Asianet Suvarna News Asianet Suvarna News

ಜಾತಿ ಮತಗಳಲ್ಲಿ ಅಡಗಿದೆ ಈಶ್ವರಪ್ಪ ಭವಿಷ್ಯ

ಶಿವಮೊಗ್ಗ ವಿಧಾನಸಭಾ ಕ್ಷೇತ್ರವು ಹಲವು  ಕಾರಣಗಳಿಂದ ಈಗ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದೆ. ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಜತೆಗೆ ಬಿಜೆಪಿ ಹಿರಿಯ ಮುಖಂಡ  ಕೆ.ಎಸ್. ಈಶ್ವರಪ್ಪ ಅವರು ಏಳನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Shimoga Constituency Is Very Curious

ಶಿವಮೊಗ್ಗ :  ಶಿವಮೊಗ್ಗ ವಿಧಾನಸಭಾ ಕ್ಷೇತ್ರವು ಹಲವು  ಕಾರಣಗಳಿಂದ ಈಗ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದೆ. ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಜತೆಗೆ ಬಿಜೆಪಿ ಹಿರಿಯ ಮುಖಂಡ  ಕೆ.ಎಸ್. ಈಶ್ವರಪ್ಪ ಅವರು ಏಳನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿರುವ ಕ್ಷೇತ್ರವೂ ಹೌದು. ಬಹುಮುಖ್ಯವಾಗಿ ಈಶ್ವರಪ್ಪ ಅವರ ಪಾಲಿಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯಾಗಿರುವುದರಿಂದ ಎಲ್ಲರ ಕಣ್ಣು ಕ್ಷೇತ್ರದ ಮೇಲೆ ಬಿದ್ದಿದೆ. 

ಕಾಂಗ್ರೆಸ್ ಪಕ್ಷಕ್ಕೂ ಇಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. 80ರ  ದಶಕಕ್ಕೂ ಮುಂಚೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿವಮೊಗ್ಗ ನಂತರ ಈಶ್ವರಪ್ಪ ಅವರ ಕಾರಣದಿಂದ ಬಿಜೆಪಿ ವಶವಾಯಿತು. 1989ರಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದ ಈಶ್ವರಪ್ಪ ಅವರು ಕಾಂಗ್ರೆಸ್‌ನ ಪ್ರಭಾವಿ ಸಚಿವ ಕೆ. ಎಚ್. ಶ್ರೀನಿವಾಸ್ ಅವರನ್ನು ಸೋಲಿಸಿ ‘ಜೈಂಟ್ ಕಿಲ್ಲರ್’ ಎನಿಸಿಕೊಂಡಿದ್ದರು. ಕಾಲಚಕ್ರ ತಿರುಗಿ, 2013ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಅವರನ್ನು ಸೋಲಿಸಿ ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮಿದ್ದು ಕಾಂಗ್ರೆಸ್‌ನ ನಗರಸಭಾ ಸದಸ್ಯರಾಗಿದ್ದ ಕೆ.ಬಿ. ಪ್ರಸನ್ನ ಕುಮಾರ್. ಈಗ ಅವರನ್ನೇ ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ. ಕಾಂಗ್ರೆಸ್‌ನ ಘಟನಾನುಘಟಿಗಳು ಅವರ ಜತೆ ನಿಂತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅವರ ಪರ ಪ್ರಚಾರ ನಡೆಸಿದ್ದಾರೆ. 

ಇನ್ನು ಜಾತ್ಯತೀತ ಜನತಾದಳವೂ ಸುಮ್ಮನಿಲ್ಲ. ಎರಡು ವರ್ಷಗಳ ಹಿಂದೆ ವಿಧಾನಪರಿಷತ್‌ನ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ  ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಭಾರಿ ಪೈಪೋಟಿ ನೀಡಿದ್ದ ಎಚ್.ಎನ್. ನಿರಂಜನ್ ಅವರನ್ನು ಅಖಾಡಕ್ಕೆ ದೂಡಿದೆ. ಜಿಲ್ಲೆಯಲ್ಲಿ ಜನತಾ ಪರಿವಾರ ಮತ್ತೆ ವಿಜೃಂಭಿಸುವಂತೆ ಮಾಡಬೇಕೆಂಬ ಪ್ರಯತ್ನದಲ್ಲಿ ಪಕ್ಷದ ಎಲ್ಲಾ ಮುಖಂಡರು  ತೊಡಗಿಕೊಂಡಿದ್ದಾರೆ. ಪಾಲಿಕೆ ಸದಸ್ಯ, ಜೆಡಿಎಸ್ ಬಂಡಾಯ ಅಭ್ಯರ್ಥಿ ನರಸಿಂಹಮೂರ್ತಿ ಬಾಬಣ್ಣ ಸಹ ಒಂದು ಕೈ 
ನೋಡಿಯೇ ಬಿಡೋಣವೆಂದು ಓಡಾಡುತ್ತಿದ್ದಾರೆ. ಹಾಗಾಗಿ ಶಿವಮೊಗ್ಗ ಕ್ಷೇತ್ರದಲ್ಲೀಗ ಎಲ್ಲಿ ನೋಡಿದರೂ ಚುನಾವಣೆಯ ಬಿರುಸು. ದಿನಕಳೆದಂತೆ  ಚುನಾವಣೆಯ ಅಜೆಂಡಾಗಳೂ ಬದಲಾಗುತ್ತಿವೆ. 

 ದೆಂದೂ ಕಾಣದಷ್ಟು ಜಾತಿ ಲೆಕ್ಕಾಚಾರ ಈಗ ಕ್ಷೇತ್ರದಲ್ಲಿ ಕಂಡುಬರುತ್ತಿದೆ. ಎಲ್ಲಾ ಅಭ್ಯರ್ಥಿಗಳೂ ಜಾತಿಗಳ ಹಿಂದೆ ಓಡುತ್ತಿದ್ದಾರೆ. ಇದಕ್ಕಾಗಿ ತರಹೇವಾರಿ ಕಾರ್ಯಕ್ರಮ ಗಳನ್ನು ಮಾಡುತ್ತಿದ್ದಾರೆ. ಕೊನೆ ಎರಡು ದಿನದಲ್ಲಿ ನಡೆಯುವ ‘ಕರಾಮತ್ತು’ಗಳಿಗೆ ಚುನಾವಣಾ ಆಯೋಗ ಅವಕಾಶ ನೀಡುವ ಸಾಧ್ಯತೆ ವಿರಳವಾಗಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಈ ಚುನಾವಣೆಗಾಗಿ ‘ಸಕಲ ಸಿದ್ಧತೆ’ಗಳನ್ನು ಆರು ತಿಂಗಳಿಂದಲೇ ಮಾಡಿದ್ದರು.

ಅದು ಚುನಾವಣೆ ವೇಳೆ ಫಲ ನೀಡಲಿದೆಯೇ ಎಂದು ಎದುರು ನೋಡುತ್ತಿದ್ದಾರೆ. ವಿಪ್ರ, ಲಿಂಗಾಯಿತರ ಮೇಲೆ ಕಣ್ಣು: ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಬಹುಸಂಖ್ಯಾತ ಬ್ರಾಹ್ಮಣ ಹಾಗೂ ಲಿಂಗಾಯತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ಅವರು ಬ್ರಾಹ್ಮಣರಾಗಿದ್ದು, ಆ ಸಮುದಾಯದ ಮತಗಳನ್ನು ಪಡೆಯುವ ವಿಶ್ವಾಸದಲ್ಲಿದ್ದಾರೆ. ಅದಕ್ಕೆ ಬ್ರೇಕ್ ಹಾಕಲು ಬಿಜೆಪಿ ಯತ್ನಿಸುತ್ತಿದೆ. 

ರಾಜ್ಯದಲ್ಲಿ ಎಲ್ಲೇ ಬ್ರಾಹ್ಮಣ ಅಭ್ಯರ್ಥಿಗಳು  ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೂ ಅವರಿಗೆ  ಬೆಂಬಲಿಸಬೇಕೆಂಬ ನಿರ್ಣಯವನ್ನು ಬ್ರಾಹ್ಮಣ ಮಹಾಸಭಾ ಕೈಗೊಂಡು ಅದನ್ನು ಎಲ್ಲೆಡೆ ಪ್ರಚಾರ ಮಾಡುತ್ತಿದೆ. ಅದೇ ರೀತಿ  ಶಿವಮೊಗ್ಗಕ್ಕೆ ಆಗಮಿಸಿದ್ದ ಬ್ರಾಹ್ಮಣ ಮಹಾಸಭಾ ಪ್ರಮುಖರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ಅವರ ಪರ ವಕಾಲತ್ತು ವಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರೂ ವಿಪ್ರ ಜಾಗೃತಿ ವೇದಿಕೆ ಹೆಸರಿನಲ್ಲಿ ಬ್ರಾಹ್ಮಣರ ಸಭೆಯನ್ನು ನಡೆಸಿದ್ದಾರೆ. 

ಈ ಸಭೆಯಲ್ಲಿ ಭಾಗವಹಿಸಬೇಕಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೊನೇ ಕ್ಷಣದಲ್ಲಿ ಬಾರದ ಕಾರಣ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಪಾಲ್ಗೊಂಡು ಈಶ್ವರಪ್ಪ ಪರ ಬ್ಯಾಟಿಂಗ್ ನಡೆಸಿದ್ದಾರೆ. ವಿಪ್ರ ಮತಗಳಿಕೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಬಣಗಳ ನಡುವೆ ನಡೆದ ಜಾಹೀರಾತು ಸಮರವೂ ಸದ್ಯ ಕ್ಷೇತ್ರದಲ್ಲಿ ಚರ್ಚೆಯ ವಸ್ತು. ಆದರೆ ಲಿಂಗಾಯತರ ವಿಷಯದಲ್ಲಿ ಬಿಜೆಪಿ ಖುಷಿಯಾಗಿದೆ. ಸ್ವತಃ ಯಡಿಯೂರಪ್ಪ ಅವರೇ ಶಿವಮೊಗ್ಗಕ್ಕೆ ಆಗಮಿಸಿ ಲಿಂಗಾಯಿತ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ. 

ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಅಂಶ ಬಿಜೆಪಿಗೆ ಪ್ಲಸ್ ಆಗುವ ನಿರೀಕ್ಷೆ ಇದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದು, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಎಸ್.ರುದ್ರೇಗೌಡ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ವಿಧಾನಪರಿಷತ್ ಸದಸ್ಯರಾಗುತ್ತಾರೆ ಎಂಬ ಟ್ರಂಪ್‌ಕಾರ್ಡ್ ಪ್ರಯೋಗಿಸಿದ್ದಾರೆ ಯಡಿಯೂರಪ್ಪನವರು. ಈ ಮೂಲಕ ಶಿವಮೊಗ್ಗ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ರುದ್ರೇಗೌಡರಿಗೆ ಟಿಕೆಟ್  ಸಿಗದಿರುವುದರಿಂದ ಆಗಿರುವ ಡ್ಯಾಮೇಜ್ ಅನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದ್ದಾರೆ. 

ಮತದಾರರ ಸಂಖ್ಯೆಯಲ್ಲಿ ಒಟ್ಟಾಗಿ ಸಿಗುವ ದೊಡ್ಡ ಅಂಕಿ ಮುಸ್ಲಿಮರದ್ದು. ಬಿಜೆಪಿ ಈ ಮತಗಳನ್ನು ಕೈಬಿಟ್ಟಿದೆ. ಹೀಗಾಗಿ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನ ಕುಮಾರ್ ಹಾಗೂ ಜೆಡಿಎಸ್‌ನ  ಎಚ್.ಎನ್. ನಿರಂಜನ್ ಈ ಮತಗಳಿಗಾಗಿ ಓಡಾಟ ನಡೆಸುತ್ತಿದ್ದಾರೆ. ಈ ಸಮುದಾಯದ ಮುಖಂಡರಲ್ಲಿ ಮತ ವಿಭಜನೆ ಆಗಬಾರದೆಂಬ ಪ್ರಯತ್ನ ನಡೆಯುತ್ತಿದೆ. ಇನ್ನು ಸಾಕಷ್ಟು ಸಂಖ್ಯೆಯಲ್ಲಿರುವ ತಮಿಳು ಸಮುದಾಯದ ಮತಗಳು ಯಾರಿಗೆ ಎಂಬುದು ಸ್ಪಷ್ಟವಾಗುತ್ತಿಲ್ಲ. 

ಎರಡು ಬಣಗಳಾಗಿರುವ ಈ ಸಮುದಾಯದ ಪರ ಮುಖಂಡರು ಕಾಂಗ್ರೆಸ್ ಹಾಗೂ ಬಿಜೆಪಿ ಪರ ಗುದ್ದಾಡುತ್ತಿದ್ದಾರೆ. ಕ್ರೈಸ್ತರ ಪರ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಮಾಡಿದೆ. ಹೀಗಾಗಿ ಈ ಸಮುದಾಯದ ಪ್ರಮುಖರು ಕಾಂಗ್ರೆಸ್  ಜತೆ ಗುರುತಿಸಿಕೊಂಡಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಇವರು ಪಡೆಯುವ ಮತಗಳು ಯಾರನ್ನಾದರೂ ಸೋಲಿಸಿಬಿಡಬಹುದು. ಏಕೆಂದರೆ 2013 ರ ಚುನಾವಣೆಯಲ್ಲಿ  ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನ  ಕುಮಾರ್ ಅವರು ಗೆದ್ದಿದ್ದು ಕೇವಲ ೨೫೭ ಮತಗಳ ಅಂತರದಿಂದ. ಲೆಕ್ಕಾಚಾರಗಳು: 2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಅಭ್ಯರ್ಥಿಗಳು ಸೇರಿ ಗಳಿಸಿದ್ದು 73 ಸಾವಿರ ಮತಗಳು. ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದು 39 ಸಾವಿರ ಮತಗಳು. ಇದೇ ಬಿಜೆಪಿಯ ಪಾಲಿಗೆ ದೊಡ್ಡ ವಿಶ್ವಾಸ. ಈ ಬಾರಿ ಒಟ್ಟಾಗಿ ಸ್ಪರ್ಧಿಸುತ್ತಿದ್ದೇವೆ. ಹಾಗಾಗಿ ಎಲ್ಲಾ ಮತಗಳು ನಮಗೇ ಎಂದು ನಂಬಿಕೊಂಡಿದೆ ಬಿಜೆಪಿ. ತಮ್ಮ ಸಹಾಯಹಸ್ತದಿಂದಾಗಿ ನೂರಾರು ಬಸ್‌ಗಳಲ್ಲಿ ಪದೇ ಪದೇ ದೇವಸ್ಥಾನಗಳಿಗೆ ಪ್ರವಾಸ  ಹೋಗಿ ಬಂದಿರುವ ಮತದಾರರು ಕೈಬಿಡುವುದಿಲ್ಲ ಎಂಬುದು ಈಶ್ವರಪ್ಪ ಅವರ ಅಂತರಂಗದ ಬಯಕೆ. 

ಈ ಮಧ್ಯೆ, ಪ್ರಧಾನಿ ಮೋದಿ ಅವರು ಶಿವಮೊಗ್ಗಕ್ಕೆ ಬರುವುದನ್ನು ಬಿಜೆಪಿ ಎದುರು ನೋಡುತ್ತಿದೆ. ಕಾಂಗ್ರೆಸ್ ಲೆಕ್ಕಾಚಾರ ವಿಶೇಷವಾಗಿದೆ. ಬ್ರಾಹ್ಮಣ ಅಭ್ಯರ್ಥಿ  ಪ್ರಸನ್ನ ಕುಮಾರ್ ಕಾರಣಕ್ಕೆ ವಿಪ್ರ ಮತಗಳು, ಕಾಂಗ್ರೆಸ್ ಶಾಸಕರಾಗಿದ್ದ ಕಾರಣಕ್ಕೆ ಪ್ರಸನ್ನ ಖಾನ್ ಎಂದು ಪದೇ ಪದೆ ಇವರನ್ನು ಛೇಡಿಸಿ  ಬಿಜೆಪಿ ಟ್ರೋಲ್ ಮಾಡಿದ ಕಾರಣಕ್ಕೆ ಒಟ್ಟಾಗಿರುವ ಮುಸ್ಲಿಂ ಮತಗಳ ಬಹುಪಾಲು ತಮ್ಮದೇ ಎಂದುಕೊಂಡಿದೆ. 

ಕ್ರೈಸ್ತರ ಮತಗಳಲ್ಲಿ ಬಹುಪಾಲು ತನ್ನದಾಗಿಸಿಕೊಳ್ಳುವ  ವಿಶ್ವಾಸ ಹೊಂದಿದೆ. ಎಚ್.ಎನ್. ನಿರಂಜನ್ ಲಿಂಗಾಯಿತರಾಗಿರುವ ಕಾರಣ ಈ ಸಮುದಾಯದ ಮತಗಳಲ್ಲಿ ತಮ್ಮ ಪಾಲೂ ಇದೆ ಎಂದುಕೊಂಡಿದ್ದಾರೆ. ಜತೆಗೆ ಒಟ್ಟಾಗಿ ಯಾವತ್ತೂ ಲೆಕ್ಕಕ್ಕೆ ಸಿಗದ ಹಿಂದುಳಿದ ವರ್ಗಗಳ  ಮತದಾರರನ್ನೂ ನಂಬಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆ ಶಿವಮೊಗ್ಗ ಕ್ಷೇತ್ರದ ಮಟ್ಟಿಗೆ ಸಂಪೂರ್ಣ ಜಾತಿ ಆಧರಿತ    ವಣೆಯಾಗಿ  ಪರಿವರ್ತಿತವಾಗಿದೆ. 

ಅಭ್ಯರ್ಥಿ ಗಳು ಜಾತಿವಾದಿಗಳಲ್ಲದಿದ್ದರೂ ಪರಿಸ್ಥಿತಿಯು ಅವರನ್ನು ಜಾತಿ ಪ್ರತಿನಿಧಿಗಳನ್ನಾಗಿ  ಮಾಡಿದೆ.  ತೆಗೆ ಬಿಜೆಪಿ ಸರ್ಕಾರದಲ್ಲಿ ಆಗಿರುವ ದೊಡ್ಡದೊಡ್ಡ  ಕಟ್ಟಡ-ರಸ್ತೆಗಳು, ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಬಹುತೇಕ ಬಡಾವಣೆಗಳ ರಸ್ತೆ- ಸಮುದಾಯ ಭವನಗಳೂ ಸಹ ಆಗಾಗ ಚರ್ಚೆಗೆ ಬರುತ್ತಿವೆ. ಮತದಾರ ಇನ್ನೂ ಸ್ಪಷ್ಟವಾಗಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಅವರನ್ನು ಒಲಿಸಿಕೊಳ್ಳುವ ಪೈಪೋಟಿ ಮಾತ್ರಭರ್ಜರಿಯಾಗಿ ನಡೆಯುತ್ತಿದೆ.

Follow Us:
Download App:
  • android
  • ios