Asianet Suvarna News Asianet Suvarna News

ಗೋವಿಂದರಾಜನಗರ : ಪ್ರಿಯ ಕೃಷ್ಣ ಎದುರು ಸೋಮಣ್ಣ ಬಿಗ್ ಫೈಟ್

ರಾಜಧಾನಿ ಬೆಂಗಳೂರಿನ ಮಟ್ಟಿಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಗೋವಿಂದರಾಜನಗರ ಕ್ಷೇತ್ರ ಕೊನೆಯ ಕ್ಷಣದವರೆಗೂ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಬಿಜೆಪಿಯ ವಿ.ಸೋಮಣ್ಣ ಮತ್ತು ಕಾಂಗ್ರೆಸ್ಸಿನ ಹಾಲಿ ಶಾಸಕ ಪ್ರಿಯಕೃಷ್ಣ ನಡುವೆ ಜಿದ್ದಾಜಿದ್ದಿಯ ಹೋರಾಟ ಏರ್ಪಟ್ಟಿದೆ.

Priya Krishna And Somanna Big Fight

ವಿಜಯ್ ಮಲಗಿಹಾಳ

ಬೆಂಗಳೂರು : ರಾಜಧಾನಿ ಬೆಂಗಳೂರಿನ ಮಟ್ಟಿಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಗೋವಿಂದರಾಜನಗರ ಕ್ಷೇತ್ರ ಕೊನೆಯ ಕ್ಷಣದವರೆಗೂ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಬಿಜೆಪಿಯ ವಿ.ಸೋಮಣ್ಣ ಮತ್ತು ಕಾಂಗ್ರೆಸ್ಸಿನ ಹಾಲಿ ಶಾಸಕ ಪ್ರಿಯಕೃಷ್ಣ ನಡುವೆ ಜಿದ್ದಾಜಿದ್ದಿಯ ಹೋರಾಟ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಡಾ.ಎ. ನಾಗೇಂದ್ರ ಪ್ರಸಾದ್ ಅವರನ್ನು ಕಣಕ್ಕಿಳಿಸಿದ್ದು, ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ನೆರವಾಗುವಂಥ ತಂತ್ರ ವನ್ನು ಜೆಡಿಎಸ್ ನಾಯಕರು ಅನುಸರಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನಗರ ಪ್ರದೇಶದ ಮತದಾರರು ಎಂದುಕೊಂಡರೂ ಗೋವಿಂದರಾಜ ನಗರದಲ್ಲಿ ಈಗ ನಡೆಯುತ್ತಿರುವುದು ಜಾತಿವಾರು ಸಮೀಕರಣವೇ. ಕಾಂಗ್ರೆಸ್ಸಿನ ಪ್ರಿಯಕೃಷ್ಣ ಅವರು ಒಕ್ಕಲಿಗರಾದರೆ, ಬಿಜೆಪಿಯ ಸೋಮಣ್ಣ ವೀರಶೈವ ಲಿಂಗಾಯತರು. ಜೆಡಿಎಸ್‌ನ ನಾಗೇಂದ್ರ ಪ್ರಸಾದ್ ಕೂಡ ವೀರಶೈವ ಲಿಂಗಾಯತರು. ಹೀಗಾಗಿ, ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗರು, ಕುರುಬರು ಯಾವ ಕಡೆ ವಾಲುತ್ತಾರೆ  ಎಂಬುದರ  ಮೇಲೆ ಫಲಿತಾಂಶ ನಿರ್ಧರಿತವಾಗಲಿದೆ. ಹಾಗೆ ನೋಡಿದರೆ ಸೋಮಣ್ಣ ಅವರು ಕಣಕ್ಕಿಳಿಯುವ ಬಗ್ಗೆ ನಿರ್ಧಾರ ಹೊರಹೊಮ್ಮಿದ್ದೇ ಕೊನೆಯ ಕ್ಷಣದಲ್ಲಿ. ಒಂದು ವೇಳೆ ಸೋಮಣ್ಣ ಬದಲು ಬೇರೊ ಬ್ಬರು ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಲ್ಲಿ ಗೋವಿಂದರಾಜನಗರ ಕಣದಲ್ಲಿ ಸ್ವಾರಸ್ಯಕರ ಸಂಗತಿ ಯೇ ಇರುತ್ತಿರಲಿಲ್ಲ. ಫಲಿತಾಂಶವನ್ನು ಸುಲಭವಾಗಿ ಊಹಿಸಬಹುದಾಗಿತ್ತು. ಆದರೆ, ಈಗ ಹಾಗಿಲ್ಲ.

ಇಬ್ಬರ ನಡುವೆ ಸಮ ಸಮ ಎಂಬಂತೆ ಹೋರಾಟ ನಡೆಯುತ್ತಿದ್ದು, ಯಾರು ಗೆದ್ದರೂ ಅದರ ಅಂತರ ತೀರಾ ಕಡಮೆ ಎನ್ನಲಾಗುತ್ತಿದೆ. ತಾವು ಗೋವಿಂದರಾಜನಗರದಿಂದ ಕಣಕ್ಕಿಳಿದಿದ್ದರಿಂದಲೇ ಸೋಮಣ್ಣ ಅವರು ತಮ್ಮ ಪುತ್ರ ಅರುಣ್‌ಗೆ  ಹಾಸನ ಜಿಲ್ಲೆ  ಅರಸೀಕೆರೆ ಯಿಂದ ಟಿಕೆಟ್ ಘೋಷಣೆ  ಯಾದರೂ ಅದನ್ನು ನಿರಾಕರಿಸಿದರು. ಗೋವಿಂದರಾಜ ನಗರ ಕ್ಷೇತ್ರದಲ್ಲಿನ ಸ್ಪರ್ಧೆ ಸುಲಭವಲ್ಲ ಎಂಬುದು ಒಂದು ಕಾರಣವಾದರೆ ಪಕ್ಕದ ಕ್ಷೇತ್ರಗಳಾದ ವಿಜಯ ನಗರ ಮತ್ತು ಚಾಮರಾಜಪೇಟೆಗಳಿಂದ ತಮ್ಮ ಶಿಷ್ಯರೂ ಆದ ಒಕ್ಕಲಿಗರಿಗೇ ಟಿಕೆಟ್ ಕೊಡಿಸಿದ್ದರಿಂದ ಅವರ ಗೆಲುವಿಗೂ ಶ್ರಮಿಸಬೇಕು ಎಂಬುದು ಮತ್ತೊಂದು ಕಾರಣವಾಗಿತ್ತು.

2 ಬಾರಿ ವಿಧಾನಸಭಾ ಚುನಾವಣೆ ಸೋಲು ಅನುಭವಿಸಿರುವ ಬಿಜೆಪಿಯ ಸೋಮಣ್ಣ ಅವರು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ಕ್ಷೇತ್ರದಲ್ಲಿ  ಸಂಚಾರ ಆರಂಭಿಸಿರುವುದರಿಂದ ಸೋಲಿನ ಅನುಕಂಪವೂ ಕೈಹಿಡಿಯುವ ಸಾಧ್ಯತೆಯಿದೆ. ಈ ಅಭಿಪ್ರಾಯ ಕ್ಷೇತ್ರದಲ್ಲಿ ಸಂಚರಿಸಿದಾಗ ಕಂಡು ಬರುತ್ತದೆ.

ಕಳೆದ ೨೦೦೯ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸೋಮಣ್ಣ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಉಪಚುನಾವಣೆ ಎದುರಿಸಿದ್ದು ಇದೇ ಪ್ರಿಯಕೃಷ್ಣ ವಿರುದ್ಧ. ಸಚಿವರಾಗಿದ್ದರೂ ಅವರು ಪ್ರಿಯಕೃಷ್ಣ ವಿರುದ್ಧ ಸೋಲು ಅನುಭವಿಸಬೇ ಕಾಯಿತು. ನಂತರ ೨೦೧೩ರ ಸಾರ್ವತ್ರಿಕ ಚುನಾವಣೆ ಯಲ್ಲಿ ವಿಜಯನಗರ ಕ್ಷೇತ್ರದಿಂದ ಕಣಕ್ಕಿಳಿದು ಎಂ. ಕೃಷ್ಣಪ್ಪ ವಿರುದ್ಧ ಕೂಡ ಸೋಲಪ್ಪಿದರು. ಇದೀಗ ಮತ್ತೆ ೨೦೧೮ರಲ್ಲಿ ಪ್ರಿಯಕಷ್ಣ ಅವರನ್ನು ಎದುರಿಸಲು ಗೋವಿಂದರಾಜನಗರಕ್ಕೆ ವಾಪಸಾಗಿರುವುದರಿಂದ ಸಹಜವಾಗಿಯೇ ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳಲು ತವಕದಿಂದ ಕಾಯುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಹಾಗಂತ ಸೋಮಣ್ಣ ಅವರಿಗೆ ಹಾಲಿ ಶಾಸಕ ಕಾಂಗ್ರೆಸ್ಸಿನ ಪ್ರಿಯಕೃಷ್ಣ ಅವರನ್ನು ಸೋಲಿಸುವುದು ಸುಲಭದ ತುತ್ತೇನಲ್ಲ. ಪಕ್ಕದಲ್ಲೇ ಇರುವ ವಿಜಯನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರ ತಂದೆ ಕೃಷ್ಣಪ್ಪ ಸಚಿವರು. ಹೀಗಾಗಿ ಗೋವಿಂದರಾಜನಗರ ಕ್ಷೇತ್ರದಲ್ಲಿ 
ಅಭಿವೃದ್ಧಿ ಕೆಲಸಗಳಿಗೇನೂ ಕೊರತೆಯಿಲ್ಲ. ವಿಜಯನಗರ ವೈಭವ ಎಂಬ ಘೋಷ ವಾಕ್ಯದಡಿ ವಿಶೇಷ ಅನುದಾನವನ್ನು ತಂದಿರುವ ಪ್ರಿಯಕೃಷ್ಣ ಅವರು ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ಮುಂದುವರೆಸಿದ್ದರು. ಅವೆಲ್ಲವೂ ಈಗ ಕೈಹಿಡಿಯುವ ನಿರೀಕ್ಷೆಯನ್ನು ತಳ್ಳಿ ಹಾಕುವಂತಿಲ್ಲ. 

ಕ್ಷೇತ್ರದ ಒಂಬತ್ತು ವಾರ್ಡ್‌ಗಳ ಪೈಕಿ ಆರರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಇದು ಬಿಜೆಪಿಗೆ ಅನುಕೂಲ ಉಂಟು ಮಾಡಲಿದೆ. ಆದರೆ, ಮತದಾರರು ಬಿಬಿಎಂಪಿ ಸದಸ್ಯರನ್ನು ನೋಡಿಕೊಂಡು ವಿಧಾನಸಭಾಚುನಾವಣೆಗೆ ಮತ ಚಲಾಯಿಸುತ್ತಾರೆ ಎಂದೇನೂ ಇಲ್ಲ.

ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಕುರುಬ ಸಮುದಾಯಗಳ ಮತದಾರರೇ ನಿರ್ಣಾಯಕರು. ಆ ಸಮುದಾಯಗಳು ಸಾರಾಸಗಟಾಗಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದಲ್ಲಿ ಸೋಮಣ್ಣ ಅವರು ಕಷ್ಟಪಡಬೇಕು. ಅವರ ಮತಗಳನ್ನು ತಕ್ಕಮಟ್ಟಿಗೆ ಸೆಳೆದರೆ ಮಾತ್ರ ಗೆಲುವು ಸುಲಭ. ಈ ಸಮುದಾಯಗಳು ಮೊದಲು ಸೋಮಣ್ಣ ಅವರ ಬೆನ್ನಿಗೇ ನಿಂತಿದ್ದವು. ಬಿಜೆಪಿಗೆ ವಲಸೆ ಹೋದ ನಂತರ ಹಿಂದೆ ಸರಿದವು. ಹೀಗಾಗಿ, ಈ ಬಾರಿ ಸೋಮಣ್ಣ ಅವರು ಒಕ್ಕಲಿಗ ಮತದಾರರನ್ನು ಸೆಳೆಯಲು ತರೇಹವಾರಿ ತಂತ್ರಗಾರಿಕೆ ಮೆರೆಯುತ್ತಿದ್ದಾರೆ. ಕಾಂಗ್ರೆಸ್ಸಿನ ಅನೇಕ ಒಕ್ಕಲಿಗ ಮುಖಂಡರನ್ನು ಸೆಳೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಪ್ರಸ್ತಾಪಿಸುವ ಮೂಲಕ ಒಕ್ಕಲಿಗರ ಅಸ್ಮಿತೆಯನ್ನು ಬಡಿದೆಬ್ಬಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದ್ದಾರೆ 
ಎಂಬರ್ಥದ ಸಂದೇಶ ರವಾನೆಯಾಗಿರುವುದರಿಂದ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಯೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಅವರನ್ನು ಕೈಹಿಡಿಯುತ್ತಾರಾ ಅಥವಾ ಬಿಟ್ಟುಕೊಡುತ್ತಾರಾ ಎಂಬುದು ಬಹುಮುಖ್ಯವಾದ ಸಂಗತಿ. ಕುರುಬರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಬೆಂಬಲಿಸುವ ಸಾಧ್ಯತೆ ಇಲ್ಲ. ಹೀಗಾಗಿ, ಒಂದು ವೇಳೆ ಒಕ್ಕಲಿಗರು ಪ್ರಿಯಕೃಷ್ಣ ಅವರನ್ನು ಬಿಟ್ಟುಕೊಡುವ ಮನಸ್ಸು ಮಾಡಿದಲ್ಲಿ ಸೋಮಣ್ಣ ಅವರಿಗೆ ಗೆಲುವು ಸುಲಭವಾಗಲಿದೆ. 

Follow Us:
Download App:
  • android
  • ios