Udupi: ಪುತ್ತಿಗೆ ಶ್ರೀ ಕೈಯಲ್ಲಿ ಇಸ್ಲಾಂ ಪುಸ್ತಕ! ಈ ವಿವಾದದ ರಹಸ್ಯವೇನು ಗೊತ್ತಾ?
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸುತ್ತ, ಅನಗತ್ಯ ವಿವಾದವೊಂದು ಗಿರಕಿ ಹೊಡೆಯುತ್ತಿದೆ. " ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ" ಎಂಬ ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿರುವುದನ್ನು ಹಿಂದೂ ನಾಯಕರು ಖಂಡಿಸುತ್ತಿದ್ದಾರೆ.
ವರದಿ: ಶಶಿಧರ್ ಮಾಸ್ತಿಬೈಲ್. ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಫೆ.2): ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸುತ್ತ, ಅನಗತ್ಯ ವಿವಾದವೊಂದು ಗಿರಕಿ ಹೊಡೆಯುತ್ತಿದೆ. " ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ" ಎಂಬ ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿರುವುದನ್ನು ಹಿಂದೂ ನಾಯಕರು ಖಂಡಿಸುತ್ತಿದ್ದಾರೆ. ಇಷ್ಟಕ್ಕೂ ಏನಿದು, ಪುಸ್ತಕ ಬಿಡುಗಡೆ ರಹಸ್ಯ? ಪರ್ಯಾಯದ ಹೊಸ್ತಿಲಲ್ಲಿರುವ ಶ್ರೀಗಳ ಸುತ್ತ ಈ ವಿವಾದ ಹುಟ್ಟಿಕೊಳ್ಳುವುದಕ್ಕೆ ಕಾರಣವೇನು? ಪುತ್ತಿಗೆ ಶ್ರೀಗಳ ಕೈಯಲ್ಲಿ ಇಸ್ಲಾಂ ಧರ್ಮ ಕುರಿತ ಪುಸ್ತಕದ ಫೋಟೋ ವೈರಲ್ ಆಗಿದೆ. ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ ಪುಸ್ತಕ ಕೈಯಲ್ಲಿ ಹಿಡಿದಿರುವ ಶ್ರೀಗಳು, ಹಿಂದೂ ನಾಯಕರ ಕಣ್ಣು ಕುಕ್ಕುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ. 2024ರಲ್ಲಿ ಶ್ರೀಗಳು ಪರ್ಯಾಯ ಪೀಠ ಏರಲಿದ್ದು ಈ ಹೊಸ್ತಿಲಲ್ಲೇ ವಿವಾದ ತಲೆದೋರಿರುವುದು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ.
ಸ್ಥಳೀಯ ಹಿಂದೂ ಮುಖಂಡ , ಅಷ್ಟಮಠಗಳ ಭಕ್ತರಾದ ಬಾಲಾಜಿ ರಾಘವೇಂದ್ರ ಆಚಾರ್ಯ ಅವರಂತೂ ವಿಡಿಯೋ ಹೇಳಿಕೆ ಮೂಲಕ ಸ್ವಾಮೀಜಿ ವಿರುದ್ಧ ಕಿಡಿಕಾರಿದ್ದಾರೆ. ಶ್ರೀಗಳ ನಡೆ ಬಗ್ಗೆ ಆಕ್ಷೇಪಿಸಿರುವ ರಾಘವೇಂದ್ರ ಆಚಾರ್ಯ,ಈ ಪುಸ್ತಕ ಬಿಡುಗಡೆ ಮಾಡಿರೋದು ಆಘಾತವಾಗಿದೆ. ಇಸ್ಲಾಂ ಅಲ್ಲಾಹು ಮಾತ್ರ ದೇವರು, ಉಳಿದವರು ಕಾಫಿರ್ ಅಂತಾರೆ. ಶ್ರೀಪಾದರು ಹೇಗೆ ಪುಸ್ತಕ ಬಿಡುಗಡೆ ಮಾಡಿದ್ದಾರೆ .ಅಂತಾರಾಷ್ಟ್ರೀಯ ವಾಗಿ ಜಿಹಾದಿ ಭಯೋತ್ಪಾದನೆಯಿಂದ ಪ್ರಪಂಚ ತತ್ತರಿಸಿದೆ, ನಾವು ಸ್ವಾಮಿಗಳನ್ನು ಕೂಡಾ ಪ್ರಶ್ನೆ ಮಾಡುವಷ್ಟು ಸ್ವಾಭಿಮಾನ ನಮ್ಮಲ್ಲಿ ಬೆಳೆದಿದೆ ಎಂದು ಕಿಡಿ ಕಾರಿದ್ದಾರೆ.
ಪುತ್ತಿಗೆ ಶ್ರೀ ಫೋಟೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿಂದು ಮುಖಂಡ ಪ್ರಮೋದ್ ಮುತಾಲಿಕ್, ಪೂಜ್ಯ ಸ್ವಾಮೀಜಿಗಳ ಬಗ್ಗೆ ನನಗೆ ಬಹಳ ಗೌರವವಿದೆ , ಆದರೆ ಇವತ್ತು ಇಸ್ಲಾಂ ಇಡೀ ಜಗತ್ತಿನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದೆ ? ಇಂದು ಸ್ವಾಮೀಜಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಎಷ್ಟೋ ಹಿಂದೂ ಭಾಗಗಳನ್ನು ಕಳೆದುಕೊಂಡ ಕೊಂಡಿದ್ದೇವೆ ಎನ್ನುವುದು ನಿಮ್ಮ ಗಮನದಲ್ಲಿದೆ. ಇರಾನ್ ಇರಾಕ್ ಈಜಿಪ್ಟ್ ಇಂಡೋನೇಷ್ಯಾ ಹೀಗೆ 50 ರಿಂದ 60 ಪ್ರದೇಶಗಳನ್ನು ಕಳೆದುಕೊಂಡು ಸಂಪೂರ್ಣ ಇಸ್ಲಾಮಿಕರಣವಾಗಿದೆ. ಕೇರಳದಲ್ಲಿ 40% ಮಾತ್ರ ಹಿಂದುಗಳು ಉಳಿದುಕೊಂಡಿದ್ದಾರೆ. ಭಯೋತ್ಪಾದನೆಂದರೆ ಬಾಂಬು ಹಾಕುವುದು ಬಂದೂಕು ಹಿಡಿದು ಮಾಡುವಂತದ್ದು ಮಾತ್ರವಲ್ಲ. ಭಯೋತ್ಪಾದನೆ ಎಂದರೆ ಇಸ್ಲಾಮಿಕರಣ .ಇನ್ನೊಂದು ಧರ್ಮವನ್ನ ನುಂಗಿ ನೀರು ಕುಡಿಯುವ ಇಸ್ಲಾಮಿಕರಣ ಅದು ಭಯೋತ್ಪಾದನೆ. ಅದು ಲ್ಯಾಂಡ್ ಜಿಹಾದ್ ಇರಬಹುದು, ಲವ್ ಜಿಹಾದ್ ಇರಬಹುದು, ಗೋಮಾತೆಯ ಹತ್ಯೆ ಇರಬಹುದು, ಹೀಗಿರುವಾಗ ಯಾವ ಪುಸ್ತಕವನ್ನು ನೀವು ಬಿಡುಗಡೆ ಮಾಡಿದ್ದೀರಿ ? ನೀವು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದೂ ಧರ್ಮದ ಕುರಿತು ನೀವು ಗಟ್ಟಿಯಾಗಿ ನಿಲ್ಲಬೇಕು . ಇಲ್ಲವಾದರೆ ನಿಮ್ಮ ವಿರುದ್ಧವೂ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪುಸ್ತಕ ಬಿಡುಗಡೆ ರಹಸ್ಯ?!
ಇಷ್ಟಕ್ಕೂ ಇದು ಇಂದು ಅಥವಾ ನಿನ್ನೆ ಬಿಡುಗಡೆಯಾದ ಪುಸ್ತಕವಲ್ಲ. ಸುಮಾರು 10 ವರ್ಷಗಳ ಹಿಂದೆ ಉಡುಪಿಯ ಪುರಭವನದಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿತ್ತು ಮತ್ತು ಅದರಲ್ಲಿ ಪುತ್ತಿಗೆ ಶ್ರೀಗಳು ಭಾಗಿಯಾಗಿದ್ದರು. ಈಗ ತಲೆದೋರಿರುವ ವಿವಾದ ಮನ ಗಂಡು ಪುತ್ತಿಗೆ ಮಠ ಸ್ಪಷ್ಟನೆ ನೀಡಿದೆ.
ಇದು ಹತ್ತು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮ. ಸಮಾಜದಲ್ಲಿ ಒಡಕು ಉಂಟುಮಾಡಲು ಈ ರೀತಿ ಫೊಟೋ ವೈರಲ್ ಮಾಡುತ್ತಿದ್ದಾರೆ. ಜನಾಂಗಗಳ ನಡುವೆ ಪರಸ್ಪರ ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಅಂದು ಈ ಕಾರ್ಯಕ್ರಮ ನಡೆದಿತ್ತು.
ಸನಾತನ ಧರ್ಮದ ಮೊದಲ ಆದ್ಯತೆ ಕೂಡ ಶಾಂತಿ ಸೌಹಾರ್ದತೆ.ಅದ್ವೈತ ಆಚಾರ್ಯರೊಬ್ಬರು ಹಿಂದಿಯಲ್ಲಿ ಬರೆದ ಪುಸ್ತಕದ ಕನ್ನಡ ಅನುವಾದ ಇದಾಗಿತ್ತು.ಪುತ್ತಿಗೆ ಶ್ರೀಗಳು ಮೊದಲಿನಿಂದಲೂ ಭಯೋತ್ಪಾದನೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ರಿಲಿಜನ್ ಫಾರ್ ಪೀಸ್ ಇದರ ಅಂತರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಹಿಂದೂ ದೇವಾಲಯಗಳನ್ನು ರಕ್ಷಿಸಿ: ಆಸ್ಟ್ರೇಲಿಯಾ ಸಚಿವರ ಬಳಿ ಪುತ್ತಿಗೆ ಶ್ರೀ ಆಗ್ರಹ
ಇಸ್ಲಾಂ ದೇಶ ಸಹಿತ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಭಯೋತ್ಪಾದನೆಯ ವಿರುದ್ಧ ಅಭಿಪ್ರಾಯ ರೂಪಿಸಿದ್ದಾರೆ. ಅಮೇರಿಕಾದ ಶ್ವೇತ ಭವನದಲ್ಲೂ ಭಯೋತ್ಪಾದನೆಯ ವಿರುದ್ಧ ಮಾತನಾಡಿದ್ದಾರೆ.ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲವು ವಿಕೃತ ಮನಸ್ಸಿನವರು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
308 ವರ್ಷಗಳ ಬಳಿಕ ಮಧ್ಯಪ್ರದೇಶದ ಇಸ್ಲಾಂ ನಗರದ ಮೂಲ ಹೆಸರು ವಾಪಾಸ್!
ಹಳೆ ಫೋಟೋ ಒಂದು ಈಗ ಮತ್ತೆ ವೈರಲ್ ಆಗುತ್ತಿರುವುದು ಹಾಗೂ ಪರ್ಯಾಯದ ಹೊಸ್ತಿಲಲ್ಲೇ ಪುತ್ತಿಗೆ ಶ್ರೀಗಳ ವಿರುದ್ಧ ವಿವಾದ ತಳಕು ಹಾಕಿಕೊಂಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ. ಕಳೆದ ಬಾರಿಯೂ ಸಂಪ್ರದಾಯದ ಹೆಸರಲ್ಲಿ ಪುತ್ತಿಗೆ ಶ್ರೀಗಳ ವಿರುದ್ಧ ಅಷ್ಟಮಠಗಳ ಭಕ್ತರೇ ವಿವಾದ ಎಬ್ಬಿಸಿದ್ದನ್ನು ಸ್ಮರಿಸಬಹುದು.