ಬಿಜೆಪಿ ಟಿಕೆಟ್‌ ಗಿಟ್ಟಿಸಿದ ಸೋಮಣ್ಣ ಪುತ್ರ ಸ್ಪರ್ಧೆಗೆ ಹಿಂದೇಟು?

Somanna Son Not Interest To Contest Election
Highlights

ಕಾಡಿ ಬೇಡಿ ಟಿಕೆಟ್‌ ಗಿಟ್ಟಿಸಿಕೊಂಡ ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್‌ ಅವರು ಈಗ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಹಿಂದೇಟು ಹಾಕಿದ್ದು, ಸ್ಪರ್ಧಿಸುವುದು ಅನುಮಾನವಾಗಿದೆ.

ಬೆಂಗಳೂರು/ ಹಾಸನ : ಕಾಡಿ ಬೇಡಿ ಟಿಕೆಟ್‌ ಗಿಟ್ಟಿಸಿಕೊಂಡ ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್‌ ಅವರು ಈಗ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಹಿಂದೇಟು ಹಾಕಿದ್ದು, ಸ್ಪರ್ಧಿಸುವುದು ಅನುಮಾನವಾಗಿದೆ.

ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಅಪ್ಪ ಮಕ್ಕಳಿಬ್ಬರೂ ಮೊಬೈಲ್‌ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಧಿಕೃತವಾಗಿ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಅರುಣ್‌ ಸೋಮಣ್ಣ ಅವರಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲು-ರಾತ್ರಿ ಮೊಬೈಲ್‌ಗೆ ಮಾಡಿದರೂ ಸಿಗುತ್ತಿಲ್ಲ. ಸ್ವಿಚ್‌ ಆಫ್‌ ಎಂಬ ಉತ್ತರ ಸಿಗುತ್ತಿದೆ ಎಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಸೋಮಣ್ಣ ಅವರು ತಮ್ಮ ಇಬ್ಬರು ಶಿಷ್ಯಂದಿರು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರೂ ಆಗಿರುವ ಎಚ್‌.ರವೀಂದ್ರ ಅವರಿಗೆ ವಿಜಯನಗರ ಹಾಗೂ ಎಂ.ಲಕ್ಷ್ಮೇನಾರಾಯಣ ಅವರಿಗೆ ಚಾಮರಾಜಪೇಟೆ ಕ್ಷೇತ್ರಗಳಿಂದ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವೆರಡೂ ತಮ್ಮ ಅಕ್ಕಪಕ್ಕದ ಕ್ಷೇತ್ರಗಳಾಗಿರುವುದರಿಂದ ಈ ಮೂರು ಕ್ಷೇತ್ರಗಳತ್ತ ಗಮನ ಕೊಡುವುದು ಮುಖ್ಯವಾಗಿದ್ದು, ದೂರದ ಅರಸೀಕೆರೆ ಕ್ಷೇತ್ರಕ್ಕೆ ಹೋಗಿ ಮಗನ ಚುನಾವಣೆಯ ಜವಾಬ್ದಾರಿ ನಿಭಾಯಿಸುವುದು ಕಷ್ಟಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಒಂದೂವರೆ ತಿಂಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಸೋಮಣ್ಣ ಅವರನ್ನು ಕರೆದು ಪುತ್ರ ಅರುಣ್‌ಗೆ ಟಿಕೆಟ್‌ ನೀಡುತ್ತೇನೆ. ಈಗಿನಿಂದಲೇ ಕೆಲಸ ಶುರು ಮಾಡಿ ಎಂಬ ಸೂಚನೆ ರೂಪದ ಸ್ಪಷ್ಟಭರವಸೆ ಕೊಟ್ಟಿದ್ದರು. ಅದಾದ ಬೆನ್ನಲ್ಲೇ ಯಡಿಯೂರಪ್ಪ ಅವರ ಆಪ್ತರೂ ಆಗಿರುವ ಸ್ಥಳೀಯ ಮುಖಂಡರಿಬ್ಬರು ತಮಗೂ ಟಿಕೆಟ್‌ ಕೊಡಿ ಎಂಬ ಬೇಡಿಕೆ ಇಡುವುದರ ಜತೆಗೆ ಅಸಹಕಾರವನ್ನೂ ಆರಂಭಿಸಿದರು.

ಇದನ್ನು ಸೋಮಣ್ಣ ಅವರು ಯಡಿಯೂರಪ್ಪ ಅವರ ಗಮನಕ್ಕೆ ತಂದರೂ ಸ್ಥಳೀಯ ಮುಖಂಡರ ಅಸಮಾಧಾನ, ಅಸಹಕಾರ ನಿವಾರಣೆಯಾಗಲಿಲ್ಲ. ಇದರಿಂದ ಬೇಸರಗೊಂಡಿದ್ದ ಸೋಮಣ್ಣ ಮತ್ತವರ ಪುತ್ರ ಅರುಣ್‌ ಒಂದು ವಾರ ಕಾಲ ಕ್ಷೇತ್ರದಲ್ಲಿ ಸಂಚರಿಸಿದ ನಂತರ ಏಕಾಏಕಿ ಮೌನಕ್ಕೆ ಶರಣಾಗಿದ್ದರು.

ಇದರೊಂದಿಗೆ ಕೊನೆಯ ಪಟ್ಟಿಶುಕ್ರವಾರ ಪ್ರಕಟಗೊಳ್ಳುವವರೆಗೂ ಪುತ್ರನಿಗೆ ಟಿಕೆಟ್‌ ನೀಡುವ ಬಗ್ಗೆ ಯಾವುದೇ ಸ್ಪಷ್ಟಭರವಸೆಯೂ ಸಿಕ್ಕಿರಲಿಲ್ಲ. ಇದು ಕೂಡ ಸೋಮಣ್ಣ ಅವರ ಬೇಸರಕ್ಕೆ ಕಾರಣ ಎನ್ನಲಾಗಿದೆ.

ಇದೀಗ ಪಕ್ಷದ ವರಿಷ್ಠರು ಟಿಕೆಟ್‌ ನೀಡಿರುವುದರಿಂದ ಸ್ಪರ್ಧಿಸುವಂತೆ ಸ್ಪಷ್ಟನಿರ್ದೇಶನ ನೀಡಿದರೆ ಸೋಮಣ್ಣ ಅವರು ಏನು ಮಾಡುತ್ತಾರೆ ಎಂಬುದು ಕುತೂಹಲಕರವಾಗಿದೆ.

 

loader