​​​​ಬೆಂಗಳೂರು [ಮೇ. 10]:  ಕರ್ನಾಟಕ ಸಿಎಂ ಸಿದ್ದರಾಮಯ್ಯ ಬಗ್ಗೆ ಅಮೆರಿಕಾದ ಖ್ಯಾತ ಪತ್ರಿಕೆಯಾದ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಲೇಖನ ಪ್ರಕಟವಾಗಿದೆ.

ಭಾರತದ ಹಿರಿಯ ಪತ್ರಕರ್ತೆ ಬರ್ಖಾ ದತ್ತ್ ಬರೆದಿರುವ ಈ ಲೇಖನದಲ್ಲಿ, ಪ್ರಧಾನಿ ಮೋದಿ ಹಾಗೂ ಸಿದ್ದರಾಮಯ್ಯ ನಡುವೆ ಇರುವ ಸಾಮ್ಯತೆಯನ್ನು ಚರ್ಚಿಸುತ್ತಾ, ಸಿದ್ದರಾಮಯ್ಯರ ರಾಜಕೀಯ ನಿಲುವು ಹಾಗೂ ಹೋರಾಟಗಳನ್ನು ವಿಶ್ಲೇಷಿಸಲಾಗಿದೆ.

ಚಹಾ ಮಾರುವವರ ಮಗನಾಗಿ ಪ್ರಧಾನಿ ಮೋದಿ ಹೇಗೆ ಬಡತನವನ್ನು ಎದುರಿಸಿ ಪ್ರಧಾನಿಯಾದರೋ, ಹಾಗೇ ಸಿದ್ದರಾಮಯ್ಯ ಕೂಡಾ ಕುರಿ ಕಾಯುವ ಕಾಯಕದಿಂದ ಅಧಿಕಾರಕ್ಕೇರಿದ್ದಾರೆ. ಬಾಲ್ಯದಲ್ಲಿ ಕಂಡ ಹಸಿವೇ ಇಂದು ಅನ್ನಭಾಗ್ಯದಂತಹ ಯೋಜನೆಗಳಿಗೆ ಪ್ರೇರಣೆಯಾಗಿವೆ.

ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಇಬ್ಬರೂ ಬಡತನದ ಹಿನ್ನಲೆಯಿಂದ ಬಂದವಾರಾಗಿದ್ದು, ಇಬ್ಬರು ಕೂಡಾ ಇಂದು ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ಒಂದು ರಾಜ್ಯದ ಸಿಎಂ ಆಗಿದ್ದುಕೊಂಡು, ಮೋದಿಯಂತಹ ದೈತ್ಯ ರಾಜಕಾರಣಿಗೆ ಸವಾಲನ್ನೊಡ್ಡಿದ್ದಾರೆ ಎಂಬುವುದನ್ನು ಲೇಖನದಲ್ಲಿ ವಿಶ್ಲೇಷಿಸಲಾಗಿದೆ. 

ಕುರುಬ ಸಮುದಾಯದಿಂದ ಬಂದಿರುವ ಸಿದ್ದರಾಮಯ್ಯ ಹೇಗೆ ಬಡತನವನ್ನು ಮೆಟ್ಟಿನಿಂತು,  ಪ್ರಾದೇಶಿಕ ಅಸ್ಮಿತೆ ಹಾಗೂ ರಾಜ್ಯದ ಹೆಮ್ಮೆಗೆ ಹೊಸ ಭಾಷ್ಯ ಬರೆದಿದ್ದಾರೆ.  ನಾಡು-ನುಡಿಯ ವಿಚಾರವಾಗಿ ಪ್ರತ್ಯೇಕ ಧ್ವಜ, ಹಿಂದಿ-ಹೇರಿಕೆ ವಿರುದ್ಧ ಸೆಟೆದು ನಿಲ್ಲುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಾರೆ.  ಸಿದ್ದರಾಮಯ್ಯ ಧಾರ್ಮಿಕ ರಾಜಕಾರಣದ ಬದಲಾಗಿ ನಾಡು ನುಡಿಯ ಅಭ್ಯುದಯವನ್ನು ರಾಜಕಾರಣದ ವಿಷಯವನ್ನಾಗಿ ಮಾಡಿದ್ದರೆ.

ಧರ್ಮವನ್ನು ಪ್ರಶ್ನಿಸುವ ವಿಚಾರವಾದಿಗಳ ಹತ್ಯೆಯಾಗುವ ಸಂದರ್ಭದಲ್ಲಿ ತಾನು ಕೂಡಾ ವಿಚಾರವಾದಿಯೆಂದು ಹೇಳಿಕೊಳ್ಳಲು ಅವರು ಹಿಂಜರಿಯಲಿಲ್ಲ. ಧಾರ್ಮಿಕ ವಿಷಯಗಳಲ್ಲಿ  ವಿಚಾರವಾದಿಯಾಗಿಯೂ, ವಿಚಾರವಾದಿಗಳ ನಡುವೆ ತನ್ನನ್ನು ಅಪ್ಪಟ ಹಿಂದೂವಾಗಿಯೂ ಗುರುತಿಸಿಕೊಳ್ಳುವ ಮೂಲಕ ಉದಾರವಾದ ಸಿದ್ಧಾಂತಕ್ಕೆ ಸಿದ್ದರಾಮಯ್ಯ ಆಧುನಿಕ ವ್ಯಾಖ್ಯಾನ ನೀಡಿದ್ದಾರೆ, ಎಂದು ಲೇಖನದಲ್ಲಿ ಹೇಳಲಾಗಿದೆ. 

ಇನ್ನು ಹಲವಾರು ವಿಷಯಗಳನನ್ನು ಲೇಖನದಲ್ಲಿ ಚರ್ಚಿಸಲಾಗಿದ್ದು, ಕೊನೆಗೆ, ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಗೆಲ್ತಾರೋ ಸೋಲ್ತಾರೋ ಬೇರೆ ವಿಷಯ. ಆದರೆ ಕಾಂಗ್ರೆಸ್ ಪಕ್ಷ ಅವರಿಂದ ಕಲಿಯೋದು ಬಹಳಷ್ಟಿದೆ, ಎಂದು ಹೇಳಲಾಗಿದೆ.