ಪ್ರಧಾನಿ ಮೋದಿ ಅವರು ನಗರದ ಪ್ರವಾಸಿ ಮಂದಿರದಿಂದ ನಂದಾ ಚಿತ್ರಮಂದಿರದವರೆಗೆ ಸುಮಾರು 1.8 ಕಿ.ಮೀ. ರೋಡ್‌ ಶೋ ನಡೆಸಲಿದ್ದು, ಎಸ್‌ಪಿಜಿ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ. 

ಮಂಡ್ಯ(ಮಾ.12): ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಭಾನುವಾರ) ನಗರದಲ್ಲಿ ನಡೆಸಲಿರುವ ರೋಡ್‌ ಶೋನಲ್ಲಿ ಒಂದು ಲಕ್ಷ ಜನರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ ಜಯರಾಂ ತಿಳಿಸಿದರು.

ಪ್ರಧಾನಿ ಮೋದಿ ಅವರು ನಗರದ ಪ್ರವಾಸಿ ಮಂದಿರದಿಂದ ನಂದಾ ಚಿತ್ರಮಂದಿರದವರೆಗೆ ಸುಮಾರು 1.8 ಕಿ.ಮೀ. ರೋಡ್‌ ಶೋ ನಡೆಸಲಿದ್ದು, ಎಸ್‌ಪಿಜಿ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯದಲ್ಲಿ ಹಿಂದುತ್ವ ಅಜೆಂಡಾ; ಮೋದಿ ಸ್ವಾಗತಕ್ಕೆ ಟಿಪ್ಪು ವಿರೋಧಿ ಅಸ್ತ್ರ!

ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ಮೋದಿ ಅವರನ್ನು ನೋಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಮಂದಿಗೆ ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರತಿ ನೂರು ಮೀಟರ್‌ಗೆ ಜನಪದ ಕಲಾತಂಡ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಪಣೀಶ್‌ ಮಾತನಾಡಿ, ನಾಲ್ಕು ದಶಕಗಳ ಬಳಿಕ ಮಂಡ್ಯ ಜಿಲ್ಲೆಗೆ ಪ್ರಧಾನಿಗಳು ಆಗಮಿಸುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿಯೇ ಸುವರ್ಣ ದಿನ. ಆದ್ದರಿಂದ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಎಲ್ಲ ಜನತೆ ಭಾಗವಹಿಸಬೇಕೆಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಹಲವು ಸಮುದಾಯದ ಜನತೆ ನೆಲೆಸಿದ್ದು, ಆಯಾ ಸಮುದಾಯದ ಉಡುಗೆ-ತೊಡುಗೆಗಳನ್ನು ತೊಟ್ಟು ಪ್ರಧಾನಿಗಳನ್ನು ಆಹ್ವಾನಿಸುವಂತೆ ಕೋರಿದರು.

ರೋಡ್‌ ಶೋ ನಂತರ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ಸಿ.ಟಿ.ಮಂಜುನಾಥ್‌, ವಿವೇಕ್‌, ಡಾ.ಸದಾನಂದ, ಚಂದ್ರು, ಪ್ರಸನ್ನ, ಕೃಷ್ಣ ಹಾಜರಿದ್ದರು.