ಬೆಂಗಳೂರು (ಮೇ. 22): ಕಳೆದ ಜನವರಿಯಲ್ಲಿ ಮಾಯಾವತಿ ಆಪ್ತ ಸತೀಶ್ ಚಂದ್ರ ಮಿಶ್ರಾ ಬೆಂಗಳೂರಿಗೆ ಬಂದು ಕಾಂಗ್ರೆಸ್ ಜೊತೆಗೆ ಮೈತ್ರಿಗಾಗಿ ಸಿದ್ದರಾಮಯ್ಯ ಭೇಟಿಗೆ ಪ್ರಯತ್ನ ಪಟ್ಟಿದ್ದರು. ಆದರೆ ಉತ್ಸಾಹದಲ್ಲಿದ್ದ ಸಿದ್ದು, ಉತ್ತರ ಪ್ರದೇಶದಲ್ಲೇ ಏನೂ ಮಾಡಲು ಆಗದವರು ಇಲ್ಲೇನು ಮಾಡುತ್ತಾರೆ ಎಂದು ಇಲ್ಲ ಅಂದರಂತೆ.

ಇದನ್ನು ದೂರದಿಂದ ಗಮನಿಸುತ್ತಿದ್ದ ದೇವೇಗೌಡರು ದೆಹಲಿಗೆ ಬಂದಾಗ ತಾನೇ ಮಾಯಾವತಿ ನಿವಾಸಕ್ಕೆ ಹೋಗಿ ಮೈತ್ರಿ ಮಾತುಕತೆ ಮುಗಿಸಿಯೇಬಿಟ್ಟರಂತೆ. ಕರ್ನಾಟಕದಲ್ಲಿ ಸ್ವಲ್ಪ ಲಾಭ ಆದರೆ ಮಾಯಾವತಿ ಜೊತೆ ಇರೋದು ಅಂದರೆ ಬಿಜೆಪಿ ವಿರುದ್ಧ ಹೋಗೋದು ಎಂಬ ಸಂದೇಶ ದೆಹಲಿಗೆ ರವಾನೆಯಾಗುತ್ತದೆ. ಅದರಿಂದ ಮುಂದೆ ಉಪಯೋಗ ಆಗುತ್ತದೆ ಎಂದುಕೊಂಡಿದ್ದರಂತೆ ದೇವೇಗೌಡರು. ಮಾಯಾವತಿ ಜೊತೆ ಮೈತ್ರಿ ಆದ ಮೇಲೆಯೇ ಎಷ್ಟೋ ವರ್ಷಗಳಿಂದ ದೇವೇಗೌಡರನ್ನು ಮಾತನಾಡಿಸದ ಮಮತಾ ಬ್ಯಾನರ್ಜಿ, ಚಂದ್ರಶೇಖರ ರಾವ್, ಶರದ್ ಯಾದವ್ ಮುಂತಾದವರು ಹತ್ತಿರ ಬರಲು ಆರಂಭಿಸಿದರಂತೆ. ಕರ್ನಾಟಕದಲ್ಲಿ ಅಧಿಕಾರ ಪ್ರಾಪ್ತಿಯ ಮೊದಲನೇ ಮೆಟ್ಟಿಲು ದೆಹಲಿಯಲ್ಲೂ ರಾಜಕೀಯ ಮಹತ್ವ ಜಾಸ್ತಿ ಮಾಡಿಕೊಳ್ಳುವುದರ ಎರಡನೇ ಮೆಟ್ಟಿಲಿದ್ದಂತೆ.   

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ