Asianet Suvarna News Asianet Suvarna News

ಉತ್ತರ ಕನ್ನಡದಲ್ಲಿ ಹಿಂದುತ್ವ ಅಲೆ ಜೊತೆಗೆ ಕಾಂಗ್ರೆಸ್ ಸೆಣಸಾಟ

ಉತ್ತರ ಕನ್ನಡದ ಚುರುಗುಟ್ಟುವ ಬಿಸಿಲಿನಲ್ಲಿ ರಾಜಕೀಯದ ಬೇಗೆ. ಎಲ್ಲದಕ್ಕೂ ರಾಜಕೀಯದ ಲೇಪನ. ಬಹುತೇಕ ಯುವಕರು ಒಂದೊಂದು ಪಕ್ಷದ ಬಾವುಟ ಹಿಡಿದು ಊರೂರು ಸುತ್ತುತ್ತಿದ್ದಾರೆ. ಮನೆಗಳೆಲ್ಲ
ಖಾಲಿ ಖಾಲಿ. ಪ್ರಚಾರದ ಭರಾಟೆ ತಾರಕಕ್ಕೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ. ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಕೂಡ ಪೈಪೋಟಿಯಲ್ಲಿದೆ. ಮೋದಿ ಅಲೆಯ
ಜತೆ ಕರಾವಳಿಯಲ್ಲಿ ಗಾಢವಾಗಿ ಹಿಂದುತ್ವದ ಗಾಳಿಯೂ ಬೀಸುತ್ತಿದೆ.

Uttar Kannada Election Fight

ಉತ್ತರ ಕನ್ನಡ : ಚುರುಗುಟ್ಟುವ ಬಿಸಿಲಿನಲ್ಲಿ ರಾಜಕೀಯದ ಬೇಗೆ. ಎಲ್ಲದಕ್ಕೂ ರಾಜಕೀಯದ ಲೇಪನ. ಬಹುತೇಕ ಯುವಕರು ಒಂದೊಂದು ಪಕ್ಷದ ಬಾವುಟ ಹಿಡಿದು ಊರೂರು ಸುತ್ತುತ್ತಿದ್ದಾರೆ. ಮನೆಗಳೆಲ್ಲ
ಖಾಲಿ ಖಾಲಿ. ಪ್ರಚಾರದ ಭರಾಟೆ ತಾರಕಕ್ಕೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ. ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಕೂಡ ಪೈಪೋಟಿಯಲ್ಲಿದೆ. ಮೋದಿ ಅಲೆಯ
ಜತೆ ಕರಾವಳಿಯಲ್ಲಿ ಗಾಢವಾಗಿ ಹಿಂದುತ್ವದ ಗಾಳಿಯೂ ಬೀಸುತ್ತಿದೆ.

ಕಾಂಗ್ರೆಸ್ - ಬಿಜೆಪಿ - ಜೆಡಿಎಸ್ ಸಮರ
ಕಾರವಾರ : ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರಿದ ಸತೀಶ್ ಸೈಲ್, ಬಿಜೆಪಿಯಿಂದ ಜೆಡಿಎಸ್‌ಗೆ ಹಾರಿದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹಾಗೂ ಬಿಜೆಪಿಯ ರೂಪಾಲಿ ನಾಯ್ಕ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಇವರ ನಡುವೆ ಎನ್‌ಸಿಪಿಯಿಂದ ಮಾಧವ ನಾಯಕ ಕಣಕ್ಕಿಳಿದಿರುವುದು ರೋಚಕ ಫಲಿತಾಂಶಕ್ಕೆ ಕಾರಣವಾಗಲಿದೆ. ಏಕೆಂದರೆ ಮೂರು ಪ್ರಬಲ ಪಕ್ಷಗಳ ಅಭ್ಯರ್ಥಿಗಳ ಗೆಲವು- ಸೋಲು ಮಾಧವ ನಾಯಕ ಪಡೆಯುವ ಮತಗಳ ಪ್ರಮಾಣದ ಮೇಲೆ ನಿರ್ಧಾರವಾಗುವ ಸಾಧ್ಯತೆಯೂ ಇದೆ. ಕಾರವಾರದಲ್ಲಿ ಪಕ್ಷಾಧಾರಿತ ರಾಜಕಾರಣ ಇಲ್ಲವೇ ಇಲ್ಲ. ಜಾತಿ ಆಧಾರಿತ ರಾಜಕೀಯವೂ ಇಲ್ಲ. ಇಲ್ಲಿ ಏನಿದ್ದರೂ ವ್ಯಕ್ತಿಯೇ ಮುಖ್ಯ. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಸತೀಶ್ ಸೈಲ್ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದರು. 2008 ರಲ್ಲಿ ಆನಂದ್ ಅಸ್ನೋಟಿಕರ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಬಿಜೆಪಿ ಸೇರಿ ಗೆದ್ದಿದ್ದರು. ಈ ಘಟಾನುಘಟಿಗಳ ಮಧ್ಯೆ ಬಿಜೆಪಿಯ ರೂಪಾಲಿ ನಾಯ್ಕ ಕೂಡ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.


ಶೆಟ್ಟಿ ಕುಟುಂಬ ಸದಸ್ಯರ ಜಟ್ಟಿ ಕಾಳಗ
ಕುಮಟಾ : ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹೋರಾಟ ಎನ್ನುವುದಕ್ಕಿಂತ ಶೆಟ್ಟಿ ಅವರ ಕುಟುಂಬದ ನಡುವೆ ಕಾಳಗ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಕುಟುಂಬದಲ್ಲೇ ಗೆಲುವಿಗಾಗಿ ಐದನೇ ಬಾರಿ ಕದನ ನಡೆಯುತ್ತಿದೆ. ಯಾರೇ ಗೆದ್ದರೂ ಅಧಿಕಾರ ಮಾತ್ರ ಶೆಟ್ಟಿ ಅವರ ಕುಟುಂಬಕ್ಕೆ ಎನ್ನುವುದು ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ. ಪ್ರತಿ ಚುನಾವಣೆಯೂ ತೀವ್ರ ಪೈಪೋಟಿಯಲ್ಲೇ ಅಂತ್ಯವಾಗುವುದು ವಿಶೇಷ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇತ್ತು. ದಿನಕರ ಶೆಟ್ಟಿ ಅವರಿಗೆ ಟಿಕೆಟ್ ದೊರಕುತ್ತಿದ್ದಂತೆ ಬಿಜೆಪಿಯ ಯಶೋಧರ ನಾಯ್ಕ ಹಾಗೂ ಸೂರಜ್ ನಾಯ್ಕ ಬಂಡಾಯ ಎದ್ದಿದ್ದಾರೆ. ಇತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣ ಗೌಡ ಸಹ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಪ್ರದೀಪ ನಾಯಕ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಗೆಲುವಿಗಾಗಿ ಹೋರಾಟ ನಡೆಯುವುದು ಮಾತ್ರ ದಿನಕರ ಶೆಟ್ಟಿ ಹಾಗೂ ಶಾಸಕಿ ಶಾರದಾ ಶೆಟ್ಟಿ ಅವರ ನಡುವೆಯೇ.


ಮುಸ್ಲಿಮರ ಕ್ರೂಢೀಕರಣ : ರೋಚಕ ಸ್ಪರ್ಧೆ

ಭಟ್ಕಳ : ಕೋಮುಗಲಭೆ, ಭಯೋತ್ಪಾದನೆಯ ನಂಟು, ಹಿಂದುತ್ವ ಇಂಥ ಸಂಗತಿಗಳೇ ಇಲ್ಲಿ ಚುನಾವಣೆಯ ಪ್ರಮುಖ ಸರಕು. ಹಾಲಿ ಶಾಸಕ ಕಾಂಗ್ರೆಸ್‌ನ ಮಂಕಾಳು ವೈದ್ಯ ಅವರಿಗೆ ಬಿಜೆಪಿಯ ಯುವ ಅಭ್ಯರ್ಥಿ ಸುನೀಲ್ ನಾಯ್ಕ ಸರಿಸಾಟಿಯಾಗಿ ನಿಂತಿದ್ದಾರೆ. 2013 ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಇನಾಯತ್ ಉಲ್ಲಾ ಶಾಬಂದ್ರಿ ಜೆಡಿಎಸ್ ನಿಂದ ಈ ಬಾರಿ ಸ್ಪರ್ಧಿಸಿಲ್ಲ. ಎಸ್.ಎಂ. ಅಮ್ಜದ್ ಕಣಕ್ಕೆ ಇಳಿದಿದ್ದಾರೆ. ಏನಿದ್ದರೂ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಹೋರಾಟ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಇನಾಯತ್ ಅವರನ್ನು ಬೆಂಬಲಿಸಿತ್ತು. ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಮನಗಂಡಿರುವ ಮುಸ್ಲಿಂ ಮತದಾರರು ಮಂಕಾಳು ವೈದ್ಯ ಅವರನ್ನು ಬೆಂಬಲಿಸಲಿದ್ದಾರೆ. ಬಹುಸಂಖ್ಯಾತರಾದ ಈಡಿಗರು (ನಾಮಧಾರಿ) ಬಿಜೆಪಿಯತ್ತ ವಾಲುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಕೂಡ ನಾಮಧಾರಿ ಆಗಿರುವುದು ವಿಶೇಷ. ಹೀಗಾಗಿ ರೋಚಕ ಸ್ಪರ್ಧೆ ನಡೆಯುವ ಸಾಧ್ಯತೆ ದಟ್ಟವಾಗಿದೆ. 


ಶಿರಸಿ : ಮಾಜಿ ಸಚಿವ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ೬ನೇ ಬಾರಿ ಕಣಕ್ಕಿಳಿದಿದ್ದಾರೆ. ಸೋಲು ಕಾಣದ ಕಾಗೇರಿಗೆ ಈ ಬಾರಿ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಹಾಗೂ ಜೆಡಿಎಸ್‌ನ ಶಶಿಭೂಷಣ ಹೆಗಡೆ ಪ್ರಬಲ ಸ್ಪರ್ಧೆ ಒಡ್ಡಿದ್ದು, ತ್ರಿಕೋನ ಸ್ಪರ್ಧೆಗೆ ಶಿರಸಿ ಅಣಿಯಾಗಿದೆ. ಕಾಂಗ್ರೆಸ್‌ನಲ್ಲಿ ನಿವೇದಿತ್ ಆಳ್ವ ಹಾಗೂ ಭೀಮಣ್ಣ ನಾಯ್ಕ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಭೀಮಣ್ಣ ನಾಯ್ಕ ಟಿಕೆಟ್ ಪಡೆದಿದ್ದಾರೆ. ಕ್ಷೇತ್ರದಲ್ಲಿ ಹವ್ಯಕ ಬ್ರಾಹ್ಮಣರು ಹಾಗೂ ನಾಮಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬ್ರಾಹ್ಮಣರ ಮತಗಳು ಕಾಗೇರಿ ಮತ್ತು ಶಶಿಭೂಷಣ ಹೆಗಡೆ ಅವರಲ್ಲಿ ಹಂಚಿ ಹೋದರೆ ನಾಮಧಾರಿ ಸಮಾಜದ ಮತಗಳಿಂದ ಕಾಂಗ್ರೆಸ್ ಗೆಲ್ಲಬಹುದು ಎನ್ನುವುದು ಒಂದು ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರಕ್ಕಿಂತ ನಿವೇದಿತ್ ಆಳ್ವ ಬಣ ತೆರೆಯ ಮರೆಯಲ್ಲಿ ಯಾರನ್ನು ಬೆಂಬಲಿಸಲಿದೆ ಎನ್ನುವುದು ಗೆಲುವಿನಲ್ಲಿ ನಿರ್ಣಾಯಕವಾಗಲಿದೆ. ಶಶಿಭೂಷಣ ಹೆಗಡೆ ಕಳೆದ ಬಾರಿಗಿಂತ ಈ ಬಾರಿ ಚುರುಕಾಗಿ ಪಕ್ಷವನ್ನು ಸಂಘಟಿಸಿದ್ದಾರೆ. ಹೋರಾಟ ರೋಚಕವಾಗುವ ಸಾಧ್ಯತೆ ಇದೆ.


ಹಳಿಯಾಳ : ರಾಜ್ಯದ ಪ್ರಭಾವಿ ರಾಜಕಾರಣಿ ಆರ್.ವಿ. ದೇಶಪಾಂಡೆ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ಭಾರಿ ಮಹತ್ವ ಪಡೆದುಕೊಂಡಿದೆ. ಆರು ಬಾರಿ ಗೆದ್ದು, ಒಮ್ಮೆ ಸೋತಿರುವ ದೇಶಪಾಂಡೆ ಇದೀಗ 8ನೇ ಬಾರಿಗೆ ಕಣಕ್ಕಿಳಿದಿದ್ದಾರೆ. ೨೦೦೮ರ ಚುನಾವಣೆಯಲ್ಲಿ ಆರ್.ವಿ. ದೇಶಪಾಂಡೆ ಅವರಿಗೆ ಸೋಲಿನ ರುಚಿ ಉಣಿಸಿದ ಸುನೀಲ್ ಹೆಗಡೆ ಆಗ ಜೆಡಿಎಸ್ ಪಕ್ಷದಲ್ಲಿದ್ದರು. ಈಗ ಅವರು ಬಿಜೆಪಿ ಅಭ್ಯರ್ಥಿ. ಈ ಬಾರಿ ದೇಶಪಾಂಡೆ ಹಿಂದಿಗಿಂತ ಪ್ರಬಲರಾಗಿದ್ದಾರೆ. ಒಮ್ಮೆ ಸೋಲನ್ನು ಕಂಡಿದ್ದರಿಂದ ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರಗತಿಗೆ ದುಡಿದಿದ್ದಾರೆ. ಜೆಡಿಎಸ್‌ನಿಂದ ಕೆ.ಆರ್. ರಮೇಶ್ ಕಣಕ್ಕಿಳಿದಿದ್ದಾರೆ. ಆದರೆ, ನಿಜವಾದ ಹೋರಾಟ ಇರುವುದು ದೇಶಪಾಂಡೆ ಹಾಗೂ ಸುನೀಲ್ ಹೆಗಡೆ ಇಬ್ಬರ ನಡುವೆ ಮಾತ್ರ. ಹಳಿಯಾಳ ಕ್ಷೇತ್ರದಲ್ಲಿ ಮರಾಠರು ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 45 ಸಾವಿರದಷ್ಟಿದ್ದಾರೆ. ಮರಾಠಾ ಸಮುದಾಯಕ್ಕೆ ಸೇರಿರುವ ಮೇಲ್ಮನೆ ಸದಸ್ಯ ಎಸ್.ಎಲ್.ಘೋಟ್ನೇಕರ್ ಅವರು ದೇಶಪಾಂಡೆ ಬೆಂಬಲಕ್ಕೆ ನಿಂತಿದ್ದಾರೆ. ಇದು ದೇಶಪಾಂಡೆಗೆ ಹೆಚ್ಚಿನ ಬಲ ತಂದುಕೊಡಲಿದೆ.


ಯಲ್ಲಾಪುರ : ಹಾಲಿ ಶಾಸಕ ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ್ ಹಾಗೂ ಬಿಜೆಪಿಯ ವಿ.ಎಸ್. ಪಾಟೀಲ್ ಅವರ ನಡುವೆ ಮೂರನೇ ಬಾರಿ ಕದನಕ್ಕೆ ವೇದಿಕೆ ಸಜ್ಜಾಗಿದೆ. ಜೆಡಿಎಸ್‌ನಿಂದ ರವೀಂದ್ರನಾಥ ನಾಯ್ಕ ಕಣಕ್ಕಿಳಿದಿದ್ದು ಇವರು ಎಷ್ಟರ ಮಟ್ಟಿಗೆ ಪೈಪೋಟಿಯನ್ನು ನೀಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಹೆಬ್ಬಾರ್ ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷವನ್ನೂ ಸಂಘಟನೆ ಮಾಡಿರುವುದರಿಂದ ಅವರನ್ನು ಎದುರಿಸುವುದು ವಿ.ಎಸ್. ಪಾಟೀಲ್ ಅವರಿಗೆ ಸುಲಭದ ಮಾತಲ್ಲ. ಟಿಕೆಟ್ ಹಂಚಿಕೆ ಕುರಿತು ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ ವಿ.ಎಸ್.ಪಾಟೀಲ ಅವರಿಗೆ ತಲೆನೋವು ತಂದಿರುವುದು ಸುಳ್ಳೇನಲ್ಲ. ಕ್ಷೇತ್ರದಲ್ಲಿ ಬ್ರಾಹ್ಮಣರ ಮತಗಳು (ಸುಮಾರು ೨೭ ಸಾವಿರ) ಹೆಚ್ಚಿವೆ. ಶಿವರಾಮ ಹೆಬ್ಬಾರ್ ಬ್ರಾಹ್ಮಣರಾಗಿರುವುದರಿಂದ ಸ್ವಜಾತೀಯ ಮತಗಳು ಹೆಚ್ಚಿನ ಪ್ರಮಾಣದಲ್ಲಿ ದಕ್ಕಲಿವೆ. ಜೆಡಿಎಸ್‌ನ ರವೀಂದ್ರನಾಥ ಪಕ್ಕದ ಶಿರಸಿ ಕ್ಷೇತ್ರದಿಂದ ಈ ಕ್ಷೇತ್ರಕ್ಕೆ ಬಂದಿದ್ದಾರೆ.
ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹೋರಾಟದ ಸಂಭವವಿದೆ.

Follow Us:
Download App:
  • android
  • ios