ಬೆಂಗಳೂರು :  ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಪಕ್ಷಗಳ ನಡುವೆ ನಡೆದ ಗದ್ದುಗೆ ಗುದ್ದಾಟದ ಹೋರಾಟದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸಾಧಿಸಿವೆ.

ಆದರೆ ‘ಸುಪ್ರಿಂ ಕೋರ್ಟ್‌ ಮೇ 19ರಂದೇ ಬಿಜೆಪಿ ಬಹುಮತ ಸಾಬೀತುಪಡಿಬೇಕೆಂದು ಆದೇಶ ನೀಡಿದ ಬಳಿಕ ವಿಧಾನಸೌಧದಲ್ಲಿ ನಡೆದ ಕಲಾಪದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರ ಹಿರಿಯ ಪುತ್ರ ಎಚ್‌.ಡಿ. ರೇವಣ್ಣ ನಡುವೆ ಜಗಳ’ ಎನ್ನುವಂತಹ ಸಂದೇಶದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

‘ಬಿ.ಎಸ್‌. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ರಾಜೀನಾಮೆ ಘೋಷಿಸಿದ ಬಳಿಕ ಡಿಕೆಶಿ ಮತ್ತು ರೇವಣ್ಣ ನಡುವೆ ವಾಗ್ವಾದ ನಡೆದಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಗ್ಗೆ ಆತಂಕವಾಗುತ್ತಿದೆ. ಕರ್ನಾಟಕವನ್ನು ದೇವರೇ ಕಾಪಾಡಬೇಕು’ ಎಂಬಂತಹ ಸಂದೇಶಗಳು ಓಡಾಡುತ್ತಿವೆ.

ಆದರೆ ನಿಜಕ್ಕೂ ಮೇ 19ರಂದು ಡಿಕೆಶಿ, ರೇವಣ್ಣ ನಡುವೆ ವಾಗ್ವಾದ ನಡೆದಿತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳು. ಹಳೆಯ ವಿಡಿಯೋವನ್ನೇ ಬಳಸಿಕೊಂಡು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ವಿರುದ್ಧ ಬಿಜೆಪಿ ಬೆಂಬಲಿಗರು ಹರಡಿರುವ ನಕಲಿ ವಿಡಿಯೋ ಎಂಬುದು ಸಾಬೀತಾಗಿದೆ. ಮೇ 19ರಂದು ಡಿಕೆಶಿ ದಿನವಿಡೀ ಕ್ರೀಮ್‌ ಕಲರ್‌ ಕುರ್ತಾ ಮತ್ತು ರೇಷ್ಮೆ ದೋತಿ ಧರಿಸಿದ್ದರು. ಆದರೆ ವಿಡಿಯೋದಲ್ಲಿ ಡಿ.ಕೆ. ಶಿವಕುಮಾರ್‌ ಬಿಳಿ ಬಣ್ಣದ ಶರ್ಟ್‌ ಧರಿಸಿದ್ದಾರೆ. ಅಲ್ಲದೆ ವಾಸ್ತವವಾಗಿ ಈ ವಿಡಿಯೋದಲ್ಲಿ ಕಾಣುವ ಘಟನೆ 2016ರ ಜೂ.11ರಂದು ರಾಜ್ಯಸಭೆ ಚುನಾವಣೆಯ ಮತದಾನ ವೇಳೆ ನಡೆದಂತಹದ್ದು. ಮೇ 19ರಂದು ಇಬ್ಬರ ನಡುವೆ ಯಾವುದೇ ವಾಗ್ವಾದ ಆಗಿಲ್ಲ.