ರಾಜ್ಯದ 2ನೇ ಅತಿ ದೊಡ್ಡ ಜಿಲ್ಲೆಯಲ್ಲಿ ಮೂರು ಪಕ್ಷಗಳ ಸಮಬಲದ ಹೋರಾಟ

Tumkur Constituency Election
Highlights

 ‘ಬೆಂಗಳೂರಿನ ಭವಿಷ್ಯದ ಉಪನಗರಿ’ ಎಂದೇ ಬಿಂಬಿತವಾಗಿರುವ ತುಮಕೂರು ರಾಜ್ಯದ ಗಮನಸೆಳೆದಿದೆ. ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾದ ತುಮಕೂರಿನಲ್ಲಿ 2 ಮೀಸಲು ಕ್ಷೇತ್ರ ಸೇರಿ ಬರೋಬ್ಬರಿ 11 ವಿಧಾನಸಭಾ ಕ್ಷೇತ್ರಗಳಿವೆ. ರಾಜಕೀಯಕ್ಕೆ ಯಾವತ್ತೂ ಜಿದ್ದಾಜಿದ್ದಿನ ಕಣವಾಗಿರುವ ಇಲ್ಲಿ ಎರಡು ‘ಸ್ಟಾರ್ ಕ್ಷೇತ್ರ’ಗಳೂ ಇವೆ.
 

ಸ್ಮಾರ್ಟ್ ಸಿಟಿ, ಕೈಗಾರಿಕಾ ಕಾರಿಡಾರ್, ಎಚ್‌ಎಎಲ್, ಇಸ್ರೋ ಹೀಗೆ ಕೇಂದ್ರ ಸರ್ಕಾರದ ಸಾಲು ಸಾಲು ಯೋಜನೆಗಳಿಂದಾಗಿ ‘ಬೆಂಗಳೂರಿನ ಭವಿಷ್ಯದ ಉಪನಗರಿ’ ಎಂದೇ ಬಿಂಬಿತವಾಗಿರುವ ತುಮಕೂರು ರಾಜ್ಯದ ಗಮನಸೆಳೆದಿದೆ. ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾದ ತುಮಕೂರಿನಲ್ಲಿ 2 ಮೀಸಲು ಕ್ಷೇತ್ರ ಸೇರಿ ಬರೋಬ್ಬರಿ 11 ವಿಧಾನಸಭಾ ಕ್ಷೇತ್ರಗಳಿವೆ. ರಾಜಕೀಯಕ್ಕೆ ಯಾವತ್ತೂ ಜಿದ್ದಾಜಿದ್ದಿನ ಕಣವಾಗಿರುವ ಇಲ್ಲಿ ಎರಡು ‘ಸ್ಟಾರ್ ಕ್ಷೇತ್ರ’ಗಳೂ ಇವೆ.


ತುಮಕೂರು ನಗರ : ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಡಾ. ರಫೀಕ್ ಅಹಮದ್ ಸ್ಪರ್ಧಿಸುತ್ತಿದ್ದರೆ, ಜೆಡಿಎಸ್‌ನಿಂದ ಗೋವಿಂದರಾಜು ಹಾಗೂ ಬಿಜೆಪಿಯಿಂದ ಜ್ಯೋತಿ ಗಣೇಶ್ ಕಣದಲ್ಲಿದ್ದಾರೆ. ಶೇ.25ರಷ್ಟು ಅಂದರೆ 60 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ತರಬಹುದು ಎನ್ನಲಾಗಿದೆ. ಇನ್ನು ಮೇಲ್ವರ್ಗ ಹಾಗೂ ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿರುವುದರಿಂದ ಹಿಂದುಳಿದ ವರ್ಗಕ್ಕೆ ಸೇರಿರುವ ಜೆಡಿಎಸ್‌ನ ಗೋವಿಂದರಾಜು ಕೂಡ ಪೈಪೋಟಿಯಲ್ಲಿ ದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಜ್ಯೋತಿ ಗಣೇಶ್ ಈ ಬಾರಿ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಕೆಜೆಪಿ-ಬಿಜೆಪಿಯ ಒಡಕಿನ ಲಾಭ ಕಾಂಗ್ರೆಸ್‌ಗೆ ಆಗಿತ್ತು. ಈಗ ಕೆಜೆಪಿ- ಬಿಜೆಪಿ ಒಂದಾಗಿರುವುದರಿಂದ ಲಾಭವಾಗುತ್ತದೆ ಎಂಬ ನಿರೀಕ್ಷೆ ಬಿಜೆಪಿಯದ್ದಾಗಿದ್ದೆ. ಕಳೆದ ಚುನಾವಣೆಯಲ್ಲಿ ಗಣನೀಯ ಮತ ಪಡೆದು ಕೆಲವೇ ಸಾವಿರ ಮತಗಳಿಂದ ಹಿಂದೆ ಬಿದ್ದಿದ್ದ ಗೋವಿಂದರಾಜು ಈ ಬಾರಿ ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದಾರೆ. 


ತುಮಕೂರು ಗ್ರಾಮಾಂತರ

ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿರುವ ಬಿಜೆಪಿ ಅಭ್ಯರ್ಥಿ ಬಿ. ಸುರೇಶ ಗೌಡರಿಗೆ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಅವರಿಂದ ತೀವ್ರ ಪೈಪೋಟಿ ಎದುರಾಗಿದೆ. ಕಳೆದ ಬಾರಿ ಕೇವಲ 1500  ಮತಗಳಿಂದ ಬಿ. ಸುರೇಶ್‌ಗೌಡ ಗೆಲುವು ಸಾಧಿಸಿದ್ದರು. ಅವರಿಗೆ ಈ ಬಾರಿ ಅಭಿವೃದ್ಧಿಯೇ ಶ್ರೀರಕ್ಷೆ. ಗೌರಿಶಂಕರ್ ಅವರನ್ನು 2 ವರ್ಷದ ಹಿಂದೆಯೇ ಅಭ್ಯರ್ಥಿಯನ್ನಾಗಿ ಜೆಡಿಎಸ್ ಘೋಷಿಸಿದೆ. ಆಗಿನಿಂದಲೂ ಅವರು ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇಲ್ಲ. ಆ ಪಕ್ಷದಿಂದ ಸ್ಪರ್ಧಿಸುತ್ತಿರುವ ರಾಯಸಂದ್ರ ರವಿಕುಮಾರ್ ಕೆಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ವರು. ಲಿಂಗಾಯತ ಸಮುದಾಯದ ರವಿಕುಮಾರ್ ಆ ವರ್ಗದ ಮತಗಳನ್ನು ವಿಭಜಿಸುವುದರಿಂದ ಸುರೇಶಗೌಡರನ್ನು ಕಟ್ಟಿ ಹಾಕಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು ಎಂದು ಬಿಂಬಿಸಲಾಗುತ್ತಿದೆ. ಹೀಗಾಗಿ ಮುಸ್ಲಿಂ ಮತದಾರರು ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜೆಡಿಎಸ್‌ಗೆ ಇದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಕಾಳಗ ನಡೆದಿದೆ.

ಕುಣಿಗಲ್
ತ್ರಿಕೋನ ಸ್ಪರ್ಧೆ ಇದೆ. ಭರ್ತಿ 80 ಸಾವಿರ ಒಕ್ಕಲಿಗ ಮತದಾರರು ಇದ್ದು, ಮೂರೂ ಪಕ್ಷಗಳ ಮುಖಂಡರು ಅದೇ ಸಮುದಾಯದವರು. ಹಾಲಿ ಶಾಸಕ ಜೆಡಿಎಸ್‌ನ ಡಿ. ನಾಗರಾಜಯ್ಯ ಈಗ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಗಳಿಂದ ಪ್ರಬಲ ಸ್ಪರ್ಧೆ ಎದುರಿಸಬೇಕಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ಸೇರ್ಪಡೆಯಾಗಿರುವುದರಿಂದ ಡಿ.ಕೆ. ಶಿವಕುಮಾರ್ ಬ್ರದರ್ಸ್ ಎಂಟ್ರಿ ಯಾಗಿದೆ. ಅಲ್ಲದೇ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ರಂಗನಾಥ್ ಅವರು ಡಿ.ಕೆ. ಶಿವಕುಮಾರ್ ಸಂಬಂಧಿಕರು. ಕ್ಷೇತ್ರಕ್ಕೆ ರಂಗನಾಥ್ ಹೊಸಬರು. ಆದರೆ ಡಿಕೆಶಿ ಬ್ರದರ್ಸ್ ತಾವೇ ಕುಣಿಗಲ್ ನಲ್ಲಿ ಸ್ಪರ್ಧಿಸಿರುವುದು ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಕೃಷ್ಣಕುಮಾರ್ ಅಕ್ಷರಶಃ ಸೋಲಿನ ಅನುಕಂಪದ ಮತಗಳನ್ನೇ ನಂಬಿದ್ದಾರೆ. ಹಿಂದೆ ಪರಿವರ್ತನಾ ರ‌್ಯಾಲಿಯಲ್ಲಿ ಕೃಷ್ಣಕುಮಾರ್ ಅವರ ಪತ್ನಿ ಕಣ್ಣೀರಿಟ್ಟಿದ್ದು ಕ್ಷೇತ್ರದ ಜನರನ್ನು ಕರಗಿಸಿದೆ. ಆದರೆ ಜೆಡಿಎ ಸ್ ಈಗಲೂ ಬಲಾಢ್ಯವಾಗಿದೆ. ಅಲ್ಲದೇ ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನು ಮಂತ್ರಿಯಾಗುತ್ತೇನೆ ಎಂದು ಡಿ.ನಾಗರಾಜಯ್ಯ ಪ್ರಚಾರ ನಡೆಸುತ್ತಿದ್ದಾರೆ.

ಕೊರಟಗೆರೆ
ಕೆಪಿಸಿಸಿ ಸಾರಥಿ ಡಾ. ಜಿ. ಪರಮೇಶ್ವರ್ ಪ್ರತಿನಿಧಿಸುವ ಕ್ಷೇತ್ರವಿದು. ಕಳೆದ ಬಾರಿ ಅನಿರೀಕ್ಷಿತವಾಗಿ ಸೋತಿದ್ದ ಅವರು ಈ ಬಾರಿ ಅನುಕಂಪದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಪರಿಶಿಷ್ಟ ಜಾತಿಯ ಮತಗಳು ಕಣದಲ್ಲಿರುವ ಮೂವರೂ ಅಭ್ಯರ್ಥಿಗಳ ನಡುವೆ ಹಂಚಿಕೆಯಾಗುವುದರಿಂದ ಪರಮೇಶ್ವರ್ ಅವರು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.
ವೀರಶೈವ-ಲಿಂಗಾಯತ ಒಡಕಿನ ಲಾಭ ತಮಗೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಜೆಡಿಎಸ್‌ನ ಹಾಲಿ ಶಾಸಕ ಸುಧಾಕರಲಾಲ್ ಪರಿಶಿಷ್ಟ ಮತಗಳ ಜೊತೆಗೆ ಒಕ್ಕಲಿಗರನ್ನು ನೆಚ್ಚಿಕೊಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಹಾಲಿ ಜಿ.ಪಂ. ಸದಸ್ಯ ವೈ.ಎಚ್.ಹುಚ್ಚಯ್ಯ ಕ್ಷೇತ್ರದಲ್ಲಿನ ಬಹುಸಂಖ್ಯಾತ ಮಾದಿಗರು ಹಾಗೂ ಲಿಂಗಾಯತ ಮತಗಳನ್ನು ನಂಬಿಕೊಂಡಿದ್ದಾರೆ. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿ ಮಾದಿಗ ಸಮುದಾಯದವರು ಕಾಂಗ್ರೆಸ್‌ಗೆ ಮತ ನೀಡಿದರೆ ಪರಮೇಶ್ವರ್‌ಗೆ ಅನುಕೂಲ. ಆದರೆ ಒಳಮೀಸಲಾತಿಗೆ ಪರ ವಿರುದ್ಧವಾಗಿದ್ದಾರೆ ಎಂದು ಬೇರೆ ಪಕ್ಷದ ಕಡೆ ಮುಖ ಮಾಡಿದರೆ ಪ್ರಬಲ ಸ್ಪರ್ಧೆ ಎದುರಿಸಬೇಕಾಗುತ್ತದೆ.

ತಿಪಟೂರು 
ಹಾಲಿ ಶಾಸಕ ಕೆ. ಷಡಕ್ಷರಿಗೆ ಟಿಕೆಟ್ ನಿರಾಕರಿಸಿ, ಬಳಿಕ ಅವರಿಗೇ ನೀಡಿದ ನಿರ್ಧಾರದಿಂದ ಮೇಲ್ನೋಟಕ್ಕೆ ಕಾಂಗ್ರೆಸ್ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ. ಷಡಕ್ಷರಿ ಬದಲಿಗೆ ಕಳೆದ 10 ವರ್ಷಗಳಿಂದ ಯಾವುದೇ ಚುನಾವಣೆಗೆ ಸ್ಪರ್ಧಿಸದ ನಂಜಾಮರಿಗೆ ಟಿಕೆಟ್ ಘೋಷಣೆಯಾಗಿದ್ದು ಅಚ್ಚರಿಗೂ ಕಾರಣವಾಗಿತ್ತು. ಆದರೆ ಕಡೇಗಳಿಗೆಯಲ್ಲಿ ನಂಜಾಮರಿಗೆ ಟಿಕೆಟ್ ನಿರಾಕರಿಸಿ ಷಡಕ್ಷರಿಗೇ ಬಿ ಫಾರಂ ನೀಡಿದ್ದರಿಂದ ನಂಜಾಮರಿ ಬೆಂಬಲಿಗರು ಸಿಟ್ಟಿಗೆದ್ದಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಸಿ. ನಾಗೇಶ್ ಈ ಬಾರಿಯೂ ಅಭ್ಯರ್ಥಿ. ಇನ್ನು ಕೆಜೆಪಿಯಿಂದ ಕಳೆದ ಸಲ ಸ್ಪರ್ಧಿಸಿದ್ದ ಲೋಕೇಶ್ವರ್ ಈ ಬಾರಿ ಜೆಡಿಎಸ್ ಹುರಿಯಾಳು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಹಾಗೂ ನಂಜಾಮರಿ ಲಿಂಗಾಯತ ಸಮುದಾಯಕ್ಕೆ ಸೇ ರಿದವರು. ಇನ್ನು ಬ್ರಾಹ್ಮಣ ಸಮುದಾಯದ ಬಿ.ಸಿ. ನಾಗೇಶ್ ಮೋದಿ, ಯಡಿಯೂರಪ್ಪ ವರ್ಚಸ್ಸಿನಿಂದ ಮತಗಳನ್ನು ಪಡೆಯುವ ವಿಶ್ವಾಸದಲ್ಲಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಗಳು ಹೆಚ್ಚಾಗಿರುವುದರಿಂದ ಅದರಲ್ಲಿ ಮೂರು ಮಂದಿ ಬಲಿಷ್ಠರೂ ಆಗಿರುವುದರಿಂದ ಮತ ವಿಭಜನೆ ಸಂಭವವಿದ್ದು ಕುತೂಹಲ ಕೆರಳಿಸಿದೆ. ಮತ ವಿಭಜನೆಯದ್ದೇ ಕುತೂಹಲ

ಪಾವಗಡ
ಜೆಡಿಎಸ್‌ನಿಂದ ಹ್ಯಾಟ್ರಿಕ್ ಸಾಧಿಸಿರುವ ಎಸ್.ಆರ್. ಶ್ರೀನಿವಾಸ್ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಲು ಅಖಾಡಕ್ಕೆ  ಧುಮುಕಿದ್ದಾರೆ. ಕಾಂಗ್ರೆಸ್ ನಿಂದ ಬಾಲಾಜಿ ಕುಮಾರ್, ಬಿಜೆಪಿಯಿಂದ ಬೆಟ್ಟಸ್ವಾಮಿ ಕಣದಲ್ಲಿದ್ದರೆ ಪಕ್ಷೇತರರಾಗಿ ಬಿಜೆಪಿ ಟಿಕೆಟ್ ವಂಚಿತ ದಿಲೀಪ್ ಕುಮಾರ್ ಅಖಾಡದಲ್ಲಿದ್ದಾರೆ. ಕಳೆದ 4 ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿಲ್ಲ. ಬಿಜೆಪಿಯಿಂದ ಹಿಂದುಳಿದ ಸಮುದಾಯದ(ಗೊಲ್ಲ) ಬೆಟ್ಟಸ್ವಾಮಿ ಕಣದಲ್ಲಿದ್ದಾರೆ. 30 ಸಾವಿರಕ್ಕೂ ಅಧಿಕ ಗೊಲ್ಲ ಮತಗಳ ಜೊತೆಗೆ 35 ಸಾವಿರಕ್ಕೂ ಹೆಚ್ಚು ಲಿಂಗಾಯತ ಮತಗಳನ್ನು ಬಿಜೆಪಿ ನೆಚ್ಚಿಕೊಂಡಿದೆ. ಆದರೆ ಈ ಬಾರಿ ಬಿಜೆಪಿ ಟಿಕೆಟ್ ವಂಚಿತ ದಿಲೀಪ್ ಕುಮಾರ್ ಸ್ಪರ್ಧೆಯಿಂದ ಲಿಂಗಾಯತ ಮತಗಳು ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿಗೆ ತೊಂದರೆಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ ಒಕ್ಕಲಿಗ ಮತಗಳನ್ನು ಜೆಡಿಎಸ್ ಸೆಳೆಯುವ ಸಂಭವವಿದೆ. ವಿಭಜನೆಯಾಗುವ ಲಿಂಗಾಯತ ಮತಗಳ ಲಾಭವನ್ನು ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಪ್ರಯತ್ನದಲ್ಲಿ ತೊಡಗಿವೆ.

ಚಿಕ್ಕನಾಯಕನಹಳ್ಳಿ :  ಸೋಲಾರ್ ಪಾರ್ಕ್‌ನಿಂದ ವಿಶ್ವದ ಗಮನಸೆಳೆದಿರುವ ಪಾವಗಡದಲ್ಲಿ ಹಾಲಿ ಜೆಡಿಎಸ್ ಶಾಸಕ ಕೆ.ಎಂ. ತಿಮ್ಮರಾಯಪ್ಪ ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವೆಂಕಟರಮಣಪ್ಪ ಕಳೆದ ಬಾರಿ ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗಿದ್ದರು. ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಮಗ ಸೋತಿದ್ದ. ಈ ಬಾರಿ ವೆಂಕಟರಮಣಪ್ಪ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಯಾರೊಬ್ಬರೂ ಸತತವಾಗಿ ಎರಡು ಬಾರಿ ಗೆದ್ದಿಲ್ಲ. ಕ್ಷೇತ್ರದ ಇತಿಹಾಸ ನೋಡಿದರೆ ಜನತಾ ಪರಿವಾರ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಡುತ್ತಾ ಬಂದಿದೆ. ಶೇ.60 ರಷ್ಟು ಅಂದರೆ 1 ಲಕ್ಷ ೨೦ ಸಾವಿರ ಪರಿಶಿಷ್ಟ ಜಾತಿ ವರ್ಗಗಳ ಮತಗಳಿವೆ. ಮೀಸಲು ಕ್ಷೇತ್ರವಾಗಿರುವುದರಿಂದ ಅವು ಹರಿದು ಹಂಚಿ ಹೋಗಲಿವೆ. ಈ ಬಾರಿ ಆಕಾಂಕ್ಷಿಯಾಗಿದ್ದ ಬಲರಾಮ್‌ಗೆ ಕಾಂಗ್ರೆಸ್ ಟಿಕೆಟ್  ನಿರಾಕರಿಸಿದ್ದರಿಂದ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಾಸ್ತವವಾಗಿ ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣೆ ನಡೆಯಲಿದೆ. ಜೆಡಿಎಸ್‌ಗೆ ಕಾಂಗ್ರೆಸ್ ಪ್ರಬಲ ಸ್ಪರ್ಧೆ?

ಗುಬ್ಬಿ : ಹ್ಯಾಟ್ರಿಕ್ ಸಾಧನೆ ಕನಸಿನಲ್ಲಿ ಇರುವ ಜೆಡಿಎಸ್‌ನ ಸುರೇಶ್ ಬಾಬುಗೆ ಕಾಂಗ್ರೆಸ್ ಹಾಗೂ ಬಿಜೆಪಿ ದೊಡ್ಡ ಪ್ರತಿರೋಧ ಒಡ್ಡುತ್ತಿವೆ. ಕಳೆದ ಬಾರಿ ಕೆಜೆಪಿ, ಬಿಜೆಪಿ ಮತಗಳು ವಿಭಜನೆಯಾಗಿದ್ದು ಹಿಂದುಳಿದ ವರ್ಗದ ಸುರೇಶ್ ಬಾಬುಗೆ ವರವಾಗಿತ್ತು. ಅಲ್ಲದೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗೊಲ್ಲ ಸಮುದಾಯದ ಸತೀಶ್ ಸಾಸಲು ನಿರೀಕ್ಷಿತ ಮತ ತೆಗೆದುಕೊಂಡಿರಲಿಲ್ಲ. ಒಕ್ಕಲಿಗ ಮತಗಳೆಲ್ಲಾ ಜೆಡಿಎಸ್‌ಗೆ ದಕ್ಕಿದ್ದವು. ಆದರೆ ಈ ಬಾರಿ ಸಚಿವ ಟಿ.ಬಿ. ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವುದರಿಂದ ಅಖಾಡ ರಂಗೇರಿದೆ. ‘ಅಣ್ಣ’ ಎಂದು ಸುರೇಶ್ ಬಾಬು ಎಲ್ಲರ ಹೆಗಲು ಮುಟ್ಟಿ ಮಾತನಾಡಿಸುವುದರಿಂದ ಸಹಜವಾಗಿ ಮತದಾರರಿಗೆ ಎಂಥದ್ದೋ ಆತ್ಮೀಯ ಭಾವನೆ ಅವರ ಮೇಲೆ. ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಸಂತೋಷ್ ಒಕ್ಕಲಿಗರಾಗಿದ್ದು, ಆ ವರ್ಗದ ಮತಗಳನ್ನು ಗಣನೀಯವಾಗಿ ತೆಗೆದುಕೊಳ್ಳು ವುದರಿಂದ ಸುರೇಶ್ ಬಾಬು ಪೈಪೋಟಿ ಎದುರಿಸಬೇಕಾಗಿದೆ. ಇನ್ನು ಕಳೆದ ಬಾರಿ ಸೋತಿದ್ದ ಮಾಧುಸ್ವಾಮಿ ಬಗ್ಗೆಯೂ ಕೂಡ ಜನರಿಗೆ ಅನುಕಂಪವಿದೆ.


ಮಧುಗಿರಿ  : ಮಧುಗಿರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ ನಡೆದಿದೆ. ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಶಾಸಕರಾಗಿ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಎಲ್ಲಾ ವರ್ಗದ ರೈತರಿಗೆ ಸಾಲ ಕೊಡಿಸಿರುವುದು ವರವಾಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಜೆಡಿಎಸ್‌ನ ವೀರಭದ್ರಯ್ಯ ಅವರಿಗೆ ಅನುಕುಂಪವಿದೆ. ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಮತಗಳು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿದೆ. ಹೀಗಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಕೆ.ಎನ್. ರಾಜಣ್ಣ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಹಾಗೆಯೇ ವೀರಭದ್ರಯ್ಯ ಅವರು ಒಕ್ಕಲಿಗ ಮತಗಳ ಜೊತೆಗೆ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ ಜೊತೆ ಹೊಂದಾಣಿಕೆ ಕಾರಣದಿಂದ ದಲಿತ ಮತಗಳು ತಮ್ಮ ಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಅಲ್ಲದೇ ಕಳೆದ ಬಾರಿ ಸೋತಿದ್ದರಿಂದ ಅನುಕಂಪದ ಶ್ರೀರಕ್ಷೆಯೂ ಇವರ ಮೇಲಿದೆ. ಇನ್ನು ಬಿಜೆಪಿಯಿಂದ ರಮೇಶ್ ರೆಡ್ಡಿ ಸ್ಪರ್ಧಿಸಿದ್ದಾರೆ. ಬಿಜೆಪಿ ಪರವಾಗಿ ಅಲೆ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ಇದೆ.


ಶಿರಾ : ಸಚಿವ ಟಿ.ಬಿ. ಜಯಚಂದ್ರ ಹ್ಯಾಟ್ರಿಕ್ ಸಾಧನೆ ಮಾಡಲು ಹೊರಟಿದ್ದಾರೆ. ಕುಂಚಿಟಿಗ ಒಕ್ಕಲಿಗರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗಗಳ ಮತ ಗಣನೀಯ ಪ್ರಮಾಣದಲ್ಲಿವೆ. ಜೆಡಿಎಸ್‌ನಿಂದ ಮಾಜಿ ಸಚಿವ ಬಿ. ಸತ್ಯನಾರಾಯಣ ಸ್ಪರ್ಧಿಸಿದ್ದು ಬಿಜೆಪಿಯಿಂದ ಎಸ್.ಆರ್. ಗೌಡ ಕಣದಲ್ಲಿದ್ದಾರೆ. ಎರಡು ಬಾರಿ ಸೋತಿದ್ದ ಬಿ. ಸತ್ಯನಾರಾಯಣ್‌ಗೆ ಅನುಕುಂಪದ ಮತ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸತ್ಯನಾರಾಯಣಗೆ ಸಡ್ಡು ಹೊಡೆದ ಚಿದಾನಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚಿದಾನಂದ ಹಾಗೂ ಎಸ್.ಆರ್.ಗೌಡ ಕುಂಚಿಟಿಗ ಒಕ್ಕಲಿಗರಾಗಿರುವುದರಿಂದ ಅವರು ಪಡೆಯುವುದು ಜೆಡಿಎಸ್‌ನ ಮತಗಳನ್ನೇ. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದ ಬಿ.ಕೆ. ಮಂಜುನಾಥ್(ಕುರುಬ ಸಮುದಾಯ) ಅವರಿಗೆ ಟಿಕೆಟ್ ಕೈ ತಪ್ಪಿರುವುದರಿಂದ ಹಿಂದುಳಿದವರು ಬಿಜೆಪಿಗೆ ವಿರುದ್ಧವಾಗಿ ನಿಲ್ಲುತ್ತಾರೆ ಎಂಬ ಮಾತಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರರನ್ನು ಕಟ್ಟಿ ಹಾಕಬಹುದು ಎಂಬ ನಿರೀಕ್ಷೆಗೆ ಸ್ವಲ್ಪ ಹಿನ್ನಡೆಯಾಗಿದೆ. ಕುಂಚಿಟಿಗರು ಜೆಡಿಎಸ್‌ಗೆ ಮತ ಹಾಕಿದರೆ ಹಣಾಹಣಿ ನಡೆಯಲಿದೆ.


ತುರುವೇಕೆರೆ
ಸತತ ಎರಡು ಜಯ ದಾಖಲಿಸಿರುವ ತುರುವೇಕೆರೆಯ ಹಾಲಿ ಶಾಸಕ ಎಂ.ಟಿ. ಕೃಷ್ಣಪ್ಪ ಹ್ಯಾಟ್ರಿಕ್  ಗೆಲುವಿನ ಕನಸು ಕಾಣುತ್ತಿದ್ದಾರೆ. ಆದರೆ ಇವರಿಗೆ ಬಿಜೆಪಿಯ ಮಸಾಲೆ ಜಯರಾಂ ಪ್ರತಿರೋಧ ಒಡ್ಡಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ಗಣನೀಯ ಪ್ರಮಾಣದಲ್ಲಿವೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಸಾಲೆ ಜಯರಾಂ ಅವರು 8 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಕಳೆದ ಸಲ ಬಿಜೆಪಿ- ಕೆಜೆಪಿ ಮತಗಳು ವಿಭಜನೆಯಾಗಿದ್ದು ಅದರ ಲಾಭ ಜೆಡಿಎಸ್‌ಗೆ ಆಗಿತ್ತು. ಆದರೆ ಈ ಬಾರಿ ಬಿಜೆಪಿ- ಕೆಜೆಪಿ ಒಂದಾಗಿರುವುದರಿಂದ ವೀರಶೈವ ಮತಗಳು, ದಲಿತರು ಹಾಗೂ ಬ್ರಾಹ್ಮಣ, ವೈಶ್ಯ, ವಿಶ್ವಕರ್ಮ, ಜೈನರ ಮತಗಳ ಮೇಲೆ ಕಣ್ಣು ಇಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೇರು ಬಿಟ್ಟಿಲ್ಲ. ಈ ಬಾರಿ ಕಾಂಗ್ರೆಸ್‌ನಿಂದ ಚೌದ್ರಿ ರಂಗಪ್ಪ ಕಣದಲ್ಲಿದ್ದಾರೆ. ಇನ್ನು ಕೃಷ್ಣಪ್ಪ ಅವರಿಗೆ ಸಣ್ಣದಾಗಿ ಆಡಳಿತ ವಿರೋಧಿ ಅಲೆ ಇದ್ದರೆ, ಬಿಜೆಪಿಗೆ ಸಣ್ಣ ಅನುಕಂಪ ಇದೆ. ಈಅನುಕಂಪ ಜಯದ ಹೊಸ್ತಿಲಿಗೆ ಕೊಂಡೊಯ್ಯುವ ನಿರೀಕ್ಷೆಯಲ್ಲಿದ್ದಾರೆ ಮಸಾಲೆ ಜಯರಾಂ.

loader