Asianet Suvarna News Asianet Suvarna News

ಶೋಭಾ ಚುನಾವಣೆಗೆ ಸ್ಪರ್ಧಿಸದಿರುವ ಹಿಂದೆ ಇರುವ ಕಾರಣವೇನು..?

ರಾಜ್ಯ ಬಿಜೆಪಿಯಲ್ಲಿ ಇತರ ನಾಯಕರದ್ದು ಒಂದು ತೂಕವಾದರೆ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ತೂಕವೇ ಮತ್ತೊಂದು. ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ಗೆಲುವು-ಸೋಲಿನ ಸಾಧ್ಯಾಸಾಧ್ಯತೆ, ಜನಾರ್ದನ ರೆಡ್ಡಿ ವಿವಾದ, ಸಿದ್ದರಾಮಯ್ಯ ಸೇರಿ ಹಲವು ವಿಚಾರಗಳ ಬಗ್ಗೆ ಶೋಭಾ ಮಾತು.

Shobha Karandlaje Interview

ವಿಜಯ್‌ ಮಲಗಿಹಾಳ

ಬೆಂಗಳೂರು :  ರಾಜ್ಯ ಬಿಜೆಪಿಯಲ್ಲಿ ಇತರ ನಾಯಕರದ್ದು ಒಂದು ತೂಕವಾದರೆ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ತೂಕವೇ ಮತ್ತೊಂದು.

ಈ ಚುನಾವಣೆ ಮೂಲಕ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಬಯಕೆ ಇದ್ದರೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಏಕೈಕ ಉದ್ದೇಶದಿಂದ ಶೋಭಾ ತಮ್ಮ ಆಸೆಯನ್ನು ತ್ಯಾಗ ಮಾಡಿ ಪ್ರಚಾರಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಚುನಾವಣಾ ನಿರ್ವಹಣಾ ಸಮಿತಿಯ ಜವಾಬ್ದಾರಿ ಹೊತ್ತು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆಯೇ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿರುವ ಶೋಭಾ, ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ಗೆಲುವು-ಸೋಲಿನ ಸಾಧ್ಯಾಸಾಧ್ಯತೆ, ಜನಾರ್ದನ ರೆಡ್ಡಿ ವಿವಾದ, ಸಿದ್ದರಾಮಯ್ಯ ಸೇರಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಒಂದು ಹಂತದಲ್ಲಿ ‘ಸಿದ್ದರಾಮಯ್ಯ ಅವರು ಹೈಕಮಾಂಡ್‌ ಮೀರಿ ಬೆಳೆಯಲು ಯತ್ನಿಸುತ್ತಿದ್ದಾರೆ’ ಎಂಬರ್ಥದ ಹೇಳಿಕೆಯನ್ನೂ ನೀಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಂತಿದೆ.

* ಹಿಂದೆ 2004ರಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು? ಇದೀಗ ಮತ್ತೆ ಅದು ಪುನರಾವರ್ತನೆಯಾಗಲಿದೆಯೇ?

- ಇಲ್ಲ. ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುತ್ತದೆ ಎಂಬ ಸಮೀಕ್ಷೆಗಳನ್ನು ರಾಜ್ಯದ ಜನರು ಹುಸಿಗೊಳಿಸಲಿದ್ದಾರೆ. 2004ರ ಫಲಿತಾಂಶ ಬಿಡಿ. 2008ರ ಫಲಿತಾಂಶವೂ ಪುನರಾವರ್ತನೆ ಆಗುವುದಿಲ್ಲ. ಆಗ 110 ಸ್ಥಾನ ಗಳಿಸಿದ್ದ ಬಿಜೆಪಿ ಮುಂದೆ ಸರ್ಕಾರ ರಚನೆ ಮಾಡಿ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂಬುದು ಗೊತ್ತಿರುವ ಸಂಗತಿ. ಹೀಗಾಗಿ, ಈ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟುಸ್ಥಾನ ಗಳಿಸಲಿದೆ. ರಾಜ್ಯ ಅಥವಾ ದೇಶ ಅಭಿವೃದ್ಧಿಯಾಗಬೇಕಾದರೆ ಪೂರ್ಣ ಬಹುಮತ ಕೊಡಬೇಕು ಎಂಬ ನಿಲುವಿಗೆ ಜನರು ಬರತೊಡಗಿದ್ದಾರೆ. ಅದಕ್ಕಾಗಿಯೇ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಬಹುಮತ ನೀಡಿದ್ದರು. ನಂತರ ನಡೆದ ಅನೇಕ ರಾಜ್ಯಗಳಲ್ಲೂ ಬಹುಮತದ ಗೆಲುವು ನೀಡಿದ್ದಾರೆ.

* ರಾಜ್ಯದಲ್ಲಿ ಬಿಜೆಪಿ ಪರವಾದ ದೊಡ್ಡ ಅಲೆಯೇನೂ ಕಂಡು ಬರುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಬಲ ಸಮನಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ?

- ಅದು ಸುಳ್ಳು. ಬಿಜೆಪಿ ಪರವಾದ ವಾತಾವರಣ ರಾಜ್ಯದಲ್ಲಿ ಕಾಣುತ್ತಿದೆ. ಕಾಂಗ್ರೆಸ್‌ ಸರ್ಕಾರ ವೋಟ್‌ ಬ್ಯಾಂಕ್‌ಗಾಗಿ ಮಾಡಿರುವ ಜಾತಿ ರಾಜಕಾರಣ, ಧರ್ಮ ರಾಜಕಾರಣ ಜನರನ್ನು ಕೆರಳಿಸಿದೆ. ಅಧಿಕಾರಿಗಳ ಮೇಲಿನ ದಬ್ಬಾಳಿಕೆ, ಕಿರುಕುಳ ಪ್ರಕರಣಗಳನ್ನು ಜನರು ಮರೆತಿಲ್ಲ. ಹಲವು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು. ಸಿದ್ದರಾಮಯ್ಯ ವಿರೋಧಿ ಭಾವನೆ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಜನರ ಈ ಆಕ್ರೋಶ ಬಿಜೆಪಿ ಪರವಾದ ಮತಗಳಾಗಿ ಪರಿವರ್ತನೆಯಾಗುತ್ತವೆ.

* ಅಧಿಕಾರದ ಗದ್ದುಗೆ ಏರಬೇಕು ಎಂಬ ಬಿಜೆಪಿಯ ಅದಮ್ಯ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲವಾದ ಕೋಟೆಯಂತೆ ಅಡ್ಡ ನಿಂತಿದ್ದಾರಲ್ಲವೇ?

- ಸಿದ್ದರಾಮಯ್ಯ ಅವರು ಬಲಗೊಂಡಿಲ್ಲ. ಬದಲಾಗಿ ದುರ್ಬಲರಾಗಿದ್ದಾರೆ. ಅವರು ನಿಂತ ನೆಲವೇ ಕುಸಿಯುತ್ತಿದೆ. ತಮ್ಮ ಸ್ವಂತ ವರುಣಾ ಕ್ಷೇತ್ರದಲ್ಲೇ ಗೆಲ್ಲುವುದಿಲ್ಲ ಎಂಬ ಕಾರಣಕ್ಕಾಗಿ ಚಾಮುಂಡೇಶ್ವರಿ ಬಂದರು. ಅಲ್ಲಿಯೂ ಗೆಲ್ಲುವುದು ಕಷ್ಟಎಂದು ಅನಿಸಿದ್ದಕ್ಕೆ ಬಾದಾಮಿಯಿಂದಲೂ ಸ್ಪರ್ಧಿಸುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂದರೆ ತಾವು ಒಂದು ಕಡೆ ಸುರಕ್ಷಿತವಾಗಿಲ್ಲ ಎಂಬ ಸಂದೇಶವನ್ನು ಜನರಿಗೆ ಕೊಟ್ಟಂತಾಗಿದೆ. ಅಂದರೆ, ಸ್ವಂತ ಕ್ಷೇತ್ರ ಗೆಲ್ಲಲು ಸಾಧ್ಯವಾಗದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಇತರ ಕ್ಷೇತ್ರಗಳನ್ನು ಹೇಗೆ ಗೆಲ್ಲಿಸುತ್ತಾರೆ.

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಟೀಕಿಸುತ್ತಿದ್ದಾರೆ?

- ಸಿದ್ದರಾಮಯ್ಯ ಅವರು ಮೋದಿ ಮತ್ತು ಅಮಿತ್‌ ಶಾ ಅವರನ್ನು ಟೀಕಿಸುತ್ತಿರುವುದರ ಹಿಂದೆ ತಂತ್ರ ಅಡಗಿದೆ. ಈ ಮೂಲಕ ಅವರು ತಮ್ಮ ಕಾಂಗ್ರೆಸ್ಸಿನ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ‘ನೀವಿಲ್ಲದೆ ರಾಜ್ಯದಲ್ಲಿ ಚುನಾವಣೆ ನಡೆಸಬಲ್ಲೆ’ ಎಂಬ ಸಂದೇಶ ನೀಡುತ್ತಿದ್ದಾರೆ. ಜೊತೆಗೆ ಅವರ ಹಿಂಬಾಲಕರು ‘ನೀವು ಕೇಂದ್ರದ ನಾಯಕರಾಗಿ ಬೆಳೆಯಬಹುದು’ ಎಂಬ ಮಾತನ್ನು ಕಿವಿಯಲ್ಲಿ ತುಂಬುತ್ತಿರುವುದೂ ಇದಕ್ಕೆ ಕಾರಣ.

* ಸಿದ್ದರಾಮಯ್ಯ ಅವರ ಈ ನಡೆ ಕಾಂಗ್ರೆಸ್ಸಿನ ರಾಹುಲ್‌ ಗಾಂಧಿ ಅವರಾಗಲಿ ಅಥವಾ ಇತರ ವರಿಷ್ಠರಿಗಾಗಲಿ ಗೊತ್ತಿಲ್ಲವೇ?

- ಎಲ್ಲವೂ ಗೊತ್ತಿದೆ. ಇಲ್ಲಿರುವುದು ಕಾಂಗ್ರೆಸ್‌ ಸರ್ಕಾರವಲ್ಲ. ಸಿದ್ದರಾಮಯ್ಯ ಸರ್ಕಾರ. ಸಿದ್ದರಾಮಯ್ಯ ದುಡ್ಡಿನ ಮರ. ಎಟಿಎಂ ಇದ್ದಂತೆ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಸಹಿಸಿಕೊಂಡು ಹೋಗುತ್ತಿದ್ದಾರೆ. ನಾನು ಸಂಸತ್‌ ಅಧಿವೇಶನ ವೇಳೆ ರಾಷ್ಟ್ರೀಯ ಕಾಂಗ್ರೆಸ್‌ ಮುಖಂಡರೊಂದಿಗೆ ಮಾತುಕತೆ ನಡೆಸಿದಾಗ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನ ಇರುವುದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರು ನಾಡಧ್ವಜ, ಲಿಂಗಾಯತ ಸ್ವತಂತ್ರ ಧರ್ಮ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಅಸಂತುಷ್ಟಗೊಂಡಿದ್ದಾರೆ. ಆದರೆ, ಹೇಳುವ ಧೈರ್ಯ ಯಾರಿಗೂ ಇಲ್ಲ.

* ಕಾಂಗ್ರೆಸ್‌ ಸರ್ಕಾರ ಉರುಳಿಸಿದ ನಾಡಧ್ವಜ, ಲಿಂಗಾಯತ ಸ್ವತಂತ್ರ ಧರ್ಮ ಎಂಬ ಭಾವನಾತ್ಮಕ ದಾಳಗಳನ್ನು ಎದುರಿಸುವಲ್ಲಿ ಬಿಜೆಪಿ ವಿಫಲವಾಯಿತೇ?

- ವಿಫಲವಾಗುವ ಮಾತೇ ಇಲ್ಲ. ಯಾಕೆಂದರೆ, ನಾವು ಅವುಗಳಿಗೆ ಎದಿರೇಟು ಕೊಡುವುದಕ್ಕೇ ಹೋಗಿಲ್ಲ. ಪ್ರಜ್ಞಾಪೂರ್ವಕವಾಗಿಯೇ ತಟಸ್ಥರಾಗಿದ್ದೆವು. ಧರ್ಮ ಅಥವಾ ಜಾತಿ ಮಾಡುವುದು ಸರ್ಕಾರದ ಕೆಲಸವಲ್ಲ. ಪ್ರತ್ಯೇಕ ಧರ್ಮ ರಚಿಸಿ ಎಂದು ಯಾರೂ ಸರ್ಕಾರಕ್ಕೆ ಅಧಿಕಾರ ಕೊಟ್ಟಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಅವರು ಹೂಡಿದ ತಂತ್ರ ತಿರುಗುಬಾಣವಾಗಿ ಪರಿಣಮಿಸಲಿದೆ.

* ವೀರಶೈವ ಲಿಂಗಾಯತ ಸಮುದಾಯ ತನ್ನ ಬೆನ್ನಿಗಿದೆ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿಗೆ ಈ ಬಾರಿ ಆ ಸಮುದಾಯದ ಪೂರ್ಣ ಬೆಂಬಲ ಸಿಗುವುದು ಅನುಮಾನ ಎನ್ನಲಾಗುತ್ತಿದೆ?

- ಖಂಡಿತ ಸುಳ್ಳು. ವೀರಶೈವ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ತಮ್ಮ ನಾಯಕ ಎಂಬುದು ಮನವರಿಕೆಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಡೆಯುವುದಕ್ಕಾಗಿಯೇ ಸಿದ್ದರಾಮಯ್ಯ ಈ ಒಡೆಯುವ ಪ್ರಯತ್ನ ಮಾಡಿದರು ಎಂಬುದು ಆ ಸಮುದಾಯದ ಮತ ಚಲಾಯಿಸುವ ಅಧಿಕಾರವಿಲ್ಲದ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಅನಿಸಿದೆ.

* ಗಣಿ ಅಕ್ರಮದ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಬಿಸಿ ತುಪ್ಪವಾದಂತಿದೆ?

- ಜನಾರ್ದನರೆಡ್ಡಿ ಅವರು ತಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದ ಗೆಳೆಯನ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಸಂಬಂಧ. ಮುಂದಿನದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಆ ಬಗ್ಗೆ ನನಗೆ ಹೆಚ್ಚು ಮಾಹಿತಿಯಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು ಉದ್ದೇಶಪೂರ್ವಕವಾಗಿಯೇ ರೆಡ್ಡಿ ಅವರ ವಿಷಯ ಪ್ರಸ್ತಾಪಿಸುತ್ತಿದ್ದಾರೆ.

* ಸಮಿಕ್ಷೆ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ನೀವು ಹೇಳುತ್ತಿದ್ದೀರಿ. ಆದರೆ, ಅಂತಿಮವಾಗಿ ಸಮೀಕ್ಷೆ ಕೈಬಿಟ್ಟು ಹಳೇ ಮುಖಗಳಿಗೆ, ಆರೋಪ ಹೊತ್ತವರಿಗೆ ಮಣೆ ಹಾಕಿರುವಂತಿದೆ?

- ಹಾಗಿಲ್ಲ. ಸಮೀಕ್ಷೆಯಲ್ಲಿ ಯಾರಿಗೆ ಜನಾಭಿಪ್ರಾಯ ವ್ಯಕ್ತವಾಗಿದೆಯೊ ಅಂಥವರಿಗೇ ಟಿಕೆಟ್‌ ನೀಡಲಾಗಿದೆ. ಈ ಬಾರಿ ಸರ್ಕಾರ ರಚನೆ ಮಾಡುವುದು ಮುಖ್ಯವಾಗಿದ್ದರಿಂದ ಯಾರು ಹೆಚ್ಚು ಮತ ಗಳಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೋ ಅಂಥವರನ್ನು ಅಭ್ಯರ್ಥಿಗಳನ್ನಾಗಿಸಲಾಗಿದೆ. ಕೆಲವರ ವಿರುದ್ಧ ಆರೋಪಗಳಿದ್ದರೂ ಅವುಗಳಲ್ಲಿ ಹುರುಳಿಲ್ಲ. ಕೆಲವು ನ್ಯಾಯಾಲಯಗಳಲ್ಲಿ ಖುಲಾಸೆಯಾಗಿವೆ.

* ಜೆಡಿಎಸ್‌ ಬಗ್ಗೆ ಬಿಜೆಪಿ ನಾಯಕರು ಮೃದು ಧೋರಣೆ ಹೊಂದಿದ್ದು, ಒಳ ಒಪ್ಪಂದ ಮಾಡಿಕೊಂಡಿದೆಯಂತೆ?

- ಖಂಡಿತವಾಗಿಯೂ ಇದು ಸುಳ್ಳು ಸುದ್ದಿ. ಯಾರ ಜೊತೆಗೂ ಹೊರ ಅಥವಾ ಒಳ ಹೊಂದಾಣಿಕೆಯಿಲ್ಲ ಎಂಬ ಸಂದೇಶವನ್ನು ಪಕ್ಷದ ನಾಯಕರು ನೀಡಿದ್ದಾರೆ. ಮೇಲಾಗಿ ಜೆಡಿಎಸ್‌ ಅನ್ನು ನಾವು ನಂಬುವ ಸ್ಥಿತಿಯಲ್ಲಿ ಇಲ್ಲ. ನಾವು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಗುರಿ ಹೊಂದಿದ್ದೇವೆ.

* ನೀವು ರಾಜ್ಯ ಬಿಜೆಪಿಯ ಮೊದಲ ಪಂಕ್ತಿಯ ಮಹಿಳಾ ಮುಖಂಡರು. ಆದರೆ, ನೀವು ಈ ಬಾರಿ ಬಿಜೆಪಿಯಿಂದ ಮಹಿಳೆಯರಿಗೆ ಹೆಚ್ಚು ಟಿಕೆಟ್‌ ಕೊಡಿಸಲಿಲ್ಲವಲ್ಲ?

- ನೋಡಿ.. ನಾವು ಮಹಿಳೆಯರು ರಾಜಕೀಯದಲ್ಲಿ ಗಟ್ಟಿಯಾಗಿ ಬೆಳೆಯಬೇಕಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೇ ಸ್ಥಿತಿಯಿದೆ. ಸಂಘಟನೆಯಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನ ಕೊಟ್ಟಿದ್ದೇವೆ. ಮಹಿಳೆಯರೂ ಹೆಚ್ಚು ಹೆಚ್ಚು ರಾಜಕೀಯಕ್ಕೆ ಬರಬೇಕು. ಬಂದವರು ಹೆಚ್ಚು ಸಮಯ ಕೊಡಬೇಕು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಗಾಗಿ ನಾವು ಮಹಿಳಾ ಮುಖಂಡರು ಹೆಚ್ಚು ಟಿಕೆಟ್‌ ಕೇಳದೆ ತ್ಯಾಗ ಮಾಡಿದ್ದೇವೆ.

* ನೀವು ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಿರಂತೆ?

- ಇಲ್ಲ. ಯಶವಂತಪುರ ಕ್ಷೇತ್ರದ ಕಾರ್ಯಕರ್ತರು ಒತ್ತಾಯ ಮಾಡಿದ್ದರು. ನಾನು ಅಲ್ಲಿಂದ ಸ್ಪರ್ಧಿಸಿದರೆ ಗೆಲ್ಲುತ್ತೇನೆ ಎಂಬುದು ಅವರ ವಿಶ್ವಾಸ. ಲೋಕಸಭಾ ಸದಸ್ಯತ್ವ ಅವಧಿ ಇನ್ನೂ ಒಂದು ವರ್ಷ ಬಾಕಿಯಿದೆ. ಮತ್ತೆ ಉಪಚುನಾವಣೆ ನಡೆಸಬೇಕಾಗುತ್ತದೆ. ಮೇಲಾಗಿ ನನಗೆ ಆತುರಾತುರವಾಗಿ ಓಡಿಬರುವ ಅಗತ್ಯವೂ ಇರಲಿಲ್ಲ. ನಾನು ಪಕ್ಷಕ್ಕಾಗಿ ಹೆಚ್ಚು ಕೆಲಸ ಮಾಡುವುದರ ಬಗ್ಗೆ ಮಾತ್ರ ನಾನು ಒಲವು ಹೊಂದಿದ್ದೆ.

* ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ನಾಮಪತ್ರ ಸಲ್ಲಿಸುವ ವೇಳೆ ಟಿಕೆಟ್‌ ನಿರಾಕರಿಸಿದ್ದು ಯಾಕೆ?

- ನನಗೆ ಆ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಆದರೆ, ಯಾವುದೋ ಒಂದು ತಂತ್ರದ ಭಾಗವಾಗಿ ಟಿಕೆಟ್‌ ನೀಡುತ್ತಿಲ್ಲ ಎಂಬುದನ್ನು ಪಕ್ಷದ ವರಿಷ್ಠರು ಹೇಳಿದ್ದರು. ಅದಕ್ಕೆ ಯಡಿಯೂರಪ್ಪ ಅವರು ಒಪ್ಪಿಕೊಂಡರು.

* ಗೆಲ್ಲುವ ಮಾನದಂಡವನ್ನೇ ಮುಖ್ಯವಾಗಿರಿಸಿಕೊಂಡ ಮೇಲೆ ವಿಜಯೇಂದ್ರ ಅವರಿಗೆ ಟಿಕೆಟ್‌ ನಿರಾಕರಿಸುವಲ್ಲಿ ಅಂಥ ತಂತ್ರ ಏನಿದೆ?

- ಅದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅವರು ಇಡೀ ರಾಜ್ಯಾದ್ಯಂತ ಓಡಾಡಬೇಕು. ಕೇವಲ ಒಂದೆರಡು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಯಡಿಯೂರಪ್ಪ ಮತ್ತು ಅವರ ಮಗ ಇಬ್ಬರೂ ಸ್ಪರ್ಧಿಸುವುದರಿಂದ ಎಲ್ಲೋ ಒಂದು ಕಡೆ ಕಟ್ಟಿಹಾಕಿದಂತೆ ಆಗಬಾರದು ಎಂಬ ಭಾವನೆಯೂ ವರಿಷ್ಠರಲ್ಲಿ ಇರಬಹುದು.

Follow Us:
Download App:
  • android
  • ios