Asianet Suvarna News Asianet Suvarna News

ಗೌಡರ ಬಗ್ಗೆ ಕೆಟ್ಟ ಮಾತಾಡುವುದು ಅಕ್ಷಮ್ಯ : ಪ್ರತಾಪ್ ಸಿಂಹ

ಬರಹ, ಭಾಷಣಗಳಲ್ಲಿ ‘ಫೈರ್ ಬ್ರ್ಯಾಂಡ್’ ಎನಿಸಿಕೊಂಡಿರುವ ಈ ಯುವ ಸಂಸದ ಪ್ರತಾಪ್ ಸಿಂಹ ತಮ್ಮನ್ನು ಚುನಾಯಿಸಿ ಸಂಸತ್‌ಗೆ ಕಳುಹಿಸಿದ ಜನರ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಚುನಾವಣೆಯ ಹೊತ್ತಿನಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

Prathap Simha Interview

ಅಂಶಿ ಪ್ರಸನ್ನಕುಮಾರ್

ಮೈಸೂರು :  ರಾಜ್ಯ ಬಿಜೆಪಿಯ ಯುವ ನೇತಾರರಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಮುಖರು. ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೂ ಆಗಿರುವ ಪ್ರತಾಪ್ ಸಿಂಹ ತಮ್ಮ ದಿಟ್ಟ ಅಂಕಣ ಬರಹಕ್ಕೆ, ನೇರ, ನಿಷ್ಠುರ ಮಾತುಗಳಿಗೆ, ಪಕ್ಷದ ತತ್ವ, ಸಿದ್ಧಾಂತ ವಿರೋಧಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿರುಗೇಟು ನೀಡುವುದರಲ್ಲಿ ಸಿದ್ಧಹಸ್ತರು. ಬರಹ, ಭಾಷಣಗಳಲ್ಲಿ ‘ಫೈರ್ ಬ್ರ್ಯಾಂಡ್’ ಎನಿಸಿಕೊಂಡಿರುವ ಈ ಯುವ ಸಂಸದ ತಮ್ಮನ್ನು ಚುನಾಯಿಸಿ ಸಂಸತ್‌ಗೆ ಕಳುಹಿಸಿದ ಜನರ ಕೆಲಸ ಮಾಡುವುದರಲ್ಲೂ ಎತ್ತಿದ ಕೈ. 

ಕೇಂದ್ರ ಸರ್ಕಾರದಿಂದ ಮೈಸೂರಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರ, ನಾಗನಹಳ್ಳಿ ಬಳಿ ಮತ್ತೊಂದು ರೈಲ್ವೆ ಟರ್ಮಿನಲ್, ಮೈಸೂರು-ಬೆಂಗಳೂರು ಹೆದ್ದಾರಿ ಮೊದಲಾದ ಯೋಜನೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ತಮ್ಮ ಕ್ಷೇತ್ರ ವ್ಯಾಪ್ತಿಯ ಹುಣಸೂರು, ಪಿರಿಯಾಪಟ್ಟಣದ ತಂಬಾಕು ಬೆಳೆಗಾರರ ಸಮಸ್ಯೆ, ಕೊಡಗು ಜಿಲ್ಲೆಯ ಪರಿಸರ ಸಂಬಂಧಿ ಸಮಸ್ಯೆಗಳ  ಪರಿಹಾರಕ್ಕಾಗಿ ತುಡಿಯುವವರು. ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

ಈ ಬಾರಿ ಬಿಜೆಪಿಗೆ ಅವಕಾಶ ಹೇಗಿದೆ? ಎಲ್ಲಾ ಅತಂತ್ರ ವಿಧಾನಸಭೆಯ ಮಾತುಗಳನ್ನಾಡುತ್ತಿ ದ್ದಾರೆ. ನಿಮ್ಮ ಮಿಷನ್ 150 ಏನಾಯ್ತು?

ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ. ಮಿಷನ್ 150 ಗುರಿಯೊಂದಿಗೆ ನಮ್ಮ ಪಕ್ಷದ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು ಐದು ಕೋಟಿ ಮತದಾರರು ಇರಬಹುದು. ಈ ಪೈಕಿ ಪಕ್ಷಕ್ಕೆ ಮಿಸ್ಡ್ ಕಾಲ್ ಕೊಟ್ಟು ಸದಸ್ಯರಾದವರ ಸಂಖ್ಯೆ 68 ಲಕ್ಷ ಇದೆ. ಅವರೆಲ್ಲಾ 2ರಿಂದ 3 ವೋಟು ಹಾಕಿಸಿದರೂ 1.50 ರಿಂದ 2 ಕೋಟಿ ಮತಗಳು ಬರುತ್ತವೆ. ಶೇ.70ರಷ್ಟು ಮತದಾನ ಆಗುತ್ತದೆ ಎಂದು ಅಂದಾಜಿಸೋಣ. ಅದರಲ್ಲಿ 1.50 ಕೋಟಿ ಮತಗಳು ನಮಗೆ ಬಂದರೂ ಸಾಕು ನಮ್ಮ ಗುರಿ ತಲುಪಿರುತ್ತೇವೆ.

 ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಕೆಲಸ ಮಾಡುತ್ತಿದೆಯೇ?

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಒಂದು ಹೋಬಳಿ ಕೇಂದ್ರ. ಅಲ್ಲಿಂದ ಪ್ರಧಾನಿ ಮೋದಿಯವರು ಅಂತಿಮ ಹಂತದ ಪ್ರಚಾರ ಯಾತ್ರೆ ಆರಂಭಿಸಿದರು. ಕೊಳ್ಳೇಗಾಲದ ಉಪ ಚುನಾವಣೆಯಲ್ಲಿ ಒಂದು ಬಾರಿ ಪಕ್ಷ ಗೆದ್ದಿದ್ದನ್ನು ಬಿಟ್ಟರೆ ಆ ಜಿಲ್ಲೆಯಲ್ಲಿ ಯಾವುದೇ ಸ್ಥಾನ ಗಳಿಸಿಲ್ಲ. ಹೀಗಿದ್ದರೂ ಮೋದಿಯವರ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಬಂದಿದ್ದರು. ಅದನ್ನು ನೋಡಿದರೆ ಆ ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಮೂಡಿದೆ. ಮೋದಿ ಅವರು ರಾಜ್ಯದಲ್ಲಿ 15 ರ್ಯಾಲಿ ಮಾಡಬೇಕಿತ್ತು. ಆದರೆ ಜನರ ಉತ್ಸಾಹ ನೋಡಿ 21  ರ್ಯಾಲಿ ಮಾಡುತ್ತಿದ್ದಾರೆ. ಇದರಿಂದ ನಿಶ್ಚಿತವಾಗಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ.

ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಗೊಂದಲವಾಗಿದೆ. ಹಾಗಿದ್ದರೂ ಗುರಿ ತಲುಪುವಿರಾ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಕ್ಷೇತ್ರಕ್ಕೆ ಹತ್ತಾರು ಮಂದಿ ಟಿಕೆಟ್ ಬಯಸುವುದು ಸಹಜ. ನಮ್ಮಲ್ಲೂ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದರು. ಯಾವುದೇ ಪಕ್ಷ ಇರಲಿ ಎಲ್ಲರಿಗೂ ಅವಕಾಶ ಮಾಡಿಕೊಡಲು ಆಗುವುದಿಲ್ಲ. ಇದರಿಂದ ಸಹಜವಾಗಿ ಕೆಲವರಿಗೆ ಅಸಮಾಧಾನವಾ ಗುತ್ತದೆ ನಿಜ. ಆದರೆ ಇದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಆಗದಂತೆ ಎಚ್ಚರ ವಹಿಸಿದ್ದೇವೆ. ನಮ್ಮ ಸಂಘಟನೆ ಪ್ರಬಲವಾಗಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡಿದ್ದೇವೆ.

ಮೈಸೂರು-ಚಾಮರಾಜನಗರ ಭಾಗದಲ್ಲಿ ಜೆಡಿಎಸ್- ಬಿಜೆಪಿ ಒಳಒಪ್ಪಂದ  ಮಾಡಿಕೊಂಡಿವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ?

ಇದನ್ನು ಒಳಒಪ್ಪಂದ ಎಂದು ಭಾವಿಸುವ ಅಗತ್ಯವಿಲ್ಲ.  ನಮ್ಮ ತಂತ್ರಗಾರಿಕೆಯ ಭಾಗವಾಗಿ ನಾವು ಬೇರೆ ಬೇರೆಯವರಿಗೆ ಟಿಕೆಟ್ ನೀಡಿದ್ದೇವೆ. ಉದಾಹರಣೆಗೆ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಒಕ್ಕಲಿಗರ ಮತಗಳನ್ನು, ಕಾಂಗ್ರೆಸ್ ಕುರುಬರ ಮತಗಳನ್ನು  ನೆಚ್ಚಿಕೊಂಡಿವೆ. ಆದರೆ ನಾವು 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಹಿರಿಯ ಕಾರ್ಯಕರ್ತರಾದ ಬ್ರಾಹ್ಮಣ ಜನಾಂಗದ ಎಸ್. ಆರ್.ಗೋಪಾಲರಾವ್ ಅವರಿಗೆ ಟಿಕೆಟ್ ನೀಡಿದ್ದೇವೆ. ಕ್ಷೇತ್ರದಲ್ಲಿ 2.89 ಲಕ್ಷ ಮತದರಾರರಿದ್ದು, ನಗರ ಕೇಂದ್ರಿತ ಒಂದು ಲಕ್ಷ ಮತದಾರರು ಇದ್ದಾರೆ ಎಂಬುದನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ. 

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಮಹದಾಯಿ ವಿವಾದ ಬಗೆಹರಿಸಲಿಲ್ಲ ಎಂಬ ಟೀಕೆಗಳಿವೆಯಲ್ಲಾ?

2017 ರ ಆಗಸ್ಟ್ 5ನೇ ತಾರೀಕು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮತ್ತು ಗೋವಾ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದು, ಸಹಕಾರ ಕೋರಲು ಸಲಹೆ ಮಾಡಲಾಗಿತ್ತು. ಆದರೆ ರಾಹುಲ್ ಗಾಂಧಿ ಪಲಾಯನವಾದ ಅನುಸರಿಸಿದರು. ನಾವು ಗೋವಾ ಸಿಎಂ ಮನೋಹರ್ ಪರಿಕರ್ ಅವರಿಂದ ಪತ್ರ ತರಿಸಿದರೂ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು
ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. 

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ತಟಸ್ಥವಾಗಿದ್ದು ಏಕೆ? 

ಐದು ವರ್ಷ ಏನೂ ಮಾಡದ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮ, ಕನ್ನಡ ಧ್ವಜ ಇಂಥ ವಿಚಾರಗಳನ್ನೇ  ಕೈಗೆತ್ತಿಕೊಂಡರು. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಲು ಬಿಡಬಾರದು ಎಂಬ ರಾಜಕೀಯ ಉದ್ದೇಶದಿಂದ ಪ್ರತ್ಯೇಕ ಧರ್ಮ ವಿಚಾರಕ್ಕೆ ಮುಂದಾದರೇ ಹೊರತು ನಿಜವಾದ ಕಾಳಜಿಯಿಂದ ಅಲ್ಲ.

ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಕಾಶ್ ರೈ ಅವರಿಗೂ ಮತ್ತು ನಿಮಗೂ ವಾರ್ ನಡೆಯುತ್ತಲೇ ಇರುತ್ತದಲ್ಲ? 

ತೆರೆಯ ಮೇಲೆ, ತೆರೆಯ ಹಿಂದೆಯೂ ಖಳನಾಯಕರಾದ, ಕಾಗೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಹೇಳುತ್ತಾ ಅದೇ ರೀತಿ ಕಾ..ಕಾ.. ಎನ್ನುವವರಿಗೆ ನಾನು ಉತ್ತರ ಕೊಡುವುದಿಲ್ಲ. ‘ಸಿಂಹ ಗರ್ಜಿಸುವುದು ಸಂದರ್ಭ ಬಂದಾಗ ಮಾತ್ರ.’ 

ಮೋದಿ ಅವರು ಕೊನೇ ಹಂತದ ಮೊದಲ ದಿನವೇ ‘ಗೌಡಾಸ್ತ್ರ’ ಪ್ರಯೋಗಿಸಿದ ಬಗ್ಗೆ ಪರ-ವಿರೋಧ ವ್ಯಾಖ್ಯಾನಗಳು ನಡೆಯುತ್ತಿವೆ?


ದೇವೇಗೌಡರನ್ನು ಕೇವಲ ಜೆಡಿಎಸ್ ಪಕ್ಷಕ್ಕೆ, ಒಂದು ಸಿದ್ಧಾಂತಕ್ಕೆ ಸೀಮಿತರಾದ ದೃಷ್ಟಿಕೋನದಿಂದ ನೋಡಬಾರದು.  ಪ್ರಧಾನಿಯಾಗಿದ್ದವರು. ಅದರಲ್ಲೂ ಪ್ರಧಾನಿ ಸ್ಥಾನಕ್ಕೆ ಏರಿದ ಕನ್ನಡಿಗರು. ಕೃಷ್ಣಾ, ಕಾವೇರಿ, ಮಹದಾಯಿ, ಭದ್ರಾ ಸೇರಿ ನೀರಾವರಿ ಯೋಜನೆಗಳಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಧೀಮಂತ ವ್ಯಕ್ತಿ. ಮಾಹಿತಿ ಹಕ್ಕು ಕಾಯ್ದೆಗೂ ಅವರ ಕಾಲದಲ್ಲೇ ಸಂಪುಟದಲ್ಲಿ ನಿರ್ಣಯವಾಗಿದೆ. ಅವರೊಬ್ಬ ದೂರದರ್ಶಿತ್ವವುಳ್ಳ ನಾಯಕ. ಅಂಥವರ ಬಗ್ಗೆ ಹಗುರವಾಗಿ ಮಾತನಾಡುವುದು ಅಕ್ಷಮ್ಯ ಅಪರಾಧ.

ಇದರ ಹಿಂದೆ ರಾಜಕೀಯ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ? 

ದೇವೇಗೌಡರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಹೋದಾಗ ನಿಮ್ಮಂಥವರು ಇರಬೇಕು ಎಂದು ತಡೆದವರೇ ಮೋದಿ ಅವರು. ಅಲ್ಲದೇ ಬಿಜೆಪಿ ಸರ್ಕಾರ 1 ಮತ್ತು 2ನೇ ವರ್ಷ ಪೂರೈಸಿದಾಗ ಅವರನ್ನು ಭೇಟಿ ಮಾಡಿ, ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಜಿಎಸ್‌ಟಿ ಜಾರಿಯ ವಿಶೇಷ ಅಧಿವೇಶನದಲ್ಲಿ ವೇದಿಕೆಗೆ ಕರೆದು ಕೂರಿಸಿಕೊಂಡಿದ್ದಾರೆ. ದೇವೇಗೌಡ ಹಾಗೂ ಮೋದಿ-ಈ ಇಬ್ಬರೂ ನಾಯಕರು ಹಿಂದುಳಿದ ವರ್ಗದ ಸಾಮಾನ್ಯ ಕುಟುಂಬದಿಂದ ಬಂದು, ಪ್ರಧಾನಿ ಪಟ್ಟ ಏರಿದವರು. ಆ ಪಟ್ಟಕ್ಕೆ ಏರಬೇಕಾದರೆ ಪಟ್ಟ ಶ್ರಮ, ಹೋರಾಟವನ್ನು ಗಮನಿಸಬೇಕು. ಹೀಗಾಗಿಯೇ ದೇವೇಗೌಡರ ಬಗ್ಗೆ ಮೋದಿ ಅವರಿಗೆ ಗೌರವ ಇದೆಯೇ ಹೊರತು ರಾಜಕೀಯ ಇಲ್ಲ.

Follow Us:
Download App:
  • android
  • ios