ಬಿಎಸ್‌ವೈಗೆ ಸಡ್ಡು: ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!

karnataka-assembly-election-2018 | Sunday, April 22nd, 2018
Sujatha NR
Highlights

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಅವರ ವಿರುದ್ಧ ಸ್ಪರ್ಧಿಸುತ್ತಿರುವ ಸಾಮಾನ್ಯ ಅಭ್ಯರ್ಥಿಯೊಬ್ಬರು ಥೇಟ್‌ ಅವರಂತೆಯೇ ಹೆಲಿಕಾಫ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಅವರ ವಿರುದ್ಧ ಸ್ಪರ್ಧಿಸುತ್ತಿರುವ ಸಾಮಾನ್ಯ ಅಭ್ಯರ್ಥಿಯೊಬ್ಬರು ಥೇಟ್‌ ಅವರಂತೆಯೇ ಹೆಲಿಕಾಫ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮದ 25 ವರ್ಷದ ಯುವಕ ವಿನಯ್‌ರಾಜ್‌ ಅವರೇ ಶನಿವಾರ ಮಧ್ಯಾಹ್ನ ಹೆಲಿಕಾಫ್ಟರ್‌ ಮೂಲಕ ಶಿಕಾರಿಪುರಕ್ಕೆ ಆಗಮಿಸಿ, ಹೆಲಿಪ್ಯಾಡ್‌ನಿಂದ ಹುಚ್ಚರಾಯಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಬಿಎಸ್ಸಿ ಓದಿರುವ ವಿನಯ್‌ ರಾಜಾವತ್‌ ಅವರು, ಪೊಲೀಸ್‌ ಪೇದೆಯೊಬ್ಬರ ಪುತ್ರ. ವಿದ್ಯಾರ್ಥಿಯಾಗಿದ್ದಾಗಲೇ ‘ವಿದ್ಯಾರ್ಥಿ’ ಎಂಬ ಹೆಸರಿನಲ್ಲೇ ಸಂಘಟನೆಯೊಂದನ್ನು ಆರಂಭಿಸಿ ಶಿವಮೊಗ್ಗದಲ್ಲಿ ಕೆಲವು ಹೋರಾಟಗಳನ್ನೂ ನಡೆಸಿದ್ದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಈ ಸಂಘಟನೆಯ ಕಚೇರಿ ಇದೆ.

ಜೊತೆಗೆ ಚಿತ್ರೀಕರಣ ಹಂತದಲ್ಲಿರುವ ‘ರಾಮದುರ್ಗ’ ಎಂಬ ಕನ್ನಡ ಚಿತ್ರದಲ್ಲಿ ನಾಯಕನಟರಾಗಿದ್ದಾರೆ. ಇವರ ವಿರುದ್ಧ ಶಿವಮೊಗ್ಗದ ನ್ಯಾಯಾಲಯದಲ್ಲಿ ಒಂದು ಮಾನನಷ್ಟ ಮೊಕದ್ದಮೆ ಇದ್ದು, ವಿಚಾರಣೆ ನಡೆಯುತ್ತಿದೆ. ಇವರು ಒಟ್ಟು 19,45,573 ರು. ಚರಾಸ್ತಿ, ತಂದೆಯ ಹೆಸರಿನಲ್ಲಿ 2.5 ಲಕ್ಷ ರು., ತಾಯಿ ಹೆಸರಿನಲ್ಲಿ 8.5 ಲಕ್ಷ ರು. ಚರಾಸ್ತಿ ಹೊಂದಿದ್ದಾರೆ.

ಇವರ ಬಳಿ ಕೃಷಿ ಭೂಮಿ ಇಲ್ಲ. ಆದರೆ, ತಂದೆಯ ಹೆಸರಿಗೆ ಕುಂಚೇನಹಳ್ಳಿಯಲ್ಲಿ 50 ಲಕ್ಷ ರು. ಮೌಲ್ಯದ 4 ಎಕರೆ ಜಮೀನು, ಒಂದು ಫೋರ್ಡ್‌ ಇಕೋ ಕಾರು, ಇದಕ್ಕಾಗಿ ಬ್ಯಾಂಕಿನಲ್ಲಿ 8 ಲಕ್ಷ ರು ಸಾಲ ಹೊಂದಿದ್ದು, ಕೈಯಲ್ಲಿ 70 ಸಾವಿರು ರು. ನಗದು ಹಣ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.

ಇವರ ಬೆಂಗಳೂರಿನಿಂದ ಶಿಕಾರಿಪುರಕ್ಕೆ ಬರಲು ಹೆಲಿಕಾಫ್ಟರ್‌ ಬಾಡಿಗೆಗೆ 1ಲಕ್ಷ ರು. ಹಾಗೂ ಲ್ಯಾಂಡಿಂಗ್‌ ಅನುಮತಿಗಾಗಿ 20 ಸಾವಿರ ರು. ವೆಚ್ಚ ಮಾಡಿದ್ದು, ಇದನ್ನು ಅವರ ಸ್ನೇಹಿತರೇ ಭರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR