ನಂದಿನಿ ಉತ್ಸವ : ಸಿಹಿ ತಿನಿಸುಗಳ ಮೇಲೆ ಶೇ.10ರಷ್ಟು ರಿಯಾಯಿತಿ
- ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ವತಿಯಿಂದ ಆಯೋಜಿಸಿರುವ 15 ದಿನಗಳ ನಂದಿನಿ ಸಿಹಿ ಉತ್ಸವ
- ವರಮಹಾಲಕ್ಷ್ಮಿ ಮತ್ತು ಮೊಹರಂ ಅಂಗವಾಗಿ ನಂದಿನಿ ಸಿಹಿ ಉತ್ಪನ್ನಗ ಮೇಲೆ ಶೇ.10 ರಿಯಾಯಿತಿ
ಮೈಸೂರು (ಆ.20): ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ವತಿಯಿಂದ ಆಯೋಜಿಸಿರುವ 15 ದಿನಗಳ ನಂದಿನಿ ಸಿಹಿ ಉತ್ಸವವನ್ನು ಅಧ್ಯಕ್ಷ ಪಿ.ಎಂ. ಪ್ರಸನ್ನ ಅವರು ಪ್ರಧಾನ ಡೇರಿಯಲ್ಲಿ ಸ್ಥಾಪಿಸಲಾಗಿರುವ ಮಿಲ್ಕ್ ಗ್ಯಾಲಕ್ಸಿ ಕ್ಷೀರ ಕೇಂದ್ರದಲ್ಲಿ ಗುರುವಾರ ಚಾಲನೆ ನೀಡಿದರು.
ಈ ವೇಳೆ ಪಿ.ಎಂ. ಪ್ರಸನ್ನ ಮಾತನಾಡಿ, ವರಮಹಾಲಕ್ಷ್ಮಿ ಮತ್ತು ಮೊಹರಂ ಅಂಗವಾಗಿ ನಂದಿನಿ ಸಿಹಿ ಉತ್ಪನ್ನಗಳನ್ನು ಶೇ.10 ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಈ ಕೊಡುಗೆಯೂ 15 ದಿನಗಳವರೆಗೂ ಲಭ್ಯವಿದೆ. ಇದು ಕೇವಲ ಸಿಹಿ ಉತ್ಪನ್ನ ಶ್ರೇಣಿಗಳಿಗೆ ಮಾತ್ರ ಸೀಮಿತವಾಗಿದ್ದು, ಎಲ್ಲಾ ನಂದಿನಿ ಮಾರಾಟ ಕೇಂದ್ರಗಳಲ್ಲಿಯೂ ಈ ಕೊಡುಗೆ ಲಭ್ಯವಿದೆ. ಗ್ರಾಹಕರು ಈ ವಿಶೇಷ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.
ಹಾಲಿನ ದರ ಹೆಚ್ಚಳ: ಕೆಎಂಎಫ್ ಅಧ್ಯಕ್ಷ ಜಾರಕಿಹೊಳಿ ಪ್ರತಿಕ್ರಿಯೆ
ಮೈಸೂರು ಪಾಕ್, ಚುಕ್ಕಿ ಲಾಡು ಸೇರಿದಂತೆ 60 ಬಗೆಯ ಸಿಹಿ ಉತ್ಪನ್ನಗಳು ಲಭ್ಯವಿದೆ. ರೈತರು ಮತ್ತು ಗ್ರಾಹಕರು ನಮ್ಮ ಎರಡು ಕಣ್ಣುಗಳಿದ್ದಂತೆ. ಇಬ್ಬರ ಅನುಕೂಲಕ್ಕಾಗಿ ಈ ವಿಶೇಷ ರಿಯಾಯಿತಿ ನೀಡಲಾಗಿದೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸಿ ಸಹಕರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಮೈಮುಲ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಈರೇಗೌಡ, ಕೆ.ಎಸ್. ಕುಮಾರ್, ಸಿ. ಓಂಪ್ರಕಾಶ್, ಕೆ. ಉಮಾಶಂಕರ್, ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ವಿಜಯ್‌ಕುಮಾರ್, ಪ್ರಧಾನ ವ್ಯವಸ್ಥಾಪಕ ಎಚ್.ಆರ್. ರಘು, ವ್ಯವಸ್ಥಾಪಕರಾದ ಕೆ.ಎಸ್. ಜಗದೀಶ್, ಸಣ್ಣತಮ್ಮೇಗೌಡ, ಮಾರುಕಟ್ಟೆವ್ಯವಸ್ಥಾಪಕ ಎಸ್.ಎಂ. ಪ್ರದೀಪ್, ಸಹಾಯಕ ವ್ಯವಸ್ಥಾಪಕ ಎಂ.ವಿ. ನವೀನ್‌ಕುಮಾರ್ ಇದ್ದರು.