ಬೆಂಗಳೂರು : ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಒಂದು ದಿನ ಬಾಕಿ ಇರುವ ಹಂತದಲ್ಲಿ ದಲಿತ ಸಿಎಂ ವಿಚಾರಕ್ಕೆ ಇಂಬು ನೀಡುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆ. ರಾಜ್ಯದಲ್ಲಿ ಈ ಬಾರಿ ಅತಂತ್ರ ವಿಧಾನ ಸಭೆ ರಚನೆಯಾಗುವುದೇ ಎಂಬ ಚರ್ಚೆ ತೀವ್ರವಾಗಿರುವ ಈ ಹಂತದಲ್ಲಿ ಸಿದ್ದರಾಮಯ್ಯ ದಲಿತ ಸಿಎಂ ಚರ್ಚೆಗೆ ಮರು ಹುಟ್ಟು ನೀಡಿದ್ದಾರೆ. 

ದಲಿತರನ್ನು ಮುಖ್ಯ ಮಂತ್ರಿ ಮಾಡಲು ಹೈಕಮಾಂಡ್ ನಿರ್ಧರಿಸಿದರೆ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಹಿಂದೆ ಪಕ್ಕಾ ರಾಜಕೀಯ ಲೆಕ್ಕಾಚಾರವಿದೆ ಎಂದೇ ಮೂಲಗಳು ವ್ಯಾಖ್ಯಾನಿಸುತ್ತಿವೆ

ದಲಿತ ಸಿಎಂ ಬೇಡಿಕೆಗೆ ಬಲ ಬಂದರೆ ಕಾಂಗ್ರೆಸ್ ನಿಂದ ತಮ್ಮ ಆಪ್ತ ಡಾ.ಎಚ್.ಸಿ. ಮಹದೇವಪ್ಪ ಅವರ ಹೆಸರನ್ನು ತೇಲಿಬಿಡುವ ಉದ್ದೇಶವೂ ಈ ಹೇಳಿಕೆಯ ಹಿಂದೆ ಇದೆ ಎನ್ನಲಾಗುತ್ತಿದೆ. ಬಹಿರಂಗವಾಗಿ ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳುತ್ತಿದ್ದರೂ, ಕಾಂಗ್ರೆಸ್ 100  ರ ಆಸುಪಾಸು ಬಂದು ನಿಲ್ಲುವ ಸಾಧ್ಯತೆಯನ್ನು ಹಿರಿಯ ಕಾಂಗ್ರೆಸ್ಸಿಗರು  ತಳ್ಳಿಹಾಕುತ್ತಿಲ್ಲ.

ಇಂತಹ ಸಂದರ್ಭದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಅನಿವಾರ್ಯವಾಗುತ್ತದೆ. ಹೇಗೆ ಕಾಂಗ್ರೆಸ್‌ಗೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆಯಿರುತ್ತದೆಯೋ ಅಂತಹುದೇ ಅವಕಾಶ ಬಿಜೆಪಿಗೂ ಇರುತ್ತದೆ. ಬಿಜೆಪಿ ಈಗಾಗಲೇ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರ ಮಧ್ಯಸ್ಥಿಕೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ನೇರ ಮಾತುಕತೆಯನ್ನು ಆರಂಭಿಸಿದೆ.