ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿರುವ ಭಾವಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆಗೆ ನಿರ್ಧರಿಸುತ್ತಿದ್ದಂತೆ ಮುಂದಿನ ಉಪಚುನಾವಣೆ ಸ್ಪರ್ಧೆ ವಿಚಾರವಾಗಿ ಬಿರುಸಿನ ಚರ್ಚೆಗಳು ಆರಂಭಗೊಂಡಿವೆ. 


ರಾಮನಗರ (ಮೇ 20) : ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿರುವ ಭಾವಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆಗೆ ನಿರ್ಧರಿಸುತ್ತಿದ್ದಂತೆ ಮುಂದಿನ ಉಪಚುನಾವಣೆ ಸ್ಪರ್ಧೆ ವಿಚಾರವಾಗಿ ಬಿರುಸಿನ ಚರ್ಚೆಗಳು ಆರಂಭಗೊಂಡಿವೆ. 

ಈ ಬಾರಿ ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಕಾರಣ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸಹ ಅನಿವಾರ್ಯೆ. ಆದರೆ ಈಗಾಗಲೇ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಿಂದ ಇಕ್ಬಾಲ್ ಹುಸೇನ್ ಹೆಸರುಗಳು ಕೇಳುತ್ತಿವೆ. ಇನ್ನು ಚನ್ನಪಟ್ಟಣದಲ್ಲಿ ಪರಾಜಿತ ಸಿ.ಪಿ.ಯೋಗೇಶ್ವರ್ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಮಾನಸಿಕವಾಗಿ ಸಿದ್ಧರಾ ಗಿದ್ದು, ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದರೆ ಅಖಾಡ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. 

ಇದೇ ವೇಳೆ ರಾಜರಾಜೇಶ್ವರಿ ಮತ್ತು ಜಯನಗರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ರಾಮನಗರ ಕ್ಷೇತ್ರ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಜೆಡಿಎಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.