ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿ ನಾಯಕ ಅಥವಾ ಸ್ಟಾರ್ ಪ್ರಚಾರಕರಲ್ಲ. ಅವರ ವಿರುದ್ಧದ ಪ್ರಕರಣದಲ್ಲಿ ನಿರಾಪರಾಧಿ ಆಗುವವರೆಗೆ ಬಿಜೆಪಿಗೆ ಎಂಟ್ರಿ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಹೇಳಿದ್ದಾರೆ.
ಪಕ್ಷದ ಯಾವುದೇ ವೇದಿಕೆಯನ್ನ ಅವರು ಏರುವುದಿಲ್ಲ. ಒಂದು ವೇಳೆ ಏರಿದರೆ ನನಗೆ ಫೋಟೋ, ವಿಡಿಯೋ ವಾಟ್ಸ್ಆ್ಯಪ್ ಮಾಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರು ಬಿಜೆಪಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪ ಮತ್ತು ಎಲ್ಲ ವಿವಾದಗಳಿಗೆ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ತೆರೆ ಎಳೆದ ಅವರು, ಜನಾರ್ದನ ರೆಡ್ಡಿ ಅವರು ಬಿಜೆಪಿ ಕಾರ್ಯಕರ್ತರೂ ಅಲ್ಲ. 
ಅವರು ದೋಷ ಮುಕ್ತರೆಂದು ನ್ಯಾಯಾಲಯ ಹೇಳಿದ ಮೇಲೆಯೇ ಅವರನ್ನು ಬಿಜೆಪಿ ಕಾರ್ಯಕರ್ತ ಎಂದು ಪರಿಗಣಿಸಲಾಗುವುದು.  ಅಲ್ಲಿಯವರೆಗೆ ಬಿಜೆಪಿಗೂ ಅವರಿಗೂ ಸಂಬಂಧವಿಲ್ಲ ಎಂದರು. 
ಕರ್ನಾಟದಲ್ಲಿ ಬಿಜೆಪಿ ಇನ್ನೂ ರ್ಯಾಲಿಗಳನ್ನು ನಡೆಸಲಿದ್ದು, ಮೋದಿ ಅವರು  15 ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಮೇ 5ರಿಂದ 10ರವರೆಗೆ ಚುನಾವಣಾ ತಂತ್ರಗಾರಿಕೆ ರೂಪಿಸಲಿದ್ದಾರೆ ಎಂದರು.