ಬೆಂಗಳೂರು: ನಟಿ ರಮ್ಯಾ ಕಾಂಗ್ರೆಸ್ ಪಾಳೇಯದಲ್ಲಿ ಪ್ರಭಾವಿ ನಾಯಕಿ. ಮಂಡ್ಯ ಎಂಪಿಯಾಗಿ, ಇದೀಗ ಅದೇ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೂ ಸ್ಪರ್ಧಿಸುತ್ತಾರೆಂಬ ಗುಮಾನಿ ಇತ್ತು. ಆದರೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿಯೇ ಪ್ರಭಾವ ಬೀರುತ್ತಿದ್ದು, ಪಕ್ಷ ಇವರಿಗೆ ಎಲ್ಲಿಯೂ ಟಿಕೆಟ್ ನೀಡಿಲ್ಲ.  ಕ್ಷಣ ಕ್ಷಣದ ಮಾಹಿತಿ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ನರ್ವಹಣೆಯಲ್ಲಿ ಸಕ್ರಿಯವಾಗಿದ್ದಾರೆ.

ಆದರೆ, ಸ್ಟಾರ್ ಪ್ರಚಾರಕಿಯಾದರೂ ಇನ್ನೂ ರಾಜ್ಯಕ್ಕೆ ಬಂದಿಲ್ಲ. ಏಕೆ ಎಂಬ ಅನುಮಾನಗಳು ಕಾಡ ತೊಡಗಿವೆ. ನಟಿಗೆ ರಾಜ್ಯ ರಾಜಕಾರಣದಲ್ಲಿ ಇಲ್ಲ ಬೆಲೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ರಮ್ಯಾ ರಾಜ್ಯಕ್ಕೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರೇ ಅಡ್ಡಗಾಲು ಹಾಕುತ್ತಿದ್ದಾರಂತೆ.

ಕಾರಣವಿಷ್ಟೇ, ರಮ್ಯಾ ಬಂದರೆ ಬರೀ ವಿವಾದಗಳನ್ನೇ ಹುಟ್ಟು ಹಾಕುತ್ತಾರೆ. ರಾಜಕೀಯದಲ್ಲಿನ್ನೂ ಎಳಸು. ರಾಹುಲ್ ಗಾಂಧಿಯೇ ಸಾಕು, ರಮ್ಯಾ ಬೇರೆ ಬೇಕಾ? ಎಂದಿದ್ದಾರಂದೆ ಕೈ ಮುಖಂಡರು. ರಮ್ಯಾ ಬಂದು ಪ್ರಚಾರ ಮಾಡಿದರೆ ಆಗುವ ಲಾಭಕ್ಕಿಂತ, ನಷ್ಟವೇ ಹೆಚ್ಚು ಎಂಬುವುದು ಕೈ ನಾಯಕರ ಉವಾಚ.

'ಮಹಿಳಾ ಸಬಲೀಕರಣದ ವಿಚಾರದಲ್ಲಿ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದರು ರಮ್ಯಾ. ಪ್ರಚಾರ ಸಮಯದಲ್ಲಿ ಸ್ಟಾರ್ ಪ್ರಚಾರಕರ ಜೊತೆ ಗ್ಲಾಮರ್ ಇದ್ರೆ ವರ್ಕೌಟ್ ಆಗುತ್ತೆ ಅನ್ನೋ ಮಾತುಗಳೂ ಕಾಂಗ್ರೆಸ್ ವಲಯದಲ್ಲಿದೆ. ಮಂಡ್ಯ ಬೆಂಗಳೂರಿನಲ್ಲಿ ಪ್ರಚಾರಕ್ಕೆ ಕರೆಸಿ ಅಂತ ರಮ್ಯಾ ಬೆಂಬಲಿಗರಿಂದ ಒತ್ತಾಯವೂ ಇದೆ. ಆದರೂ, ರಮ್ಯಾ ನೀನು ಬರೋದು ಬೇಡವೆಂದಿದ್ದಾರೆಂದು ಸಿಎಂ ಮತ್ತು ಕಾಂಗ್ರೆಸ್ ರಾಜ್ಯ ಅಧ್ಯಕ್ಷರು.