Asianet Suvarna News Asianet Suvarna News

ನಮ್ಮ ಪ್ರಣಾಳಿಕೆ ಬರೀ ಭರವಸೆಯಲ್ಲ : ಸುರೇಶ್ ಕುಮಾರ್

ರಾಜ್ಯ ಬಿಜೆಪಿಯ ಪ್ರಬಲ ಸೈದ್ಧಾಂತಿಕ ಪ್ರತಿಪಾದಕರಲ್ಲಿ ಪಕ್ಷದ ವಕ್ತಾರರೂ ಆಗಿರುವ ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ ಅವರೂ ಒಬ್ಬರು. ಪಕ್ಷದ ಚುನಾವಣಾ ಪ್ರಣಾಳಿಕೆಯ ಜವಾಬ್ದಾರಿ ಹೊತ್ತಿರುವ ಅವರು ಹಲವು ದಿನಗಳಿಂದ ಅದರಲ್ಲೇ ಮುಳುಗಿದ್ದರು. ಅದರೊಂದಿಗೆ ಈಗ ರಾಜಾಜಿನಗರ  ಕ್ಷೇತ್ರದ ಅಭ್ಯರ್ಥಿಯಾಗಿ ಮತಯಾಚನೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆಯೇ ‘ಪ್ರಸಕ್ತ ಬೆಳವಣಿಗೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. 

Suresh kumar Interview

ವಿಜಯ್ ಮಲಗಿ ಹಾಳ

ರಾಜ್ಯ ಬಿಜೆಪಿಯ ಪ್ರಬಲ ಸೈದ್ಧಾಂತಿಕ ಪ್ರತಿಪಾದಕರಲ್ಲಿ ಪಕ್ಷದ ವಕ್ತಾರರೂ ಆಗಿರುವ ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ ಅವರೂ ಒಬ್ಬರು. ಕಳೆದ ಹಲವು ದಿನಗಳಿಂದ ಸುರೇಶ್‌ಕುಮಾರ್ ಅವರು ಮಾಧ್ಯಮಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಪಕ್ಷದ ಚುನಾವಣಾ ಪ್ರಣಾಳಿಕೆಯ ಜವಾಬ್ದಾರಿ ಹೊತ್ತಿರುವ ಅವರು ಹಲವು ದಿನಗಳಿಂದ ಅದರಲ್ಲೇ ಮುಳುಗಿದ್ದರು. ಅದರೊಂದಿಗೆ ಈಗ ರಾಜಾಜಿನಗರ
ಕ್ಷೇತ್ರದ ಅಭ್ಯರ್ಥಿಯಾಗಿ ಮತಯಾಚನೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆಯೇ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಪ್ರಸಕ್ತ ಬೆಳವಣಿಗೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. 

 ಪಕ್ಷದ ಚುನಾವಣಾ ಪ್ರಣಾಳಿಕೆ ರೂಪಿಸುವ ಜವಾಬ್ದಾರಿ ಹೊತ್ತಿದ್ದೀರಿ? ಈ ಬಾರಿ ಬಿಜೆಪಿ ಪ್ರಣಾಳಿಕೆ ಹೇಗಿರಬಹುದು?

ಸಾಕಷ್ಟು ಶ್ರಮವಹಿಸಿ ಪ್ರಣಾಳಿಕೆ ರೂಪಿಸಿದ್ದೇವೆ. ಸಮಾಜದ ಎಲ್ಲ ವರ್ಗಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ನೀಡುವ ಗುರಿ ಹೊಂದಿದ್ದೇವೆ. ಅವು ಕೇವಲ ಭರವಸೆಗಳಾಗದೆ ನಮ್ಮ ಸರ್ಕಾರ ಬಂದ ನಂತರ ಅನುಷ್ಠಾನಕ್ಕೆ ತರುವಂಥದ್ದಾಗಿರುತ್ತವೆ ಎಂಬುದನ್ನು ಮಾತ್ರ ಈಗ ಹೇಳಬಲ್ಲೆ. 

ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸನ್ನಾಹದಲ್ಲಿದೆ? 

ರಾಜ್ಯದ ಇತರ ಭಾಗಗಳ ಜೊತೆಗೆ 28 ಕ್ಷೇತ್ರಗಳನ್ನು ಒಳಗೊಂಡಿರುವ ರಾಜಧಾನಿ ಬೆಂಗಳೂರು ಬಿಜೆಪಿಗೆ ಮುಖ್ಯವಾದದ್ದು. ಸದ್ಯದ ಪರಿಸ್ಥಿತಿಯಲ್ಲಿ ಈ ಬಾರಿ ಬಿಜೆಪಿ 18ರಿಂದ 20 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. 

ಬೆಂಗಳೂರಿನಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಇರುವ ವಿಷಯಗಳಾದರೂ ಏನು?

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷ ತಮಗೆ ಪೂರ್ಣ ಬಹುಮತ ಇರದಿದ್ದರೂ ತಾವೇನೋ ಕಡಿದು ಕಟ್ಟೆ ಹಾಕುತ್ತೇವೆ ಎಂದು ಜೆಡಿಎಸ್ ಜತೆ ಸೇರಿ ಆಡಳಿತ ಸ್ಥಾಪಿಸಿತು. ಇಂಥದ್ದೊಂದು ಸಮಸ್ಯೆಯನ್ನು ನಾವು ಪರಿಹಾರ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಬೆಳ್ಳಂದೂರು ಕೆರೆ ಸಮಸ್ಯೆ, ವಾಹನ ಸಂಚಾರ ಒತ್ತಡ, ಶಾಸಕರ ಕುಟುಂಬಗಳೇ ಒಳಗೊಳ್ಳುವ ಅಪರಾಧ
ಪ್ರಕರಣಗಳು. ಈ ಸಾಧನೆಗಳೇ ಚುನಾವಣೆಯಲ್ಲಿನ ವಿಷಯಗಳು.

?ಹಾಗಾದರೆ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲವೇ?

ನೋಡಿ ಇದೊಂದು ಕಾಸ್ಮೋಪಾಲಿಟನ್ ನಗರ. ಅಭಿವೃದ್ಧಿ ಯಾವ ಸರ್ಕಾರ ಇದ್ದರೂ ಆಗುತ್ತದೆ. ಒಂದು ಮೇಲ್ಸೇತುವೆ ರಸ್ತೆ, ಮತ್ತೊಂದು ಅಂಡರ್ ಪಾಸ್ ಆಗಿರಬಹುದು. ಈ ರೀತಿಯ ಜಾರಿಯಲ್ಲಿರುವ ಯೋಜನೆಗಳ ಕಾಮಗಾರಿ ನಡೆಯುವುದು ಸರ್ವೇ ಸಾಮಾನ್ಯ. ಆದರೆ, ಬೆಂಗಳೂರಿನ ಮೂಲ ಸಮಸ್ಯೆಗಳಿವೆಯಲ್ಲ, ಅವುಗಳ ಬಗ್ಗೆ ಏನನ್ನೂ ಮಾಡಿಲ್ಲ. ದೆಹಲಿ ನಂತರ ಬೆಂಗಳೂರು ಅತಿ ಹೆಚ್ಚು ವಾಯುಮಾಲಿನ್ಯ ಇರುವ ನಗರವಾಗಿ ಬೆಂಗಳೂರು ಮಾರ್ಪಡುವ ಆತಂಕವಿದೆ. ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ಹೇಗೆ ಶಾಲೆಗಳನ್ನು ಮುಚ್ಚಿದರು, ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದರು ಎಂಬುದು ನೋಡಿದ್ದೇವೆ. ಅದ್ಯಾವುದೋ ಬೆಂಗಳೂರಿನ ಅಭಿವೃದ್ಧಿ ಹೆಸರಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಮಾಡುತ್ತಾರೆ. ಆದರೆ, ಅದು ಜನಸಾಮಾನ್ಯರ ಹಿತಕ್ಕಾಗಿ ಡುವಂಥದ್ದಲ್ಲ. ಬದಲಾಗಿ, ಉಳ್ಳವರ ಹಿತ ಕಾಪಾಡುವುದಕ್ಕಾಗಿ. ಈ ಯೋಜನೆಯಿಂದ ಹಸಿರು ಕಡಮೆಯಾಗುತ್ತದೆ ಎಂಬ ಆಕ್ಷೇಪಣೆ ಅನೇಕರಿಂದ ಬಂತು. ಆದರೂ ಅದಕ್ಕೆ ಕ್ಯಾರೇ ಎನ್ನಲಿಲ್ಲ.

ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ಏನೂ ಮಾಡಿಯೇ ಇಲ್ಲ ಎಂದು ನೀವು ಹೇಳುತ್ತೀರಿ. ಆದರೆ, ಕಾಂಗ್ರೆಸ್ಸಿಗರು ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನೇ ಮುಂದಿಡುತ್ತಾರಲ್ಲ?

ಬೆಂಗಳೂರು ಮಹಾನಗರದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಗುತ್ತಿಗೆದಾರರನ್ನು ಗುರಿಯಾಗಿಸಿಕೊಂಡು ಹಮ್ಮಿಕೊಂಡಿರುವಂಥವು. ಅವುಗಳ ಹಿಂದೆ ನಾಗರಿಕರ ಹಿತ ಇಲ್ಲವೇ ಇಲ್ಲ. ಯಾವುದೇ ಆಡಳಿತದಲ್ಲಿ ಬೆಂಗಳೂರನ್ನು ಪ್ರೀತಿಸುವವರು ಹೆಚ್ಚಾಗಬೇಕು. ಆದರೆ, ಬೆಂಗಳೂರನ್ನು ಭೋಗದ ವಸ್ತುವಿನ ರೂಪದಲ್ಲಿ ನೋಡುವವರ ಸಂಖ್ಯೆಯೇ ಆಡಳಿತದಲ್ಲಿ ಹೆಚ್ಚಿದೆ.
ಹೀಗಾಗಿ, ಬೆಂಗಳೂರಿನ ಜನಸಾಮಾನ್ಯರಿಗೆ ಬೇಕಾದಂಥ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅದನ್ನು ಮಾಡುತ್ತೇವೆ.

ಕಳೆದ ವಾರ ನೀವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕಸಂವಾದ ನಡೆಸಿದಿರಿ. ಅನುಭವ ಹೇಗಿತ್ತು?

ಹಿಂದೆ ಬಹಳ ಕಾಲ ಅವರೊಂದಿಗೆ ಸಮೀಪದಿಂದ ಸಮಾಲೋಚನೆ ನಡೆಸಿದ್ದೇನೆ. ನಾನು ಸಚಿವನಾಗಿದ್ದ ವೇಳೆ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಬೆಂಗಳೂರಿನ ಐಟಿ ಬಿಜ್ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆ ಸಂದರ್ಭ ನಾನು ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಪ್ರತ್ಯೇಕವಾಗಿ ಚರ್ಚೆ ನಡೆಸುವ ಅವಕಾಶ ಸಿಕ್ಕಿತ್ತು. ಇದೀಗ ಅವರು ಪ್ರಧಾನಮಂತ್ರಿ
ಸ್ಥಾನದಲ್ಲಿದ್ದಾರೆ. ಈ ಚುನಾವಣೆ ವೇಳೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಮೂಲಕ ಶಕ್ತಿ ತುಂಬಿದ್ದು ನಿಜಕ್ಕೂ ಅಪರೂಪದ್ದು. ಇಂಥದನ್ನು ಕಾಂಗ್ರೆಸ್ ಪಕ್ಷದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ. ಮೋದಿ ಅವರು ಚೀನಾಕ್ಕೆ ತೆರಳುವ ಭರದಲ್ಲೂ ಸಮಯ ಮಾಡಿಕೊಂಡು ಬೂತ್ ಮಟ್ಟದ ಕಾರ್ಯಕರ್ತರು ಏನು ಮಾಡಬೇಕು? ಸಮೀಕ್ಷೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿದ್ದು ಉಪಯುಕ್ತವಾಗಿತ್ತು.

ಶಿಸ್ತಿನ ಪಕ್ಷ ಎಂಬ ಹೆಗ್ಗಳಿಕೆ ಗಳಿಸಿರುವ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ನಂತರ ಸಾಕಷ್ಟು ಅಸಮಾಧಾನ, ಬಂಡಾಯ ಕಾಣಿಸಿಕೊಂಡಿರುವುದು ಪಕ್ಷಕ್ಕೆ ಧಕ್ಕೆ ಮಾಡಲಿಲ್ಲವೇ?

ಪಕ್ಷ ಬೆಳೆದಂತೆಲ್ಲ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತದೆ. ಇದು ಸಾಮಾನ್ಯ. ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿರುತ್ತಾರೆ. ಹೀಗಾಗಿ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಹೊರಹಾಕುತ್ತಾರೆ. ಗೊಂದಲ ಉದ್ಭವಿಸುತ್ತದೆ. ಆದರೆ, ಶಿಸ್ತಿನ ಪಕ್ಷ ಎಂಬ ಹೆಸರು ಗಳಿಸಿರುವ ಬಿಜೆಪಿಗೆ ಇಂಥ ಚಟುವಟಿಕೆಗಳಿಂದ ಒಂದಿಷ್ಟು ಧಕ್ಕೆ ಉಂಟಾಗಲಿದೆ ಎಂಬುದು ನಿಜ. 

ಅಭ್ಯರ್ಥಿಗಳ ಆಯ್ಕೆಯಲ್ಲಿ ಉತ್ತರ ಪ್ರದೇಶ ಮಾದರಿ ಅನುಸರಿಸಲಾಗುತ್ತದೆ ಎಂಬುದು ಆರಂಭದಲ್ಲಿ ಬಿಜೆಪಿ ಪಾಳೆಯದಿಂದ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದ ನಂತರ ಇಲ್ಲಿನ ಹಿಂದಿನ ಮಾದರಿಯನ್ನೇ ಅನುಸರಿಸಿರುವುದು ಕಾಣುತ್ತಿದೆ?

ಪಕ್ಷದ ವತಿಯಿಂದ ಪ್ರತಿ ಕ್ಷೇತ್ರದಲ್ಲೂ ಮೂರ್ನಾಲ್ಕು ಸಮೀಕ್ಷೆಗಳನ್ನು ನಡೆಸಲಾಗಿದೆ. ಅದರಲ್ಲಿ ಗೆಲ್ಲುವ ಮಾನದಂಡವನ್ನೂ ಪರಿಗಣಿಸಲಾಗಿದೆ. ಹೀಗಾಗಿ, ಉತ್ತರ ಪ್ರದೇಶ ಮಾದರಿ ಎನ್ನುವುದಕ್ಕಿಂತ ಅಂತಿಮವಾಗಿ ಗೆಲ್ಲುವ ಸಾಮರ್ಥ್ಯ ನೋಡಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಇತರ ಎಲ್ಲ ಅಂಶಗಳೂ ಒಳಗೊಂಡಿರುತ್ತವೆ.

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರನ್ನು ಮುಂದಿರಿಸಿಕೊಂಡು ಕಾಂಗ್ರೆಸ್ ಪಕ್ಷ ನಿಮ್ಮ ಬಿಜೆಪಿ ವಿರುದ್ಧ ಮುಗಿಬಿದ್ದಿದೆಯಲ್ಲ?
ಈ ಕಾರಣಕ್ಕಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರವಾಸ ರದ್ದಾಯಿತಂತೆ?

ಇಲ್ಲ. ಕಾಂಗ್ರೆಸ್ ನಾಯಕರು ರೆಡ್ಡಿ ವಿರುದ್ಧ ಟೀಕೆ ಮಾಡಿರುವುದಕ್ಕೂ ಮತ್ತು ಅಮಿತ್ ಶಾ ಅವರ ಬಳ್ಳಾರಿ ಪ್ರವಾಸ ದೂಡಿರುವುದಕ್ಕೂ ಸಂಬಂಧವಿಲ್ಲ. ಅಮಿತ್ ಶಾ ಅವರ ಪ್ರವಾಸ ಪರಿಷ್ಕರಿಸಲಾಗಿತ್ತೇ ಹೊರತು ರದ್ದು ಮಾಡಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರು ಮಾಡುತ್ತಿರುವುದು ವಾಗ್ದಾಳಿ ಅಲ್ಲ. ಅದು ‘ವಾಗ್ಧೂಳಿ’. ಅಂದರೆ,
ಕೇವಲ ಮಾತಿನ ಧೂಳು ಮಾತ್ರ.

ಬಿಜೆಪಿ ನಾಯಕರನ್ನು ಜೈಲು ಹಕ್ಕಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಲೇವಡಿ ಮಾಡುತ್ತಿರುವುದು ಮುಜುಗರ ತಂದಿಲ್ಲವೇ?

ಕಾಂಗ್ರೆಸ್ ಮುಖಂಡರಿಗೆ ಬೇರೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಕೆಲವೇ ಹಳಸಲು ವಿಷಯಗಳನ್ನು ಪದೇ ಪದೇ ಹೇಳು ತ್ತಿದ್ದಾರೆ. ಇದನ್ನು ಕಳೆದ ಮೂರು ವರ್ಷಗಳಿಂದಲೂ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಅವರಿಗೆ ಜನರ ಮುಂದೆ ಹೇಳಲು ತಮ್ಮ ಸರ್ಕಾರದ ಯಾವುದೇ ಪ್ರಮುಖ ಸಾಧನೆಗಳಿಲ್ಲ. ಹೀಗಾಗಿ, ಇಂಥ ವಿಷಯಗಳನ್ನು ಹೇಳುತ್ತಾರೆ. ಅದೇ ನೋಡಿ, ಪ್ರಧಾನಿ ಮೋದಿ ಅವರು ಪ್ರತಿ ಬಾರಿಯೂ ತಮ್ಮ ಭಾಷಣದಲ್ಲಿ ಹೊಸ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಸಿದ್ದರಾಮಯ್ಯ ಅವರ ಭಾಷಣ ಹೇಗಾಗಿದೆ ಎಂದರೆ, ಅವರ ವರ್ಕಿಂಗ್ ಕ್ಯಾಪಿಟಲ್ ಕಡಮೆ, ಟರ್ನೋವರ್ ಜಾಸ್ತಿ ಎಂಬಂತಾಗಿದೆ.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಿಂದಲೂ ಸ್ಪರ್ಧಿಸುತ್ತಿದ್ದಾರಲ್ಲ?

ಅವರಿಗೆ ಬಾದಾಮಿ ಸಿಗುತ್ತೋ, ಗೋಡಂಬಿ ಸಿಗುತ್ತೋ ಗೊತ್ತಿಲ್ಲ. ಸಿಎಂಗೆ ಆತಂಕ ಉಂಟಾಗಿದ್ದರಿಂದಲೇ ಬೇರೊಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಂಡಿದ್ದಾರೆ. ಆದರೆ, ಅವರು ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ರೀತಿ ಐತಿಹಾಸಿಕ ಅವಶೇಷ ಆಗಬಾರದು ಅಷ್ಟೆ. 

ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಕೊನೆಯ ಹಂತದಲ್ಲಿ ಟಿಕೆಟ್ ಕೈಕೊಟ್ಟಿದ್ದು ಸರಿಯೇ?

ಈ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟನೆ ಕೊಟ್ಟಿರುವುದರಿಂದ ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ.

Follow Us:
Download App:
  • android
  • ios