ಬೆಂಗಳೂರು(ಮೇ.18): ನಾಳೆ ಸಂಜೆ 4 ಗಂಟೆಗೆ  ಬಹುಮತ ಸಬೀತುಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರಿಂ ಕೋರ್ಟ್ ಆದೇಶಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪಕ್ಷಗಳು ಮ್ಯಾಜಿಕ್ ನಂಬರ್'ಗಾಗಿ ಶತಪ್ರಯತ್ನ ನಡೆಸುತ್ತಿವೆ.
ನೂತನ ಆಡಳಿತ ಪಕ್ಷದ ನಾಯಕನ ಆಯ್ಕೆಗಾಗಿ ಹಂಗಾಮಿ ಸ್ಪೀಕರ್ ನೇಮಕವಾಗಬೇಕಿದೆ. ಸ್ಪೀಕರ್ ಆಯ್ಕೆ ನೂತನ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅವಿಶ್ವಾಸ ಮತ ಸಬೀತಿಗೆ ಆಯ್ಕೆಯಾಗುವ ಸ್ಪೀಕರ್ ಹಿರಿಯ ನಾಯಕರಾಗಿರಬೇಕು. ಸದ್ಯ ಮೂರು ಪಕ್ಷಗಳಿಂದ ಎರಡು ಹೆಸರುಗಳು ಹೆಚ್ಚು ಕೇಳಿ ಬರುತ್ತಿವೆ. ಬಿಜೆಪಿಯಿಂದ ಉಮೇಶ್ ಕತ್ತಿ ಹಾಗೂ ಕಾಂಗ್ರೆಸಿನ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಸ್ವೀಕರ್ ಆಗಿ ನೇಮಕವಾಗುವ ಸಾಧ್ಯತೆಯಿದೆ. 
ಹಂಗಾಮಿ ಸ್ಪೀಕರ್ ಅವಿಶ್ವಾಸ ಮತ ನಿರ್ಣಯಕ್ಕೆ ಮಾತ್ರ ಸೀಮಿತವಾಗುತ್ತಾರೆ. ಹೊಸ ಸರ್ಕಾರ ಶಾಶ್ವತ ಸ್ಪೀಕರ್ ಅವರನ್ನು ನೇಮಕ ಮಾಡಲಿದೆ. ಇಬ್ಬರು ನಾಯಕರು 7ಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಹೆಚ್ಚಿನ ಅನುಭವ ಹೊಂದಿದವರಾಗಿದ್ದಾರೆ. ನಾಳೆ ಸ್ಪೀಕರ್ ಆಯ್ಕೆಯ ಅಂತಿಮ ಚಿತ್ರಣ ಗೊತ್ತಾಗಲಿದೆ. ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಹಾಗೂ ಇತರರು ಇಬ್ಬರು ಜಯಗಳಿಸಿದ್ದಾರೆ. ಬಹುಮತ ಪಡೆಯುವ ಪಕ್ಷ 111 ಸ್ಥಾನ ಪಡೆದುಕೊಳ್ಳಬೇಕಿದೆ. 

ಸ್ಪೀಕರ್ ನೇಮಕಕ್ಕೆ ಇರಬೇಕಾದ ಅರ್ಹತೆಗಳು
1. ಭಾರತ ದೇಶದ ಪ್ರಜೆಯಾಗಿರಬೇಕು.
2.25  ವರ್ಷದವರಿಗಿಂತ ಮೇಲ್ಪಟ್ಟವರಾಗಿರಬೇಕು
3. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿರಬಾರದು
4. ಹಿರಿಯ ಶಾಸಕನಾಗಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರಬೇಕು