ಹೊಸಕೋಟೆಯಲ್ಲಿ ಎಂಟಿಬಿಗೆ ಬಚ್ಚೇಗೌಡ ಪುತ್ರ ಸವಾಲ್

karnataka-assembly-election-2018 | Wednesday, May 9th, 2018
Naveen Kodase
Highlights

ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜು, ರಾಜ್ಯದ ಚುನಾವಣಾ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡರುವವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 

ಎನ್.ಎಲ್. ಶಿವಮಾದು, ಕನ್ನಡಪ್ರಭ 

ಹೊಸಕೋಟೆ[ಮೇ.09]: ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಒಂದಾಗಿದೆ. ಗ್ರಾಮಾಂತರ ಪ್ರದೇಶವಾಗಿದ್ದರಿಂದ ಮೊದಲು ಮಳೆಯಾಶ್ರಿತ ಬೇಸಾಯವನ್ನು ಆಶ್ರಯಿಸಲಾಗಿತ್ತು. ನಗರೀಕರಣದ ಪ್ರಭಾವ ಮತ್ತು ಬೆಂಗಳೂರು ಐಟಿ ಸಿಟಿಯಾಗಿ ವಿಸ್ತರಿಸಿಕೊಂಡ ಪರಿಣಾಮ, ಅರ್ಧದಷ್ಟು ಭಾಗ ಬೆಂಗಳೂರಿಗೆ ಹೊಂದಿಕೊಂಡಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರವು ಈ ಬಾರಿ ವಿಶೇಷ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜು, ರಾಜ್ಯದ ಚುನಾವಣಾ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡರುವವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಗೋವಿಂದರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಮೊದಲ ಸ್ಥಾನದಲ್ಲಿದ್ದರೆ, ಎಂಟಿಬಿ ನಾಗರಾಜು ಎರಡನೇ ಸ್ಥಾನದಲ್ಲಿದ್ದಾರೆ. ಪ್ರಿಯಾಕೃಷ್ಣ 1,020 ಕೋಟಿ ರು. ಆಸ್ತಿ ಘೋಷಿಸಿದ್ದರೆ, ಎಂ.ಟಿ.ಬಿ. ನಾಗರಾಜು 1,015 ಕೋಟಿ ರು. ಆಸ್ತಿ ಘೋಷಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಮೂಲತಃ ಉದ್ಯಮಿಯಾಗಿರುವ ನಾಗರಾಜ್ 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಎನ್.ಬಚ್ಚೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ. ಇದೀಗ ಮತ್ತೊಮ್ಮೆ ಸ್ಪರ್ಧಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಚ್ಚೇಗೌಡ 2013ರಲ್ಲಿ ಪರಾಭವಗೊಂಡಿದ್ದರು. 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿಯೂ ಪರಾಭವಗೊಂಡಿದ್ದರು. 2019ರ ಲೋಕಸಭೆ ಚುನಾವಣೆ ಎದುರು ನೋಡುತ್ತಿದ್ದಾರೆ. ಹೀಗಾಗಿ, ಈ ಬಾರಿ ಪುತ್ರ ಶರತ್ ಕುಮಾರ್ ಅವರನ್ನು ಮೊದಲ ಬಾರಿಗೆ ರಾಜಕೀಯ ಕಣಕ್ಕೆ ಇಳಿಸಿದ್ದಾರೆ.
ವಿದೇಶದಲ್ಲಿ ವ್ಯಾಸಂಗ ಮುಗಿಸಿ ಅಲ್ಲಿಯೇ ಜೀವನ ರೂಪಿಸಿಕೊಂಡಿದ್ದ ಶರತ್ ಕುಮಾರ್ ಇತ್ತೀಚೆಗಷ್ಟೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರನ್ನು ಸೆಳೆಯುವುದಕ್ಕಾಗಿ ಸತತವಾಗಿ ಹಳ್ಳಿ ಹಳ್ಳಿಗೆ ಸುತ್ತಾಡಿ ಶರತ್ ಕುಮಾರ್ ಪ್ರಚಾರ ನಡೆಸುತ್ತಿದ್ದಾರೆ. ಸ್ಥಳೀಯ ಆಡಳಿತಗಳಲ್ಲಿರುವ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಬಚ್ಚೇಗೌಡರು ಶಾಸಕರಾಗಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಶರತ್ ಕುಮಾರ್ ಮತಯಾಚನೆ ಮಾಡುತ್ತಿದ್ದಾರೆ. ಬದಲಾವಣೆಗಾಗಿ ಯುವಕರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. 

ಮಹದೇವಪುರ ಕ್ಷೇತ್ರದಲ್ಲಿ ನೆಲೆಸಿರುವ ಜೆಡಿಎಸ್ ಅಭ್ಯರ್ಥಿ ಆರ್. ಕೃಷ್ಣಮೂರ್ತಿ ಬೆಂಗಳೂರು ನಿವಾಸಿಯಾಗಿರುವುದರಿಂದ ಕ್ಷೇತ್ರಕ್ಕೆ ಹೊಸ ಮುಖವಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಮೂರ್ತಿ, ಇದೇ ಮೊದಲ ಬಾರಿ ಅಖಾಡಕ್ಕಿಳಿದಿದ್ದಾರೆ. ಕಳೆದ ಬಾರಿ ಜೆಡಿಎಸ್‌’ನಿಂದ ಸ್ಪರ್ಧಿಸಿದ್ದ ವಿ. ಶ್ರೀಧರ್‌ಗೆ ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದೆ. ಶ್ರೀಧರ್‌ಗೆ ಟಿಕೆಟ್ ನೀಡದಿರುವ ಅಸಮಾಧಾನವಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ವಿ.ಮಂಜುನಾಥ ಎಂಬುವವರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಬಚ್ಚೇಗೌಡ ಜೆಡಿಎಸ್‌’ನಿಂದ ಬಿಜೆಪಿ ಸೇರ್ಪಡೆಗೊಂಡಾಗ ಕಾರ್ಯಕರ್ತರು ಕೂಡ ಪಕ್ಷಾಂತರವಾಗಿದ್ದಾರೆ. ಆ ಬಳಿಕ ಸ್ಥಳೀಯವಾಗಿ ಜೆಡಿಎಸ್ ಸಂಘಟನೆಯಲ್ಲಿ ವೈಫಲ್ಯ ಅನುಭವಿಸುತ್ತಿದೆ. ಕೃಷ್ಣಮೂರ್ತಿಗೆ ಸಹಕಾರ ನೀಡುವುದು ಅಷ್ಟಕಷ್ಟೇ ಆಗಿದೆ. ಕೃಷ್ಣಮೂರ್ತಿ ಅವರೇ ಹೊಸದಾಗಿ ಕಾರ್ಯಕರ್ತರನ್ನು ಹುಟ್ಟು ಹಾಕಬೇಕಿದೆ.
ಬಿಜೆಪಿ ಕಾಂಗ್ರೆಸ್ ನೇರಾನೇರ ಹಣಾಹಣಿ: ನಾಗರಾಜ್ ಹಾಗೂ ಶರತ್ ಬಚ್ಚೇಗೌಡರಿಗೆ ಹೋಲಿಸಿಕೊಂಡರೆ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪೈಪೋಟಿ ನಡೆಸುವುದು ಸ್ವಲ್ಪ ಕಷ್ಟಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಹಾಲಿ ಶಾಸಕರಾಗಿರುವುದರಿಂದ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಸಾಧಿಸಿದ್ದಾರೆ. ಬಚ್ಚೇಗೌಡರು ಕೂಡ ಮಾಜಿ ಶಾಸಕರಾಗಿರುವ ಕಾರಣ ಇಬ್ಬರಿಗೂ ಸಮಬಲದ ಆಧಾರದಲ್ಲಿ ಕ್ಷೇತ್ರದಲ್ಲಿ ಮತದಾರರಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರಾ ನೇರ ಸ್ಪರ್ಧಿಯಾಗಿದ್ದಾರೆ. 
ಒಕ್ಕಲಿಗ, ಕುರುಬ ಮತಗಳೇ ನಿರ್ಣಾಯಕ: ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕುರುಬ ಸಮುದಾಯಕ್ಕೆ ಸೇರಿದ್ದು, ಬಿಜೆಪಿ ಅಭ್ಯರ್ಥಿ ಶರತ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 45 ಸಾವಿರ ಒಕ್ಕಲಿಗ, 35 ಸಾವಿರ ಕುರುಬ, 34 ಸಾವಿರ ಮುಸ್ಲಿಂ, 27 ಸಾವಿರ ತಿಗಳರು, 10ರಿಂದ 12 ಸಾವಿರ ಗೊಲ್ಲರು, 9 ಸಾವಿರ ಲಿಂಗಾಯತ ಸೇರಿದಂತೆ
ವಿವಿಧ ಸಮುದಾಯಗಳ ಮತಗಳಿವೆ. 
ಪ್ಲಸ್ - ಮೈನಸ್
* ಹೊಸಕೋಟೆ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
* ಐದು ವರ್ಷದ ಅವಧಿಯಲ್ಲಿ ಎಸ್‌’ಸಿಟಿ/ ಟಿಎಸ್‌’ಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರು ಮತ್ತು ಬಸ್ ನಿಲ್ದಾಣಗಳು ನಿರ್ಮಾಣ ಮಾಡಲಾಗಿದೆ. ಇವುಗಳನ್ನೇ ಮುಂದಿಟ್ಟುಕೊಂಡು ಶಾಸಕ ಎಂಟಿಬಿ ನಾಗರಾಜು ಮತಯಾಚನೆಗೆ ಮುಂದಾಗಿದ್ದಾರೆ.
* ಹೊಸಬರಿಗೆ ಅವಕಾಶ ನೀಡಿ ಎಂಬುದು ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ವರದಾನವಾಗ ಬಹುದು. ನಾಗರಾಜು ಹಾಲಿ ಶಾಸಕರಾಗಿರುವುದು ಶರತ್‌’ಗೆ ಹೊಡೆತ ನೀಡಬಹುದು.
ಒಟ್ಟು ಮತದಾರರು
2,10,606
ಪುರುಷ ಮತದಾರರು
1,06,787
ಮಹಿಳಾ ಮತದಾರರು
1,03,204
ಇತರೆ
15

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Naveen Kodase