Asianet Suvarna News Asianet Suvarna News

ನಾವು ಜೆಡಿಎಸ್ ಅಲಕ್ಷ್ಯ ಮಾಡುವುದಿಲ್ಲ : ಡಿಕೆ ಶಿವಕುಮಾರ್

ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ಇದೀಗ ಶಿಖರಾಗ್ರ ಮುಟ್ಟಿರುವ ಈ ಹಂತದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತುಂಬಾ ಸಕ್ರಿಯವಾಗಿದ್ದಾರೆ. ಒಂದು ಕಡೆ ದಿನಕ್ಕೆ ಹತ್ತಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ವಿರುದ್ಧ ರೂಪಿಸುತ್ತಿರುವ ಪ್ರಚಾರ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಯತ್ನಿಸುತ್ತಿದ್ದಾರೆ. ಚುನಾವಣೆ ಪ್ರಚಾರ ಅಂತ್ಯಕ್ಕೆ ಇನ್ನೂ 15 ದಿನಗಳಿರುವ ಈ ಹಂತದಲ್ಲಿ ಕಾಂಗ್ರೆಸ್‌ನ ಪ್ರಚಾರ ತಂತ್ರವೇನು? ಕಾಂಗ್ರೆಸ್ ಸರ್ಕಾರ ಒಕ್ಕಲಿಗ ವಿರೋಧಿ ಎಂದು ಸೃಷ್ಟಿಸಲಾಗುತ್ತಿರುವ ಹವಾ ತೊಡೆದುಹಾಕಲು ಕಾಂಗ್ರೆಸ್ ಏನು ಮಾಡುತ್ತಿದೆ? ರಾಜ್ಯದಲ್ಲಿ ಜೆಡಿಎಸ್ ಫ್ಯಾಕ್ಟರ್ ಹೇಗೆ ಕೆಲಸ ಮಾಡಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರ ಬಿಡುಬೀಸಾದ ಉತ್ತರಗಳು ಇಲ್ಲಿವೆ.

We Are Not Ignore JDS Saya DK Shivakumar

ಎಸ್. ಗಿರೀಶ್‌ಬಾಬು

ಬೆಂಗಳೂರು : ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ಇದೀಗ ಶಿಖರಾಗ್ರ ಮುಟ್ಟಿರುವ ಈ ಹಂತದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತುಂಬಾ ಸಕ್ರಿಯವಾಗಿದ್ದಾರೆ. ಒಂದು ಕಡೆ ದಿನಕ್ಕೆ ಹತ್ತಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ವಿರುದ್ಧ ರೂಪಿಸುತ್ತಿರುವ ಪ್ರಚಾರ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಯತ್ನಿಸುತ್ತಿದ್ದಾರೆ. ಚುನಾವಣೆ ಪ್ರಚಾರ ಅಂತ್ಯಕ್ಕೆ ಇನ್ನೂ 15 ದಿನಗಳಿರುವ ಈ ಹಂತದಲ್ಲಿ ಕಾಂಗ್ರೆಸ್‌ನ ಪ್ರಚಾರ ತಂತ್ರವೇನು? ಕಾಂಗ್ರೆಸ್ ಸರ್ಕಾರ ಒಕ್ಕಲಿಗ ವಿರೋಧಿ ಎಂದು ಸೃಷ್ಟಿಸಲಾಗುತ್ತಿರುವ ಹವಾ ತೊಡೆದುಹಾಕಲು ಕಾಂಗ್ರೆಸ್ ಏನು ಮಾಡುತ್ತಿದೆ? ರಾಜ್ಯದಲ್ಲಿ ಜೆಡಿಎಸ್ ಫ್ಯಾಕ್ಟರ್ ಹೇಗೆ ಕೆಲಸ ಮಾಡಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರ ಬಿಡುಬೀಸಾದ ಉತ್ತರಗಳು ಇಲ್ಲಿವೆ.

 

ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಗೆ ಬೆಲೆಯಿಲ್ಲ. ಈ ಸರ್ಕಾರ ಒಕ್ಕಲಿಗ ವಿರೋಧಿ ಸರ್ಕಾರ ಎಂಬ ಆರೋಪವಿದೆ?

ಅದು ಅಕ್ಷರಶಃ ಸುಳ್ಳು. ಒಬ್ಬ ಕಾಂಗ್ರೆಸ್ಸಿಗನಾಗಿ, ಒಕ್ಕಲಿಗನಾಗಿ ಇಡೀ ಸಮುದಾಯಕ್ಕೆ ಒಂದು ಮನವಿ ಮಾಡುತ್ತೇನೆ. ಸಿದ್ದ ರಾಮಯ್ಯ ಒಕ್ಕಲಿಗ ವಿರೋಧಿ ಎಂದು ಪ್ರತಿಪಕ್ಷಗಳು ಬಿಂಬಿಸುತ್ತಿವೆ. ಅದನ್ನು ನಂಬಬೇಡಿ. ಏಕೆಂದರೆ, ಸಿದ್ದರಾಮಯ್ಯ ಒಕ್ಕಲಿಗ ಸಮುದಾಯವೂ ಸೇರಿದಂತೆ ಎಲ್ಲರ ಬಗ್ಗೆ ಆಲೋಚನೆ ಮಾಡುವ ನಾಯಕ. ಹಿಂದೆ ರಾಜ್ಯದಲ್ಲಿ ಒಕ್ಕಲಿಗ ನೇತೃತ್ವದ (ಎಸ್.ಎಂ. ಕೃಷ್ಣ ನೇತೃತ್ವದ) ಕಾಂಗ್ರೆಸ್ ಸರ್ಕಾರವಿತ್ತು. ಆಗಲೂ ನಾವು ಕೆಂಪೇಗೌಡ ಪ್ರಾಧಿಕಾರ ಪಡೆಯಲು ಆಗಿರಲಿಲ್ಲ. ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಗ್ರಾಮವನ್ನು ದತ್ತು ತೆಗೆದುಕೊಂಡಿರಲಿಲ್ಲ. 

ಕೆಂಪೇಗೌಡ ಜಯಂತಿ ರಾಜ್ಯಾದ್ಯಂತ ಆಚರಣೆಯಾಗುವಂತೆ ಮಾಡಲು ಆಗಿರಲಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಇದೆಲ್ಲ ಸಾಧ್ಯವಾಗಿದೆ. ಇನ್ನು ಒಕ್ಕಲಿಗ ಸಮುದಾಯದ ಸಂಘ ಸಂಸ್ಥೆಗಳು ಮಠ ಮಾನ್ಯಗಳಿಗೆ ಸರ್ಕಾರದಿಂದ ಜಮೀನು ಪಡೆದಿವೆ. ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಂಪುಟ ದರ್ಜೆ ಸಚಿವ. ನನ್ನ ಇಲಾಖೆಯಲ್ಲಿ ಸಿಎಂ ಒಂದು ದಿನವೂ ಮೂಗು ತೂರಿಸಲಿಲ್ಲ.ನಾನಷ್ಟೇ ಅಲ್ಲ. ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ಜಯಚಂದ್ರ, ಮಂಜು ಹೀಗೆ ಯಾರ ಇಲಾಖೆಯಲ್ಲೂ ಸಿಎಂ ಮಧ್ಯಪ್ರವೇಶ ಮಾಡಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ನೀಡಿದ್ದರು. ಕಾಂಗ್ರೆಸ್ಸಿನಲ್ಲಿ ಒಕ್ಕಲಿಗರಿಗೆ ತನ್ನದೇ ಆದ ‘ಪೊಲಿಟಿಕಲ್ಸ್ಪೇಸ್’ ಇದೆ.

ಅಧಿಕಾರಿಗಳ ವರ್ಗಾವಣೆ ಸಂದರ್ಭದಲ್ಲಿ ಒಕ್ಕಲಿಗರಿಗೆ ಪ್ರಾಮುಖ್ಯತೆ ದೊರೆಯಲಿಲ್ಲ?

ಒಕ್ಕಲಿಗ ಅಧಿಕಾರಿಗಳ ಹಿರಿತನವನ್ನು ಸರ್ಕಾರ ಎಲ್ಲಿಯೂ ನಿರ್ಲಕ್ಷ್ಯ ಮಾಡಿಲ್ಲ. ಅಂತಹ ಒಂದು ಉದಾಹರಣೆಯೂ ಇಲ್ಲ. ಬಯಸಿದ್ದರೆ, ಕೆಲ ಹುದ್ದೆಗಳನ್ನು ಒಕ್ಕಲಿಗ ಅಧಿಕಾರಿಗಳಿಗೆ ನೀಡಬಹುದಿತ್ತು. ಅಂತಹ ಸ್ಥಾನ ನೀಡಲು ಅವಕಾಶವೂ ಇತ್ತು. ಆ ರೀತಿಯಾಗಬೇಕು ಎಂಬುದು ನಮ್ಮ ಬಯಕೆಯೂ ಆಗಿತ್ತು. ಆದರೆ, ಸರ್ಕಾರ ಹಿರಿತನಕ್ಕೆ ಆದ್ಯತೆ ನೀಡಿದೆ. ಹಿರಿತನ ಕಡೆಗಣಿಸಿ ಒಕ್ಕಲಿಗರಿಗೆ ಸ್ಥಾನಮಾನ ವಂಚಿಸಿದ್ದರೆ ಅದು ತಪ್ಪಾಗುತ್ತಿತ್ತು. ಅದನ್ನು ಮಾಡಿಲ್ಲ. 

ಒಕ್ಕಲಿಗ ಫ್ಯಾಕ್ಟರ್ ಇಲ್ಲ ಅಂತಾದರೆ ಒಕ್ಕಲಿಗರು ಹೆಚ್ಚು ಇರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಕಷ್ಟ ಎಂಬ ಭಾವನೆ ಹೇಗೆ ಮೂಡುತ್ತಿತ್ತು?

ನನ್ನ ಪ್ರಕಾರ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಗೆದ್ದೇ ಗೆಲ್ಲುತ್ತಾರೆ. ಜನರು ದಡ್ಡರಲ್ಲ. ಒಬ್ಬ ಮುಖ್ಯಮಂತ್ರಿ ಸ್ಪರ್ಧಿಸುತ್ತಿದ್ದಾರೆ ಎಂದಾದರೆ ಅದರ ಪ್ರಯೋಜನ ಜನರಿಗೆ ಗೊತ್ತಿರುತ್ತದೆ.  ಆದರೂ, ಚಾಮುಂಡೇಶ್ವರಿಯಲ್ಲಿ ಸಿಎಂರನ್ನು ಕಾಂಗ್ರೆಸ್ ಒಂಟಿ ಮಾಡಿದೆ. ಬೇರೆ ಯಾವನಾಯಕರೂ ಅವರ ಪರ ಅಲ್ಲಿ ಪ್ರಚಾರ ಮಾಡುತ್ತಿಲ್ಲ?

ಚಾಮುಂಡೇಶ್ವರಿಗೆ ಹೋಗಿ ಪ್ರಚಾರ ಮಾಡಬೇಕು ಎಂದು ಸಿಎಂ ಹೇಳಿದರೆ ನಾನು ಖಂಡಿತ ಅಲ್ಲಿ ಹೋಗಿ ಅವರ ಪರ ಪ್ರಚಾರ ಮಾಡುತ್ತೇನೆ. ನನ್ನ ಪ್ರಕಾರ ಸಿಎಂಗೆ ಬೇರೆ ನಾಯಕರು ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುವ ಅಗತ್ಯವಿಲ್ಲ. ಈಗಾಗಲೇ ಆ ಕ್ಷೇತ್ರದ ಶೇ.೭೫ರಷ್ಟು ಒಕ್ಕಲಿಗರು ಮುಖ್ಯಮಂತ್ರಿಯವರಿಗೆ ಬೆಂಬಲ ನೀಡುತ್ತಿದ್ದಾರೆ. ತೀರಾ ಅವಶ್ಯಕತೆಯಿದೆ ಎಂದರೆ ನಾನು ಅವರ ಪ್ರಚಾರ ಮಾಡಲು ಹೋಗಲು ಸಿದ್ಧ.

ನೀವು ಹೇಳುವ ರೀತಿ ಗೆದ್ದೇ ಗೆಲ್ಲುವುದಾಗಿದ್ದರೆ ಸಿಎಂ ಬಾದಾಮಿಗೆ ಹೋಗಿದ್ದು ಏಕೆ?

ಉ.ಕ. ಜನರು ಕರೆಯುತ್ತಿದ್ದರು. ಅಲ್ಲದೆ, ಸಿಎಂ ಬಾದಾಮಿ ಸ್ಪರ್ಧೆಯಿಂದ ಆ ಭಾಗದಲ್ಲಿ ಕಾಂಗ್ರೆಸ್‌ಗೆ ನೆರವಾಗುತ್ತದೆ. ಹೋಗಲಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಮ್ಮ ಬದ್ಧ ವೈರಿ ಯೋಗೇಶ್ವರ್ ವಿರುದ್ಧ ಪ್ರಬಲ ಒಕ್ಕಲಿಗ ಅಭ್ಯರ್ಥಿಯನ್ನು ಏಕೆ ಕಣಕ್ಕೆ ಇಳಿಸಲಿಲ್ಲ? 

ಅಲ್ಲಿ ಪ್ರಬಲ ಒಕ್ಕಲಿಗ ನಾಯಕ ಇರಲಿಲ್ಲ. ಯೋಗೇಶ್ವರ್ ಅವರು 4 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದು, ಬೇಕಾದ ಕೆಲಸ ಮಾಡಿಸಿಕೊಂಡರು. ತನ್ನ ಸಹೋದರನಿಗೂ ಅಧಿಕಾರ ಕೊಡಿಸಿದರು. ಇನ್ನೇನು ಚುನಾವಣೆ ಬಂತು ಎನ್ನುವಾಗ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಹೋದರೆ ಯಾರು ಏನು ಮಾಡಲು ಆಗುತ್ತದೆ? ಹೀಗಾಗಿ ಆ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ರೇವಣ್ಣ ಅವರನ್ನು ಕಣಕ್ಕೆ ಇಳಿಸಿದ್ದೇವೆ.

ರೇವಣ್ಣಗೆ ಅದು ಸ್ವಕ್ಷೇತ್ರವೂ ಅಲ್ಲ, ಅಲ್ಲಿ ಅವರು ಕೆಲಸವನ್ನೂ ಮಾಡಿಲ್ಲ. ಅವರು ಹೇಗೆ ಗೆಲ್ಲಲು ಸಾಧ್ಯ? 

ರೇವಣ್ಣ ಅವರಿಗೆ ಸ್ವಕ್ಷೇತ್ರ ಅಲ್ಲ ಅಂತೀರಲ್ಲ. ಅದೇನು ಕುಮಾರಸ್ವಾಮಿ ಸ್ವಕ್ಷೇತ್ರನಾ? ಬೇರೆ ಸಮುದಾಯದವರು ಅಲ್ಲಿ ಗೆದ್ದಿಲ್ಲವೇ? ಈ ಹಿಂದೆ ಡಿ.ಟಿ.ರಾಮು, ಸಾದತ್ ಅಲಿಖಾನ್ ಅಲ್ಲಿಂದಲ್ಲೇ ಅಲ್ಲವೆ ಗೆದ್ದಿದ್ದು? ಈ ಬಾರಿ ತ್ರಿಕೋನ ಸ್ಪರ್ಧೆಯಿದೆ. ಅಲ್ಲಿ ರೇವಣ್ಣ ಗೆದ್ದೇ ಗೆಲ್ಲುತ್ತಾರೆ. ಫಲಿತಾಂಶದ ನಂತರ ನೋಡಿ. 

 ನಿಮ್ಮ ಕುಟುಂಬದಿಂದ ಒಬ್ಬರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಎಂದಿತ್ತಲ್ಲ?

ಹೌದು, ಇತ್ತು. ಆದರೆ, ನಾನೇ ಬೇಡ ಅಂದೆ. ಈಗ ನಾನು ಇದ್ದೇನೆ. ನನ್ನ ತಮ್ಮ ಇದ್ದಾನೆ. ಕುಟುಂಬದಿಂದ ಎಷ್ಟು ಜನರನ್ನು ರಾಜಕೀಯಕ್ಕೆ ತರಲು ಸಾಧ್ಯ? ಜನ ಉಗಿಯುತ್ತಾರೆ ಅಷ್ಟೇ. ಕುಟುಂಬದ ಮತ್ತೊಬ್ಬರನ್ನು ರಾಜಕೀಯಕ್ಕೆ ತರಲು ಮನಸ್ಸಾಕ್ಷಿ ಒಪ್ಪಲಿಲ್ಲ. 

ಚುನಾವಣೆಗೆ ಕೆಲವೇ ದಿನ ಬಾಕಿಯಿದೆ. ಕಾಂಗ್ರೆಸ್‌ನ ಮುಂದಿನ ಪ್ರಚಾರ ಕಾರ್ಯತಂತ್ರವೇನು?

ಕಾಂಗ್ರೆಸ್ ನುಡಿದಂತೆ ನಡೆದಿದೆ. ಅದನ್ನು ಜನತೆಗೆ ಸಮರ್ಪಕವಾಗಿ ತಿಳಿಸುವುದೇ ನಮ್ಮ ಕಾರ್ಯತಂತ್ರವಾಗಿಟ್ಟುಕೊಂಡಿದ್ದೆವು. ಆದರೆ, ಚುನಾವಣಾ ಆಯೋಗ ಬಿಜೆಪಿಗೆ ನೆಗೆಟಿವ್ ಪ್ರಚಾರ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಅವಕಾಶವನ್ನು ನಮಗೂ ಆಯೋಗ ನೀಡಿದರೆ ಬಿಜೆಪಿ ಸರ್ಕಾರದ ಐದು ವರ್ಷದ ಆಡಳಿತದ ಟೇಪ್ ಅನ್ನು ಜನರ ಮುಂದೆ ಹಾಕುತ್ತೇವೆ. ಜನರಿಗೆ ಬಿಜೆಪಿ ಆಡಳಿತ ಹೇಗಿತ್ತು ಎಂಬುದನ್ನು ನೆನಪಿಸಿದರೆ ಸಾಕು, ನಾವು ಮತ್ಯಾವ ಕ್ಯಾಂಪೇನ್ ಮಾಡುವುದೇ ಬೇಡ. ಚುನಾವಣಾ ಆಯೋಗವು ಅವರಿಗೆ ನೆಗೆಟಿವ್ ಪ್ರಚಾರ ನಡೆಸಲು ಅವಕಾಶ ನೀಡಿರುವಂತೆ ನಮಗೂ ಅವಕಾಶ ನೀಡಿದರೆ ಅದನ್ನು ಮಾಡುತ್ತೇವೆ. ಬಿಜೆಪಿ ನೆಗಟಿವ್ ಪ್ರಚಾರ ಮಾಡುತ್ತಿರುವಾಗ ನಮಗೂ ಅಂತಹುದೇ ಪ್ರಚಾರ ಮಾಡದೇ ಗತ್ಯಂತರವಿಲ್ಲ. 

ಅಂದರೆ, ತೋಚಿದಂತೆ ಪ್ರಚಾರ ನಡೆಸಲು ಚುನಾವಣಾ ಆಯೋಗ ಬಿಜೆಪಿಗೆ ಅವಕಾಶ ನೀಡಿದೆ ಎಂದು ಆರೋಪಿಸುತ್ತಿದ್ದೀರಾ?

ಕೆಲವು ವಿಚಾರಗಳಲ್ಲಿ ಬಿಜೆಪಿಗೆ ನೆಗೆಟಿವ್ ಪ್ರಚಾರ ನಡೆಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಬಿಜೆಪಿ ನಿನ್ನೆ ಮೊನ್ನೆ ಮಾಧ್ಯಮಗಳಿಗೆ ನೀಡಿದ ಜಾಹೀರಾತು ನೋಡಿದೆ. ಅದು ನೆಗೆಟಿವ್ ಪ್ರಚಾರದ ಮಾದರಿಯಲ್ಲಿದ್ದವು. ಈ ನೆಗೆಟಿವ್ ಪ್ರಚಾರದ ದಾಖಲೆ ಸಂಗ್ರಹ ಮಾಡಿದ್ದೇವೆ. ನಾವು ಕೂಡ ಬಿಜೆಪಿ ಸರ್ಕಾರದ ಐದು ವರ್ಷದ ಆಡಳಿತದ ಪಿಕ್ಚರ್ ಅನ್ನು ಜನರಿಗೆ ತೋರಿಸುತ್ತೇವೆ. ಸೋ, ಚುನಾವಣಾ ಆಯೋಗ ಬಿಜೆಪಿಗೆ ಸಹಾಯ ಮಾಡುತ್ತಿದೆ? ಸಹಾಯ ಮಾಡುತ್ತಿದ್ದಾರೋ ಅಥವಾ ಇಲ್ಲವೋ ಅದು ಬೇರೆ ವಿಚಾರ. ಆದರೆ, ನೆಗೆಟಿವ್ ಪ್ರಚಾರಕ್ಕೆ ಅವಕಾಶವಿದೆ ಎಂದಾದರೆ, ಆ ಅವಕಾಶ ನಮಗೆ ಸಿಗಬೇಕು.

Follow Us:
Download App:
  • android
  • ios