ಸಂಸದ ಶ್ರೀರಾಮುಲುಗೆ ಮಾಜಿ ಮಿತ್ರನಿಂದಲೇ ಸವಾಲ್‌

Sriramulu Molakalmuru Constituency Fight
Highlights

ಮೋಹಕ ಝರಿಯಂಚಿನ ರೇಷ್ಮೆ ಸೀರೆ ನೇಯ್ಗೆಯ ಸುಂದರ ನೆನಪುಗಳನ್ನೇ ಹೊದ್ದು ಮಲಗಿದ್ದ ಮೊಳಕಾಲ್ಮುರು ಎಂಬ ಬೆಂಗಾಡು ಈ ಬಾರಿಯ ವಿಧಾನಸಭೆ ಚುನಾವಣೆಗೆ ದಿಗ್ಗನೆ ಎದ್ದು ಕುಳಿತಿದೆ. ಸಂಸದ ಶ್ರೀರಾಮುಲು ಪ್ರವೇಶದಿಂದಾಗಿ 37 ಡಿಗ್ರಿ ರಣರಣ ಬಿಸಿಲನ್ನು ಪಕ್ಕಕ್ಕೆ ಸರಿಸಿರುವ ಮತದಾರ ಪ್ರಬುದ್ಧತೆ ಮೆರೆಯಲು ಮುಂದಾಗಿದ್ದಾನೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ :  ಮೋಹಕ ಝರಿಯಂಚಿನ ರೇಷ್ಮೆ ಸೀರೆ ನೇಯ್ಗೆಯ ಸುಂದರ ನೆನಪುಗಳನ್ನೇ ಹೊದ್ದು ಮಲಗಿದ್ದ ಮೊಳಕಾಲ್ಮುರು ಎಂಬ ಬೆಂಗಾಡು ಈ ಬಾರಿಯ ವಿಧಾನಸಭೆ ಚುನಾವಣೆಗೆ ದಿಗ್ಗನೆ ಎದ್ದು ಕುಳಿತಿದೆ. ಸಂಸದ ಶ್ರೀರಾಮುಲು ಪ್ರವೇಶದಿಂದಾಗಿ 37 ಡಿಗ್ರಿ ರಣರಣ ಬಿಸಿಲನ್ನು ಪಕ್ಕಕ್ಕೆ ಸರಿಸಿರುವ ಮತದಾರ ಪ್ರಬುದ್ಧತೆ ಮೆರೆಯಲು ಮುಂದಾಗಿದ್ದಾನೆ. ಶ್ರೀರಾಮುಲು ಅವರ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ತಿಪ್ಪೇಸ್ವಾಮಿ ಈ ಬಾರಿ ಪಕ್ಷೇತರರಾಗಿ ಅದೇ ಶ್ರೀರಾಮುಲುಗೆ ಸಡ್ಡು ಹೊಡೆದಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು.

ಸಾಮಾನ್ಯ ಕ್ಷೇತ್ರವಾಗಿದ್ದ ಮೊಳಕಾಲ್ಮುರು ಕ್ಷೇತ್ರ ಪುನರ್‌ ವಿಂಗಡಣೆ ನಂತರ ಪರಿಶಿಷ್ಟಪಂಗಡಕ್ಕೆ ಮೀಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ಕ್ಷೇತ್ರ ಕೂಡಾ ಪರಿಶಿಷ್ಟಪಂಗಡದ ಮೀಸಲಾಗಿದೆ. ಆ ಕಾರಣಕ್ಕಾಗಿಯೇ ಎಸ್ಟಿಮೀಸಲು ಕ್ಷೇತ್ರಗಳನ್ನು ಬಿಜೆಪಿ ವಶಕ್ಕೆ ಪಡೆಯುವ ಸಂಬಂಧ ಶ್ರೀರಾಮುಲು ಅವರನ್ನು ಮೊಳಕಾಲ್ಮುರಿನಿಂದ ಕಣಕ್ಕೆ ಇಳಿಸಲಾಗಿದೆ. ತಿಪ್ಪೇಸ್ವಾಮಿ ಬಂಡೆದ್ದ ಕಾರಣದಿಂದ ಗೆಲುವು ಅಷ್ಟುಸುಲಭವಾಗಿಲ್ಲ. ಮೂಲ ನಿವಾಸಿಗಳ ಭಾರಿ ಪ್ರಮಾಣದ ಅಲೆ ಎದ್ದಿದ್ದು, ಈ ಅಲೆಯಲ್ಲಿ ಶ್ರೀರಾಮುಲು ತೇಲಿ ಹೋಗಿ ಜಯ ಸಾಧಿಸುತ್ತಾರಾ ಅಥವಾ ಕೊಚ್ಚಿಕೊಂಡು ಹೋಗುತ್ತಾರಾ ಎಂಬ ಅನುಮಾನಗಳು ವ್ಯಾಪಕಗೊಂಡಿವೆ.

ಕಾಂಗ್ರೆಸ್‌ ಭದ್ರಕೋಟೆ:

ಹಾಗೆ ನೋಡಿದರೆ ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಇದುವರೆಗೂ ನಡೆದ ಹದಿನೈದು ಚುನಾವಣೆಗಳಲ್ಲಿ ಕಾಂಗ್ರೆಸ್‌ 12 ಬಾರಿ ಗೆದ್ದಿದೆ. ಉಳಿದಂತೆ ಈ ಕ್ಷೇತ್ರ ಜನತಾಪಕ್ಷ ಹಾಗೂ ಪಿಎಸ್ಪಿ ಪಾಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಿಪ್ಪೇಸ್ವಾಮಿ ಅವರು ಶ್ರೀರಾಮುಲು ಅವರ ಬಿಎಸ್ಸಾರ್‌ ಕಾಂಗ್ರೆಸ್‌ನಿಂದ ಗೆದ್ದು ಅಚ್ಚರಿ ಮೂಡಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಇದೇ ಕ್ಷೇತ್ರದಲ್ಲಿ 1957ರಲ್ಲಿ ಗೆದ್ದಿದ್ದರು. ನಾಯಕ ಜನಾಂಗದವರೇ ಅತಿ ಹೆಚ್ಚು ಬಾರಿ ಇಲ್ಲಿ ಆಯ್ಕೆಯಾಗಿದ್ದು, ಲಿಂಗಾಯತರು ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಎನ್‌ ವೈ. ಗೋಪಾಲಕೃಷ್ಣ ಇಲ್ಲಿ ಗೆದ್ದಿರುವುದು ವಿಶೇಷ.

ಹಾಲಿ ಬಿಜೆಪಿಯಿಂದ ಶ್ರೀರಾಮುಲು, ಪಕ್ಷೇತರ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ, ಜೆಡಿಎಸ್‌ನಿಂದ ಎತ್ತಿನಹಟ್ಟಿಗೌಡ ಹಾಗೂ ಕಾಂಗ್ರೆಸ್‌ನಿಂದ ಡಾ.ಯೋಗೇಶ್‌ ಕುಮಾರ್‌ ಕಣದಲ್ಲಿದ್ದಾರೆ. ಬಳ್ಳಾರಿ ಗ್ರಾಮೀಣ ಶಾಸಕ ಎನ್‌ ವೈ. ಗೋಪಾಲಕೃಷ್ಣ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದರು. ಆದರೆ ಹೈಕಮಾಂಡ್‌ ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಯೋಗೇಶ್‌ ಕುಮಾರ್‌ ಅವರನ್ನು ಕಣಕ್ಕಿಳಿಸಿದೆ. ಇದರಿಂದ ರೊಚ್ಚಿಗೆದ್ದ ಎನ್‌.ವೈ. ಗೋಪಾಲಕೃಷ್ಣ ಬಿಜೆಪಿ ಸೇರಿ ಕೂಡ್ಲಿಗಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಮ್ಯಾಸನಾಯಕರು, ಊರ ನಾಯಕರೆಂಬ ಹವಾ:

ಕ್ಷೇತ್ರದಲ್ಲಿ ನಾಯಕ ಸಮಾಜದ ಜನಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮ್ಯಾಸ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಅಂಶವನ್ನು ಪ್ರಧಾನವಾಗಿಟ್ಟುಕೊಂಡು ಉಳಿದ ಅಭ್ಯರ್ಥಿಗಳು ಶ್ರೀರಾಮುಲು ಮೇಲೆ ದಾಳಿ ನಡೆಸುತ್ತಿದ್ದಾರೆ. ಶಾಸಕ ತಿಪ್ಪೇಸ್ವಾಮಿಯಂತೂ ನಾಮಪತ್ರ ಸಲ್ಲಿಸುವ ವೇಳೆ ಹೆಗಲ ಮೇಲೆ ಕಂಬಳಿ ಹೊದ್ದು ಪಕ್ಕಾ ಮ್ಯಾಸ ಬ್ಯಾಡರ ಶೈಲಿಯಲ್ಲಿ ಆಗಮಿಸಿ ಬುಡಕಟ್ಟು ಸಂಸ್ಕೃತಿ ಮೆರೆದಿದ್ದರು. ಶ್ರೀರಾಮುಲು ಅವರನ್ನು ಊರು ನಾಯಕರೆಂದು ಬಿಂಬಿಸಲಾಗುತ್ತಿದೆ.

ಶ್ರೀರಾಮುಲು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದ ತರುವಾಯ ಮೊದಲ ಬಾರಿಗೆ ನಾಯಕನಹಟ್ಟಿತಿಪ್ಪೇರುದ್ರಸ್ವಾಮಿ ಪೂಜೆಗೆಂದು ಆಗಮಿಸಿದಾಗ ತಿಪ್ಪೇಸ್ವಾಮಿ ಬೆಂಬಲಿಗರು ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಚಪ್ಪಲಿ ತೂರಿ ಆಕ್ರೋಶ ಹೊರ ಹಾಕಿದ್ದರು. ಕ್ಷೇತ್ರದ ಜನತೆ ಯಾವುದೇ ಕಾರಣದಿಂದ ಹೊರಗಿನವರಿಗೆ ಮಣೆ ಹಾಕುವುದಿಲ್ಲ, ವಾಪಸ್‌ ಹೋಗಿ ಎಂದು ಶ್ರೀರಾಮಲುಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದರು.

ಹಾಗೆ ನೋಡಿದರೆ ತಿಪ್ಪೇಸ್ವಾಮಿ ಅವರಿಗೆ ಹಿಂದೆ ಶ್ರೀರಾಮುಲು ಬಿಎಸ್ಸಾರ್‌ ಕಾಂಗ್ರೆಸ್‌ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಿಪ್ಪೇಸ್ವಾಮಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಬಾರಿ ಟಿಕೆಟ್‌ ಬಯಸಿದ್ದರು. ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದ್ದರಿಂದ ಸಿಟ್ಟಿಗೆದ್ದಿದ್ದ ತಿಪ್ಪೇಸ್ವಾಮಿ, ಕಾಂಗ್ರೆಸ್‌ ಮನೆ ಬಾಗಿಲು ಕೂಡಾ ತಟ್ಟಿವಾಪಸ್‌ ಬಂದಿದ್ದರು. ಆದರೆ ಕಾಂಗ್ರೆಸ್‌ ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಯೋಗೇಶ್‌ ಬಾಬು ಅವರನ್ನು ಕಣಕ್ಕಿಳಿಸಿದೆ.

ಹಾಲಿ ಕಣಕ್ಕಿಳಿದಿರುವ ತಿಪ್ಪೇಸ್ವಾಮಿ ಹಾಗೂ ಜೆಡಿಎಸ್‌ನ ಎತ್ತಿನಹಟ್ಟಿಗೌಡ ಅವರು ನಾಯಕನಹಟ್ಟಿಹೋಬಳಿ ವ್ಯಾಪ್ತಿಗೆ ಬರುತ್ತಾರೆ. ಡಾ.ಯೋಗೇಶ್‌ ಬಾಬು ರಾಂಪುರ ಹೋಬಳಿಗೆ ಬರುತ್ತಾರೆ. ಹಾಗಾಗಿ ನಾಯಕನಹಟ್ಟಿಹೋಬಳಿಯಲ್ಲಿ ಶ್ರೀರಾಮುಲು ಮತ ಪಡೆಯುವುದು ಕಷ್ಟಸಾಧ್ಯವಾಗಿದ್ದು, ಉಳಿದ ಕಡೆ ಒಲವು ಇದೆ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಗ್ರಾಮೀಣದ ಶಾಸಕ ಎನ್‌ ವೈ. ಗೋಪಾಲಕೃಷ್ಣ ಮೂಲತಃ ರಾಂಪುರದವರೇ ಆಗಿದ್ದು ಇದೀಗ ಬಿಜೆಪಿಗೆ ಸೇರಿದ್ದರಿಂದ ಶ್ರೀರಾಮುಲು ಗೆಲವಿಗೆ ಶ್ರಮಿಸಲಿದ್ದಾರೆ.

ಶೇ.7.5 ಮೀಸಲು ಅಸ್ತ್ರ:

ಚುನಾವಣೆ ಪ್ರಚಾರದ ವೇಳೆ ಶ್ರೀರಾಮುಲು ಅವರು ನಾಯಕ ಸಮಾಜದ ಯಾವುದೇ ಬಗೆಯ ಒಳ ಪಂಗಡಗಳ ವಿಷಯ ಪ್ರಸ್ತಾಪಿಸುತ್ತಿಲ್ಲ. ನಾಯಕ ಸಮಾಜಕ್ಕೆ ಶೇ.7.5ರಷ್ಟುಮೀಸಲಾತಿ ನೀಡುವಲ್ಲಿ ಕಾಂಗ್ರೆಸ್‌ ಸರ್ಕಾರ ಉದಾಸೀನ ತೋರಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಾಯಕ ಸಮಾಜಕ್ಕೆ ಶೇ.7.5ರಷ್ಟುಮೀಸಲಾತಿ ಕಲ್ಪಿಸಲಾಗುವುದೆಂಬ ಭಾಷಣವನ್ನು ಎಲ್ಲ ಕಡೆ ಮಾಡುತ್ತಿದ್ದಾರೆ. ಈ ಒಂದು ಅಂಶ ಬಿಟ್ಟರೆ ಶ್ರೀರಾಮುಲು ಪರವಾಗಿ ಯಾವ ಅಲೆಯೂ ಇಲ್ಲ.

ರಾಂಪುರ ಹೋಬಳಿಯಲ್ಲಿ ಲಿಂಗಾಯತ ಸಮುದಾಯದ ಹೆಚ್ಚು ಮತಗಳಿವೆ. ಬಿಜೆಪಿ ಧುರೀಣ ನಾಗಿರೆಡ್ಡಿ ಖುದ್ದು ಆಸಕ್ತಿ ವಹಿಸಿ ಶ್ರೀರಾಮುಲು ಅವರನ್ನು ಕ್ಷೇತ್ರಕ್ಕೆ ಆಹ್ವಾನಿಸಿದ್ದರು. ಹಾಗಾಗಿ ಲಿಂಗಾಯತರ ಮತಗಳು ಇಡಿಯಾಗಿ ಶ್ರೀರಾಮುಲುಗೆ ಬೀಳುವ ಸಾಧ್ಯತೆಗಳು ಒಂದೆಡೆಯಿದ್ದರೆ, ಮತ್ತೊಂದೆಡೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಶ್ರೀರಾಮುಲು ಉಪಮುಖ್ಯಮಂತ್ರಿಯಾಗುತ್ತಾರೆಂಬ ಸುದ್ದಿಯನ್ನು ಎಲ್ಲ ಕಡೆ ಬಿತ್ತರಿಸಲಾಗುತ್ತಿದೆ.

ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಗಡಿಯಂಚಿನ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ಶ್ರೀರಾಮುಲು ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಂಪರ್ಕ ಸಾಧಿಸಿ ಅವರ ಮೂಲಕ ಮತಗಳ ಗುಡ್ಡೆ ಹಾಕುವ ಪ್ರಯತ್ನದಲ್ಲಿದ್ದಾರೆ. ಮತ್ತೊಂದೆಡೆ ತಿಪ್ಪೇಸ್ವಾಮಿ ಜೊತೆಗಿದ್ದ ಮೂಲ ಬಿಜೆಪಿಗರು ಇದೀಗ ಶ್ರೀರಾಮುಲು ಕಡೆ ವಲಸೆ ಬಂದಿದ್ದರಿಂದ ಫಲಿತಾಂಶ ಹೀಗೆಯೇ ಇರುತ್ತದೆ ಎಂದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಡಾ.ಯೋಗೇಶ್‌ ಬಾಬು ಯುವಕನಾಗಿದ್ದು ಸ್ಥಳೀಯ ಎಂಬ ಕಾರಣಕ್ಕೆ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಶ್ರೀರಾಮುಲು, ತಿಪ್ಪೇಸ್ವಾಮಿ ಹಾಗೂ ಕಾಂಗ್ರೆಸ್‌ ನ ಡಾ.ಯೋಗೀಶ್‌ ಬಾಬು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ದಲಿತರು ಹಾಗೂ ಲಿಂಗಾಯಿತ ಮತಗಳನ್ನು ಯಾರು ಪಡೆಯುತ್ತಾರೋ ಅವರು ಸುಲಭವಾಗಿ ಜಯ ಸಾಧಿಸುತ್ತಾರೆ.


2013ರಲ್ಲಿ ಪಡೆದ ಮತಗಳ ವಿವರ

ತಿಪ್ಪೇಸ್ವಾಮಿ ಬಿಎಸ್‌ಆರ್‌ 76827

ಎನ್‌ ವೈ. ಗೋಪಾಲಕೃಷ್ಣ ಕಾಂಗ್ರೆಸ್‌ 69658

ಜಾತಿ ಲೆಕ್ಕಾಚಾರ

ಒಟ್ಟು ಮತದಾರರು 2,27,104

ನಾಯಕರು- 90 ಸಾವಿರ

ದಲಿತರು- 42 ಸಾವಿರ

ಕುರುಬರು- 15 ಸಾವಿರ

ಯಾದವರು- 2 ಸಾವಿರ

ಮುಸ್ಲಿಮರು- 23 ಸಾವಿರ

ಲಿಂಗಾಯತರು- 18 ಸಾವಿರ

ನೇಕಾರರು- 8 ಸಾವಿರ

ಇತರೆ- 15 ಸಾವಿರ

loader