ಮದ್ದೂರು :  ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಜೊತೆಯಲ್ಲಿ ಕಾಂಗ್ರೆಸ್‌ ತೊರೆದಿದ್ದ ಅನೇಕ ಬೆಂಬಲಿಗರು ಇದೀಗ ಮತ್ತೆ ಕಾಂಗ್ರೆಸ್‌ಗೆ ಸೇರಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿಯಲ್ಲಿ ಕೃಷ್ಣ ಅವರಿಗೆ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್‌ನಲ್ಲೇ ಮುಂದುವರಿಯುವ ನಿರ್ಧಾರ ಕೈಗೊಂಡಿದ್ದಾರೆ.

ಕೃಷ್ಣ ಅವರ ಬೆಂಬಲಿಗರಾದ ಎಸ್‌. ಗುರುಚರಣ್‌, ಮಾಜಿ ಶಾಸಕ ಬಿ. ರಾಮಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಲೂಕು ಪಂಚಾಯ್ತಿ ಸದಸ್ಯ ಚೆಲುವರಾಜು, ಮುಖಂಡರಾದ ಎನ್‌.ಲಕ್ಷ್ಮಣ್‌ ಕುಮಾರ್‌, ತೈಲೂರು ರಘು, ಟಿ.ಎಸ್‌. ಸತ್ಯಾನಂದ ನೇತೃತ್ವದಲ್ಲಿ ನೂರಾರು ಬೆಂಬಲಿಗರು ಕೃಷ್ಣ ಅವರ ಸ್ವಗ್ರಾಮವಾದ ಸೋಮನಹಳ್ಳಿಯ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ. ಮಾದೇಗೌಡ ಪರ ಚುನಾವಣಾ ಪ್ರಚಾರ ನಡೆಸಿದರು.

ಬಳಿಕ ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ, ತೈಲೂರು, ಮಾದನಾಯಕನಹಳ್ಳಿ, ಕೆ. ಹೊನ್ನಲಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೊಂದಿಗೆ ಸುಡು ಬಿಸಿಲನ್ನು ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿಸಿಕೊಂಡರು. ರಾಮಲಿಂಗೇಗೌಡ, ತಾಪಂ ಮಾಜಿ ಅಧ್ಯಕ್ಷ ಪಿ. ಸಂದರ್ಶನ್‌ ಜೊತೆಗೆ ಅಜ್ಜಹಳ್ಳಿ ರಾಮಕೃಷ್ಣ, ಗೊರವನಹಳ್ಳಿ ಸಿದ್ದರಾಮು ಸೇರಿದಂತೆ ಹಲವರು ಸಾಥ್‌ ನೀಡಿದರು.