ಚಾಮರಾಜನಗರ: ಮತ್ತೆ ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ ಸ್ವಾಮಿ..!
ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ, ಮಹದೇಶ್ವರ ಬೆಟ್ಟದಲ್ಲಿ 1. 82 ಕೋಟಿ ಸಂಗ್ರಹ.
ಹನೂರು(ಮಾ.30): ಮಹದೇಶ್ವರಬೆಟ್ಟ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 22 ದಿನಗಳಲ್ಲಿ ಒಟ್ಟು 1,82,30,192 ರೂ. ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬೆಳಗ್ಗೆ ಹುಂಡಿ ತೆರೆಯಲಾಗಿದ್ದು, ಸಂಜೆ ತನಕ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಇದರಲ್ಲಿ 9,44,462 ರು. ನಾಣ್ಯ ಹಾಗೂ 1,72,85,730 ರು. ನಗದು ಸೇರಿದಂತೆ ಒಟ್ಟು 1,82,30,192 ರು. ಸಂಗ್ರಹವಾಗಿದೆ. ಚಿನ್ನ 85ಗ್ರಾಂ, 1ಕೆಜಿ 60 ಗ್ರಾಂ ಬೆಳ್ಳಿ ದೊರೆತಿದೆ ಎಂದು ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ತಿಳಿದು ಬಂದಿದೆ.
ದೇವಾಲಯದಲ್ಲಿ ಜರುಗಿದ ವಿಶೇಷ ದಿನಗಳ ಪೂಜೆ, ಬಸವವಾಹನ, ರುದ್ರಾಕ್ಷಿಮಂಟಪ, ಹುಲಿ ವಾಹನ ಸೇರಿದಂತೆ ಚಿನ್ನದ ತೇರು ಉತ್ಸವಗಳಿಗೆ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಮಾದಪ್ಪನ ಭಕ್ತರು ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿಯನ್ನು ಅರ್ಪಿಸಿದ್ದಾರೆ.
ಸವದತ್ತಿ: ಯಲ್ಲಮ್ಮನ ಹುಂಡಿಯಲ್ಲಿ 1.81 ಕೋಟಿ, ವಿದೇಶಿ ಕರೆನ್ಸಿ ಕಾಣಿಕೆ
ಹುಂಡಿ ಹಣ ಎಣಿಕೆ ಕಾರ್ಯ ಸ್ಥಳಕ್ಕೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಭಿವೃದ್ಧಿ ಪ್ರಾಧಿಕಾರದ ನೂರಾರು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.