ಕೆ.ಆರ್. ರವಿಕಿರಣ್, ಕನ್ನಡಪ್ರಭ
ದೊಡ್ಡಬಳ್ಳಾಪುರ[ಮೇ.09]: ರಾಜ್ಯದ ನೇಕಾರಿಕೆ ತೊಟ್ಟಿಲು ದೊಡ್ಡಬಳ್ಳಾಪುರದಲ್ಲೀಗ ಚುನಾವಣೆ ಭರಾಟೆ ತಾರಕಕ್ಕೇರಿದೆ. ಜಾತಿ ರಾಜಕಾರಣವನ್ನು ಎಂದೂ ಒಪ್ಪಿಕೊಳ್ಳದ ಕ್ಷೇತ್ರದಲ್ಲಿ ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳಿಂದ ಘಟಾನುಘಟಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆಲುವು ಸಾಧಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ.
ದೊಡ್ಡಬಳ್ಳಾಪುರ ನಗರ ನೇಕಾರರ ಪ್ರಾಬಲ್ಯರುವ ಪಟ್ಟಣ. ಬೆಂಗಳೂರಿಗೆ ಕೇವಲ 38 ಕಿ.ಮೀ. ದೂರದಲ್ಲಿದ್ದರೂ ಸಮರ್ಪಕ ಮೂಲಸೌಕರ್ಯಗಳ ಕೊರತೆ ನಗರವನ್ನು ಬಾಧಿಸುತ್ತಿದೆ. ಕಿಷ್ಕಿಂಧೆಯಂಥ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರದ ಪ್ರಮುಖ ಸಮಸ್ಯೆಗಳಾಗಿ ಕಂಡರೂ ಇಲ್ಲಿನ ನೇಕಾರರು, ಕುಶಲಕರ್ಮಿಗಳು ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಂಗಳೂರನ್ನು ಆಶ್ರಯಿಸುವ ಅನಿವಾರ್ಯತೆ ಇದೆ. ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದ್ದರೂ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಇನ್ನೂ ಸಾಕಾರವಾಗಿಲ್ಲ. ಜಿಲ್ಲಾ ಕೇಂದ್ರವಾಗಬೇಕಿದ್ದ ದೊಡ್ಡಬಳ್ಳಾಪುರಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ದೊಡ್ಡ ಶಾಪವಾಗಿದೆ. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ನೂರಾರು ಗಾರ್ಮೆಂಟ್ ಕಾರ್ಖಾನೆಗಳು, ವಿವಿಧ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿದ್ದರೂ ಅವುಗಳಲ್ಲಿ ಆಯಕಟ್ಟಿನ ಹುದ್ದೆಗಳು ಸ್ಥಳೀಯರಿಗೆ ದೊರೆಯುತ್ತಿಲ್ಲ. ನಷ್ಟದಲ್ಲಿರುವ ಜವಳಿ ಪಾರ್ಕ್ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿಲ್ಲ. ಶಂಕುಸ್ಥಾಪನೆಗೊಂಡ ಇಎಸ್‌’ಐ ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂಬ ಆರೋಪಗಳಿವೆ. ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಕೆಲವು ಕಾರ್ಯಗಳು ನಡೆದಿರುವುದು ಆಶಾದಾಯಕವಾಗಿದೆ. ಉಳಿದಂತೆ ರಾಜಧಾನಿಯ ಸೆರಗಿನಲ್ಲಿದ್ದರೂ ಅಭಿವೃದ್ಧಿ ಹೊಂದುವಲ್ಲಿ ಕ್ಷೇತ್ರ ಸೋತಿದೆ. 
ಘಟಾನುಘಟಿಗಳನ್ನು ಕೊಟ್ಟ ಕ್ಷೇತ್ರ: ಆರಂಭದಿಂದಲೂ ಸಾಮಾನ್ಯ ಕ್ಷೇತ್ರವಾಗಿಯೇ ಇರುವ ದೊಡ್ಡಬಳ್ಳಾಪುರದಲ್ಲಿ 1952ರಿಂದ ಈವರೆಗೆ ಟಿ. ಸಿದ್ದಲಿಂಗಯ್ಯ, ಜಿ. ರಾಮೇಗೌಡ, ಆರ್.ಎಲ್. ಜಾಲಪ್ಪ ಪ್ರಭಾವಿ ರಾಜಕಾರಣಿಗಳಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಚಿವರಾಗಿ ಕಾರ್ಯನಿರ್ವಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರಾಗಿ ಒಮ್ಮೆ ಸೋತವರು ಮತ್ತೆ ಗೆದ್ದಿಲ್ಲ ಎಂಬುದು ಇತಿಹಾಸ.
ಅಹಿಂದ ಪ್ರಾಬಲ್ಯದ ಕ್ಷೇತ್ರ: ಕ್ಷೇತ್ರದಲ್ಲಿ ಒಕ್ಕಲಿಗ, ದೇವಾಂಗ(ನೇಕಾರ), ಪರಿಶಿಷ್ಟ ಜಾತಿ-ಸಮುದಾಯಗಳ ಮತಗಳು ಗಣನೀಯ ಸಂಖ್ಯೆಯಲ್ಲಿದ್ದು, ನಿರ್ಣಾಯಕ ಪಾತ್ರನಿರ್ವಹಿಸಲಿವೆ. ಉಳಿದಂತೆ ಮುಸಲ್ಮಾನ, ಲಿಂಗಾಯತ, ಕುರುಬ, ಬಣಜಿಗ ಸಮುದಾಯಗಳೂ ಪ್ರಬಲ ವರ್ಗಗಳೇ ಆಗಿದ್ದು, ಫಲಿತಾಂಶವನ್ನು ಪ್ರಭಾವಿಸುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು, ದಲಿತ ಮತ್ತು ಅಲ್ಪಸಂಖ್ಯಾತ ಮತದಾರರೇ ಅಧಿಕ. ಹೀಗಾಗಿ ಅಹಿಂದ ವೋಟ್ ಬ್ಯಾಂಕ್ ತಂತ್ರ ಈವರೆಗೆ ಕ್ಷೇತ್ರದಲ್ಲಿ ಫಲಕಾರಿಯಾಗಿದೆ.
ಈ ಬಾರಿಯೂ ಕಳೆದ ಬಾರಿಯ ಅಭ್ಯರ್ಥಿಗಳೇ!:
ಈ ಬಾರಿಯ ಚುನಾವಣೆ ತ್ರಿಕೋನ ಸ್ಪರ್ಧೆಯಿಂದ ಕೂಡಿದೆ. ಕಾಂಗ್ರೆಸ್‌’ನಿಂದ ಹಾಲಿ ಶಾಸಕ ಟಿ.ವೆಂಕಟರಮಣಯ್ಯ, ಬಿಜೆಪಿಯಿಂದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಜೆಡಿಎಸ್‌’ನಿಂದ ಬಿ.ಮುನೇಗೌಡ ಕಣದಲ್ಲಿದ್ದಾರೆ. ಈ ಪೈಕಿ ಜೆ.ನರಸಿಂಹಸ್ವಾಮಿ 2008ರಲ್ಲಿ ಆಪರೇಷನ್ ಕಮಲ ಮೂಲಕ ಕಾಂಗ್ರೆಸ್’ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕಳೆದ ಚುನಾವಣೆಯಲ್ಲೂ ಈ ಮೂವರೂ ಅಭ್ಯರ್ಥಿಗಳು ಮತ್ತು ಮಾಜಿ ಸಚಿವ ಸಿ.ಚನ್ನಿಗಪ್ಪ ಕಣದಲ್ಲಿದ್ದರು. ಎಲ್ಲ 4 ಅಭ್ಯರ್ಥಿಗಳೂ 30 ಸಾವಿರಕ್ಕಿಂತ ಹೆಚ್ಚು ಮತ ಪಡೆದು ತೀವ್ರ ಹಣಾಹಣೆ ನಡೆಸಿದ್ದರು. ಇದರಲ್ಲಿ 37 ಸಾವಿರ ಮತಗಳಿಸಿದ್ದ ಟಿ.ವೆಂಕಟರಮಣಯ್ಯ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆಗ ಶಾಸಕರಾಗಿದ್ದ ಜೆ.ನರಸಿಂಹಸ್ವಾಮಿ 4ನೇ ಸ್ಥಾನ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಬಿ.ಮುನೇಗೌಡ 2ನೇ ಸ್ಥಾನ ಮತ್ತು ಮಾಜಿ ಸಚಿವ ಸಿ.ಚನ್ನಿಗಪ್ಪ 3ನೇ ಸ್ಥಾನದಲ್ಲಿದ್ದರು. 
ಈ ಬಾರಿ ತ್ರಿಕೋನ ಸ್ಪರ್ಧೆ: ಕ್ಷೇತ್ರದಲ್ಲೀಗ ತ್ರಿಕೋನ ಸ್ಪರ್ಧೆ ಕಾಣುತ್ತಿದೆ. ಸಾಸಲು ಹೋಬಳಿಯಲ್ಲಿ ಬಿಜೆಪಿ, ಕಸಬಾ ಹೋಬಳಿಯಲ್ಲಿ ಜೆಡಿಎಸ್, ದೊಡ್ಡಬೆಳವಂಗಲದಲ್ಲಿ ಕಾಂಗ್ರೆಸ್, ಮಧುರೆ ಹೋಬಳಿಯಲ್ಲಿ ಕಾಂಗ್ರೆಸ್-ಬಿಜೆಪಿ ಮುನ್ನಡೆಯಲ್ಲಿದೆ ಎಂಬ ಮಾತು ಕೇಳಿಬರುತ್ತಿದ್ದರೆ ನಗರ ಮಾತ್ರ ಯಾರಿಗೂ ಸುಲಭ ಸಾಧ್ಯವಲ್ಲ ಎನ್ನುವ ಪರಿಸ್ಥಿತಿ ಇದೆ. ಈ ಬಾರಿ ಮೂವರು ಅಭ್ಯರ್ಥಿಗಳೂ ಪ್ರಬಲವಾಗಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ ತೀರಾ ಕಡಿಮೆ ಇರಲಿದೆ ಎಂಬುದು ತಜ್ಞರ ಲೆಕ್ಕಾಚಾರ. 
ಪ್ಲಸ್ - ಮೈನಸ್ 
* ಕ್ಷೇತ್ರದಲ್ಲಿ ಕೈಗೊಂಡಿರುವ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಶಾಸಕ ವೆಂಕಟರಮಣಯ್ಯ. ಆದರೆ, ಅಂದುಕೊಂಡ ಮಟ್ಟಿಗೆ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂಬುದು ನಾಗರಿಕರ ಅಂಬೋಣವಾಗಿದ್ದು, ಇದು ಶಾಸಕರಿಗೆ ತೊಡಕಾಗಬಹುದು.
* ಕಳೆದ ಬಾರಿ ಜೆಡಿಎಸ್ ಟಿಕೆಟ್ ವಂಚಿತಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುನೇಗೌಡಗೆ ಈ ಬಾರಿ ಜೆಡಿಎಸ್ ಟಿಕೆಟ್ ಲಭಿಸಿದ್ದು, ಇದು ಕಾಂಗ್ರೆಸ್ ಶಾಸಕನಿಗೆ ಹೊಡೆತ ನೀಡುವ ನಿರೀಕ್ಷೆಯಿದೆ
* ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿ 14 ಮಂದಿ ಕಣದಲ್ಲಿದ್ದು, ಇವರು ಮತಗಳನ್ನು ಒಡೆದು ಪ್ರಮುಖ ಅಭ್ಯರ್ಥಿಯ ಹಣೆಬರಹ ಬರೆಯುವುದರಲ್ಲಿ ಪ್ರಮುಖರಾಗಲಿದ್ದಾರೆ 
ಒಟ್ಟು ಮತದಾರರು
2,03,190
ಪುರುಷ ಮತದಾರರು
1,01,976
ಮಹಿಳಾ ಮತದಾರರು
1,01,208
ಇತರೆ
6