ಮಂಗಳೂರು(ಏ.19): ಮೂಡುಬಿದಿರೆಯ ಮೂರು ಮಂದಿ ಹಾಗೂ ಕಾರ್ಕಳದ ಏಳು ಮಂದಿ ಸಹಿತ ಒಟ್ಟು 10 ಮಂದಿ ಸ್ನೇಹಿತರು ಮುಂಬೈಯಿಂದ ಆಗಮಿಸಿದ್ದು, ಅವರನ್ನು ಕಾರ್ಕಳ ಮತ್ತು ಮೂಡುಬಿದಿರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಿ ತಪಾಸಣೆ ನಡೆಸಲಾಗುತ್ತಿದೆ.

ಈ ಹತ್ತು ಮಂದಿ ಮಹಾರಾಷ್ಟ್ರದ ಕರಾಡ್‌ನಲ್ಲಿ ಉದ್ಯೋಗದಲ್ಲಿದ್ದು, ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿನತ್ತ ಪ್ರಯಾಣ ಬೆಳೆಸಿದ್ದರು. ಬೆಳಗಾವಿಗೆ ಆಗಮಿಸಿದ ಅವರು ಅಲ್ಲಿಂದ ತರಕಾರಿ ವಾಹನದಲ್ಲಿ ತೀರ್ಥಹಳ್ಳಿಗೆ ಬಂದು ತಲುಪಿದ್ದರು. ತೀರ್ಥಹಳ್ಳಿ ತಪಾಸಣಾ ಕೇಂದ್ರದಲ್ಲಿ ಪೊಲೀಸರು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದರಿಂದ ಅತಂತ್ರರಾದರು.

ಮೂಡುಬಿದಿರೆ: ಹಸಿದವರಿಗಾಗಿ ‘ಫ್ರೀ ಫುಡ್‌ ಸ್ಟ್ಯಾಂಡ್‌

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಅವರನ್ನು ಈ ತಂಡ ಸಂಪರ್ಕಿಸಿ ನೆರವು ಕೋರಿದರು. ತಕ್ಷಣ ಸ್ಪಂದಿಸಿದ ಅವರು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಅವರ ಮೂಲಕ ಉಡುಪಿ ಜಿಲ್ಲಾಧಿಕಾರಿ ಅನುಮತಿ ಪಡೆದರು.

ಊರಿಗೆ ಮರಳಿದ ಏಳು ಮಂದಿಯನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಮೂರು ಮಂದಿಯನ್ನು ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಿ ತಪಾಸಣೆ ನಡೆಸಲಾಗುತ್ತಿದೆ.