Asianet Suvarna News Asianet Suvarna News

ದೇವನಹಳ್ಳಿ ದಿವಾನ್ ಯಾರು..?

ಮೀಸಲು ಕ್ಷೇತ್ರವಾದ ಇಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಗೆದ್ದ ಉದಾಹರಣೆಯೇ ಇಲ್ಲ. ಜೆಡಿಎಸ್, ಕಾಂಗ್ರೆಸ್ ಪ್ರಬಲವಾಗಿ ಬೇರೂರಿವೆ. ಬಿಜೆಪಿಗೆ ನೆಲೆಯಿಲ್ಲ.

Vidhana Kadana Devanahalli Consistency

ಸಂಪತ್ ತರೀಕೆರೆ, ಕನ್ನಡಪ್ರಭ

ದೇವನಹಳ್ಳಿ[ಮೇ.09]: ಒಂದು ಕಾಲದಲ್ಲಿ ಇದು ಪಕ್ಕಾ ಕೃಷಿ ಭೂಮಿಯನ್ನು ಹೆಚ್ಚು ಹೊಂದಿದ ಪ್ರದೇಶ. ಬೆಂಗಳೂರು ನಗರಕ್ಕೆ ಅತಿ ಹೆಚ್ಚು ತರಕಾರಿ ಸರಬರಾಜು ಮಾಡುತ್ತಿದ್ದ ಕ್ಷೇತ್ರ. ಆದರೆ, ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿದ್ದೆ ತಡ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ರೂಪಾಂತರಗೊಂಡಿತು. ಕೃಷಿ ಭೂಮಿ ಮಾಯವಾಗಿ ರಿಯಲ್ ಎಸ್ಟೇಟ್ ಅಬ್ಬರ ಹೆಚ್ಚಾಯಿತು. ತುಂಡು ಭೂಮಿಗೂ ಬಂಗಾರದ ಬೆಲೆ ಬಂತು. ಬೆಂಗಳೂರು ಬೆಳೆಯುತ್ತಾ ಬಂದು ದೇವನಹಳ್ಳಿಯಲ್ಲಿ ಸಂಗಮಗೊಂಡಿದೆ.
ದೇವನಹಳ್ಳಿಯಲ್ಲಿ ಆಗಿರುವ ಈ ಅಮೂಲಾಗ್ರ ಬದಲಾವಣೆ ಸ್ಥಳೀಯ ರಾಜಕಾರಣದ ಮೇಲೂ ಪ್ರಭಾವ ಬೀರಿದೆ. ಮೀಸಲು ಕ್ಷೇತ್ರವಾದ ಇಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಗೆದ್ದ ಉದಾಹರಣೆಯೇ ಇಲ್ಲ. ಜೆಡಿಎಸ್, ಕಾಂಗ್ರೆಸ್ ಪ್ರಬಲವಾಗಿ ಬೇರೂರಿವೆ. ಬಿಜೆಪಿಗೆ ನೆಲೆಯಿಲ್ಲ.
ರಿಯಲ್ ಎಸ್ಟೇಟ್ ಹಣ ಇಲ್ಲಿ ರಾಜಕೀಯ ಪೈಪೋಟಿಯನ್ನು ಮತ್ತೊಂದು ಹಂತಕ್ಕೆ ಒಯ್ದಿದ್ದು, ಪ್ರಚಾರದ ಭರಾಟೆ ಮಿತಿ ಮೀರಿದೆ. ಕಳೆದ ಬಾರಿ ಜೆಡಿಎಸ್‌’ನಿಂದ ಗೆದ್ದಿದ್ದ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಈ ಬಾರಿ ಟಿಕೆಟ್ ವಂಚಿತ. ಜೆಡಿಎಸ್ ಬಿ ಫಾರಂ ನೀಡಿತ್ತಾದರೂ, ಕೊನೆ ಕ್ಷಣದಲ್ಲಿ ಕೈಕೊಟ್ಟು ನಿಸರ್ಗ ನಾರಾಯಣಸ್ವಾಮಿಗೆ ‘ಸಿ’ ಫಾರಂ ನೀಡಿದೆ. ಕಾಂಗ್ರೆಸ್‌’ನಿಂದ ಕಣದಲ್ಲಿರುವ ವೆಂಕಟಸ್ವಾಮಿ 2008ರಲ್ಲಿ ಇದೇ ಕ್ಷೇತ್ರದಿಂದ ಶಾಸಕರಾಗಿದ್ದವರು. ನಂತರ 2013ರಲ್ಲಿ ವೆಂಕಟಸ್ವಾಮಿ ಅವರು ಜೆಡಿಎಸ್‌’ನ ಪಿಳ್ಳಮುನಿಶ್ಯಾಮಪ್ಪ ಅವರ ವಿರುದ್ಧ ಸೋಲನ್ನು ಅನುಭವಿಸಿದರು. ಪಿಳ್ಳಮುನಿಶ್ಯಾಮಪ್ಪ ಶಾಸಕರಾದ ನಂತರ ಜೆಡಿಎಸ್ ಪಾಲಿಗೆ ಈ ಭಾಗದ ಪ್ರಭಾವಿ ನಾಯಕರಾಗಿದ್ದ ಸಿ.ನಾರಾಯಣಸ್ವಾಮಿ ಪಕ್ಷ ತೊರೆದರು. ಇದರಿಂದಾಗಿ ಪಕ್ಷ ಸಂಘಟನೆ ಹೊಣೆ ಪಿಳ್ಳಶ್ಯಾಮಪ್ಪ ಮೇಲೆ ಬಿತ್ತು. ಇದರ ಪರಿಣಾಮವೋ ಏನೋ ಪಕ್ಷ ಸಂಘಟನೆಯೂ ಆಗಲಿಲ್ಲ. ಕ್ಷೇತ್ರದ ಅಭಿವೃದ್ಧಿಯೂ ಸಾಗಲಿಲ್ಲ. ಇದು ಈ ಬಾರಿ ಜೆಡಿಎಸ್ ಟಿಕೆಟ್ ಕೈತಪ್ಪಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. 
ಇನ್ನು ಜೆಡಿಎಸ್ ಟಿಕೆಟ್ ಪಡೆದಿರುವ ನಿಸರ್ಗ ನಾರಾಯಣಸ್ವಾಮಿ ಸ್ಥಳೀಯರಲ್ಲ. ಕೇವಲ ನಾಲ್ಕು ವರ್ಷದ ಹಿಂದೆ ದೇವನಹಳ್ಳಿ ರಾಜಕೀಯದಲ್ಲಿ ಕಾಣಿಸಿಕೊಂಡವರು. ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಪರಿಚಿತರಾದವರು. ಇದನ್ನೇ ಬಂಡವಾಳ ಮಾಡಿಕೊಂಡು ನಿಸರ್ಗ ನಾರಾಯಣಸ್ವಾಮಿ
ಜೆಡಿಎಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಕೆಟ್ ವಂಚಿತ ಪಿಳ್ಳಮುನಿಶ್ಯಾಮಪ್ಪ ಮತ್ತು ಅವಬೆಂಬಲಿಗರು ಜೆಡಿಎಸ್ ವರಿಷ್ಠರ ಈ ನಡೆಯಿಂದ ಮುನಿಸಿಕೊಂಡಿದ್ದಾರೆ. ಆದರೆ, ಇದು ಬಹಿರಂಗಕ್ಕೆ ಬಂದಿಲ್ಲ. ಈ ಒಳಬೇಗುದಿ ಸಹಜವಾಗಿಯೇ ಕಾಂಗ್ರೆಸ್‌’ನ ವೆಂಕಟಸ್ವಾಮಿಗೆ ನೆರವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಂತ ಕಾಂಗ್ರೆಸ್‌’ನಲ್ಲೂ ಎಲ್ಲವೂ ಸರಿಯಿದೆ
ಎಂದೇನಲ್ಲ. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಚಿನ್ನಪ್ಪ ಟಿಕೆಟ್ ಕೇಳಿದ್ದರು. ದೊರೆಯದಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲ ಪಡೆದಿದ್ದ ಕೆಪಿಸಿಸಿ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಟಿಕೆಟ್‌’ಗಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಸಂಸದ ವೀರಪ್ಪ ಮೊಯ್ಲಿ ಕೃಪಾಕಟಾಕ್ಷದ ಪರಿಣಾಮವಾಗಿ ವೆಂಕಟಸ್ವಾಮಿಯೇ ಟಿಕೆಟ್ ಗಿಟ್ಟಿಸಿದರು. ಇದರಿಂದ ಬೇಸತ್ತ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ, ಬಿಜೆಪಿಯ ಟಿಕೆಟ್ ಸಹ ಅವರಿಗೆ ದೊರಕಿಲ್ಲ. ಬದಲಾಗಿ ಸ್ಥಳೀಯರಾದ ನಾಗೇಶ್ ಅವರಿಗೆ ಟಿಕೆಟ್ ನೀಡಿದೆ. ಛಲವಾದಿ ನಾರಾಯಣಸ್ವಾಮಿ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಹಿಡಿತ ಹೊಂದಿದ್ದಾರೆ. ಈ ಶಕ್ತಿ ದೊರೆತರೆ ಬಿಜೆಪಿ ಈ ಬಾರಿ ತುಸು ಚೈತನ್ಯ ತುಂಬಿಕೊಳ್ಳಬಹುದು. ಆದರೆ, ಬಿಜೆಪಿಗೆ ಇಲ್ಲಿ ಸ್ವಂತ ಬಲವಿಲ್ಲ. ಛಲವಾದಿ ನಾರಾಯಸ್ವಾಮಿ ಆಗಮನದಿಂದ ಪೈಪೋಟಿ ನೀಡಬಹುದು ಎನ್ನಲಾಗುತ್ತಿದೆ. ಆದರೆ, ನೇರ ಹಣಾಹಣಿಯಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರು ನಿರ್ಣಾಯಕರಾಗಿದ್ದರೆ, ಹಿಂದುಳಿದ ಮತಗಳು ಗಣನೀಯವಾಗಿವೆ. ಕ್ಷೇತ್ರದ ಒಕ್ಕಲಿಗರು ಜೆಡಿಎಸ್ ಪರ ನಿಂತಿದ್ದಾರೆ. ಪರಿಶಿಷ್ಟ ಮತಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಂಚಿಹೋಗುವ ಸಾಧ್ಯತೆಯಿದೆ. ಪರಿಶಿಷ್ಟರಲ್ಲಿ ಒಂದು ವರ್ಗವಾದ ಛಲವಾದಿ ಫ್ಯಾಕ್ಟರ್ ಕೆಲಸ ಮಾಡಿದರೆ ಅದರಿಂದ ಕಾಂಗ್ರೆಸ್‌’ಗೆ ನಷ್ಟವಾಗಬಹುದು. ಜೆಡಿಎಸ್‌’ಗೆ ಈ ಲಾಭವಿದ್ದರೂ, ಆ ಪಕ್ಷಕ್ಕೆ ಒಳ ಏಟು ದೊಡ್ಡ ಮಟ್ಟದಲ್ಲಿ ಬೀಳುವ ಸಾಧ್ಯತೆಯಿದೆ. 
ಪ್ಲಸ್ - ಮೈನಸ್ 
* ಜೆಡಿಎಸ್‌ನಲ್ಲಿ ಬಂಡಾಯದ ಬಿಸಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನೆರವಾಗಬಹುದು.
* ಪಕ್ಷ ನಿಷ್ಠರನ್ನು ಕಡೆಗಣಿಸಿ ಹೊಸಬರಿಗೆ ಟಿಕೆಟ್ ನೀಡಿದ್ದು, ಜೆಡಿಎಸ್‌’ಗೆ ಮುಳುವಾಗಬಹುದು.
* ಅಸಮಾಧಾನ ಮರೆತು ಒಂದಾದರೆ ಮತ್ತೊಮ್ಮೆ ಜೆಡಿಎಸ್ ವಿಜಯಮಾಲೆ ಹಾಕಿಕೊಳ್ಳಬಹುದು.
* ಕಳೆದ ಬಾರಿ ಸೋತಿದ್ದ ಕಾಂಗ್ರೆಸ್‌’ನ ವೆಂಕಟಸ್ವಾಮಿ ಪರ ಅನುಕಂಪ ಗೆಲುವಿಗೆ ಸಹಕರಿಸಬಹುದು.
* ಜೆಡಿಎಸ್‌’ನ ಒಳಬೇಗುದಿ ಬಹಿರಂಗಗೊಳ್ಳದಿದ್ದರೂ, ಸಹಜವಾಗಿಯೇ ಇದು ಕಾಂಗ್ರೆಸ್’ನ ವೆಂಕಟಸ್ವಾಮಿಗೆ ನೆರವಾಗುವ ಸಾಧ್ಯತೆಯಿದೆ.
ಒಟ್ಟು ಮತದಾರರು
2,00,263
ಪುರುಷ ಮತದಾರರು
1,00,803
ಮಹಿಳಾ ಮತದಾರರು
99,424
ಇತರೆ
18

Follow Us:
Download App:
  • android
  • ios