ಕಾಂಗ್ರೆಸ್ ನ ಮುಂದಿನ ಮುಖ್ಯಮಂತ್ರಿ ಯಾರು ..?

First Published 5, May 2018, 7:45 AM IST
Who Is The Next Congress CM
Highlights

‘ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿ ರುವುದರಿಂದ ಮುಂದೆಯೂ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಇದು ಸಹಜ. ಸಾಮಾನ್ಯವಾಗಿ ಶಾಸಕಾಂಗ ಸಭೆ ಮತ್ತು ವರಿಷ್ಠರು ಸಿಎಂ ಆರಿಸುತ್ತಾರೆ. ಇದು ಕಾಂಗ್ರೆಸ್ ಪದ್ಧತಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. 

ಬೆಂಗಳೂರು :  ‘ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿ ರುವುದರಿಂದ ಮುಂದೆಯೂ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಇದು ಸಹಜ. ಸಾಮಾನ್ಯವಾಗಿ ಶಾಸಕಾಂಗ ಸಭೆ ಮತ್ತು ವರಿಷ್ಠರು ಸಿಎಂ ಆರಿಸುತ್ತಾರೆ. ಇದು ಕಾಂಗ್ರೆಸ್ ಪದ್ಧತಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. 

ಈ ಮೂಲಕ ಸಿಎಂ ಗಾದಿ ತಮಗೆ ಮುಕ್ತವಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಿದ್ದರಾಮಯ್ಯನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಮಾತನಾಡುತ್ತಿದ್ದೇನೆ. ಸಿದ್ದರಾಮಯ್ಯಈಗ ಮುಖ್ಯಮಂತ್ರಿಯಾಗಿದ್ದು ಅವರ ನೇತೃತ್ವದಲ್ಲೇ ಚುನಾ ವಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದು ಸಹಜ. 
ಆದರೆ, ಚುನಾವಣೆ ಬಳಿಕ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾದ ನೂತನ ಶಾಸಕರು ಹಾಗೂ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ’ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮೋದಿ ಅವರ ದಲಿತ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ‘ಸದ್ಯಕ್ಕೆ ನಮ್ಮ ಮುಂದೆ ದಲಿತ ಮುಖ್ಯಮಂತ್ರಿಯ ವಿಷಯ ಚರ್ಚೆಯ ವಸ್ತುವಲ್ಲ. 
ಚುನಾವಣೆಯಲ್ಲಿ 112 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವುದು ನಮ್ಮ ಆದ್ಯತೆ. ಒಂದು ವೇಳೆ ಚರ್ಚೆಗೆ ಬಂದರೆ ನಾನು ಮಾತ್ರವೇ ಅಲ್ಲ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಅವರ ಹೆಸರೂ  ಚರ್ಚೆಯಾಗಬಹುದು. ಅಂತಿಮವಾಗಿ ಶಾಸಕಾಂಗ ಸಭೆಯಲ್ಲೇ ತೀರ್ಮಾನವಾಗುತ್ತದೆ’ ಎಂದರು.
ಕಾರಜೋಳ ಸಿಎಂ ಅಭ್ಯರ್ಥಿ ಎಂದು ಘೋಷಿಸಿ: ನರೇಂದ್ರ ಮೋದಿ ಅವರು ಖರ್ಗೆ ಅವರಿಗೆ ಸಿಎಂ ಸ್ಥಾನ ನೀಡಿಲ್ಲ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧಪಕ್ಷದ ನಾಯಕ ಸ್ಥಾನ ತಪ್ಪಿಸಿದ್ದು ನೀವು. ಕಾಂಗ್ರೆಸ್ ಪಕ್ಷ ದಲಿತರ ಬಗ್ಗೆ ಹಿಂದಿನಿಂದಲೂ ಬದ್ದತೆ ಮೆರೆದಿದೆ. ಶಿಂದೆ ಅಂತಹ ದಲಿತ ನಾಯಕನನ್ನು ಸಿಎಂ, , ಕೇಂದ್ರ ಸಚಿವ, ರಾಜ್ಯಪಾಲನನ್ನಾಗಿ ಮಾಡಿದೆ. ಆರ್.ಕೆ. ನಾರಾಯಣನ್ ರನ್ನು ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಯನ್ನಾಗಿ ಮಾಡಿದೆ. ದಲಿತರ ಪರ ಕಾಳಜಿ ಬಗ್ಗೆ ಕಾಂಗ್ರೆಸ್‌ಗೆ ಕೋಮುವಾದಿಗಳ ಪಾಠ ಬೇಕಾಗಿಲ್ಲ ಎಂದರು. 

loader