ಬಿಜೆಪಿಗೆ ಸೌಮ್ಯಾ ರೆಡ್ಡಿ ಚಾಲೆಂಜ್

Soumya Reddy challenge To BJP
Highlights

ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಜಯನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.ಇದೀಗ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಪುನಃ ತನ್ನ ತಂದೆಯ ತವರು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮರಳಿದ್ದು, ಕೂತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು : ಪ್ರಜ್ಞಾವಂತ, ಸುಶಿಕ್ಷಿತ, ಶ್ರೀಮಂತ ಜನರೇ ಹೆಚ್ಚಾಗಿರುವ ಬಹುತೇಕ ಅಭಿವೃದ್ಧಿ ಹೊಂದಿದ ಕ್ಷೇತ್ರ ಜಯನಗರ. ಸುಂದರವಾದ ರಸ್ತೆಗಳು, ಒಳಚರಂಡಿ, ಉದ್ಯಾನವನ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಯಾವುದೇ ಕೊರತೆ ಇಲ್ಲದ ಸುಭಿಕ್ಷ ಕ್ಷೇತ್ರ. ಮೈಸೂರಿನ ಮಹಾರಾಜರಾಗಿದ್ದ ಜಯ ಚಾಮರಾಜೇಂದ್ರ ಒಡೆಯರ್ ಅವರ ಹೆಸರಿನಿಂದ ಈ ಕ್ಷೇತ್ರಕ್ಕೆ ಜಯನಗರ ಎಂಬ ಹೆಸರು ಬಂದಿದೆ ಎಂಬುದು ಜನೋಕ್ತಿ.

ಬಸವನಗುಡಿ, ಜೆ.ಪಿ.ನಗರ, ಬನಶಂಕರಿ ಹಾಗೂ ಬಿಟಿಎಂ ಬಡಾವಣೆಗಳಿಂದ ಸುತ್ತುವರಿದಿರುವ ಈ ಕ್ಷೇತ್ರದಲ್ಲಿ ಕನ್ನಡಿಗರು ಬಹುಸಂಖ್ಯಾತರು. ಸುಮಾರು ೧೦ ಬ್ಲಾಕ್ ಗಳನ್ನು ಹೊಂದಿರುವ ಜಯನಗರ ಕ್ಷೇತ್ರದಲ್ಲಿ ಅಗಲವಾದ ರಸ್ತೆಗಳು, ಐತಿಹಾಸಿಕ ಅಶೋಕ ಸ್ತಂಭ, ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣ ಇದೆ. ರಾಗೀಗುಡ್ಡದ ಶ್ರೀಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳು, ವಿಜಯ ಕಾಲೇಜು, ಜಯನಗರ ನ್ಯಾಷನಲ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳ ಶಿಕ್ಷಣ ತಾಣವೂ ಆಗಿದೆ.
ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಜಯನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಅದಕ್ಕೂ ಮೊದಲು 4 ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಮಲಿಂಗಾರೆಡ್ಡಿ ಅವರನ್ನು ಜಯನಗರ ಕ್ಷೇತ್ರದ ಮತದಾರರು ಗೆಲ್ಲಿಸಿದ್ದರು.
2008 ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ರಾಮಲಿಂಗಾರೆಡ್ಡಿ ಹೊಸ ವಿಧಾನಸಭಾ ಕ್ಷೇತ್ರವಾಗಿದ್ದ ಬಿಟಿಎಂ ಲೇಔಟ್‌ಗೆ ಹೋಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್ ಅವರನ್ನು 2008  ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರ ಗೆಲ್ಲಿಸುವ ಮೂಲಕ ಬಿಜೆಪಿಗೆ ಮಣೆ ಹಾಕಿದ್ದರು. ಇದೀಗ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಪುನಃ ತನ್ನ ತಂದೆಯ ತವರು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮರಳಿದ್ದು, ಕೂತೂಹಲಕ್ಕೆ ಕಾರಣವಾಗಿದೆ.
2008ರಿಂದ ಸತತ 2 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಹ್ಯಾಟ್ರಿಕ್ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಅವರಿಗೆ ಪ್ರಬಲ ಪೈಪೋಟಿ ನೀಡಲು ಕಣಕ್ಕಿಳಿದಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಈಗಾಗಲೇ ಕ್ಷೇತ್ರಾದ್ಯಂತ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಶಾಸಕರಾಗಿ  ಆಯ್ಕೆಯಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಇವರಿಬ್ಬರ ಹೊರತಾಗಿ ಆಮ್‌ಆದ್ಮಿ ಪಕ್ಷದಿಂದ ಹೊರಬಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿರುವ ರವಿಕೃಷ್ಣಾ ರೆಡ್ಡಿ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ನಡುವೆ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರುಪ್ರಾದೇಶಿಕ ಪಕ್ಷಕ್ಕೆ ಮತ ನೀಡುವಂತೆ ಮತಯಾಚನೆಗೆ ತೊಡಗಿದ್ದಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಸುಮಾರು 12 ಸಾವಿರಕ್ಕೂ ಅಧಿಕ ಮತಗಳಿಸಿ 3ನೇ ಸ್ಥಾನ ಪಡೆದಿದ್ದನ್ನು ಕಡೆಗಣಿಸುವಂತಿಲ್ಲ.

ಮತದಾರರ ಸಂಖ್ಯೆ: ಪ್ರಾಬಲ್ಯಪ್ರಸ್ತುತ ಕಾಂಗ್ರೆಸ್ ನಿಂದ ಸೌಮ್ಯ ರೆಡ್ಡಿ , ಬಿಜೆಪಿಯಿಂದ ಬಿ.ಎನ್. ವಿಜಯಕುಮಾರ್, ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾರೆಡ್ಡಿ, ಎಂಇಪಿಯಿಂದ ಸೈಯ್ಯದ್‌ಝಬಿ ಸೇರಿದಂತೆ ಒಟ್ಟು ೧೯ ಮಂದಿ ಚುನಾವಣಾ ಕಣದಲ್ಲಿ ಇದ್ದಾರೆ. 
ಜಯನಗರ ಕ್ಷೇತ್ರದಲ್ಲಿ ಪಟ್ಟಾಭಿರಾಮನಗರ,  ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆಪಿನಗರ, ಸಾರಕ್ಕಿ, ಶಾಖಾಂಬರಿ ನಗರ ಹೀಗೆ ಏಳು ಬಿಬಿಎಂಪಿ ವಾರ್ಡ್‌ಗಳಿದ್ದು, ಐದರಲ್ಲಿ ಬಿಜೆಪಿ ಹಾಗೂ ಎರಡರಲ್ಲಿ ಕಾಂಗ್ರೆಸ್ ಸದಸ್ಯ ಗೆಲುವು ಸಾಧಿಸಿದ್ದಾರೆ. ಇನ್ನು ಕ್ಷೇತ್ರದ ಜಾತಿ ಸಮೀಕರಣ ಗಮನಿಸಿದರೆ ಬ್ರಾಹ್ಮಣರು, ಮುಸ್ಲಿಮರು, ವೈಶ್ಯರು, ಜೈನರು ಹಾಗೂ ಹಿಂದುಳಿದ ವರ್ಗದ ಮತಗಳು ಭಾರೀ
ಪ್ರಾಮುಖ್ಯತೆ ಪಡೆದುಕೊಂಡಿವೆ. 
ಅಂದರೆ, ಈ ಕ್ಷೇತ್ರದಲ್ಲಿ ಬಿಜೆಪಿಯು ಸಾಂಪ್ರಾದಾಯಿಕ ಮತ ಹೊಂದಿರುವಂತೆಯೇ ಅದಕ್ಕೆ ಠಕ್ಕರ್ ಕೊಡುವಷ್ಟು ಸ್ವಂತ ಮತಗಳು ಕಾಂಗ್ರೆಸ್‌ಗೂ ಇದೆ. ಅಭಿವೃದ್ಧಿ ವಿಚಾರದಲ್ಲಿ ದೂರುಗಳು ಇಲ್ಲದಿರುವ ಕಾರಣ ವಿಜಯಕುಮಾರ್ ಅವರಿಗೆ ಈ ಅಂಶ ನೆರವಾಗಬಹುದು. ಆದರೆ, ಈ ಅಭಿವೃದ್ಧಿ ಹೆಚ್ಚು ನಡೆದಿದ್ದು ರಾಮಲಿಂಗಾರೆಡ್ಡಿ ಅವರು ಈ ಕ್ಷೇತ್ರದ ಶಾಸಕರಾಗಿದ್ದಾಗ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. 

loader