ಬೆಳಕು ನೀಡುವ ನಾಡು ರಾಯಚೂರಲ್ಲಿ ಗೆಲುವಿಗಾಗಿ ಶೋಧ

Raichur Constituency Election
Highlights

ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಕ್ತಿ ಕೇಂದ್ರಗಳ ತವರು, ದೇಶದ ಏಕೈಕ ಚಿನ್ನದ ಗಣಿ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಬೇಸಿಗೆ ಬಿರು ಬಿಸಿಲಿನಂತೆ ಕಾವು ಪಡೆದಿದೆ. ಒಟ್ಟು 7 ಕ್ಷೇತ್ರಗಳಲ್ಲಿ 4 ಪರಿಶಿಷ್ಟ ಪಂಗಡಕ್ಕೆ, 1 ಪರಿಶಿಷ್ಟ ಜಾತಿಗೆ ಮೀಸಲಿರುವ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ, ಜೆಡಿಎಸ್ ಮತ್ತು ಬಂಡಾಯದ ಅಭ್ಯರ್ಥಿಗಳು ಶತಪ್ರಯತ್ನ ನಡೆಸಿದ್ದಾರೆ.

ರಾಯಚೂರು :  ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಕ್ತಿ ಕೇಂದ್ರಗಳ ತವರು, ದೇಶದ ಏಕೈಕ ಚಿನ್ನದ ಗಣಿ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಬೇಸಿಗೆ ಬಿರು ಬಿಸಿಲಿನಂತೆ ಕಾವು ಪಡೆದಿದೆ. ಒಟ್ಟು 7 ಕ್ಷೇತ್ರಗಳಲ್ಲಿ 4 ಪರಿಶಿಷ್ಟ ಪಂಗಡಕ್ಕೆ, 1 ಪರಿಶಿಷ್ಟ ಜಾತಿಗೆ ಮೀಸಲಿರುವ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ, ಜೆಡಿಎಸ್ ಮತ್ತು ಬಂಡಾಯದ ಅಭ್ಯರ್ಥಿಗಳು ಶತಪ್ರಯತ್ನ ನಡೆಸಿದ್ದಾರೆ.

ರಾಮಕೃಷ್ಣ ದಾಸರಿ

ರಾಯಚೂರು  ಗ್ರಾಮೀಣ

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆಗೆ ಕ್ಷೇತ್ರ ವೇದಿಕೆಯಾಗಿದೆ. 2013 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ರಾಯಪ್ಪ ನಾಯಕ ಎದುರು ಗೆದ್ದು ಶಾಸಕರಾಗಿದ್ದ ಬಿಜೆಪಿಯ ತಿಪ್ಪರಾಜು ಹವಾಲ್ದಾರ್ ಎರಡನೇ ಬಾರಿ  ಗೆಲುವಿನ ನಗೆ ಬೀರುವ ನಿಟ್ಟಿನಲ್ಲಿ ಪ್ರಚಾರ ಕಾರ್ಯಗಳನ್ನು ಭರದಿಂದ ನಡೆಸಿದ್ದಾರೆ. ಆದರೆ ಅವರಿಗೆ ಪ್ರಭುತ್ವ ವಿರೋಧಿ ಅಲೆ ತೊಡಕಾಗಿದೆ. ಇದರ ಲಾಭ ಪಡೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷ ಹೆಚ್ಚು ವರ್ಚಸ್ಸು ಇಲ್ಲದ ಹೊಸ
ಮುಖ ದದ್ದಲ ಬಸವನಗೌಡ ಅವರಿಗೆ ಅವಕಾಶ ಕೊಟ್ಟಿದೆ. ಅವರು ಕಾಂಗ್ರೆಸ್ಸಿನ ಮತಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿ ಪಾಟೀಲ್ ಜೆಡಿಎಸ್ ಜಿಗಿದು ಅಭ್ಯರ್ಥಿಯಾಗಿದ್ದಾರೆ. ಪ್ರಬಲ ಪೈಪೋಟಿ ಯನ್ನೂ ನೀಡುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಈ ಕ್ಷೇತ್ರದಲ್ಲಿ ಎಸ್ಟಿ, ಗಂಗಾಮತಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರುಬರು, ಎಸ್ಸಿ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.


ರಾಯಚೂರು ನಗರ
ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಸಲ್ಮಾನ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಸೈಯದ್ ಯಾಸೀನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ತೀವ್ರ ಪೈಪೋಟಿ ನಡುವೆ ಟಿಕೆಟ್ ಗಿಟ್ಟಿಸಿಕೊಂಡ ಅವರಿಗೆ ಅನಾರೋಗ್ಯ ಸಮಸ್ಯೆ ಮುಳುವಾಗುವ ಸಾಧ್ಯತೆಗಳಿವೆ. ಟಿಕೆಟ್‌ಗಾಗಿ ಪ್ರಯತ್ನಿಸಿ ಮುಖಭಂಗ ಅನುಭವಿಸಿರುವ ಎನ್.ಎಸ್. ಬೋಸರಾಜು ಮತ್ತು ಬೆಂಬಲಿಗರು ಯಾಸೀನ್ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಎಂಬ  ಆರೋಪಗಳಿವೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಡಾ.ಶಿವರಾಜ ಪಾಟೀಲ್ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.ಜೆಡಿಎಸ್ ಅಭ್ಯರ್ಥಿ ಮಹಾಂತೇಶ ಪಾಟೀಲ್ ಅತ್ತನೂರು ಸ್ಪರ್ಧ ಅಷ್ಟೇನೂ ಪ್ರಾಮುಖ್ಯತೆ ಪಡೆದಿಲ್ಲ. ಬಿಜೆಪಿಯಿಂದ ಬಂಡಾಯ
ಎದ್ದಿರುವ ಈ. ಆಂಜನೇಯ ಪಕ್ಷದ ವೋಟು ಒಡೆಯುವ ಸಾಧ್ಯತೆಗಳಿವೆ. ಎಂಇಪಿ ಸೇರಿ 7 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ಸಿಗೂ ಮತ ವಿಭಜನೆ ಆತಂಕವಿದೆ.


ಮಾನವಿ
ಕಾಂಗ್ರೆಸ್- ಜೆಡಿಎಸ್- ಪಕ್ಷೇತರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಭದ್ರಕೋಟೆ ಇದಾಗಿದ್ದರೂ, ಈ ಬಾರಿ ಪಕ್ಷಕ್ಕೆ ಹಿನ್ನಡೆಯ ಭೀತಿ ಎದುರಾಗಿದೆ. ಹಾಲಿ ಶಾಸಕ ಹಂಪಯ್ಯ ನಾಯಕ ಹ್ಯಾಟ್ರಿಕ್ ಗೆಲುವಿಗೆ ಕಾಂಗ್ರೆಸ್  ಬಂಡಾಯ ಅಭ್ಯರ್ಥಿ  . ಈರಣ್ಣ ಅವರ ಸೊಸೆ ಡಾ. ಪ್ರೀತಿ ಮೇತ್ರೆ (ಡಾ.ತನುಶ್ರೀ) ಕಂಟಕವಾಗಿ ಪರಿಮಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಈರಣ್ಣ ಅವರು ಬಲ ಪ್ರದರ್ಶಿಸಿದ್ದಾರೆ. ಹಂಪಯ್ಯ ಅವರಿಗೆ ಪ್ರಭುತ್ವ ವಿರೋಧಿ ಅಲೆ ಆತಂಕವೂ ಇದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಈ ಬಾರಿ ಗೆಲ್ಲಲೇ ಬೇಕು ಎಂದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಶರಣ ನಾಯಕ ಗುಡದಿನ್ನಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಕಾಂಗ್ರೆಸ್, ಜೆಡಿಎಸ್ ನಡುವೆ ಪೈಪೋಟಿ ಇದ್ದು, ಡಾ| ತನುಶ್ರೀ ಅವರು ಕಾಂಗ್ರೆಸ್ ಮತ ಕಸಿದರೆ ಹಂಪಯ್ಯ ಅವರು ಗೆಲುವಿಗೆ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. 


ದೇವದುರ್ಗ
ಒಂದು ದಶಕದಿಂದ ಕುಟುಂಬ ರಾಜಕಾರಣವೇ ಕ್ಷೇತ್ರದ ರಾಜಕೀಯ ಚಕ್ರವನ್ನು ತಿರುಗಿಸುತ್ತಿದೆ. ಕಾಂಗ್ರೆಸ್‌ನಿಂದ ಎ. ರಾಜಶೇಖರ ನಾಯಕ, ಬಿಜೆಪಿಯಿಂದ ಕೆ. ಶಿವನಗೌಡ ನಾಯಕ ಮತ್ತು ಜೆಡಿಎಸ್‌ನಿಂದ ವೆಂಕಟೇಶ ಪೂಜಾರಿ ಕಣದಲ್ಲಿ ಕಾದಾಟ ನಡೆಸಿದ್ದಾರೆ. ಈ ಮೂವರೂ ಹತ್ತಿರದ ಬಂಧುಗಳು. ಶಿವನಗೌಡ ನಾಯಕಗೆ ರಾಜಶೇಖರ ಮಾವ, ವೆಂಕಟೇಶ ಪೂಜಾರಿ ಭಾವ ಆಗಬೇಕು. ಮಾಜಿ ಸಂಸದ ದಿ. ಎ. ವೆಂಕಟೇಶ ನಾಯಕ ಅವರ ಎರಡನೇ ಮಗ ಕಾಂಗ್ರೆಸ್‌ನ ಎ.ರಾಜಶೇಖರ ನಾಯಕ ಉಪಚುನಾ ವಣೆ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಬಿಜೆಪಿಗೆ ಕೈ ಕೊಟ್ಟು ಜೆಡಿಎಸ್‌ನಿಂದ ಸ್ಪರ್ಧಿಸಿರುವ ವೆಂಕಟೇಶ ಪೂಜಾರಿ ಬಿಜೆಪಿ ಓಟುಗಳನ್ನು ಬಾಚುವ ಸಾಧ್ಯತೆಗಳಿದ್ದು, ಬಂಡಾಯ
ಅಭ್ಯರ್ಥಿ ಕರೆಮ್ಮ ಜಿ.ನಾಯಕ ಜೆಡಿಎಸ್ ಓಟುಗಳನ್ನು ಒಡೆಯುವ ವಾತಾವರಣ ಸ್ಪಷ್ಟವಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. 


ಲಿಂಗಸ್ಗೂರು
ಪರಿಶಿಷ್ಟ ಜಾತಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಪಕ್ಷ ಬದಲಿಸುತ್ತಲೇ ಸತತ ಎರಡು ಬಾರಿ ಶಾಸಕರಾಗಿರುವ ಮಾನಪ್ಪ ವಜ್ಜಲ್ ಅದೇ ಹಾದಿ ಹಿಡಿದು ಮೂರನೇ ಗೆಲವು ದಾಖಲಿಸುವ ಪ್ರಯತ್ನ ಜೋರಾಗಿ ನಡೆಸಿದ್ದಾರೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಖಚಿತ ಮಾಡಿಕೊಂಡರೂ ಪಕ್ಷಾಂತರ ಕಾಯಿದೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 1,286 ಮತಗಳಿಂದ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಡಿ.ಎಸ್. ಹುಲಿಗೇರಿ ಪರ ಕ್ಷೇತ್ರದಲ್ಲಿ ಅನುಕಂಪವಿದೆ. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್‌ಗೆ ಜಿಗಿದು ಟಿಕೆಟ್ ಪಡೆದಿರುವ ಸಿದ್ದು ವೈ. ಬಂಡಿ, ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ಗಟ್ಟಿ ಪೈಪೋಟಿ ನೀಡುತ್ತಿದ್ದಾರೆ. ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಅಸ್ಪಶ್ಯರಿಗೆ ಟಿಕೆಟ್
ನೀಡಿಲ್ಲ ಎನ್ನುವ ಅಸಮಾಧಾನ ದಲಿತರಲ್ಲಿ ಮನೆ ಮಾಡಿದೆ. ಸಮಾಜದ ಮುಖಂಡ ಎ. ಬಾಲಸ್ವಾಮಿ ಕೊಡ್ಲಿ, ಜನಾಂದೋಲನ ಮಹಾಮೈತ್ರಿ ಬೆಂಬಲಿತ ಸಿಪಿಎಂನ ಆರ್.ಮಾನಸಯ್ಯಗೆ ಮತ  ವಿಭಜನೆಯಾಗಬಹುದು.

ಸಿಂಧನೂರು
ಐದನೇ ಬಾರಿ ಶಾಸಕರಾಗಲು ಹಂಪನಗೌಡ ಬಾದರ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಸಲ ಪರಾಭವಗೊಂಡಿದ್ದ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಎರಡನೇ ಸಲ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆ ಸಮಯದಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿ ತೋರಿದ ಬಲಪ್ರದರ್ಶನ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ ಎನ್ನುವ ಸಂದೇಶವನ್ನು 
ಮತದಾರರಿಗೆ ರವಾನಿಸಿದೆ. ಬಿಜೆಪಿಯ ಕೊಲ್ಲಾ ಶೇಷಗಿರಿರಾವ್ ಅವರು ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಮೂರೂ ಪಕ್ಷಗಳು ಪ್ರಚಾರದ ಅಬ್ಬರ ನಡೆಸುತ್ತಿವೆ. ಆದರೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಸಂಗೊಳ್ಳಿ ರಾಯಣ್ಣ ಯುವಬ್ರಿಗೇಡ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರು ಕಾಂಗ್ರೆಸ್ ಸೇರಿದ್ದಾರೆ. ಇದು ಹಂಪನಗೌಡ ಬಾದರ್ಲಿ ಅವರಿಗೆ ಆನೆಬಲ ತಂದು ಕೊಟ್ಟಿದೆ. ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಸ್ಪರ್ಧೆ ನಡೆದಿದೆ.

ಮಸ್ಕಿ
ಹ್ಯಾಟ್ರಿಕ್ ಗೆಲುವಿನ ನಗೆಬೀರಲು ಕಾಂಗ್ರೆಸ್‌ನಿಂದ ಪ್ರತಾಪಗೌಡ ಪಾಟೀಲ್ ಸ್ಪರ್ಧೆಗಿಳಿಸಿದ್ದಾರೆ. ಇವರನ್ನು ಮಣಿಸುವುದಕ್ಕಾಗಿ ಬಿಜೆಪಿ- ಜೆಡಿಎಸ್ ರಣತಂತ್ರ ರೂಪಿಸಿವೆ. ಬಿಜೆಪಿಯಿಂದ ಬಸವನಗೌಡ ತುರವಿಹಾಳ, ಜೆಡಿಎಸ್‌ನಿಂದ ರಾಜಾ ಸೋಮನಾಥ ನಾಯಕ ಕಣದಲ್ಲಿದ್ದಾರೆ. ಬಿಜೆಪಿಯಿಂದ ಗೆದ್ದು ಮೊದಲ ಸಲ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್, ಬಳಿಕ ಪಕ್ಷಾಂತರಗೊಂಡು ಕಾಂಗ್ರೆಸ್‌ನಿಂದ ಗೆದ್ದು ಎರಡನೇ ಬಾರಿಯೂ ಶಾಸಕರಾಗಿ ಮುಂದುವರಿದಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಆಕಾಂಕ್ಷಿಯಾಗಿದ್ದ ಮಹಾದೇವಪ್ಪ ಪೊಲೀಸ್ ಪಾಟೀಲ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವುದು ಪ್ರತಾಪಗೌಡ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇವರ ನಡೆ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡುವ ಆತಂಕ ಎದುರಾಗಿದೆ. ಇನ್ನು ಜೆಡಿಎಸ್‌ನ ರಾಜಾ ಸೋಮನಾಥ ನಾಯಕ ಕ್ರಿಯಾಶೀಲರಾಗಿ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ, ಪ್ರಚಾರ ಕಾರ್ಯದ ಫಲ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

loader