ಮೋದಿ ರ್ಯಾಲಿಯಿಂದ ರಾಜ್ಯದಲ್ಲಿ ಗಾಳಿ ಎದ್ದಿದೆ : ಜೋಶಿ

Prahlad Joshi Interview
Highlights

ತಮ್ಮ  ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಪ್ರಹ್ಲಾದ್ ಜೋಶಿ ‘ಕನ್ನಡಪ್ರಭ’ ಜತೆ ಚುನಾವಣಾ ಕಣದ ತಾಲೀಮು, ನಿರೀಕ್ಷೆಗಳನ್ನು ಬಿಚ್ಚಿಡುವ ಜತೆಗೆ ಕೆಲವು ವಿವಾದಿತ ಸಂಗತಿಗಳಿಗೆ ತಮ್ಮದೇ ಆದ ಸಮಜಾಯಿಷಿಯನ್ನೂ ನೀಡಿದ್ದಾರೆ.

ಮಲ್ಲಿಕಾರ್ಜುನ ಸಿದ್ದ

ಹುಬ್ಬಳ್ಳಿ  :  ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರದ ನೊಗಕ್ಕೆ ಹೆಗಲು ಕೊಟ್ಟ ಕೆಲವೇ ಕೆಲವು ಪ್ರಮುಖರಲ್ಲಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ, ಸಂಸದ ಪ್ರಹ್ಲಾದ್ ಜೋಶಿ ಕೂಡ ಒಬ್ಬರು. ಮುಂಬೈ ಕರ್ನಾಟಕ ಪ್ರದೇಶದ ರಾಜಕೀಯ ಉಸ್ತುವಾರಿ ಆಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ  ರ್ಯಾಲಿಗಳ ಉಸ್ತುವಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ಧಾರವಾಡ, ಬೆಳಗಾವಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ತಮ್ಮ  ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಪ್ರಹ್ಲಾದ್ ಜೋಶಿ ‘ಕನ್ನಡಪ್ರಭ’ ಜತೆ ಚುನಾವಣಾ ಕಣದ ತಾಲೀಮು, ನಿರೀಕ್ಷೆಗಳನ್ನು ಬಿಚ್ಚಿಡುವ ಜತೆಗೆ ಕೆಲವು ವಿವಾದಿತ ಸಂಗತಿಗಳಿಗೆ ತಮ್ಮದೇ ಆದ ಸಮಜಾಯಿಷಿಯನ್ನೂ ನೀಡಿದ್ದಾರೆ.

ಎಲ್ಲೆಲ್ಲಿ ಪ್ರಚಾರ ಮಾಡಿದ್ದೀರಿ? ಗ್ರೌಂಡ್ ರಿಯಾಲಿಟಿ ಏನಿದೆ? ಎಷ್ಟು ಸ್ಥಾನ ಗೆಲ್ತೀರಿ?

ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ಕಳೆದ ಬಾರಿ 40 ಸೀಟು ಪಡೆದಿದ್ದೆವು. ಆಗ ನರೇಂದ್ರ ಮೋದಿ ನಾಯಕತ್ವ ಇರಲಿಲ್ಲ. ನಮ್ಮ ಸರ್ಕಾರದ ಸಮಸ್ಯೆಯಿಂದಾಗಿ ವಿರೋಧಿ ಅಲೆ ಇತ್ತು, ಕೆಜೆಪಿ-ಬಿಜೆಪಿ ಮತಗಳು ವಿಭಾಗವಾದವು. ಈಗ ಒಂದಾಗಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆ, ಪ್ರಧಾನಿ ನರೇಂದ್ರ ಮೋದಿ ಅವರ ರ‌್ಯಾಲಿಯಿಂದ ಹೊಸ ಗಾಳಿ ಹುಟ್ಟಿದ್ದು, ಕನಿಷ್ಠ 130 ಸೀಟು ಲಭಿಸುತ್ತವೆ. 150 ಮಿಷನ್ ನಮ್ಮದು. ಆದಾಗ್ಯೂ 130 ಕ್ಕೆ ಕಮ್ಮಿಯಾಗುವು ದಿಲ್ಲ. ‘ಟೀಮ್ ಅಮಿತ್ ಶಾ’ ಪರ್ಫೆಕ್ಟ್ ವರ್ಕ್ ಮಾಡಿಸು
ತ್ತಿದೆ. ಯಾರಿಗೂ ಕಾಣಿಸುತ್ತಿಲ್ಲ, ಶಾ ಸ್ಟ್ರಾಟಜಿ ಗುಪ್ತಗಾಮಿನಿ ಯಾಗಿದೆ. ಹಲವು ಅಸೆಸ್‌ಮೆಂಟ್, ಪ್ರಧಾನಿ ರ‌್ಯಾಲಿಗೆ ಜನತೆ ತೋರುತ್ತಿರುವ ಉತ್ಸಾಹ ಗೆಲುವು ನಮ್ಮದೇ ಎನ್ನುತ್ತಿವೆ. 


ಪ್ರಧಾನಿ ಮೋದಿಗೆ ತೋರುತ್ತಿರುವ ಜನತೆಯ  ಪ್ರೀತಿಯನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವ ರಾಜ್ಯ ನಾಯಕರು ಯಾರು?

ರ್ಯಾಲಿಗೆ ಬಂದವರೆಲ್ಲ ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ.  ಯಡಿಯೂರಪ್ಪನವರು ರಾಜ್ಯದ ನಾಯಕರು. ಸಿಎಂ ಆಗಿದ್ದಾಗ ಹಲವು ಜನಪರ ಯೋಜನೆಗಳನ್ನು ನೀಡಿದ್ದಾರೆ. ಅವುಗಳನ್ನು ಜನತೆ ಮರೆತಿಲ್ಲ. ಇಂದಿಗೂ ಅವರು ಜನ ಪ್ರಿಯ ನಾಯಕರು. ಅವರಂತೆ ಹಲವು ನಾಯಕರಿದ್ದಾರೆ. ಖಂಡಿತ ಜನ ಬಿಜೆಪಿಯೆಡೆ ವಾಲಿದ್ದಾರೆ. ಅದು ಮತವಾಗಿ ಪರಿವರ್ತನೆಯಾಗುತ್ತಿದೆ.

ಹಿಂದೆ ಬಿಜೆಪಿಗೆ ಅವಕಾಶ ನೀಡಿದಾಗ ರೆಸಾರ್ಟ್ ಓಡಾಟ, ಹಗರಣ, ಸಿಎಂ ಬದಲಾವಣೆ, ಬಿಎಸ್ ವೈ ಸೇರಿ ಹಲವರು ಜೈಲಿಗೆ ಹೋಗಿದ್ದು  ಇವೆಲ್ಲಾ ನಡೆಯಿತು. ಆದರೂ ಜನ ಬಿಜೆಪಿ ಬೆಂಬಲಿಸಬೇಕೆ?

ನಮ್ಮದು ತಪ್ಪಾಗಿದೆ, ಇದೇ ಕಾರಣಕ್ಕಾಗಿ ಜನತೆ ಕಳೆದ ಬಾರಿ ನಮ್ಮನ್ನು ಶಿಕ್ಷಿಸಿದ್ದಾರೆ. ಜನಾದೇಶವನ್ನು ಗೌರವಿಸಿ ಐದು ವರ್ಷಗಳ ಕಾಲ ಪ್ರತಿಪಕ್ಷದಲ್ಲಿ ಕುಳಿತಿದ್ದೇವೆ. ಮೇಲಾಗಿ ರಾಷ್ಟ್ರೀಯ ನಾಯಕತ್ವ ಸ್ಟ್ರಾಂಗ್ ಇದೆ. ಹಿಂದಿನ ತಪ್ಪು ಪುನರಾವರ್ತನೆ ಆಗುವುದಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸಿದ್ದರಾಮಯ್ಯ ಅವರ ದುರಾಡಳಿತ, ದ್ವೇಷದ ರಾಜಕಾರಣ ಮತ್ತು ಅವರ ಅಹಂಕಾರಕ್ಕೆ ಜನತೆ ಬೇಸತ್ತಿದ್ದಾರೆ. ಹಾಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಂತೆ ಕರ್ನಾಟಕದಲ್ಲೂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕಾಗಿ ಎದುರು ನೋಡುತ್ತಿದ್ದಾರೆ.

ಕೆಜೆಪಿ ಕಟ್ಟಿ ಬಿಜೆಪಿ ಸೋಲಿಸಿದ್ದ ಯಡಿಯೂರಪ್ಪ ಪದಾಧಿಕಾರಿಗಳ ನೇಮಕ, ಟಿಕೆಟ್ ಹಂಚಿಕೆಯಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಮುಂದಾದರೂ ಬದಲಾಗುತ್ತಾರೆ ಎನ್ನುವ ವಿಶ್ವಾಸವಿದೆಯೇ? 

ಕೆಲವು ಗೊಂದಲಗಳು ಆಗಿದ್ದವು. ರಾಷ್ಟ್ರೀಯ ಅಧ್ಯಕ್ಷರು ಎಲ್ಲರನ್ನೂ ಕೂರಿಸಿ ಮಾರ್ಗದರ್ಶನ ಮಾಡಿದ್ದಾರೆ. ಆ ಗೊಂದಲ ಬಗೆಹರಿದು ಯಡಿಯೂರಪ್ಪ ಕೂಡ ತುಂಬ ಬದ ಲಾಗಿದ್ದಾರೆ. ಅವರ ನಾಯಕತ್ವವನ್ನು ನಾವೆಲ್ಲಾ ಮನಃ ಪೂರ್ವಕ ಒಪ್ಪಿದ್ದೇವೆ. ಈಗ ಕೆಜೆಪಿ-ಬಿಜೆಪಿ ಎನ್ನುವ ಮಾತೇ ಇಲ್ಲ. ಎಲ್ಲರೂ ಬಿಜೆಪಿಯವರು. ಮುಂದೆಯೂ ಕೂಡ ಯಡಿಯೂರಪ್ಪ ನಮ್ಮನ್ನೆಲ್ಲ ಒಟ್ಟಿಗೆ ಕರೆದು ಕೊಂಡು ಹೋಗುತ್ತಾರೆಂಬ ವಿಶ್ವಾಸ ನಮಗಿದೆ.

ಉತ್ತರ ಕರ್ನಾಟಕದಲ್ಲಿ ಕೆಜೆಪಿಗೆ ಹೋಗಿದ್ದವರಿಗೇ ಹೆಚ್ಚು ಟಿಕೆಟ್ ಲಭಿಸಿವೆ. ನಿಮ್ಮನ್ನು ಮತ್ತು ಜಗದೀಶ್ ಶೆಟ್ಟರ್ ಅವರನ್ನು ನಂಬಿದ ಟಿಕೆಟ್ ವಂಚಿತರನ್ನು ಹೇಗೆ ಸಮಾಧಾನಪಡಿಸುತ್ತೀರಿ?

ಟಿಕೆಟ್ ನೀಡಿಕೆ ವಿಚಾರದಲ್ಲಿ ರಾಷ್ಟ್ರೀಯ ನಾಯಕರ  ನಿರ್ಧಾರವೇ ಅಂತಿಮ. ಇದನ್ನೇ ಕೆಲವು ಮಾಧ್ಯಮಗಳು ಅವರ ಕೈ ಮೇಲು, ಇವರ ಕೈ ಕೆಳಗೆ ಎಂದು ವಿಶ್ಲೇಷಿಸಿವೆ. ಬಿಜೆಪಿ ದೊಡ್ಡ ಪಕ್ಷ, ಸಹಜವಾಗಿಯೇ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಕೆಲವರಿಗೆ  ಸಮಾಧಾನವಾಗಿತ್ತು. ನಾವೆಲ್ಲ ಅವರನ್ನು ಮುಂದೆ ಕೂಡ್ರಿಸಿಕೊಂಡು ಸಮಾಧಾನ ಮಾಡಿ, ಪಕ್ಷ ಅಧಿಕಾರಕ್ಕೆ ಬಂದರೆ ನಿಷ್ಠಾವಂತ ಕಾರ್ಯಕರ್ತರಿಗೆ ಬೇರೆ ಬೇರೆ ರೀತಿಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರಿಂದ ಅವರೆಲ್ಲ ಒಟ್ಟಾಗಿ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಗೊಂದಲ, ಅಸಮಾಧಾನ ಈಗ ಉಳಿದಿಲ್ಲ.

ಈ ಚುನಾವಣೆಯಲ್ಲಿ ರೆಡ್ಡಿ ಆಪ್ತರಿಗೆ ಬಿಜೆಪಿ  ಹೆಚ್ಚು ಟಿಕೆಟ್ ನೀಡಿದೆ. ಯಡಿಯೂರಪ್ಪ ಅವರು ಜನಾರ್ದನ ರೆಡ್ಡಿ ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅಮಿತ್ ಶಾ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುತ್ತಾರೆ. ಏನಿದು ವೈರುಧ್ಯ?

ಶ್ರೀರಾಮುಲು ಮತ್ತು ಕೆಲವರ ಕ್ಷೇತ್ರಗಳಲ್ಲಿ ಜನಾರ್ದನ ರೆಡ್ಡಿ ವೈಯಕ್ತಿವಾಗಿ ಪ್ರಚಾರ ಮಾಡುತ್ತಿದ್ದಾರೆ. ಯಾವುದೋ ಒಂದು ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಇದ್ದ ವೇದಿಕೆ ಏರಿರಬಹುದು. ಆದರೆ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದೇ ಅಂತಿಮವಾಗಿದ್ದರಿಂದ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟ. 

ಪ್ರಧಾನಿ ನರೇಂದ್ರ ಮೋದಿ ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಆದರೆ ಕರ್ನಾಟಕ ಸರ್ಕಾರ ಲಿಂಗಾಯತಕ್ಕೆ ಪ್ರತ್ಯೇಕ ಧಾರ್ಮಿಕ ಸ್ಥಾನ ನೀಡುವ ಪ್ರಸ್ತಾವಕ್ಕೆ ಬಿಜೆಪಿ ಏಕೆ ವಿರೋಧಿಸುತ್ತದೆ?

ಬಸವಣ್ಣನವರನ್ನು ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತ ಮಾಡಬಾರದು. ಅವರೊಬ್ಬ ಯುನಿವರ್ಸಲ್ ಸ್ಪಿರಿ ಚುವಲ್ ಲೀಡರ್. ಒಬ್ಬ್ಪ ಆದರ್ಶ ಸಮಾಜ ಸುಧಾರಕ, ಸಂತ. ಕ್ಲಾಸ್‌ಲೆಸ್ ಸೊಸೈಟಿಯ ನಿಜವಾದ ನಿರ್ಮಾಪಕ. ಸರ್ವಧರ್ಮದ ಸಮಭಾವ, ದಯೆ, ಸಮಾನತೆಗಳ ಪ್ರತಿ ಪಾದಕ. ಹಾಗಾಗಿ ಜಗತ್ತಿನ ಪ್ರತಿಯೊಬ್ಬ ನಾಗರಿಕರು ಬಸ ವಣ್ಣನ ತತ್ವಗಳನ್ನು ಪಾಲಿಸಬೇಕು. ಇದು ನಮ್ಮ ನಿಲುವು.

ಇಷ್ಟೊಂದು ಜನ ಲಿಂಗಾಯತ ಸಂಸದರು ಇದ್ದಾಗ್ಯೂ ಯಾರೊಬ್ಬರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಈ ಅಸಮಾಧಾನ ಪ್ರಸಕ್ತ ಚುನಾವಣೆಯ ಮೇಲೆ ಪ್ರಭಾವ ಬೀರುವುದಿಲ್ಲವೇ? 

ಮುಖ್ಯಮಂತ್ರಿ ಅಭ್ಯರ್ಥಿ, ಪ್ರತಿಪಕ್ಷದ ನಾಯಕನ ಸ್ಥಾನ ಸೇರಿದಂತೆ ಹಲವು ಅವಕಾಶಗಳನ್ನು ಬಿಜೆಪಿ ಲಿಂಗಾಯತರಿಗೆ ನೀಡಿದೆ. ಮಂತ್ರಿ ಮಾಡುವುದು ಪ್ರಧಾನಿ ಮೋದಿಯವರ  ನಿರ್ಧಾರ. ಹಿಂದೆ ಸಿದ್ದೇಶ್ ಅವರನ್ನು ಮಂತ್ರಿ ಮಾಡಿದ್ದರು. ಮುಂದೆ ಲಿಂಗಾಯತರಿಗೆ ಕೊಡಬಹುದು. ಕೊಡಲಿ  ಎನ್ನುವುದು ನಮ್ಮ ಬೇಡಿಕೆ ಕೂಡ. ಹಾಗಾಗಿ ಈ ಚುನಾವಣೆಯಲ್ಲಿ ಇದು ವಿಷಯವೇ ಅಲ್ಲ.

loader