Asianet Suvarna News Asianet Suvarna News

ಬೃಹತ್ ಮತಚೀಟಿ ಹಗರಣ ಸ್ಫೋಟ; ಚುನಾವಣಾ ಆಯೋಗದಿಂದ ತನಿಖೆಗೆ ಆದೇಶ

ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 10 ಸಾವಿರ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.

Voter ID Scandal

ಬೆಂಗಳೂರು (ಮೇ. 09): ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 10 ಸಾವಿರ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.

ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್'ಮೆಂಟಿನ ಫ್ಲ್ಯಾಟ್ ಒಂದರಲ್ಲಿ 9746 ಮತದಾರರ ಗುರುತಿನ ಚೀಟಿಗಳು ದೊರೆತಿರುವುದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಈ ಅಕ್ರಮದ ಸಂಬಂಧ  ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗವು ಮುಂದಿನ ನಿರ್ಧಾರ ಕೈಗೊಳ್ಳಲಿದ್ದು, 24 ಗಂಟೆಯೊಳಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.  ಹೀಗಾಗಿ, ಕ್ಷೇತ್ರದ ಚುನಾವಣೆ ನಡೆಯುತ್ತದೆಯೋ ಅಥವಾ ಮುಂದೂಲ್ಪಡುವುದೋ ಎಂಬುದು ಬುಧವಾರ ಇತ್ಯರ್ಥವಾಗುವ ಸಾಧ್ಯತೆಯಿದೆ. ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಚೀಟಿ ಸಂಗ್ರಹ
ಪ್ರಕರಣ ಸಂಬಂಧ ಮಂಗಳವಾರ ತಡರಾತ್ರಿ ಅವರು ತುರ್ತು ಸುದ್ದಿಗೋಷ್ಠಿ ನಡೆಸಿದರು.

ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಸಂಖ್ಯೆ 115 ರಲ್ಲಿ ಮತದಾರರ ಚೀಟಿಗಳು ಪತ್ತೆಯಾಗಿವೆ. ಈ ಅಪಾರ್ಟ್‌ಮೆಂಟ್ ಮಂಜುಳಾ ನಂಜಾಮರಿ ಎಂಬುವರಿಗೆ ಸೇರಿದ್ದು, ಆ ಫ್ಲ್ಯಾಟ್ ಅನ್ನು ರಾಕೇಶ್ ಎಂಬುವರು ಬಾಡಿಗೆ ಪಡೆದಿದ್ದಾರೆ. ಅಲ್ಲಿ ವೋಟರ್ ಐಡಿಗಳ ಜೊತೆ ೫ ಲ್ಯಾಪ್‌ಟ್ಯಾಪ್ ಮತ್ತು ಒಂದು ಪ್ರಿಂಟರ್ ಪತ್ತೆಯಾಗಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಾಗದದ ಕಟ್ಟುಗಳಲ್ಲಿ ಮತದಾರರ ಚೀಟಿಗಳು ಲಭ್ಯವಾಗಿದೆ. ಅವುಗಳು ಕೊಳಚೆ ಪ್ರದೇಶ ಸೇರಿ ಕೆಲವು ಪ್ರದೇಶಗಳಿಗೆ ಸೇರಿವೆ ಎಂದು ಹೇಳಿದರು.

ಬೆಂಗಳೂರು ನಗರದ ಇತರೆ ಕ್ಷೇತ್ರಗಳಿಗಿಂತ ಸರಾಸರಿ ಮತದಾರರ ಪ್ರಮಾಣವು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶೇ.10 ರಷ್ಟು ಏರಿಕೆಯಾಗಿದೆ. ಈ ಕ್ಷೇತ್ರದಲ್ಲಿ 4,71,459 ಮತದಾರರಿದ್ದು, ಈ ವರ್ಷ ಸುಮಾರು 43 ಸಾವಿರ ಮತದಾರರು ಹೊಸದಾಗಿ ಸೇರಿದ್ದಾರೆ. ಏಪ್ರಿಲ್ 8 ರಂದು ನಡೆದ ಮತಪಟ್ಟಿಗೆ ಹೆಸರು ಸೇರಿಸುವ ದಿನ ದಂದು 25 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಬಳಿಕ ಹಂತಹಂತವಾಗಿ 19,012 ಜನರು ಮತಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.

ಅಪಾರ್ಟ್‌ಮೆಂಟ್‌ನಲ್ಲಿ 9746 ಮತದಾರರ ಚೀಟಿಗಳು ಪತ್ತೆಯಾಗಿವೆ. ಆ ಕಾರ್ಡ್‌ಗಳನ್ನು ತುಂಬಿದ್ದ ಬಂಡಲ್‌ಗಳ ಮೇಲೆ ಚೀಟಿಯಲ್ಲಿ ಮತದಾರರ ಮೊಬೈಲ್ ಸಂಖ್ಯೆ ಬರೆಯಲಾಗಿದೆ. ಇಲ್ಲಿ ಎರಡು ತಾಮ್ರದ ಟ್ರಂಕ್‌ಗಳಲ್ಲಿ ಮತಪಟ್ಟಿಗೆ ಹೆಸರು ನೊಂದಾಯಿಸುವ ಅರ್ಜಿಗಳು ಹಾಗೂ ಸ್ಥಳೀಯ ಶಾಸಕ ಭಾವಚಿತ್ರದ ಕಾರ್ಡ್‌ಗಳು ಲಭಿಸಿವೆ ಎಂದು ವಿವರಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಾನು ಖುದ್ದು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬಿಬಿಎಂಪಿ ಆಯುಕ್ತರು, ಮೂವರು ಚುನಾವಣಾ ವೀಕ್ಷಕರು ಸೇರಿದಂತೆ ಹಿರಿಯ ಅಧಿಕಾರಿಗಳು ಅಪಾರ್ಟ್‌ಮೆಂಟ್‌ನಲ್ಲಿ ತನಿಖೆ ಮುಂದುವರೆಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಹೇಳಿದರು. 
 

ಏನಾಗಬಹುದು?
1. ಈ ಹಗರಣದಲ್ಲಿ ತಪ್ಪಿತಸ್ಥ ಎಂದಾದರೆ ಅಭ್ಯರ್ಥಿ ಅನರ್ಹಗೊಳ್ಳಬಹುದು
2. ಆರ್.ಆರ್. ನಗರ ಕ್ಷೇತ್ರದ ಚುನಾವಣೆಯನ್ನು ಸದ್ಯಕ್ಕೆ ಮುಂದೂಡಬಹುದು
3. ಮನೆಯ ಮಾಲೀಕರು ಮತ್ತು ಅಭ್ಯರ್ಥಿಗಳ ಮೇಲೆ ಕೇಸು ಹಾಕಿ ತನಿಖೆ ನಡೆಸಬಹುದು. ಇದರ ಫಲಿತಾಂಶಕ್ಕೆ ಒಳಪಟ್ಟಂತೆ ಆರ್.ಆರ್.ನಗರ ಚುನಾವಣೆ ನಡೆಸಬಹುದು.

Follow Us:
Download App:
  • android
  • ios