ಜೆಡಿಎಸ್’ನಿಂದ ಸಚಿವ ಸ್ಥಾನ ಯಾರಿಗೆ..?

karnataka-assembly-election-2018 | Monday, May 21st, 2018
Suvarna Web Desk
Highlights

ಪಕ್ಷದೊಳಗೆ ಭಿನ್ನದನಿ ಹುಟ್ಟಿಗೆ ಅವಕಾಶ ನೀಡದೆ, ಎಲ್ಲರನ್ನೂ ಸಮಾಧಾನಪಡಿಸಿ ಅಧಿಕಾರದ ಸಮಪಾಲು ಹಂಚಿಕೆ ಮಾಡುವುದು ಜೆಡಿಎಸ್ ಅಧಿನಾಯಕ ಎಚ್.ಡಿ. ದೇವೇಗೌಡ ಹಾಗೂ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಜತೆ ನಿರಂತರ ಚರ್ಚೆಯಲ್ಲಿ ಉಭಯ ನಾಯಕರು ತೊಡಗಿದ್ದಾರೆ.

ಬೆಂಗಳೂರು[ಮೇ.21]: ಮತ್ತೆ ‘ಕೈ’ ಹಿಡಿದ ಖುಷಿಯಲ್ಲಿರುವ ಜೆಡಿಎಸ್‌ನ ವರಿಷ್ಠರಿಗೆ ಈಗ ಸಚಿವ ಸಂಪುಟ ರಚನೆ ಸಂಬಂಧ ಭಿನ್ನಾಭಿಪ್ರಾಯ, ಬಂಡಾಯದಂತಹ ಪ್ರಸಂಗ ಎದುರಾಗುವ ಲಕ್ಷಣ ಇಲ್ಲದಿದ್ದರೂ ಸಂಕಟವಂತೂ ಎದುರಾಗಿದೆ.
ಪಕ್ಷದೊಳಗೆ ಭಿನ್ನದನಿ ಹುಟ್ಟಿಗೆ ಅವಕಾಶ ನೀಡದೆ, ಎಲ್ಲರನ್ನೂ ಸಮಾಧಾನಪಡಿಸಿ ಅಧಿಕಾರದ ಸಮಪಾಲು ಹಂಚಿಕೆ ಮಾಡುವುದು ಜೆಡಿಎಸ್ ಅಧಿನಾಯಕ ಎಚ್.ಡಿ. ದೇವೇಗೌಡ ಹಾಗೂ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲಾಗಿದೆ.

ಈ ಹಿನ್ನೆಲೆಯಲ್ಲಿ ಶಾಸಕರ ಜತೆ ನಿರಂತರ ಚರ್ಚೆಯಲ್ಲಿ ಉಭಯ ನಾಯಕರು ತೊಡಗಿದ್ದಾರೆ. ತಮ್ಮ ಅಧಿಕಾರದ ಮಹದಾಸೆ ಈಡೇರಿಕೆಗೆ ರಾಜಕೀಯವಾಗಿ ಶಕ್ತಿ ತುಂಬಿರುವ ಹಳೆ ಮೈಸೂರು ಭಾಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸುವ ವಿಚಾರದಲ್ಲಿ ಜೆಡಿಎಸ್ ವರಿಷ್ಠರು ಅಕ್ಷರಶಃ ಸಂಕಟಕ್ಕೆ ಸಿಲುಕಿದ್ದು, ಇಲ್ಲಿ ತುಸು ಹೆಚ್ಚುಕಮ್ಮಿಯಾದರೂ ಸ್ವಕುಟುಂಬ ಹಾಗೂ ಸ್ವಜಾತಿ ಪ್ರೀತಿ ಅಪವಾದ ಎದುರಿಸಬೇಕಾಗುತ್ತದೆ. ಅಲ್ಲದೆ ಭವಿಷ್ಯದ ರಾಜಕೀಯ ಸ್ಥಿತ್ಯಂತರಕ್ಕೂ ಇದು ಕಾರಣವಾಗಬಹುದು ಎಂಬ ದಿಗಿಲು ಅವರಲ್ಲಿ ವ್ಯಕ್ತವಾಗಿದೆ. ಈ ಪ್ರಾಂತ್ಯದಲ್ಲಿ ಬಹುತೇಕ ಶಾಸಕರು ಹಿರಿತನ ಹೊಂದಿರುವುದು ಆಯ್ಕೆಯನ್ನು ಜಟಿಲಗೊಳಿಸಿದೆ.
ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿ ಕಳಚಿಟ್ಟು ಎಲ್ಲ ಸಮುದಾಯದವರಿಗೂ ಸಚಿವ ಸ್ಥಾನ ನೀಡುವುದು ವರಿಷ್ಠರಿಗಿರುವ ಮತ್ತೊಂದು ಸವಾಲಾಗಿದೆ. ಜೆಡಿಎಸ್ ಪಕ್ಷದ 38 (ಮೈತ್ರಿ ಪಕ್ಷ ಬಿಎಸ್ಪಿ ಸೇರಿ) ಮಂದಿಯಲ್ಲಿ ಬಹುತೇಕರು ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿನಿಧಿಗಳೇ ಆಗಿದ್ದು, ಮಂಡ್ಯದಲ್ಲಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿದೆ. ಮೈಸೂರು, ಹಾಸನ ಹಾಗೂ ಮಂಡ್ಯ ಶಾಸಕರು ಹ್ಯಾಟ್ರಿಕ್ ಸಾಧನೆ ಮಾಡಿದವರಾಗಿದ್ದರೆ, ಕೆಲವರು ನಾಲ್ಕನೇ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದಾರೆ. ಇನ್ನುಳಿದ ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಶಾಸಕರ ಪೈಕಿ ಎಂ.ಸಿ.ಮನಗೂಳಿ ಹಾಗೂ ವೆಂಕಟರಾವ್ ನಾಡಗೌಡ ಹಿರಿಯರಾಗಿದ್ದಾರೆ. 
ಹಾಸನದಿಂದ ರೇವಣ್ಣ ಬಿಟ್ಟರೆ ಯಾರು?:
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಪದವಿ ಅಲಂಕರಿಸುವುದು ಖಚಿತವಾದಷ್ಟೇ ಮೈತ್ರಿ ಸರ್ಕಾರದ ಸಂಪುಟದಲ್ಲಿ ಅಘೋಷಿತವಾಗಿ ಅವರ ಸೋದರ ರೇವಣ್ಣ ಅವರಿಗೆ ಸ್ಥಾನ ಮೀಸಲಾಗಿದೆ. ರೇವಣ್ಣ ಅವರು ಹಾಸನ ಜಿಲ್ಲೆ ಕೋಟಾದಲ್ಲಿ ಮಂತ್ರಿಗಿರಿ ಪಡೆದರೆ, ಅವರ ನಂತರ ಸ್ಥಾನ ಪಡೆಯಲು ಇನ್ನುಳಿದ ನಾಲ್ವರು ಹಿರಿಯ ಶಾಸಕರಲ್ಲಿ ಪೈಪೋಟಿ ಎದುರಾಗಿದೆ.
ಅರಸೀಕೆರೆಯಲ್ಲಿ ಕೆ.ಎಂ. ಶಿವಲಿಂಗೇಗೌಡ ಅವರು ‘ಹ್ಯಾಟ್ರಿಕ್’ ಹೀರೋ ಆಗಿ ಮಿಂಚಿದ್ದು, ಜಿಲ್ಲಾ ಮಟ್ಟದ ಪಕ್ಷದ ಸಂಘಟನೆಯಲ್ಲಿ ಅವರಿಗೆ ಹಿಡಿತವಿದೆ. ಅದೇ ರೀತಿ ಅರಕಲಗೂಡಿನಿಂದ ಎ.ಟಿ. ರಾಮಸ್ವಾಮಿ ಹಾಗೂ ಸಕಲೇಶಪುರದಿಂದ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಭೂಗಳ್ಳರ ವಿರುದ್ಧ ಪ್ರಬಲ ಹೋರಾಟ
ನಡೆಸಿದ್ದು, ದೇವೇಗೌಡರ ಕುಟುಂಬದ ಕಡುವಿರೋಧಿ ಸಚಿವ ಎ. ಮಂಜು ಅವರನ್ನು ಮಣಿಸಿದ್ದು ರಾಮಸ್ವಾಮಿ ಅವರಿಗೆ ಮಂತ್ರಿಗಿರಿ ಪಡೆಯಲು ಪ್ಲಸ್ ಪಾಯಿಂಟ್ ಆಗಿವೆ. ಮೇಲಿನ ನಾಲ್ವರೂ ಒಕ್ಕಲಿಗರೇ ಆಗಿದ್ದಾರೆ. ಸಕಲೇಶಪುರದ ಕುಮಾರಸ್ವಾಮಿ ಅವರು ಪಕ್ಷದ ಪರಿಶಿಷ್ಟ ಜಾತಿಯ ಹಿರಿಯ ಶಾಸಕರಾಗಿದ್ದು, ಮಳವಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ಆ ವರ್ಗದ ಡಾ. ಅನ್ನದಾನಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚೌವ್ಹಾಣ್ ಹಾಗೂ ಮಿತ್ರ ಪಕ್ಷ ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಅವರು ಮೊದಲ ಬಾರಿಗೆ ಶಾಸಕರಾದವರು. ಹೀಗಾಗಿ ದಲಿತರ ಕೋಟಾದಡಿ ಕುಮಾರಸ್ವಾಮಿ ಹಾಗೂ ಮಹೇಶ್ ಅವರಿಗೆ ಮಂತ್ರಿಗಿರಿ ಒಲಿಯುವ ಸಾಧ್ಯತೆಗಳು ಕಂಡು ಬಂದಿವೆ.
ಮೈಸೂರಿನಲ್ಲಿ ಗೌಡ್ರ ಗದ್ದಲ: 
ಹಾಸನ ನಂತರ ಮೈಸೂರು ಜಿಲ್ಲೆಯ ಸಚಿವ ಸ್ಥಾನ ಹಂಚಿಕೆಯು ಜೆಡಿಎಸ್ ವರಿಷ್ಠರಿಗೆ ತಲೆಬಿಸಿ ತಂದಿದೆ. ದೇವೇಗೌಡರ ಕುಟುಂಬದ ಕಡು ವಿರೋಧಿ (ಈಗ ಮಿತ್ರ) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಣಿಸಿದ ಜಿ.ಟಿ.ದೇವೇಗೌಡ ಹಾಗೂ ಕೆ.ಆರ್.ನಗರ ಕ್ಷೇತ್ರದ ಹ್ಯಾಟ್ರಿಕ್ ಹೀರೋ ಸಾ.ರಾ.ಮಹೇಶ್ ಅವರು ಸಂಪುಟ ಸೇರಲು ಲಾಬಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಸಾ.ರಾ. ಆಪ್ತಮಿತ್ರರಾಗಿದ್ದರೆ, ಜಿ.ಟಿ.ದೇವೇಗೌಡರಿಗೆ ದೊಡ್ಡಗೌಡರ ಆಶೀರ್ವಾದವಿದೆ. ಒಕ್ಕಲಿಗರ ಕೋಟಾದಡಿ ಅವರಿಬ್ಬರೂ ಹಕ್ಕು ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡುವ ಸಲುವಾಗಿ ಅವರ ಕಡು ವಿರೋಧಿ ಎಚ್.ವಿಶ್ವನಾಥ್ ಅವರಿಗೆ ಗೌಡರು ಮಂತ್ರಿಗಿರಿ ನೀಡುವ ಸಾಧ್ಯತೆಗಳಿವೆ.
ಇಲ್ಲಿ ಜಾತಿ ಲೆಕ್ಕಚಾರ ಸಹ ಕೆಲಸ ಮಾಡಿದ್ದು, ಕುರುಬ ಸಮುದಾಯದ ಕೋಟಾದಡಿ ವಿಶ್ವನಾಥ್ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಬಂಡೆಪ್ಪ ಕಾಶಂಪೂರ್ ಅವರಿಗೆ ಮಂತ್ರಿಗಿರಿ ಒಲಿಯಬಹುದು. ಕಾಶಂಪೂರ್ ಅವರು ಸಿದ್ದರಾಮಯ್ಯ ಪಕ್ಷ ತೊರೆದ ನಂತರ ಉದ್ಭವಿಸಿದ್ದ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿಗೆ ‘ಬಂಡೆ’ಯಂತೆ ನಿಂತವರು. ಇದೂ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಮಂಡ್ಯಕ್ಕೆ ‘ಪುಟ್ಟ’ ಅರಸ:
ಜೆಡಿಎಸ್ ಪ್ರಾಬಲ್ಯದ ಮತ್ತೊಂದು ಜಿಲ್ಲೆ ಮಂಡ್ಯ. ಇದೂ ದೇವೇಗೌಡರೇ ಹೇಳುವಂತೆ ಹಾಸನದ ಜತೆ ಅವರ ಮತ್ತೊಂದು ಕಣ್ಣು. ಜಿಲ್ಲಾ ನಾಯಕತ್ವ ಹೊತ್ತಿದ್ದ ಚಲುವರಾಯ ಸ್ವಾಮಿ ಅವರು ಪಕ್ಷ ತೊರೆದ ನಂತರ ಮೇಲುಕೋಟೆ ಶಾಸಕ ಪುಟ್ಟರಾಜು ಅವರಿಗೆ ಪಕ್ಷದ ಸಾರಥ್ಯವನ್ನು ಗೌಡರು ನೀಡಿದ್ದರು. ಚುನಾವಣೆಯಲ್ಲಿ ಪುಟ್ಟರಾಜು ಸಚಿವರಾಗುತ್ತಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗುತ್ತಾರೆ ಎಂದೇ ಜೆಡಿಎಸ್ ನಾಯಕರು ಪ್ರಚಾರ ನಡೆಸಿದ್ದರು. ಅಲ್ಲದೆ, ತಮ್ಮ ವಿರೋಧಿ ಚಲುವರಾಯಸ್ವಾಮಿಗೆ ಪರ್ಯಾಯವಾಗಿ ನಿಷ್ಠ ಬೆಂಬಲಿಗ ಪುಟ್ಟರಾಜು ಅವರಿಗೆ ರಾಜಕೀಯ ಶಕ್ತಿ ತುಂಬಲು ಗೌಡರ ಕುಟುಂಬ ಚಿಂತಿಸಿದೆ.
ಇನ್ನುಳಿದಂತೆ ತಮ್ಮ ಬೀಗರಾದ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಗೌಡರು ಕುಟುಂಬ ಪ್ರೀತಿ ತೋರಿದರೆ ಸಚಿವರಾಗುವ ಅದೃಷ್ಟ ಬರಬಹುದು. ಮಂಡ್ಯದ ಶ್ರೀನಿವಾಸ್ ಅವರು ಮಂತ್ರಿಗಿರಿ ಆಸೆ ವ್ಯಕ್ತಪಡಿಸಿದರೂ, ಒಕ್ಕಲಿಗರ ಕೋಟಾ ಭರ್ತಿಯಾದ ಕಾರಣ ಅವರ ಆಸೆ ಈಡೇರಿಕೆ ಸಾಧ್ಯತೆ ಇಲ್ಲ. 
ಹೊರಟ್ಟಿ, ನಾಡಗೌಡ ಲಿಂಗಾಯತ ಕೋಟಾ:
ಲಿಂಗಾಯತ ವಿರೋಧಿ ಕಳಂಕ ತೊಳೆದುಹಾಕಲು ವೀರಶೈವ-ಲಿಂಗಾಯತ ಸಮುದಾಯಕ್ಕೂ ಜೆಡಿಎಸ್ ಸಚಿವ ಸ್ಥಾನ ಕಲ್ಪಿಸಲು ಮುಂದಾಗಿದೆ. ಇದರಲ್ಲಿ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಿಂಧನೂರು ಕ್ಷೇತ್ರದ ವೆಂಕಟರಾವ್ ನಾಡಗೌಡ ಹಾಗೂ ಸಿಂದಗಿ ಕ್ಷೇತ್ರದ ಹಿರಿಯ ವಯಸ್ಸಿನ ಶಾಸಕ ಮನಗೂಳಿ ಅವರು ಪ್ರಯತ್ನ ನಡೆಸಿದ್ದಾರೆ. ಬೇಲೂರು ಶಾಸಕ ಲಿಂಗೇಶ್ ಪ್ರಥಮ ಬಾರಿಗೆ ವಿಧಾನಸೌಧ ಮೆಟ್ಟಿಲು ತುಳಿದಿದ್ದಾರೆ. ಹೀಗಾಗಿ ಅವರು ಸಚಿವ ಸ್ಥಾನದ ಅರ್ಹತಾ ಸುತ್ತಿಗೂ ಬಂದಿಲ್ಲ. ಸಿಂದಗಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನೆರವು ನೀಡಿದ್ದರು ಎಂದು ಸ್ಮರಿಸಿ ಮನಗೂಳಿ ತಮ್ಮ ಕ್ಷೇತ್ರದಲ್ಲಿ ಗೌಡರ ಪುತ್ಥಳಿ ಪ್ರತಿಷ್ಠಾಪಿಸಿ ಗೌರವ ಸಲ್ಲಿಸಿದ್ದರು. ಈ ಗುರು ಕಾಣಿಕೆಗೆ ಪ್ರತಿಯಾಗಿ ದೊಡ್ಡಗೌಡರು ಶಿಷ್ಯನಿಗೆ ಮಂತ್ರಿಗಿರಿ ಕೊಡಬಹುದು ಎನ್ನಲಾಗಿದೆ. ಇತ್ತ ಆಪರೇಷನ್ ಕಮಲದ ಸಂಭವನೀಯ ಪಟ್ಟಿಯಲ್ಲಿದ್ದ ವೆಂಕಟರಾವ್ ಗೌಡರ ಪಕ್ಷ ನಿಷ್ಠೆಗೆ ಸಚಿವ ಸ್ಥಾನ ಒಲಿಯಬಹುದು.
ಮುಸ್ಲಿಂ ಸಚಿವರು ಯಾರು?
ಅಲ್ಪಸಂಖ್ಯಾತ ಸಮುದಾಯದ ರಕ್ಷಕರಂತೆ ಬಿಂಬಿಸಿಕೊಂಡಿರುವ ದೇವೇಗೌಡರು, ಈಗ ಮುಸ್ಲಿಂ ಸಮುದಾಯದ ಯಾರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ವಿಧಾನಪರಿಷತ್ ಸದಸ್ಯರಾಗಿರುವ ರಾಮನಗರದ ಅಪ್ಸರ್ ಆಗಾ ಹೊರತುಪಡಿಸಿದರೆ ಮುಸ್ಲಿಂ ಶಾಸಕರಿಲ್ಲ. ಹೀಗಾಗಿ ಇತ್ತೀಚೆಗೆ ಕುಮಾರಸ್ವಾಮಿ ಅವರ ನೆರಳಿನಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿರುವ, ಎರಡು ಬಾರಿ ರಾಜ್ಯಸಭೆ ಆಯ್ಕೆ ತಪ್ಪಿಸಿಕೊಂಡ ಮಂಗಳೂರು ಮೂಲದ ಉದ್ಯಮಿ ಫಾರೂಕ್ ಅವರಿಗೆ ಮಂತ್ರಿ ಯೋಗ ಕೂಡಿಬರಬಹುದು ಎನ್ನಲಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Naveen Kodase