ಅಜಾತಶತ್ರುವಾಗಿರುವ ಚಿತ್ರನಟ ಅಂಬರೀಶ್‌ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಜೆಡಿಎಸ್‌ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಪಕ್ಷ ಸೇರುವುದಾದರೆ ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮದ್ದೂರು: ಅಜಾತಶತ್ರುವಾಗಿರುವ ಚಿತ್ರನಟ ಅಂಬರೀಶ್‌ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಜೆಡಿಎಸ್‌ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಅವರು ಪಕ್ಷ ಸೇರುವುದಾದರೆ ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಪಟ್ಟಣದಲ್ಲಿರುವ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ನಿವಾಸಕ್ಕೆ ಬುಧವಾರ ಭೇಟಿ ನೀಡಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಈವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದರು.

ಅಂಬರೀಶ್‌ ಅವರಿಗೆ ಹಿಂದಿನಿಂದಲೂ ದೇವೇಗೌಡರ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿದೆ. ಅದಕ್ಕಾಗಿಯೇ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ರೈತರ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಜೆಡಿಎಸ್‌ ಪಕ್ಷವನ್ನು ಸೇರುವುದಾದರೆ ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಅಂಬರೀಶ್‌ ಜೆಡಿಎಸ್‌ ಸೇರ್ತೇನೆ ಎಂದಿಲ್ಲ. ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ. ಆದರೆ ರಾಜಕೀಯದಲ್ಲಿ ನಿವೃತ್ತಿ ಎಂಬುದು ಇರುವುದಿಲ್ಲ. ಅವರು ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಅವಶ್ಯಕತೆ ಬಿದ್ದರೆ, ಅಂಬರೀಶ್‌ ಬೆಂಬಲಿಗರನ್ನು ನೇರವಾಗಿ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.