ಬೆಂಗಳೂರು :  ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ದೇಶದ ಬಡ ಜನರಿಗೆ ತಲುಪಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ‘ಆಧಾರ್’ (ವಿಶಿಷ್ಟ ಗುರುತಿನ ಚೀಟಿ) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನರನ್ನು ನಿಯಂತ್ರಿಸುವ ಮೂಲಕ ದುರುಪಯೋ ಗಪಡಿಸಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. 

ಈ ವಿಷಯವನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರಶ್ನಿಸುವುದಾಗಿ ಹೇಳಿರುವ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ  ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಆಗ ‘ಆಧಾರ್’ ದುರುಪಯೋಗಕ್ಕೆ ಕಡಿವಾಣ
ಹಾಕುವುದಾಗಿ ಭರವಸೆ ನೀಡಿದ್ದಾರೆ.

ಬುಧವಾರ ಹೊಸೂರು ರಸ್ತೆಯ ಗಾರ್ಮೆಂಟ್ಸ್ ಫ್ಯಾಕ್ಟರಿ ಮಹಿಳಾ ನೌಕರ ರೊಂದಿಗೆ ಸಂವಾದ ನಡೆಸಿದ ಅವರು, ಕೇಂದ್ರ ಸರ್ಕಾರದ ಅಪನಗದೀಕರಣ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಗಾರ್ಮೆಂಟ್ಸ್ ನಂತರ ಸಾಕಷ್ಟು ಸಣ್ಣ ಉದ್ಯಮಗಳು ಮುಚ್ಚಿಹೋಗಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ದೂರಿದರು. 

ಸಂವಾದದ ವೇಳೆ ಸರ್ಕಾರಿ ಸೌಲಭ್ಯಗಳು ನಿಮಗೆ ತಲುಪುತ್ತಿವೆಯೇ ಎಂದು ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಗಾರ್ಮೆಂಟ್ಸ್‌ನ ಮಹಿಳಾ ನೌಕರರು ಪ್ರತಿಯೊಂದು ಸೌಲಭ್ಯಗಳಿಗೂ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವುದು ದೊಡ್ಡ ಸಮಸ್ಯೆಯಾಗುತ್ತಿದೆ. ಆಧಾರ್ ಕಾರ್ಡ್ ಪಡೆಯುವುದೇ ಒಂದು ದೊಡ್ಡ ಸಾಹಸ, ಜತೆಗೆ ಅನೇಕ ತಪ್ಪುಗಳಿರುತ್ತವೆ. ಅದನ್ನು ತಿದ್ದಲು ಮತ್ತೆ ಸಮಯ ವ್ಯರ್ಥ. ಪಕ್ಕದ ಊರಿಗೆ ವಾಸಸ್ಥಳ ಬದಲಿಸಿದರೆ ಆಧಾರ್‌ನಲ್ಲೂ ಬದಲಾವಣೆ ಮಾಡಬೇಕು. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಬಡ ಜನರ ಕಷ್ಟಗಳ ಪರಿಹಾರಕ್ಕಾಗಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರಿ ಸೌಲಭ್ಯಗಳನ್ನು ತಡವಿಲ್ಲದೆ ಜನರಿಗೆ ತಲುಪಿಸಲು ಹಾಗೂ ಸಾಮಾಜಿಕ ಭದ್ರತೆ, ರಕ್ಷಣೆ ದೃಷ್ಟಿಯಿಂದ ಯುಪಿಎ ಸರ್ಕಾರ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ಗುರುತಿನ ಸಂಖ್ಯೆಯ ಆಧಾರ್ ಕಾರ್ಡ್ ನೀಡುವ ಯೋಜನೆ ಜಾರಿಗೆ ತಂದಿತ್ತು ಎಂದರು.