ಯತೀಂದ್ರಗೆ ಮಂತ್ರಿ ಸ್ಥಾನ: ಸಿದ್ದು ಬಳಿ ಬೆಂಬಲಿಗರ ಲಾಬಿ

Yathindra Siddaramaiah Supporters Demands Minister Post
Highlights

ಶಾಸಕ ಡಾ. ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ಕ್ಷೇತ್ರದ ಕಾರ್ಯಕರ್ತರ ಪಡೆಯೊಂದು ಮಂಗಳವಾರವೂ ನಗರಕ್ಕೆ ಆಗಮಿಸಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿತು.

ಬೆಂಗಳೂರು :  ಶಾಸಕ ಡಾ. ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ಕ್ಷೇತ್ರದ ಕಾರ್ಯಕರ್ತರ ಪಡೆಯೊಂದು ಮಂಗಳವಾರವೂ ನಗರಕ್ಕೆ ಆಗಮಿಸಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿತು.

ಭಾನುವಾರ ಬಸ್ಸುಗಳಲ್ಲಿ ಆಗಮಿಸಿ ಸಿದ್ದರಾಮಯ್ಯ ಅವರ ಬಳಿ ಯತೀಂದ್ರ ಪರ ಬೇಡಿಕೆ ಇಟ್ಟಿದ್ದ ಕಾರ್ಯಕರ್ತರು, ಮಂಗಳವಾರವೂ ಸಿದ್ದರಾಮಯ್ಯ ಅವರ ನಿವಾಸದ ಎದುರು ಪ್ರತಿಭಟನೆ ಕೂತು ಒತ್ತಡ ನಿರ್ಮಾಣ ಮಾಡಲು ಯತ್ನಿಸಿದರು.

ಆದರೆ, ಕಾರ್ಯಕರ್ತರ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಸಿದ್ದರಾಮಯ್ಯ, ನನ್ನ ಮಗನಿಗೆ ಸಚಿವ ಸ್ಥಾನ ಕೊಡಿ ಎಂದು ನಾನು ಹೈಕಮಾಂಡ್‌ ಅನ್ನು ಕೇಳಲು ಆಗುವುದಿಲ್ಲ. ಈ ಬಗ್ಗೆ ಭಾನುವಾರವೇ ನಿಮಗೆ ಹೇಳಿದ್ದೇನೆ. ಆದರೂ ನನ್ನ ಮುಂದೆ ಪದೇ ಪದೇ ಇದೇ ಬೇಡಿಕೆ ತಂದು ಸಮಯ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.

ಆದಾಗ್ಯೂ ವರುಣ ಕ್ಷೇತ್ರದ ಕಾರ್ಯಕರ್ತರು ಡಾ.ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸುವಂತೆ ಸಿದ್ದರಾಮಯ್ಯ ಅವರ ಬಳಿ ಪಟ್ಟು ಹಿಡಿದರು. ಯತೀಂದ್ರ ಅವರು ಕುಮಾರಸ್ವಾಮಿ ಸಂಪುಟಕ್ಕೆ ಸೇರ್ಪಡೆಯಾಗಬೇಕು ಮತ್ತು ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ದೊರೆಯಬೇಕು. ಇದಾಗದಿದ್ದರೆ, ಈ ಸ್ಥಾನ ಜೆಡಿಎಸ್‌ ಪಾಲಾಗುತ್ತದೆ. ಆಗ ಜೆಡಿಎಸ್‌ನಿಂದ ವಿಶ್ವನಾಥ್‌ ಅಥವಾ ಜಿ.ಟಿ. ದೇವೇಗೌಡರಿಗೆ ಸಚಿವ ಸ್ಥಾನ ಹಾಗೂ ಮೈಸೂರು ಉಸ್ತುವಾರಿ ದೊರೆಯಲಿದೆ. ಹೀಗಾದಲ್ಲಿ, ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರ ಸ್ಥಿತಿ ದಯನೀಯವಾಗುತ್ತದೆ ಎಂದು ಒತ್ತಾಯಿಸಿದರು. ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಅದನ್ನೆಲ್ಲ ಆಮೇಲೆ ನೋಡೋಣ ನಡೆಯಿರಿ ಎಂದು ಹೇಳಿ ಕಾರ್ಯಕರ್ತರನ್ನು ಸಾಗಹಾಕಿದರು.

loader