎಸಿಬಿ ದಾಳಿ(ACB Raid) ನಡೆಸಿದ್ದು, ಈ ವೇಳೆ ನಿವೇಶ ಹಂಚಿಕೆ ಹಾಗೂ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಡತಗಳ ಪರಿಶೀಲನೆಯ ಪ್ರಾಥಮಿಕ ಹಂತದಲ್ಲಿ 100 ಕೋಟಿ ಅಧಿಕ ಮೊತ್ತದ ಅಕ್ರಮ ಪತ್ತೆಯಾಗಿದೆ ಎಂದು ಎಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿವೆ.

ನಗರದ ವ್ಯಾಪ್ತಿ ಬಿಡಿಎ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನ(Site) ಹಂಚಿಕೆ ಹಾಗೂ ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ನೆರವು ಸೇರಿದಂತೆ ಇತರೆ ಕೆಲಸಗಳಿಗೆ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಲಂಚಕ್ಕೆ(Bribe) ಬೇಡಿಕೆ ಇಟ್ಟಿರುವ ಸಂಬಂಧ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರೇರಿತವಾಗಿ ದೂರು(Complaint) ದಾಖಲಿಸಿಕೊಂಡು ಮೂವರು ಎಸ್ಪಿಗಳ ನೇತೃತ್ವದಲ್ಲಿ 9 ಡಿವೈಎಸ್ಪಿ, 14 ಇನ್ಸ್‌ಪೆಕ್ಟರ್‌ ಹಾಗೂ 50 ಸಿಬ್ಬಂದಿ ಸೇರಿ ಸುಮಾರು 75 ಪೊಲೀಸರ ಎಸಿಬಿ ತಂಡ ಏಕಕಾಲಕ್ಕೆ ದಾಳಿ ನಡೆಸಿ ಬಿಡಿಎಗೆ ಬಿಸಿ ಮುಟ್ಟಿಸಿದೆ.

ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಮನೆ ಕಟ್ಟಲು ಬಿಡಿಎ ಅಡ್ಡಿ..!

ಒಂದೇ ಸಂಸ್ಥೆಗೆ 35 ನಿವೇಶನಗಳು:

ಬಿಡಿಎ ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ನಾಗರಿಕ ಧ್ಯೇಯೋದ್ದೇಶದ (ಸಿಎ)ನಿವೇಶನಗಳ ಅಕ್ರಮ ಮಂಜೂರಾತಿ ಹಾಗೂ ಖಾಸಗಿ ಬಡಾವಣೆ ಅಭಿವೃದ್ಧಿಯಲ್ಲಿ ನಕಲಿ ದಾಖಲೆ(Duplicate Records) ಸೃಷ್ಟಿ ಸೇರಿದಂತೆ ಅಕ್ರಮ ಭೂ ಚಟುಟಿಕೆಯಲ್ಲಿ ಬಿಡಿಎ ಕೆಲ ಅಧಿಕಾರಿಗಳು ತೊಡಗಿರುವ ಬಗ್ಗೆ ಮಾಹಿತಿ ಬಂದಿತ್ತು. ಒಂದೇ ನಿವೇಶನಕ್ಕೆ ಇಬ್ಬರಿಗೆ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಅಲ್ಲದೆ, ಕೆ.ಆರ್‌.ಪುರ ಸಮೀಪದ ಕೆ.ನಾರಾಯಣಪುರದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ 35 ನಿವೇಶನಗಳು ಹಂಚಿಕೆಯಾಗಿರುವುದು ಪತ್ತೆಯಾಗಿದೆ.

ಇದೇ ರೀತಿ ನಗರದ ಇತರೆಡೆ ಅರ್ಹತೆ ಇಲ್ಲದಿದ್ದರೂ ಕೆಲವರಿಗೆ ಕಾನೂನುಬಾಹಿರವಾಗಿ ಬಿಡಿಎ ನಿವೇಶನ ಹಂಚಿಕೆಯಾಗಿದೆ. ಭೂ ವ್ಯವಹಾರದಲ್ಲಿ ಅಕ್ರಮವಾಗಿ ಖಾಸಗಿ ಸಂಸ್ಥೆಗಳಿಗೆ ಕೆಲ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎಗೆ ಚಳಿ ಬಿಡಿಸಿದ ಎಸಿಬಿ:

ಬಿಡಿಎ ಅಕ್ರಮಗಳ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಬಿ ಮುಖ್ಯಸ್ಥ ಸೀಮಂತ್‌ ಕುಮಾರ್‌ ಸಿಂಗ್‌, ಭೂ ವ್ಯವಹಾರದ ದಂಧೆಯಲ್ಲಿ ತೊಡಗಿರುವವರಿಗೆ ಚಳಿ ಬಿಡಿಸಲು ‘ದಿಢೀರ್‌ ಕಾರ್ಯಾಚರಣೆ’ ಕೈಗೊಳ್ಳಲು ಗುರುವಾರ ರಾತ್ರಿಯೇ ಯೋಜನೆ ರೂಪಿಸಿದ್ದರು. ಅಂತೆಯೇ ಎಸ್ಪಿಗಳಾದ ಯತೀಶ್ಚಂದ್ರ, ಅಬ್ದುಲ್‌ ಅಹದ್‌ ಹಾಗೂ ಉಮಾ ಮಹೇಶ್‌ ನೇತೃತ್ವದಲ್ಲಿ 75 ಪೊಲೀಸರ ವಿಶೇಷ ತಂಡ ರಚಿಸಿದ ಎಡಿಜಿಪಿ, ತಮ್ಮ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಸೋರಿಕೆಯಾಗದಂತೆ ಭಾರಿ ನಿಗಾವಹಿಸಿದರು. ತನ್ನ ದಾಳಿಯ ಸಣ್ಣದೊಂದು ಸುಳಿವು ಬಿಟ್ಟು ಕೊಡದೆ ಅತ್ಯಂತ ಗೌಪ್ಯತೆ ಕಾಪಾಡಿಕೊಂಡ ಎಸಿಬಿ, ಪೂರ್ವಯೋಜಿತದಂತೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹಠಾತ್ತಾಗಿ ನಗರದ ಕುಮಾರ ಕೃಪಾ ಪಶ್ಚಿಮದಲ್ಲಿರುವ ಬಿಡಿಎ ಕೇಂದ್ರ ಕಚೇರಿಗೆ ದಾಂಗುಡಿ ಇಟ್ಟಿತು.

ಬಿಡಿಎ ಪ್ರವೇಶಿಸುತ್ತಿದ್ದ ಎಸಿಬಿ ಅಧಿಕಾರಿಗಳು, ಕೂಡಲೇ ಬಿಡಿಎ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಿತು. ಆ ಕಚೇರಿಯ ಆವರಣದಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆಗೊಳಪಡಿಸಿತು. ಬಿಡಿಎ ಹೊರ ಹೋಗುವ ವಾಹನಗಳನ್ನು ತೀವ್ರವಾಗಿ ತಪಾಸಣೆ ಬಳಿಕವೇ ಹೊರಕ್ಕೆ ಕಳುಹಿಸಿದರು.

ಇಂದು ದಾಳಿ ಪೂರ್ಣ ಚಿತ್ರಣ ಲಭ್ಯ?

ಬಿಡಿಎ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಎಂಟು ತಾಸುಗಳು ಕಡತಗಳನ್ನು ಪರಿಶೀಲಿಸಿದ ಎಸಿಬಿ, ಬಳಿಕ ರಾತ್ರಿ ಬಾಗಿಲುಗಳಿಗೆ ಬೀಗ ಹಾಕಿ ಇಡೀ ಬಿಡಿಎ ಕಚೇರಿಯನ್ನು ತಮ್ಮ ಸುಪರ್ದಿಗೆ ಪಡೆಯಿತು. ಶನಿವಾರ ಕೂಡಾ ದಾಖಲೆಗಳ ತಪಾಸಣೆ ನಡೆಯಲಿದ್ದು, ಸಂಜೆ ವೇಳೆಗೆ ದಾಳಿ ಪೂರ್ಣ ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: 80 ಕೋಟಿ ಮೌಲ್ಯದ ಜಾಗ ಬಿಡಿಎ ವಶಕ್ಕೆ

ಸಿಬ್ಬಂದಿ ಮೊಬೈಲ್‌ ಸೀಜ್‌

ಎಸಿಬಿ ದಿಢೀರ್‌ ದಾಳಿಯಿಂದ ಅವಕ್ಕಾದ ಕೆಲ ಅಧಿಕಾರಿ ಮತ್ತು ಸಿಬ್ಬಂದಿ, ದಾಳಿ ವೇಳೆ ತಪ್ಪಿಸಿಕೊಳ್ಳಲು ನಡೆಸಿದ ಕಸರತ್ತು ವಿಫಲವಾಗಿದೆ. ಕಚೇರಿಯೊಳಗೆ ಕಾಲಿಟ್ಟಕೂಡಲೇ ಎಸಿಬಿ, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಯ ಮೊಬೈಲ್‌ಗಳನ್ನು ಕೂಡಾ ಜಪ್ತಿ ಮಾಡಿತು. ಇದರಿಂದ ಬಿಡಿಎಗೆ ‘ಹೊರಗಿನ’ ಸಂಪರ್ಕವನ್ನು ಎಸಿಬಿ ಸಂಪೂರ್ಣ ಕಡಿತಗೊಳಿಸಿತು.

ಖಾಸಗಿ ವ್ಯಕ್ತಿಗಳ ಬಳಿ ಹಣ ಪತ್ತೆ

ಬಿಡಿಎ ಆವರಣದಲ್ಲಿದ್ದ ಕೆಲವು ಖಾಸಗಿ ವ್ಯಕ್ತಿಗಳ ಬಳಿ ಹಣ ಪತ್ತೆಯಾಯಿತು. ಆದರೆ ತಮ್ಮ ಹಣಕ್ಕೆ ಅವರು ಸೂಕ್ತ ದಾಖಲೆಗಳನ್ನು ನೀಡಿದ ಬಳಿಕ ಹಣ ಮರಳಿಸಲಾಯಿತು. ಅದರಲ್ಲೂ ಎಲೆಕ್ಟ್ರಿಶಿಯನ್‌ ಒಬ್ಬರು, ತಮ್ಮ ಕೆಲಸಗಾರರಿಗೆ ಸಂಬಳ ನೀಡುವ ಸಲುವಾಗಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದು ಗೊತ್ತಾಯಿತು ಎಂದು ಮೂಲಗಳು ಹೇಳಿವೆ.