ಬಿಜೆಪಿಗೆ ಸೋಲು: ಆರ್‌ಎಸ್‌ಎಸ್ ಆಂತರಿಕ ಸಮೀಕ್ಷೆ- ಇದು ಫೇಕ್ ನ್ಯೂಸ್
'ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ, ಎಂದು ಆರ್‌ಎಸ್‌ಎಸ್ ಆಂತರಿಕ ಸಮೀಕ್ಷೆಯೊಂದು ವರದಿ ಮಾಡಿದೆ' ಎಂದು ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಕನ್ನಡ ಪ್ರಭ ವಾರ್ತೆ ಎಂದು ಪ್ರಕಟಗೊಂಡಿದ್ದು, ಇಂಥ ಸುದ್ದಿಯನ್ನು ಪ್ರಕಟಿಸಿಲ್ಲವೆಂದು ಪತ್ರಿಕೆ ಸ್ಪಷ್ಟಪಡಿಸಿದೆ.
ಬೆಂಗಳೂರು: 'ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ,' ಎಂದು ಆರ್‌ಎಸ್‌ಎಸ್ ಆಂತರಿಕ ಸಮೀಕ್ಷೆ ತಿಳಿಸಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಬೆಳಗ್ಗೆಯಿಂದ ಹರಿದಾಡುತ್ತಿದೆ.
'ಕನ್ನಡಪ್ರಭ ವಾರ್ತೆ' ಎಂದು, ಪತ್ರಿಕೆಯ ವಿನ್ಯಾಸದಲ್ಲಿಯೇ ಸುದ್ದಿಯೊಂದನ್ನು ಹರಿ ಬಿಡಲಾಗಿದೆ. ಆದರಿದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಲ್ಲ ಎಂಬುದನ್ನು ಸಂಪಾದಕ ರವಿ ಹೆಗಡೆ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ತಾಲತಾಣವನ್ನು ಬಳಸಿಕೊಂಡ ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ರಾಜಕೀಯ ಕಿತಾಪತಿಯಲ್ಲದೇ, ಇದು ಮತ್ತೇನೂ ಅಲ್ಲ.
ಇತ್ತೀಚೆಗೆ ಹೆಚ್ಚುತ್ತಿರುವ ಫೇಕ್ ನ್ಯೂಸ್‌ಗಳ ಸಾಲಿಗೆ ಸೇರಿದ ಮತ್ತೊಂದು ಸುದ್ದಿ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ತುಣುಕಿಗೂ, ಪತ್ರಿಕೆಗೂ ಯಾವುದೇ ಸಂಬಂಧವಿಲ್ಲವೆಂದು 'ಕನ್ನಡ ಪ್ರಭ' ಸ್ಪಷ್ಟಪಡಿಸಿದೆ.
'ಕರ್ನಾಟಕ ರಾಜ್ಯದಲ್ಲಿ ಅಹಿಂದ ಮತಗಳ ಕ್ರೋಢೀಕರಣದಲ್ಲಿ ಬಿಜೆಪಿ ವಿಫಲವಾಗಿದೆ. ಅದು ಕಾಂಗ್ರೆಸ್ ಮತ ಬ್ಯಾಂಕ್ ಆಗಿದೆ. ಈ ಚುನಾವಣೆಯಲ್ಲಿ ಗೆಲ್ಲುವ ಕನಸನ್ನು ಅನಿವಾರ್ಯವಾಗಿ ಬಿಡಬೇಕಾಗಿದೆ, ಎಂದು ಆರ್‌ಎಸ್ಎಸ್ ತನ್ನ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ,' ಎನ್ನುವ ಸುಳ್ಳು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.