Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಪ್ರಧಾನಿ ಮೋದಿ ಹೇಳಿಕೆ

ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಕರ್ನಾಟಕದಲ್ಲಿ ಕಾಲಿಟ್ಟ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹಾಡಿ ಹೊಗಳಿರುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಹಾಗೂ ಸಂಚಲನ ಮೂಡಿಸಿದೆ.

PM Modi Price JDS Leader HD Devegowda

ಬೆಂಗಳೂರು : ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಕರ್ನಾಟಕದಲ್ಲಿ ಕಾಲಿಟ್ಟ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹಾಡಿ ಹೊಗಳಿರುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಹಾಗೂ ಸಂಚಲನ ಮೂಡಿಸಿದೆ.
ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಜೆಪಿ ಪರ ಚುನಾವಣಾ ಪ್ರಚಾರದ ಸಮಾವೇಶ ದಲ್ಲಿ ಮತ್ತೊಂದು ಪಕ್ಷದ ವರಿಷ್ಠ ನಾಯಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದು ಜನ್ಯವಷ್ಟೇ ಎಂದು ರಾಜ್ಯ ಬಿಜೆಪಿ ನಾಯಕರು ಸಮಜಾಯಿಷಿ ನೀಡಿದರೂ ಅದರ ಆಳದಲ್ಲಿ ರಾಜಕೀಯ ಲೆಕ್ಕಾಚಾರವೂ ಅಡಗಿದೆ ಎನ್ನಲಾಗಿದೆ.
ಬಿಜೆಪಿ ಮತ್ತು ಜೆಡಿಎಸ್‌ನ ಸಮಾನ ವಿರೋಧಿ ಕಾಂಗ್ರೆಸ್ ಪಕ್ಷ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂಬ ಸಂದೇಶವನ್ನು ಮೋದಿ ಅವರು ಈ ಮೂಲಕ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೇಲ್ನೋಟಕ್ಕೆ ಮೋದಿ ಅವರ ಮಾತಿನಿಂದಾಗಿ ಜೆಡಿಎಸ್ ನಿಂದ ಮುಸ್ಲಿಂ ಸಮುದಾಯದ ಮತದಾರರು ದೂರ ಸರಿದು ಕಾಂಗ್ರೆಸ್ ಪಕ್ಷವನ್ನೇ ಪೂರ್ಣ  ಪ್ರಮಾಣದಲ್ಲಿ ಬೆಂಬಲಿಸಬಹುದು ಎಂದುಕೊಂಡರೂ ಮುಸ್ಲಿಂ ಮತದಾರರು ಈಗಾಗಲೇ ಈ ಬಾರಿ ಜೆಡಿಎಸ್‌ಗಿಂತ ಕಾಂಗ್ರೆಸ್ ಪಕ್ಷದತ್ತ ಹೆಚ್ಚು ವಾಲುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದನ್ನು ಹೊರತುಪಡಿಸಿದರೆ, ಮೋದಿ ಅವರ ಹೇಳಿಕೆ ಜೆಡಿಎಸ್‌ಗೆ ನಷ್ಟಕ್ಕಿಂತ ಹೆಚ್ಚಾಗಿ ಲಾಭ ತಂದು ಕೊಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಬಂದ ನಂತರ ರಾಜ್ಯ ರಾಜಕಾರಣದ ಚಿತ್ರಣ ಬದಲಾಗಲಿದೆ ಎಂಬ ಮಾತನ್ನು ಕಳೆದ ವಾರವಷ್ಟೇ ದೇವೇಗೌಡರು ಹೇಳಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಪ್ರಚಾರದ ಮೊದಲ ದಿನವೇ ದೇವೇಗೌಡರನ್ನು ಹೊಗಳಿರುವುದು ಕುತೂಹಲ ಮೂಡಿಸಿದೆ. ದೇವೇಗೌಡರ ವಿರುದ್ಧ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ವಾಚಾಮಗೋಚರವಾಗಿ ಹರಿಹಾಯ್ದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಗೌಡರ ಪರ ಗೌರವದ ಮಾತುಗಳನ್ನಾಡಿರುವುದು ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್ ವಿರುದ್ಧ ಕೆರಳಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯದ ಅಗ್ರಗಣ್ಯ ನಾಯಕರಾದ ದೇವೇಗೌಡರ ಕುರಿತು ಮಾತನಾಡುವ ಮೂಲಕ ಆ ಸಮುದಾಯದ ಮತಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನತ್ತ ಹೋಗದಂತೆ ತಡೆಯುವ ಪ್ರಯತ್ನ ಇದು ಎಂದೂ ಮೂಲಗಳು ತಿಳಿಸಿವೆ.
ಹೇಗಿದ್ದರೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಪ್ರಾಬಲ್ಯ ಕಡಿಮೆಯಿದೆ. ಇಲ್ಲೇನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್‌ನದ್ದೇ ಪಾರುಪತ್ಯ. ಹೀಗಾಗಿ, ಈ ಭಾಗದಲ್ಲಿ ನಿರ್ಣಾಯಕ ಮತದಾರರಾಗಿರುವ ಒಕ್ಕಲಿಗರು ಜೆಡಿಎಸ್ ಜೊತೆಗೆ ಕಾಂಗ್ರೆಸ್ ಪಕ್ಷವನ್ನೂ ಬೆಂಬಲಿಸಿದರೆ ಅದು ಕಾಂಗ್ರೆಸ್ ಮುಕ್ತ ಕರ್ನಾಟಕ ಘೋಷಣೆ ಜಾರಿಗೆ ತರುವುದಕ್ಕೆ ಅಡ್ಡಿಯಾಗುತ್ತದೆ. ಅಂದರೆ, ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದಕ್ಕೆ ಸಹಾಯವಾಗಬಹುದು ಎಂಬ ಆತಂಕ ಬಿಜೆಪಿ ಪಾಳೆಯದಲ್ಲಿದೆ.
ಹೀಗಾಗಿಯೇ ಮೋದಿ ಅವರು ಬಿಜೆಪಿಯತ್ತ ಸೆಳೆಯಲು ಕಷ್ಟವಾಗುವ ಆ ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ಬದಲು ಜೆಡಿಎಸ್‌ಗೇ ಸಾರಾಸಗಟಾಗಿ ಹೋಗಲಿ ಎಂಬ ತಂತ್ರಗಾರಿಕೆಯನ್ನು ಮೆರೆದಿದ್ದಾರೆ ಎನ್ನಲಾಗುತ್ತಿದೆ.

Follow Us:
Download App:
  • android
  • ios