*  ಸಂಗ್ರಹಿಸಿದ ಹಣ ಬೇರೆ ಉದ್ದೇಶಕ್ಕೆ ಬಳಕೆ*  ಬಡಾವಣೆಯಲ್ಲಿ ಸೌಕರ್ಯ ಕಲ್ಪಿಸಲು ಪರದಾಡುತ್ತಿರುವ ಬಿಡಿಎ*  ಇದರಿಂದ ಮನೆ ನಿರ್ಮಾಣಕ್ಕೆ ತೊಡಕು 

ಸಂಪತ್‌ ತರೀಕೆರೆ

ಬೆಂಗಳೂರು(ಅ.16): ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ(Kempegowda Layout) ನಿವೇಶನ ಹಂಚಿಕೆಯಿಂದ ಬಿಡಿಎ(BDA) ಸಂಗ್ರಹಿಸಿದ್ದ 2685 ಕೋಟಿಗೂ ಅಧಿಕ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿದ್ದು, ಇದರಿಂದಾಗಿ ಐದು ವರ್ಷ ಕಳೆದರೂ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಹಾಗಾಗಿ ಸೂರಿನ ಕನಸು ಕಂಡಿದ್ದ ಗ್ರಾಹಕರ ಮೇಲೆ ಸಾಲದೊಂದಿಗೆ ಶೇ.2ರಷ್ಟು ಬಡ್ಡಿಯ ಹೊರೆಯೂ ಬಿದ್ದಿದೆ.

ಬಿಡಿಎ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್‌(Electricity), ಕುಡಿಯುವ ನೀರು(Drinking Water) ಸೇರಿದಂತೆ ಇನ್ನಿತರ ಯಾವುದೇ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ. ರೇರಾ ನ್ಯಾಯಾಲಯದ(Court) ಸೂಚನೆಯಂತೆ ಡಿ.31ರೊಳಗೆ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಬೇಕಿದೆ. ಆದರೆ ಬಿಡಿಎ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

ಬಡಾವಣೆಗೆ ಮೂಲಸೌಕರ್ಯ ಒದಗಿಸದೇ ನಿವೇಶನದಾರರು(Site) ಮನೆ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ಮೂಲಸೌಕರ್ಯ ಇಲ್ಲದಿದ್ದರೂ ಪರವಾಗಿಲ್ಲ, ಮನೆ ಕಟ್ಟಿಕೊಳ್ಳುತ್ತೇವೆ ಎನ್ನುವವರಿಗೆ ಬಿಡಿಎ ಅನುಮತಿ ನೀಡುತ್ತಿಲ್ಲ. ಈ ನಡುವೆ ಬ್ಯಾಂಕುಗಳಲ್ಲಿ ನಿರ್ದಿಷ್ಟ ಅವಧಿಗೆ ಪಡೆದ ಸಾಲದ ಅವಧಿ ಮುಕ್ತಾಯವಾಗುತ್ತಿದ್ದು, ಗ್ರಾಹಕರ ಮೇಲೆ ಶೇ.2ರಷ್ಟು ಬಡ್ಡಿಯ ಹೊರೆ ಬೀಳುತ್ತಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವಂತ ಮನೆ ಕಟ್ಟಿಕೊಳ್ಳುವ ಕನಸಿನಲ್ಲಿ ಸರ್ಕಾರದ ಅಂಗ ಸಂಸ್ಥೆ ಎಂಬ ನಂಬಿಕೆಯಲ್ಲಿ ಬಿಡಿಎ ನಿವೇಶನ ಖರೀದಿಸಿದರೂ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ. ಪ್ರತಿ ತಿಂಗಳು ಹತ್ತಾರು ಸಾವಿರ ರು.ಗಳನ್ನು ಇಎಂಐ ಕಟ್ಟುತ್ತಿರುವ ಗ್ರಾಹಕರು ಮನೆ ಬಾಡಿಗೆಯನ್ನೂ ಕಟ್ಟುವಂತಾಗಿದೆ. ಕೋವಿಡ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿ ಉದ್ಯೋಗ, ವೇತನ ಕಡಿತಗಳಿಂದ ತತ್ತರಿಸಿರುವ ಜನರಿಗೆ ಬಿಡಿಎಯಿಂದ ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ.

ಬೆಂಗಳೂರು: 80 ಕೋಟಿ ಮೌಲ್ಯದ ಜಾಗ ಬಿಡಿಎ ವಶಕ್ಕೆ

ಬಿಡಿಎ ನಿವೇಶನ ಖರೀದಿಗಾಗಿ 2016ರಲ್ಲಿ ವಿವಿಧ ಬ್ಯಾಂಕ್‌ಗಳಿಂದ ಸಾಲ ತೆಗೆದುಕೊಂಡವರಿಗೆ ಸಾಲದ ಮೇಲಿನ ಬಡ್ಡಿ ಏರಿಕೆಯ ಬಿಸಿ ತಟ್ಟಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡು 18 ತಿಂಗಳಲ್ಲಿ ಮನೆ ಕಟ್ಟಬೇಕು. ಅಂತೆಯೇ ಐಸಿಐಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ 36 ತಿಂಗಳಲ್ಲಿ ಮನೆ ಕಟ್ಟಿತೋರಿಸಬೇಕು. ಎಸ್‌ಬಿಐನಲ್ಲಿ ಸಾಲ ಪಡೆದ 5 ವರ್ಷಗಳಲ್ಲಿ ಮನೆ ಕಟ್ಟದಿದ್ದರೆ ಸಾಲದ ಮೇಲಿನ ಬಡ್ಡಿ ದರ ಮಾರ್ಪಾಡಾಗುತ್ತದೆ.

ಸಾಲ(Loan) ಪಡೆಯುವಾಗ ಶೇ.7.05 ಇದ್ದರೆ, 5 ವರ್ಷದ ನಂತರ ಗೃಹ ಸಾಲ, ವಾಣಿಜ್ಯ ಸಾಲವಾಗಿ ಮಾರ್ಪಟ್ಟು ಶೇ.9 ಅಥವಾ 10ರಷ್ಟು ಬಡ್ಡಿ ಕಟ್ಟುವಂತಾಗುತ್ತದೆ. ಪ್ರಸ್ತುತ 2016ರಲ್ಲಿ ಸಾಲ ಪಡೆದ ನಿವೇಶನದಾರರ ಸಾಲದ ಮೇಲಿನ ಬಡ್ಡಿ ಶೇ.2ರಷ್ಟು ಹೆಚ್ಚಾಗಿದೆ. 2018ರಲ್ಲಿ ನಿವೇಶನ ಪಡೆದವರ ಸಾಲ ಎರಡು ವರ್ಷಗಳಲ್ಲಿ ಮನೆ ಕಟ್ಟಿಮುಗಿಸದಿದ್ದರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಕೃತ ಬ್ಯಾಂಕ್‌ ಪ್ರತಿನಿಧಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿದರು.

2,685 ಕೋಟಿ ಸಂಗ್ರಹ

ಬಡಾವಣೆಯಲ್ಲಿ ವಿವಿಧ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿರುವ ಬಿಡಿಎ ವಿಶೇಷ ಕೋಟಾದಡಿ 20/30 ನಿವೇಶನದ ದರ .5.23 ಲಕ್ಷ, ಸಾಮಾನ್ಯ ವರ್ಗದ ಕೋಟಾದಡಿ .10.46 ಲಕ್ಷ, 30/40 ಅಳತೆಯ ನಿವೇಶನದ ದರ .23.25 ಲಕ್ಷ, 40/60 ಅಳ​ತೆಯ ನಿವೇಶನದ ದರ .52.31 ಲಕ್ಷ ಹಾಗೂ 50/80 ಸುತ್ತಳÜತೆಯ ನಿವೇಶನದ ದರ .95.87 ಲಕ್ಷ ನಿಗದಿ ಪಡಿಸಿತ್ತು. ಬಡಾವಣೆಯಲ್ಲಿ ಮಾರಾಟವಾದ 10 ಸಾವಿರ ನಿವೇಶನಗಳಲ್ಲಿ ಸುಮಾರು ಒಂದು ಸಾವಿರ ನಿವೇಶನಗಳನ್ನು ವಿವಿಧ ಕಾರಣಗಳಿಂದ ಹಿಂದಿರುಗಿಸಿದ್ದಾರೆ. ಮಾರಾಟವಾದ 9 ಸಾವಿರ ನಿವೇಶನಗಳಿಂದ .2,685 ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಿದೆ.

ನಿವೇಶನಗಳ ಮಾರಾಟದಿಂದ ಎರಡು ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದರೂ ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕೆಲಸಗಳಿಗೆ ಹಣ ಹೊಂದಿಸಲು ಬಿಡಿಎ ಹಿಂದು-ಮುಂದು ನೋಡುತ್ತಿರುವುದು ನಿವೇಶನಗಳ ಮಾಲೀಕರಿಗೆ ಮಾಡಿದ ಮೋಸ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಅಶೋಕ್‌ ಅವರು ಸಾಮಾಜಿಕ ಜಾಲತಾಣದ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಡಿಎ ಹೊಸ ಬಡಾವಣೆ ಮತ್ತಿತರ ಯೋಜನೆಗಳ ಆರ್ಥಿಕ ವಹಿವಾಟುಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಖಾತೆ ತೆರೆಯಬೇಕು ಎಂಬುದು ರೇರಾ ಕಾಯ್ದೆ ನಿಯಮವಿದೆ. ಗ್ರಾಹಕರಿಂದ ಪಡೆದ ಹಣ, ಯಾವ ಉದ್ದೇಶಕ್ಕಾಗಿ ಎಷ್ಟುಹಣ ಖರ್ಚು ಮಾಡಲಾಗಿದೆ. ಉಳಿಕೆ ಹಣ ಎಷ್ಟುಎಂಬ ಮಾಹಿತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಕಟಿಸಬೇಕು. ಆದರೆ ಬಿಡಿಎ ಇದೀಗ ಈ ನಿಯಮ ಉಲ್ಲಂಘಿಸಿದೆ ಎಂದು ಎನ್‌ಪಿಕೆಎಲ್‌ ಮುಕ್ತ ವೇದಿಕೆ ವಕ್ತಾರ ಸೂರ್ಯಕಿರಣ್‌ ತಿಳಿಸಿದ್ದಾರೆ.