ಮಹಿಳೆಗೆ ಡಿಸಿಎಂ ಭಾಗ್ಯ ಏಕಿಲ್ಲ?

Women as Karnataka DyCM
Highlights

  • ರಾಜ್ಯದಲ್ಲಿ  ಸುಮಾರು ಎರಡುವರೆ ಕೋಟಿ  ಮಹಿಳಾ ಮತದಾರರು
  • 2018ರ ವಿಧಾನಸಭೆಯಲ್ಲಿ 7 ಮಹಿಳಾ ಶಾಸಕಿಯರು

ಬೆಂಗಳೂರು:  ಕಳೆದ ಮೇ.15ರಂದು ಪ್ರಕಟವಾದ ಜನಾದೇಶ ಅತಂತ್ರ ವಿಧಾನಸಭೆಯನ್ನು ಹುಟ್ಟುಹಾಕಿದೆ. ಪರಿಣಾಮವಾಗಿ ನಾಟಕೀಯ ಬೆಳವಣಿಗೆಗಳ ಬಳಿಕ  ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 

ಸಹಜವಾಗಿ ಉಪ-ಮುಖ್ಯಮಂತ್ರಿ [ಡಿಸಿಎಂ] ಹುದ್ದೆ ಹಾಗೂ ಸಚಿವ ಸಂಪುಟ ರಚನೆ ಮೈತ್ರಿಕೂಟ ಸರ್ಕಾರಕ್ಕೆ ಆರಂಭಿಕ ಹಂತದಲ್ಲಿ ತಲೆನೋವನ್ನುಂಟುಮಾಡಿದೆ. ವಿವಿಧ ಜಾತಿ/ ಸಮುದಾಯಗಳು ಸಚಿವ ಸಂಪುಟದ ಜೊತೆ ಡಿಸಿಎಂ ಹುದ್ದೆಯಲ್ಲೂ ಪ್ರಾತಿನಿಧ್ಯಕ್ಕಾಗಿ ಒತ್ತಡ ಹೇರುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಆದರೆ, ಈ ಎಲ್ಲಾ ಬೆಳವಣಿಗೆಗಳಲ್ಲಿ ಒಂದು ‘ಜಾತಿ’ ಮಾತ್ರ ನಾಪತ್ತೆಯಾಗಿದೆ. ಅದು ‘ಮಹಿಳಾ ಜಾತಿ’.

2011ರ ಜಾತಿಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 6.25 ಕೋಟಿ. ಅದರಲ್ಲಿ 50.9% ಪುರುಷರಾದರೆ 49.1% ಮಹಿಳೆಯರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 5 ಕೋಟಿ ಮತದಾರರ ಪೈಕಿ ಮಹಿಳಾ ಮತದಾರರ ಸಂಖ್ಯೆ ಸುಮಾರು 2.5 ಕೋಟಿಯಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ 73.24% ಪುರುಷರು ಮತ ಚಲಾಯಿಸಿದ್ದರೆ, ಬಹುತೇಕ ಸರಿಸಮಾನ ಪ್ರಮಾಣದಲ್ಲಿ [71.08%] ಮಹಿಳೆಯರು ಮತ ಚಲಾಯಿಸಿದ್ದಾರೆ. 

ಈ ಬಾರಿಯ ಚುನಾವಣೆಯಲ್ಲಿ 2655 ಪುರುಷ ಅಭ್ಯರ್ಥಿಗಳ ಪೈಕಿ 219 ಮಂದಿ ಮಹಿಳೆಯರು ಸ್ಪರ್ಧಾಕಣದಲ್ಲಿದ್ದರು.  ಪ್ರಮುಖ ಪಕ್ಷಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 6 ಹಾಗೂ ಜೆಡಿಎಸ್ 4 ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿತ್ತು. ಈ ಎಲ್ಲರ ಪೈಕಿ 7 ಮಂದಿ ಮಾತ್ರ ವಿಧಾನಸಭೆ ಪ್ರವೇಶಿದ್ದಾರೆ. 

ಕಳೆದೆರಡು ದಶಕಗಳಲ್ಲಿ ಅತೀ ಹೆಚ್ಚು ಮಹಿಳಾ ಮಂತ್ರಿಗಳನ್ನು ಹೊಂದಿದ್ದ ಹೆಗ್ಗಳಿಕೆ ಎಸ್.ಎಸಂ. ಕೃಷ್ಣರಿಗೆ ಸಲ್ಲುತ್ತದೆ. ಅವರ ಸಂಪುಟದಲ್ಲಿ 4 ಮಂದಿ ಮಹಿಳಾ ಮಂತ್ರಿಗಳಿದ್ದರು. ರಾಣಿ ಸತೀಶ್, ನಫೀಸಾ ಫಝಲ್, ಮೋಟಮ್ಮ ಹಾಗೂ ಸುಮಾ ವಸಂತ್  ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿದ್ದರು.

ಹೆಸರು ಪಕ್ಷ ಕ್ಷೇತ್ರ 
ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಬೆಳಗಾವಿ ಗ್ರಾಮೀಣ
ರೂಪಕಲಾ ಎಂ ಕಾಂಗ್ರೆಸ್ ಕೆ.ಜೆ.ಎಫ್
ಕನೀಝ್ ಫಾತಿಮಾ ಕಾಂಗ್ರೆಸ್ ಕಲಬುರಗಿ ಉತ್ತರ
ಡಾ. ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಖಾನಪುರ
ಶಶಿಕಲಾ ಜೊಲ್ಲೆ ಬಿಜೆಪಿ ನಿಪ್ಪಾಣಿ
ಕೆ. ಪೂರ್ಣಿಮಾ ಬಿಜೆಪಿ ಹಿರಿಯೂರು
ರೂಪಾಲಿ ನಾಯ್ಕ್ ಬಿಜೆಪಿ ಕಾರವಾರ

ಇವರ ಹೊರತು 5 ಮಹಿಳೆಯರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. 

ಹೆಸರು ಪಕ್ಷ
ಮೋಟಮ್ಮ ಕಾಂಗ್ರೆಸ್
ಜಯಮ್ಮ ಕಾಂಗ್ರೆಸ್
ವೀಣಾ ಅಚ್ಚಯ್ಯ ಕಾಂಗ್ರೆಸ್
ಜಯಮಾಲ ಕಾಂಗ್ರೆಸ್
ತಾರ ಅನುರಾಧ ಬಿಜೆಪಿ

ಹೀಗಾಗಿ ವಿಧಾನಮಂಡಲದಲ್ಲಿ ಒಟ್ಟು 12 ಮಂದಿ ಮಹಿಳಾ ಶಾಸಕರಿದ್ದಾರೆ. ಈ ಪೈಕಿ ಎಷ್ಟು ಮಂದಿಗೆ ಸಚಿವ ಖಾತೆ ಸಿಗುತ್ತದೆ ಎಂದು ಕಾದುನೋಡಬೇಕಾಗಿದೆ.

ಒಂದು ಕಡೆ ಮಹಿಳಾ ಸಬಲೀಕರಣದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇನ್ನೊಂದು ಕಡೆ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ರಾಜಕೀಯ ಪಕ್ಷಗಳಿಗೆ ಈ ಧೋರಣೆಗೆ ಏನೆಂದು ಕರೆಯಬಹುದು? ಕರ್ನಾಟಕದಲ್ಲಿ ಜಯಲಲಿತಾ, ಮಮತಾ ಬ್ಯಾನರ್ಜಿ, ಅಥವಾ ಮಾಯಾವತಿಯಂತಹ ಮಹಿಳಾ ನಾಯಕರು ಇಲ್ಲವೇ? ಅಥವಾ ರಾಜಕೀಯ ಪಕ್ಷಗಳಿಗೆ ಅಂತಹ ನಾಯಕರನ್ನು ಬೆಳೆಸುವ ಇಚ್ಛೆ ಇಲ್ಲವೇ? ಎಂಬ ಪ್ರಶ್ನೆಗಳು ಉದ್ಭವವಾಗುತ್ತದೆ.  ಮತದಾರರಾಗಿ ಮಹಿಳೆಯರು ಬೇಕು, ಪಕ್ಷದ ಕಾರ್ಯಕರ್ತರಾಗಿ ಮಹಿಳೆಯರು ಬೇಕು, ಆದರೆ ಮಂತ್ರಿಗಳಾಗಿ/ ಉಪ-ಮುಖ್ಯಮಂತ್ರಿಗಳಾಗಿ ಮಹಿಳೆಯರು ಬೇಡ ಎಂಬ ಧೋರಣೆಯಿಂದ ಹಿರಿಯ ರಾಜಕಾರಣಿಗಳು ಹೊರಬರಬೇಕಾಗಿದೆ.  

ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆಯಲು ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಇದು ಸಕಾಲ. ಓರ್ವ ಮಹಿಳೆಯನ್ನು ಉಪ-ಮುಖ್ಯಮಂತ್ರಿ ಮಾಡುವ ಮೂಲಕ ಕರ್ನಾಟಕವನ್ನು ದೇಶಕ್ಕೆ ಮಾದರಿಯಾಗಿಸಬೇಕು.  

loader